ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ತುಮಕೂರು ತಾಲೂಕು ಬೆಳ್ಳಾವಿ ಹೋಬಳಿಯಲ್ಲಿರುವ ಸೀಬಿ ಕ್ಷೇತ್ರವು ತುಮಕೂರು – ಶಿರಾ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ , ತುಮಕೂರಿನಿಂದ ಮೂವತ್ತೆರಡು ಕಿಲೋಮೀಟರ್ ದೂರದಲ್ಲಿರುವ ಒಂದು ಪ್ರಸಿದ್ಧ ಕ್ಷೇತ್ರವಾಗಿದೆ.ಸಾವಿರಾರು ಕುಟುಂಬಗಳಿಗೆ ಇಂದಿಗೂ ಮನೆದೇವರಾಗಿ ನೆಲೆಸಿರುವ ಇಲ್ಲಿನ ಶ್ರೀ ನರಸಿಂಹಸ್ವಾಮಿ ದೇವರು ಸಾಲಿಗ್ರಾಮ ರೂಪದಲ್ಲಿದೆ. ಲಿಂಗ ರೂಪದಲ್ಲಿ ಇರುವ ವಿಷ್ಣುವನ್ನು ಇಲ್ಲಿ ಹರಿ ಮತ್ತು ಹರ ಎರಡು ಸಂಯೋಜನೆಯಾಗಿರುವ ದೇವರೆಂದು ಅತ್ಯಂತ ಪವಿತ್ರ ಕ್ಷೇತ್ರವೆಂದು ಪೂಜಿಸಲಾಗುತ್ತದೆ. ಪುರಾಣದ ಪ್ರಕಾರ ಪ್ರಹ್ಲಾದನ ಮೊಮ್ಮಗನಾದ ಶಿಬಿ ಚಕ್ರವರ್ತಿಯು ಈ ಸ್ಥಳದಲ್ಲಿ ತನ್ನ ವಾನಪ್ರಸ್ತಾಶ್ರಮವನ್ನು ಕಳೆದಿದ್ದ ಬಗ್ಗೆ ಐತಿಹ್ಯವಿದೆ.
ಶಿಬಿ ನೆಲೆಸಿದ್ದ ಈ ಕ್ಷೇತ್ರ ಶೀಬಿ ಎಂದೇ ಹೆಸರು ಪಡೆದಿದೆ ಎಂದು ಹೇಳಲಾಗುತ್ತದೆ.
ಶ್ರೀ ನರಸಿಂಹಸ್ವಾಮಿ ದೇವಸ್ಥಾನವನ್ನು 1797 ರಲ್ಲಿ
ಲಕ್ಷ್ಮಿನರಸಪ್ಪ, ಪುಟ್ಟಣ್ಣ ಮತ್ತು ನಲ್ಲಪ್ಪ ಎಂಬುವರು ನಿರ್ಮಿಸಿದರು.ಈ ಮೂರು ಸಹೋದರರು ಮೈಸೂರಿನ ರಾಜ ಟಿಪ್ಪು ಸುಲ್ತಾನನ ಆಸ್ಥಾನದ ನ್ಯಾಯಾಲಯದಲ್ಲಿ ದಿವಾನರಾಗಿದ್ದ ಕಛೇರಿ ಕೃಷ್ಣಪ್ಪನವರ ಪುತ್ರರಾಗಿದ್ದರು, ನಲ್ಲಪ್ಪನವರು ಹೈದರಾಲಿಯ ಆಳ್ವಿಕೆಯಲ್ಲಿ ಫೌಜುದಾರರಾಗಿದ್ದರು ಹಾಗೂ “ಹೈದರ್ ನಾಮಾ” ಎಂಬ ಕೃತಿಯನ್ನು ರಚಿಸಿದ್ದಾರೆ, ನಲ್ಲಪ್ಪನವರ ಕನಸಲ್ಲಿ ನರಸಿಂಹ ಸ್ವಾಮಿಯು ಬಂದು ದೇವಸ್ಥಾನ ನಿರ್ಮಿಸಲು ತಿಳಿಸಿದ ಬಗ್ಗೆ ಹೇಳಲಾಗುತ್ತದೆ. ದೇವಸ್ಥಾನದ ಪ್ರಮುಖ ದೇವರು ನರಸಿಂಹ ಸ್ವಾಮಿ ಜೊತೆಗೆ ಲೋಕಂಬ ದೇವಾಲಯವಿದೆ.
ಸೀಬಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅಪರೂಪವಾದ ನೈಸರ್ಗಿಕ ಬಣ್ಣಗಳನ್ನು ಬಳಸಿ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಟಿಪ್ಪು ಸುಲ್ತಾನ್, ಹೈದರಾಲಿ, ಮೈಸೂರು ಸಂಸ್ಥಾನದ ರಾಜರ ಮತ್ತು ನಲ್ಲಪನವರ ಚಿತ್ರಗಳಿವೆ.
ದೇವಸ್ಥಾನವು ಬೃಹತ್ ಪ್ರಾಕಾರದಲ್ಲಿ ನಿರ್ಮಾಣವಾಗಿದೆ.
ದೇವಾಲಯದ ಒಳ ಆವರಣದಲ್ಲಿ ವಿಜಯನಗರ ಶೈಲಿಯ ಕಲ್ಲಿನ ಮಂಟಪಗಳನ್ನು ಕಾಣಬಹುದು. ಮಂಟಪದ ಮೇಲ್ಭಾಗದಲ್ಲಿ ಕೈಪಿಡಿ ಗೋಡೆಗಳಿದ್ದು ಇದರಲ್ಲಿ ದಶಾವತಾರ ಮಹಾಭಾರತ ರಾಮಾಯಣದ ಚಿತ್ರಗಳ ಗಾರೆ ಗಚ್ಚಿನ ಶಿಲ್ಪಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಹತ್ತಿರ ಗಜ ಹೊಂಡ ಎಂಬ ಬೃಹತ್ ಕಲ್ಯಾಣಿ ಇದ್ದು ಪೂಜೆಗೆ ಅನುಕೂಲವಾಗುವಂತೆ ಹಿಂದಿನ ದಿನಮಾನದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ದಕ್ಷಿಣಕ್ಕೆ ಭೂತಪ್ಪ ಸ್ವಾಮಿ ದೇವಾಲಯವಿದ್ದು ಇಲ್ಲಿ ಮಾಂಸಹಾರ ನೈವೇದ್ಯ ಎಡೆ ನೀಡಲಾಗುತ್ತದೆ. ನರಸಿಂಹ ಸ್ವಾಮಿ ದೇವಾಲಯದ ಎದುರು ಭಾಗದಲ್ಲಿ ಪ್ರಸಾದ ನಿಲಯವಿದ್ದು ಬಂದ ಭಕ್ತರಿಗೆ ಉಪಹಾರ ಊಟದ ವ್ಯವಸ್ಥೆ ಇರುತ್ತದೆ. ಶನಿವಾರದಂದು ವಿಶೇಷ ಪೂಜೆಗಳು ನೆರವೇರುತ್ತದೆ. ಪ್ರತಿದಿನ ಒಂಬತ್ತರಿಂದ ಒಂದು ಗಂಟೆ ತನಕ ಹಾಗೂ ಸಂಜೆಯ ಸಮಯದಲ್ಲಿ ದರ್ಶನ ಹಾಗೂ ಪೂಜೆಯ ವ್ಯವಸ್ಥೆ ಇರುತ್ತದೆ. ಈ ದೇವಾಲಯದಲ್ಲಿ ಕಲ್ಯಾಣೋತ್ಸವ ಪೂಜೆ ನಡೆಸಿದರೆ ಮದುವೆಯಾಗದವರಿಗೆ ಶೀಘ್ರ ವಿವಾಹ ಕೈಗೂಡುವುದೆಂಬ ನಂಬಿಕೆ ನಡೆದುಕೊಂಡು ಬಂದಿದೆ ಪ್ರತಿ ವರ್ಷ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಬೃಹತ್ ರಥೋತ್ಸವದ ಮೂಲಕ ಜಾತ್ರೆ ನೆರವೇರಿಸಲಾಗುತ್ತದೆ.






