ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ಬಚ್ಚಬೋರನಹಟ್ಟಿ ಗ್ರಾಮ ದರ್ಶನ

4 Min Read

 

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಬಚ್ಚಬೋರನಹಟ್ಟಿ ಗ್ರಾಮವು ಗೋನೂರು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 9 ಕಿಲೋಮೀಟರ್ ದೂರ ಈಶಾನ್ಯಕ್ಕೆ,ಚಿತ್ರದುರ್ಗ- ತುರುವನೂರು ಮುಖ್ಯ ರಸ್ತೆಯಲ್ಲಿ ನಾಲ್ಕನೇ ಮೈಲಿಕಲ್ಲಿನಿಂದ 2 ಕಿಲೋಮೀಟರ್ ದೂರದಲ್ಲಿದೆ.

ಈ ಗ್ರಾಮಕ್ಕೆ ಹಳೆಗ್ರಾಮ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಆದರೆ ಗ್ರಾಮದ ದಕ್ಷಿಣಕ್ಕೆ ಇರುವ ಆಂಜನೇಯ ಸ್ವಾಮಿ ದೇವಾಲಯವು ಹಿಂದೆ ಹಳೆ ಗ್ರಾಮ ನಿವೇಶನ ಆಗಿರಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿ ಅಗತ್ಯತೆ ಇರುತ್ತದೆ. ಇಲ್ಲಿ 17 -18 ನೇ ಶತಮಾನದ ಆಂಜನೇಯ ಸ್ವಾಮಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.

ಹೆಸರಿನ ಮೂಲ : ಗ್ರಾಮದ ಹೆಸರು ವ್ಯಕ್ತಿ ವಾಚಕವಾಗಿದ್ದು, ಈ
ಗ್ರಾಮವನ್ನು ಹಿಂದೆ ಬಚ್ಚ( ಬೊಚ್ಚ ) ಬೋರಯ್ಯ ಎಂಬುವನು ನಿರ್ಮಿಸಿ ಹುಗಿ ಹೊಯ್ದ ಕಾರಣಕ್ಕೆ ಇದು ಬಚ್ಚಬೋರನಹಟ್ಟಿಯಾಗಿದೆ. ಗ್ರಾಮದ ಮಧ್ಯಭಾಗದ ಬೊಡ್ಡುರಾಯಿ(ಕಲ್ಲುಗುಡ್ಡೆ ) ಬಡ್ಡೇಕಲ್ಲು ಜಾಗವು ಗ್ರಾಮದ ಮೂಲ ಹುಗಿ ಹೊಯ್ದ ಸ್ಥಳವಾಗಿದೆ. ಗ್ರಾಮದ ಯಾವುದೇ ಶುಭ ಸಮಾರಂಭ, ಮೆರವಣಿಗೆ, ಮದುವೆ.. ಮುಂತಾದ ಶುಭ ಸಮಾರಂಭಗಳಿದ್ದಾಗ ಈ ಬೊಡ್ದುರಾಯಿಗೆ ಪೂಜಿಸಲಾಗುತ್ತದೆ.

ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು ಸಮತಟ್ಟು ಭೂ ಪ್ರದೇಶವೇ ಹೆಚ್ಚಾಗಿದೆ. ಮಳೆಯಾಶ್ರಿತ ಬೆಳೆಗಳ ಜೊತೆಗೆ ಇತರ ವಾಣಿಜ್ಯ ಹಾಗೂ ವಾರ್ಷಿಕ ಬೆಳೆಗಳತ್ತಲೂ ರೈತರು ಒಲವು ತೋರಿಸುತ್ತಿದ್ದಾರೆ.

ಜನಪದ :
ಚಳ್ಳಕೆರೆ ತಾಲ್ಲೂಕಿನ ಕುದಾಪುರ ಗ್ರಾಮದ ಬಳಿಯಲ್ಲಿ ಚಿಂತಕುಟ್ಲು ಕಾಲಬೈರವ ( ಬೋರೇದೇವರ) ದೇಗುಲವಿದ್ದು,ಈ ದೇವರಿಗೆ ಗ್ರಾಮದ ಬಹಳಷ್ಟು ಜನರು ನಡೆದುಕೊಳ್ಳುತ್ತಾರೆ. ಆ ಕಾರಣಕ್ಕೆ ಬೋರಯ್ಯ, ಬೋರಮ್ಮ,ಬೋರೇಶ. ಮುಂತಾದ ಹೆಸರಿನ ಜನರು ಈ ಗ್ರಾಮದ ಪ್ರತಿ ಮನೆಯಲ್ಲೂ ಒಬ್ಬರಾದರೂ ಕಂಡು ಬರುತ್ತಾರೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಗ್ರಾಮದ ಪರವಾಗಿ ಬೋರೆದೇವರ ದೇಗುಲದಲ್ಲಿ ವಾರ್ಷಿಕ ಪರೇವು ಆಚರಣೆ ನಡೆಸಲಾಗುತ್ತದೆ.
ಅಪ್ಪಟ ಗ್ರಾಮ್ಯ ಸಂಸ್ಕೃತಿಯ ಎಲ್ಲಾ ಆಚರಣೆಗಳನ್ನು ಇಲ್ಲಿ ಇಂದಿಗೂ ಕಾಣಬಹುದಾಗಿದೆ. ದೈವಿಕ ಆರಾಧನೆ,ನಂಬಿಕೆ, ಕಟ್ಟುಪಾಡುಗಳನ್ನು ಆಧುನಿಕ ಯುಗದಲ್ಲೂ ಮರೆಯದೆ ಪಾಲಿಸಲಾಗುತ್ತದೆ.
ಜಾನಪದ ಕಲೆಗಳು ಇಂದಿಗೂ ಇಲ್ಲಿ ಜೀವಂತಿಕೆಯಿಂದ ಇರುವುದನ್ನು ಕಾಣಬಹುದು. ಭಜನೆ,ಕೋಲಾಟ,ಸೋಬಾನೆ ಪದ,ತತ್ವಪದ ಹೇಳುವ ಕಲಾವಿದರು ಇಲ್ಲಿ ಇದ್ದು ಜನಪದ ಕಲೆಗಳನ್ನು ಉಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಒಟ್ಟು ವರ್ಷದಲ್ಲಿ 24 ಹಬ್ಬಗಳನ್ನು ಸಡಗರ ಸಂಭ್ರಮದಿಂದ ಇಂದಿಗೂ ಸಹ ಇಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತದೆ.

ಮಿಂಚೇರಿ ಜಾತ್ರೆ : ಬಚ್ಚಬೋರನಹಟ್ಟಿ ಗ್ರಾಮದ ಮ್ಯಾಸನಾಯಕ ಸಮುದಾಯದವರು ತಮ್ಮ ಆರಾಧ್ಯ ದೈವ ಹಾಗೂ ಸಾಂಸ್ಕೃತಿಕ ವೀರ ಗಾದ್ರಿಪಾಲನಾಯಕ ಸ್ವಾಮಿಯ ಜಾತ್ರೆಯನ್ನು ಪ್ರತಿ ಐದು ವರ್ಷಕ್ಕೆ ಒಮ್ಮೆ ನಡೆಸುತ್ತಾರೆ ಇದನ್ನು ಈ ವರ್ಷದ ಡಿಸೆಂಬರ್ 2023 ರಲ್ಲಿ ಜರುಗುತ್ತದೆ. ಆರು ದಿನಗಳ ಕಾಲ ಈ ವಿಶಿಷ್ಟ ಆಚರಣೆಯನ್ನು ಕಾಣಬಹುದು. ಗ್ರಾಮದಿಂದ 45 ಕಿ. ಮೀ.ದೂರದ ಸಿರಿಗೆರೆ ಸಮೀಪದ ಹೊಳಲ್ಕೆರೆ ತಾಲೂಕು ಮಿಂಚೇರಿ ಗುಡ್ಡದಲ್ಲಿರುವ ಗಾದ್ರಿಪಾಲನಾಯಕನ ಸ್ಥಳಕ್ಕೆ ಹೋಗಿ ಎಡೆ ಅರ್ಪಿಸಿ ಪೂಜೆ ಸಲ್ಲಿಸಿ ಬರುವುದು ಈ ಜಾತ್ರೆಯ ವಿಶೇಷವಾಗಿದೆ. ಜಾತ್ರೆಗೆ ಬಂದವರು ಎರಡು ದಿನಗಳ ಕಾಲ ಗುಡ್ಡದಲ್ಲಿ ಬಿಡಾರ ಹೂಡುತ್ತಾರೆ.
ಯಾತ್ರೆಗೆ ಸಾವಿರಾರು ಜನರು ತಮ್ಮ ಸಂಬಂಧಿಕರ ಜೊತೆಗೂಡಿ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಎತ್ತಿನಗಾಡಿ ಜೊತೆಗೆ ಟ್ರ್ಯಾಕ್ಟರ್ ನಲ್ಲಿ ಬರುತ್ತಾರೆ. ಗಂಗಾಪೂಜೆ,ಹುಲಿರಾಯ ಹಾಗೂ ಗಾದ್ರಿಪಾಲನಾಯಕನ ಸಮಾಧಿಗೆ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಇದರ ಜೊತೆಗೆ ದೇವರ ಕುಣಿತ,ಸುತ್ತು ಮಣೇವು, ಕಣಿವೆ ಮಾರಮ್ಮ,ಮಲಿಯಮ್ಮ ದೇವಿ ಹಾಗೂ ಗಂಗಾ ಮಾತೆಯ ಚಿಲುಮೆ ಪೂಜಾ ಕಾರ್ಯಕ್ರಮ ಜರುಗುತ್ತದೆ. ಇದಕ್ಕಾಗಿ ತಿಂಗಳ ಮುಂಚೆಯೇ ಸಭೆ ಸೇರಿ ಜಾತ್ರೆ ಕುರಿತು ಸಿದ್ಧತೆ ನಡೆಸಲಾಗುತ್ತದೆ.

ಬೊಮ್ಮನಹಳ್ಳಿ,ಸಾಸಲುಹಟ್ಟಿ ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯ ಸ್ವಾಮಿ ದೇವಸ್ಥಾನ :  ಗ್ರಾಮದ ಹಳೆಗ್ರಾಮ ನಿವೇಶನದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ 17-18 ನೇ ಶತಮಾನದ ಪಾಳೇಗಾರರ ಶೈಲಿಯ 3 ಅಡಿ ಎತ್ತರದ ಆಂಜನೇಯನ ಉಬ್ಬು ಶಿಲ್ಪವಿದೆ.

2. ಗಾದ್ರಿಪಾಲ ನಾಯಕನ ದೇವಸ್ಥಾನ :
ಮ್ಯಾಸನಾಯಕ ಜನಾಂಗದ ಸಾಂಸ್ಕೃತಿಕ ವೀರ ಗಾದ್ರಿಪಾಲನಾಯಕನ ದೇವಾಲಯವನ್ನು ದಕ್ಷಿಣಾಭಿಮುಖವಾಗಿ 1972 ರಲ್ಲಿ ನಿರ್ಮಿಸಲಾಗಿದೆ. ಅದರ ಹಿಂದೆ ಈ ಜಾಗದಲ್ಲಿ ದೇವಸ್ಥಾನವು ಗುಬ್ಬದ ಆಕಾರದಲ್ಲಿ ಇದ್ದಿತು. ಗರ್ಭಗೃಹದಲ್ಲಿ ಗಾದ್ರಿಪಾಲನಾಯಕನನ್ನು, ಆತನ ಸಂಕೇತಗಳನ್ನು ಪೂಜಿಸಲಾಗುತ್ತದೆ. ಇದರ ಜೊತೆಯಲ್ಲಿ ಮಲಿಯಮ್ಮ ದೇವಿ ಹಾಗೂ ಕಣಿವೆ ಮಾರಮ್ಮ ದೇವಿಯರನ್ನು ಪೂಜಿಸಲಾಗುತ್ತದೆ.
ಶಿವರಾತ್ರಿ ಹಬ್ಬದ ದಿನ ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ.
ಗುಗ್ಗರಿ ಹಬ್ಬ ಹಾಗೂ ದೀವಣಿಗೆ (ಕಿರುದೀಪಾವಳಿ) ಹಬ್ಬವನ್ನು ಇಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಮಿಂಚೇರಿ ಜಾತ್ರೆ ಹಾಗೂ ಇನ್ನಿತರ ಉತ್ಸವ ಕಾರ್ಯಕ್ರಮಗಳಲ್ಲಿ ದೇವರುಗಳನ್ನು ಹೊರಡಿಸಲಾಗುತ್ತದೆ.

3. ಬಸವೇಶ್ವರ ದೇವಸ್ಥಾನ :
ಗ್ರಾಮದ ಪೂರ್ವಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿರುವ ಬಸವೇಶ್ವರ ಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದೆ. ಇದರ ಹತ್ತಿರದಲ್ಲಿಯೇ ಹೊಂಡವಿದ್ದು ಪೂಜಾ ಕಾರ್ಯಗಳಿಗೆ ಇದರ ನೀರನ್ನು ಬಳಸಲಾಗುತ್ತದೆ.

4. ಹೊನ್ನೂರು ಸ್ವಾಮಿ :
ಗ್ರಾಮದ ಮಧ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.ಈ ದೇವರ ಹಬ್ಬವನ್ನು ಪ್ರತಿವರ್ಷ ಮೊಹರಂನಲ್ಲಿ ಕೆಂಡೋತ್ಸವದ ಮೂಲಕ ಆಚರಿಸಲಾಗುತ್ತದೆ.

5.ಕೊಲ್ಲಾಪುರದಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಹಂಪೆ ಹುಣ್ಣಿಮೆಯ ದಿನ ದುರ್ಗಮ್ಮ ದೇವಿಯ ಕೆಂಡೋತ್ಸವ ಜರುಗುತ್ತದೆ.

Share This Article