ನಮ್ಮ ಊರು ನಮ್ಮ ಹೆಮ್ಮೆ | ಪಾವಗಡ ತಾಲೂಕಿನ ನಿಡುಗಲ್

3 Min Read

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಸಂಪೂರ್ಣ ಬಯಲುಸೀಮೆ ಒಣ ಭೂಪ್ರದೇಶವಾಗಿದ್ದು, ಬೇಸಿಗೆಯು ಇಲ್ಲಿ ಅತ್ಯಂತ ಪ್ರಖರವಾಗಿರುತ್ತದೆ. ಆದರೆ ತಾಲೂಕಿನ ಪಶ್ಚಿಮ ಭಾಗದಲ್ಲಿರುವ ನಿಡುಗಲ್ ಬೆಟ್ಟವು ಮಳೆಗಾಲದ ನಂತರ ಮಲೆನಾಡಿನ ಯಾವುದೋ ಒಂದು ಸುಂದರ ಸ್ಥಳದಂತೆ ಬದಲಾಗಿ ಬಿಡುತ್ತದೆ.

ನಿಡುಗಲ್ ಬೆಟ್ಟವು ಪಾವಗಡ ತಾಲೂಕಿನಲ್ಲಿ ಕಂಡು ಬರುವ ಐತಿಹಾಸಿಕ ಪುರಾತನ ಕೋಟೆ ಬೆಟ್ಟವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1241 ಮೀಟರ್ ಎತ್ತರದಲ್ಲಿದೆ. ಈ ಊರು ನಿಡಿದಾದ (ಉದ್ದ )ಬೆಟ್ಟಗಳಿಂದ ಕೂಡಿದ್ದರಿಂದ ಈ ಊರಿಗೆ ನಿಡುಗಲ್ ಎಂದು ಕರೆಯುತ್ತಾರೆ.

ಈ ಬೆಟ್ಟವು ಬೆಂಗಳೂರಿನಿಂದ 180 ಕಿ.ಮೀ ಮತ್ತು ಪಾವಗಡ ನಗರದಿಂದ 27 ಕಿ.ಮೀ ದೂರದಲ್ಲಿದೆ.
ಈ ಕೋಟೆಯು ಒಟ್ಟು ಆರು ಸುತ್ತಿನ ಕೋಟೆಯಾಗಿದೆ ಮೊದಲನೇ ಸುತ್ತಿನ ಕೋಟೆಯನ್ನು ಕಾಳಗಿ ಅಥವಾ ಕಾಳಹಸ್ತಿ ಎಂದು ಕರೆಯುತ್ತಾರೆ. ಎರಡನೇ ಸುತ್ತನ್ನು ಭೈರವನು ಕೋಟೆ, ಮೂರನೇ ಸುತ್ತನ್ನು ಬಸವನಕೋಟೆ, ಎಂದು,ನಾಲ್ಕನೆಯದು ಚನ್ನರಾಯನ ಕೋಟೆ, ಐದನೆಯದು ಅಲ್ಲಮನ ಕೋಟೆ ಅಥವಾ ಬೆಸ್ತರ ಕೋಟೆ ಮತ್ತು ಆರನೆಯದು ವೀರಭದ್ರ ಕೋಟೆ.

 

ಪಾವಗಡ- ಚಿತ್ರದುರ್ಗ ಮುಖ್ಯರಸ್ತೆಯ ದೊಡ್ಡೇನಹಳ್ಳಿಯಿಂದ ದಕ್ಷಿಣಕ್ಕೆ ನಿಡುಗಲ್ ದುರ್ಗ ಬೆಟ್ಟವಿದ್ದು ಬೆಟ್ಟದ ಮಧ್ಯ ಭಾಗದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ತನಕ ನಂಬರು ರಸ್ತೆ ಇದ್ದು ಅಲ್ಲಿಯತನಕ ವಾಹನಗಳಲ್ಲಿ ತೆರಳಬಹುದು.ಅಲ್ಲಿಂದ ಕಾಲ್ನಡಿಗೆಯಲ್ಲಿ ಬೆಟ್ಟದ ಮೇಲ್ಭಾಗಕ್ಕೆ ನಡೆದು ಹೋಗಬೇಕಾಗುತ್ತದೆ. ಗುಂಪಿನಲ್ಲಿ ಹೋದರೆ ಉತ್ತಮ. ಈ ಕೋಟಿಯ ಬಗ್ಗೆ ಹತ್ತಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ನೂರಾರು ವಿಡಿಯೋಗಳು ಬಂದಿದ್ದರೂ ಸ್ವತಃ ನಾವೇ ಚಾರಣ ಮಾಡಿದರೆ ಮಾತ್ರ ಅದರ ಖುಷಿ ಅನುಭವಿಸಬಹುದು. ಜೂನ್ ಇಂದ ಅಕ್ಟೋಬರ್ – ನವಂಬರ್ ತನಕ ಹವಾಗುಣ ಉತ್ತಮವಾಗಿದ್ದು ಚಾರಣಕ್ಕೆ ಯೋಗ್ಯ ಸಮವಾಗಿರುತ್ತದೆ ಅದರಲ್ಲೂ ಬೆಳಗಿನ ಸಮಯದಲ್ಲಿಯೇ ಕಾರಣವನ್ನು ಪ್ರಾರಂಭಿಸಬೇಕಾಗುತ್ತದೆ. ಪ್ರಕೃತಿಯ ಸೌಂದರ್ಯ ಸವಿಯುತ್ತಾ ಮೇಲ್ಭಾಗಕ್ಕೆ ಹೋದಂತೆಲ್ಲ ದೂರ ದೂರದವರೆಗೆ ಕಾಣುವ ಬೆಟ್ಟಗುಡ್ಡ ಸಾಲುಗಳನ್ನು ನೋಡಬಹುದು. ಮಳೆಯ ನಂತರ ವಾತಾವರಣವೆಲ್ಲ ಹಸಿರಿನಿಂದ ಮೈ ತುಂಬಿಕೊಂಡು ಹೆಜ್ಜೆ ಹೆಜ್ಜೆಗೂ ಹಸಿರು ಕಾಲಡಿ ದೊರೆಯುತ್ತದೆ. ಬೇಸಿಗೆಯಲ್ಲಿ ಇಲ್ಲಿ ರಣರಣ ಬಿಸಿಲಿದ್ದು ನಡೆದು ಹೋಗುವುದೇ ಕಷ್ಟವಾಗುತ್ತದೆ.
ಗುಡ್ಡದ ತುದಿ ತಲುಪಿದಾಗ ಬೀಸುವ ತಂಪು ತಂಗಾಳಿ ನಮ್ಮನ್ನು ಒಂದು ಮಾಯಾ ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ತಿಂಡಿ ಊಟವನ್ನು ನಾವು ತೆಗೆದುಕೊಂಡು ಹೋದರೆ ಮಾತ್ರ ದಣಿವು ನೀಗುತ್ತದೆ.ಇಲ್ಲಿ ಯಾವುದೇ ಊಟ ತಿಂಡಿ, ನೀರಿನ ವ್ಯವಸ್ಥೆ ಇರುವುದಿಲ್ಲ.

 

ಸುತ್ತಲೂ ಹಿಂದೆ ಕಟ್ಟಿದ್ದ ಕೋಟೆ ಗೋಡೆಗಳ ಅವಶೇಷಗಳು, ಸಂರಕ್ಷಣೆ ಇಲ್ಲದೆ ಅನಾಥವಾಗಿ ಬಿದ್ದಿರುವ ಫಿರಂಗಿಗಳು ನಮ್ಮ ಗತ ಇತಿಹಾಸವನ್ನು ಸಾರಿ ಹೇಳುತ್ತವೆ. ಬೆಟ್ಟದ ಮೇಲೆ ನಂದಿಯ ಪ್ರತಿಮೆ ಇದೆ.
ಬೆಟ್ಟದ ಮೇಲಿನಿಂದ ನಿಂತು ನೋಡಿದಾಗ
ಸುತ್ತಮುತ್ತಲ ವಿಹಂಗಮ ನೋಟ ಪ್ರಕೃತಿಯ ಮುಂದೆ ಮನುಷ್ಯ ಅದೆಷ್ಟು ಚಿಕ್ಕವನು ಎಂಬುದನ್ನು ನೆನಪಿಸುತ್ತವೆ.
ಈ ಬೆಟ್ಟವು ಕಡಿದಾಗಿದ್ದು ಒಂದು ಅಖಂಡ ಶಿಲೆಯನ್ನು ಹೊಂದಿದೆ. ಈ ಅಖಂಡ ಏಕಶಿಲೆಯ ನಿಲುವಿನಿಂದ ಇದಕ್ಕೆ ನಿಡುಗಲ್ ಎಂಬ ಹೆಸರು ಬಂದಿದೆ.

 

ಹಿಂದೆ ಇದೊಂದು ಜನಭರಿತ ರಾಜಧಾನಿ ಪ್ರದೇಶವಾಗಿದ್ದು ಮೊದಲು ಇಲ್ಲಿ ನೊಳಂಬ ಪಲ್ಲವರು ಆಳ್ವಿಕೆ ಶುರು ಮಾಡಿದರು. ನಂತರ ಕಾಲ ಕಾಲಕ್ಕೆ ಇಲ್ಲಿನ ಕೋಟೆಯು ವಿಸ್ತಾರವಾಗಿ ವಿಜಯನಗರ ಕಾಲದಲ್ಲಿ ಬಲವಾದ ಕೋಟೆಯಾಯಿತು. ಅವರ ನಂತರದಲ್ಲಿ ಇದೊಂದು ಪಾಳೆಯ ಪಟ್ಟವಾಗಿತ್ತು. ಬೆಟ್ಟದ ಕೆಳಭಾಗದಲ್ಲಿ ಯೋಗ ಲಕ್ಷ್ಮಿ ನರಸಿಂಹ, ವೀರಭದ್ರೇಶ್ವರ, ಜೈನಬಸದಿ ಹಾಗೂ
ಶಿವನಿಗೆ ಅರ್ಪಿತವಾದ ರಾಮಲಿಂಗೇಶ್ವರ ದೇವಾಲಯಗಳಿವೆ. ಶಾಸನಗಳ ಪ್ರಕಾರ, ಲಿಂಗವನ್ನು ಕಾಳಹಸ್ತಿಯಿಂದ ತರಲಾಗಿದೆ. ಹತ್ತಿರದಲ್ಲಿ ರಾಮತೀರ್ಥವೆಂಬ ಕೊಳವಿದ್ದು ಇಲ್ಲಿ ಸ್ನಾನ ಮಾಡಿದರೆ ಕಷ್ಟಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.
ಹತ್ತಿರದಲ್ಲಿಯೇ ಅರಣ್ಯ ಇಲಾಖೆಯ ವಸತಿ ಗೃಹವಿದ್ದು ಇಲ್ಲಿ ವಾಸ್ತವ್ಯ ಮಾಡಬಹುದು. ಹೇರಳ ವನ್ಯಜೀವಿಗಳು ಪ್ರಕೃತಿಯ ಸೊಬಗು, ಹಸಿರು ತುಂಬಿದ ಗಿರಿದುರ್ಗಗಳನ್ನು ಇಲ್ಲಿ ನೋಡಬಹುದಾಗಿದೆ. ಮರೆಯಲಾಗದ ಒಂದು ಸುಂದರ ನೆನಪು ನಿಡುಗಲ್ ನೀಡುತ್ತದೆ.
ಖಾಸಗಿ ವಾಹನದಲ್ಲಿ ಇಲ್ಲಿಗೆ ತೆರಳಬಹುದು.

Share This Article