ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್
ಓಬಣ್ಣನಹಳ್ಳಿ ಗ್ರಾಮವು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 19 ಕಿಲೋಮೀಟರ್ ದೂರ ದಕ್ಷಿಣಕ್ಕೆ,
ಚಿತ್ರದುರ್ಗ- ಜಾನುಕೊಂಡ- ಉಪ್ಪನಾಯಕನಹಳ್ಳಿ ಗೇಟ್ನಿಂದ ಪೂರ್ವಕ್ಕೆ 6 ಕಿ.ಮೀ ದೂರದಲ್ಲಿದೆ.
ಹೆಸರಿನ ಮೂಲ :
ಗ್ರಾಮದ ಪೂರ್ವಕ್ಕೆ ಕಲ್ಲುಗುಪ್ಪೆಯ ಹೊಲದಲ್ಲಿ ಇರುವ ಊರು ಕಾಯುವ ಹನುಮಪ್ಪ ಎನ್ನಲಾಗುವ ಆಂಜನೇಯ ಸ್ವಾಮಿ ವಿಗ್ರಹದ ಎದುರು ಶಾಸನವಿದ್ದು,ಇದರಲ್ಲಿ ಈ ಊರಿನ ಹೆಸರು ಉಲ್ಲೇಖಿಸಲಾಗಿದೆ.ಇದರ ಕಾಲ ಕ್ರಿ. ಶ.1584 ಮಾರ್ಚ್ 16 ಸೋಮವಾರ.
ಚಿತ್ರದುರ್ಗವನ್ನು ಆಳುತ್ತಿದ್ದ ಓಬಣ್ಣನಾಯಕನ ಆಳ್ವಿಕೆಯ ಕಾಲದಲ್ಲಿ ಚಿಕ್ಕಣ್ಣ ಎಂಬುವನು ಅಣ್ಣಗಾರ ಓಬಣ್ಣ ಎಂಬುವವನಿಗೆ ಸ್ವರ್ಗಲೋಕ ಪ್ರಾಪ್ತಿಯಾಗಬೇಕೆಂದು ಅವನ ಹೆಸರಿನಲ್ಲಿ ಓಬಣ್ಣನಹಳ್ಳಿ ಎಂಬ ಗ್ರಾಮವನ್ನು ಕಟ್ಟಿಸಿ, ಹನುಮಂತ ದೇವರ ಪ್ರತಿಷ್ಠಾಪನೆ ಮಾಡಿಸಿ ಸಾಲುಮರಗಳನ್ನು ಹಾಕಿಸಿದನೆಂದೂ,ಕೆಂಚಣ್ಣ ಎಂಬುವನ ಮೂಲಕ ಹತ್ತಿರದಲ್ಲಿಯೇ ಕೆರೆಯನ್ನು ಕಟ್ಟಿಸಿದನೆಂದು ಈ ಶಾಸನ ತಿಳಿಸುತ್ತದೆ.
(ಮಾಹಿತಿ : ಡಾ.ಬಿ. ರಾಜಶೇಖರಪ್ಪ ರವರ ದುರ್ಗಶೋಧನ ಪುಸ್ತಕ )
ಇದೇ ಈ ಗ್ರಾಮಕ್ಕೆ ಹೆಸರು ಬರಲು ಕಾರಣವಾಗಿದೆ.
ಸ್ಥಳೀಯರ ಪ್ರಕಾರ ಗ್ರಾಮದ ಬಹುಪಾಲು ಜನರು ಹಿಂದಿನಿಂದಲೂ ಹತ್ತಿರದ ಓಬಳ ನರಸಿಂಹ ಸ್ವಾಮಿ ದೇವರಿಗೆ ನಡೆದುಕೊಳ್ಳುವ ಕಾರಣಕ್ಕೆ ಈ ಗ್ರಾಮಕ್ಕೆ ಓಬಣ್ಣನಹಳ್ಳಿ ಹೆಸರು ಬಂದಿದೆ ಎನ್ನಲಾಗುತ್ತದೆ. ಹಳೆ ಗ್ರಾಮದಿಂದ ಪಶ್ಚಿಮಕ್ಕೆ ಈಗಿನ ಗ್ರಾಮವು ಸ್ಥಳಾಂತರಗೊಂಡು ನೆಲೆಗೊಂಡಿದೆ. ಆಡುಭಾಷೆಯಲ್ಲಿ ಜನರು ಇದನ್ನು ಓಬೇನಹಳ್ಳಿ ಎನ್ನುತ್ತಾರೆ. ಹಳೆಗ್ರಾಮ ನಿವೇಶನದ ಬಳಿಯಲ್ಲಿಯೇ ಕುಕ್ಕುವಾಡೇಶ್ವರಿ ಬಯಲು ಆಲಯವಿದ್ದು ಇದರ ಬಳಿಯಲ್ಲಿ ಪ್ರತಿವರ್ಷ ಪರೇವು ಆಚರಣೆ ಮಾಡಲಾಗುತ್ತದೆ.
ಗ್ರಾಮದ ಮಧ್ಯಭಾಗದಲ್ಲಿರುವ ಕರಿಗಲ್ಲು ಹಿಂದೆ ಗ್ರಾಮಕ್ಕೆ ಹುಗಿ ಹೊಯ್ದ ಸ್ಥಳವಾಗಿದ್ದು, ಗ್ರಾಮದ ಯಾವುದೇ ಜಾತ್ರೆ, ಮೆರವಣಿಗೆ, ಮದುವೆ ಸಮಾರಂಭಗಳಲ್ಲಿ ಇದನ್ನು ಪೂಜಿಸಿ ನಂತರವೇ ಮುಂದುವರಿಸಲಾಗುತ್ತದೆ. ಯುಗಾದಿಯ ಸಮಯದಲ್ಲಿ ಹತ್ತಿರದ ಜೋಗಿಮಟ್ಟಿ ಗುಡ್ಡದಲ್ಲಿರುವ ಕುಕ್ಕುವಾಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಹತ್ತಿರದ ಓಬಳ ನರಸಿಂಹ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು, ಗ್ರಾಮದ ಉತ್ತರಕ್ಕೆ ಹಾಗೂ ಪೂರ್ವಕ್ಕೆ ಜೋಗಿಮಟ್ಟಿ ಗಿರಿಸಾಲುಗಳು ಹಾಗೂ ದಕ್ಷಿಣಕ್ಕೆ ಎರೆಗುಡ್ಡ ಸಾಲುಗಳು ಆವೃತವಾಗಿವೆ. ಸುತ್ತಲೂ ಸಮತಟ್ಟು ಭೂ ಪ್ರದೇಶ ಗ್ರಾಮದ ಸುತ್ತಲೂ ಹರಡಿದೆ. ಈಗಿನ ಗ್ರಾಮವು ಸಂಪೂರ್ಣ ಇಳಿಜಾರಿನ ಮೈದಾನ ಪ್ರದೇಶದಲ್ಲಿದೆ. ಉತ್ತರಕ್ಕೆ ಇರುವ ಜೋಗಿಮಟ್ಟಿ ಸಾಲುಗಳ ಮೇಲೆ ಬಿದ್ದ ಮಳೆ ನೀರು ಗ್ರಾಮದ ಮೇಲ್ಭಾಗದಲ್ಲಿರುವ ಮುದುಕೊಂದಿ,ತೆಕ್ಕೆತಳ.. ಮುಂತಾದ ಹಳ್ಳಗಳ ಮೂಲಕ ಯಥೇಚ್ಛವಾಗಿ ಮಳೆಗಾಲದಲ್ಲಿ ರಭಸವಾಗಿ ಹರಿದು ಮುಂದೆ ನಂದೀಪುರದ ಬಳಿ ಜಿನಗಿಹಳ್ಳಕ್ಕೆ ಸೇರುತ್ತದೆ.
ಮಳೆಗಾಲದಲ್ಲಿ ಇಲ್ಲಿನ ವಾತಾವರಣವು ಸಂಪೂರ್ಣ ಹಚ್ಚ ಹಸಿರಾಗಿ ಗೋಚರಿಸುತ್ತದೆ ಹಾಗೂ ಮಲೆನಾಡಿನ ಯಾವುದೋ ಒಂದು ಊರಿನಂತೆ ಭಾಸವಾಗುತ್ತದೆ. ಹಳ್ಳಗಳಲ್ಲಿ ಹರಿಯುವ ಮೆಕ್ಕಲು ಮಣ್ಣಿನಿಂದಾಗಿ ಭೂಮಿಯು ಉತ್ತಮ ಫಲವತ್ತತೆಯಿಂದ ಕೂಡಿದೆ.
ಸೊಂಡೇಕೊಳ, ಉಪ್ಪನಾಯಕನಹಳ್ಳಿ… ಹತ್ತಿರದ ಗ್ರಾಮಗಳಾಗಿವೆ.
ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಯಲ್ಲಮ್ಮ, ಆಂಜನೇಯ ಹಾಗೂ ಭೂತಪ್ಪ… ಉತ್ಸವ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಗರ್ಭಗೃಹ ಮಾತ್ರ ಇರುವ ದೇವಾಲಯ ಇದಾಗಿದೆ. ರಾಮನವಮಿಯ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಹೊಳೆಪೂಜೆಯ ಸಮಯದಲ್ಲಿ ಈ ದೇವರುಗಳನ್ನು ಹತ್ತಿರದ ಜಿನಗಿಹಳ್ಳ ಹಾಗೂ ಪಂಡರಹಳ್ಳಿ ಬೆಟ್ಟಕ್ಕೆ ಕರೆದೊಯ್ಯಲಾಗುತ್ತದೆ.
2.ಹುಲಿಗೆಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವಿದೆ. ಶಿವರಾತ್ರಿ ನಂತರ ದಿನಗಳಲ್ಲಿ ಈ ದೇವರ ಜಾತ್ರೆಯನ್ನು ನಡೆಸಲಾಗುತ್ತದೆ. ಹಿಂದೆ ಇದ್ದ ದೇವಾಲಯವನ್ನು ತೆಗೆದು ಕಳೆದ ದಶಕದಲ್ಲಿ ನೂತನವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ.
3. ದುರ್ಗಾಂಬಿಕ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
4.ಈಶ್ವರ (ಶಿವಪ್ಪ) ದೇವಾಲಯ :
ಗ್ರಾಮದ ಪಶ್ಚಿಮಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಗರ್ಭಗೃಹ ಮಾತ್ರ ಇರುವ ದೇವಾಲಯ ಇದಾಗಿದೆ.
ಗರ್ಭಗೃಹದಲ್ಲಿ ವಿಜಯನಗರೋತ್ತರ ಕಾಲದ ಈಶ್ವರಲಿಂಗ ಹಾಗೂ ನಂದಿಯನ್ನು ಪೂಜಿಸಲಾಗುತ್ತದೆ. ಇದನ್ನು ಚಿತ್ರದುರ್ಗದ ಇಮ್ಮಡಿ ಮುರುಗೆ ಸ್ವಾಮಿಗಳು 1703 ರಲ್ಲಿ ಪ್ರತಿಷ್ಠಾಪಿಸಿದರು.
ಇದರ ಜೊತೆಗೆ ಗ್ರಾಮದಲ್ಲಿ ಗೌರಸಂದ್ರ ಮಾರಮ್ಮ ದೇವಾಲಯವಿದೆ.







