ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಕಾಲಗೆರೆ (ಕಾಲ್ಗೆರೆ) ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು,
ಚಿತ್ರದುರ್ಗದಿಂದ 39 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಭರಮಸಾಗರ – ಕಾಲಗೆರೆ (ಕಾಲ್ಗೆರೆ)ಮಾರ್ಗದಲ್ಲಿದೆ.
ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದ ಪಶ್ಚಿಮ ಭಾಗದಲ್ಲಿ ಇದ್ದಿತು.ಇದಕ್ಕೆ ಬೀರಾಪುರ ಎಂಬ ಹೆಸರಿದ್ದಿತು. ಬೀರಾಪುರ ಗ್ರಾಮವು ಹಿಂದೆ ವೀರರಿಗೆ ದತ್ತಿ ಕೊಟ್ಟ ಊರಾಗಿತ್ತು. ಹಳೆ ಗ್ರಾಮ ನಿವೇಶನವು ಈಗ ಬೇಚರಾಕ್ ಆಗಿದೆ. ಕಾಲಗೆರೆ ಗ್ರಾಮದ ಹೆಸರು ಜಲವಾಚಕವಾಗಿದ್ದು ನೀರಿನ ಮೂಲದ ಕಾರಣ ಹೆಸರು ಬಂದಿದೆ.ಕಾಲ (ಕಾಲುವೆ)+ಕೆರೆ ಸಂಯೋಜನೆಗೊಂಡು ಕಾಲಗೆರೆಯಾಗಿದೆ. ಇದು ಆಡು ಭಾಷೆಯಲ್ಲಿ ಕಾಲ್ಗೆರೆಯಾಗಿದೆ.
ಇದಕ್ಕೆ ಅನ್ವರ್ಥಕವಾಗುವಂತೆ ಗ್ರಾಮದ ಉತ್ತರಕ್ಕೆ ಕೆರೆಯಿದ್ದು,
ಇದು ತುಂಬಿದ ನಂತರ ಜಗಳೂರು ತಾ.ತುಪ್ಪದಹಳ್ಳಿ ಕೆರೆಗೆ ಹರಿಯುತ್ತದೆ.
ಇತಿಹಾಸ ಹಾಗೂ ದೇವಾಲಯ ಪರಿಚಯ:
1.ಕಲ್ಲೇಶ್ವರ (ಈಶ್ವರ) ದೇವಾಲಯ:
ಗ್ರಾಮದ ಉತ್ತರಭಾಗದಲ್ಲಿ ಕರಿಯಣ್ಣನಹಳ್ಳಿ ರಸ್ತೆಯ ಗ್ರಾಮದ ಕೆರೆಯ ಹಿಂಭಾಗದಲ್ಲಿ ಈ ದೇವಾಲಯ ಕನಿಷ್ಠ ಸಂರಕ್ಷಣಾ ಸ್ಥಿತಿಯಲ್ಲಿದೆ.
ಕ್ರಿ. ಶ.11-12 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಗರ್ಭಗೃಹ ಅರ್ಧ ಮಂಟಪ ನವರಂಗಗಳಿಂದ ಕೂಡಿರುವ ದೇವಾಲಯ ಇದಾಗಿದೆ.
ಗರ್ಭಗೃಹದಲ್ಲಿ ವಿಶಾಲವಾದ ಪಾನವಟ್ಟದ ಮೇಲೆ ಅರ್ಧ ಅಡಿ ಎತ್ತರದ ಶಿವಲಿಂಗವನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿರುವರು. ನವರಂಗದಲ್ಲಿ 4 ಕಂಬಗಳಿವೆ. ಈ ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿರುವರು.
ನವರಂಗದ ಬಲಬದಿಯಲ್ಲಿ 3 ಅಡಿ ಎತ್ತರದ ವಿಷ್ಣುವಿನ ಶಿಲ್ಪವಿದೆ.
2.ರಾಮಲಿಂಗೇಶ್ವರ ದೇವಾಲಯ:
ಗ್ರಾಮದ ಶಾಲೆಯ ಬಳಿ ಇರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ 10-11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹ,ಅರ್ಧಮಂಟಪ ನವರಂಗಗಳಿಂದ ಕೂಡಿದ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ವಿಶಾಲವಾದ ಪಾನವಟ್ಟದ ಮೇಲೆ ಒಂದು ಅಡಿ ಎತ್ತರದ ಪ್ರತಿಷ್ಠಾಪನ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ಗರ್ಭಗೃಹದ ಬಾಗಿಲುವಾಡವು ಸರಳವಾಗಿದ್ದು ಗಜಲಕ್ಷ್ಮಿಯ ಉಬ್ಬುಶಿಲ್ಪವನ್ನು ಹೊಂದಿದೆ. ನವರಂಗದಲ್ಲಿ 4 ಕಂಬಗಳಿವೆ. ದೇವಾಲಯದ ಮುಂಭಾಗದಲ್ಲಿ ಭೈರವ ಮತ್ತು ಭೈರವೀಯರ ಶಿಲ್ಪಗಳಿವೆ. ಶಿವರಾತ್ರಿ ಸಮಯದಲ್ಲಿ ಈ ದೇವರ ವಿಶೇಷ ಆಚರಣೆಗಳು, ಪೂಜಾ ಕಾರ್ಯಕ್ರಮಗಳು ಜರುಗುತ್ತದೆ. ಇದರ ಬಳಿಯಲ್ಲಿಯೇ ಗವಿ ಶಾಂತವೀರಸ್ವಾಮಿ ಮಠವಿದೆ.
ಇದರ ಜೊತೆಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಬೀರಲಿಂಗೇಶ್ವರ, ಮಸಿಯಮ್ಮ ದುರ್ಗಮ್ಮದೇವಿ, ಮಾರಮ್ಮದೇವಿ… ದೇವಾಲಯಗಳಿವೆ. ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ. ಪ್ರತಿ ವರ್ಷ ಹಂಪೆ ಹುಣ್ಣಿಮೆಯ ದಿನದಂದು ಆಂಜನೇಯ ಸ್ವಾಮಿ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ.
ವೀರಗಲ್ಲುಗಳು :
ಗ್ರಾಮದ ಕಲ್ಲೇಶ್ವರಸ್ವಾಮಿ ದೇವಾಲಯದ ಹಿಂಭಾಗದಲ್ಲಿ ವೀರಗಲ್ಲು ಇದ್ದು, ಸಂರಕ್ಷಣೆಯ ಅಗತ್ಯತೆ ಇರುತ್ತದೆ. ಇವು 12-13 ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದ ವೀರಗಲ್ಲು ಇದಾಗಿದೆ.ಇದರಲ್ಲಿ ಮೂರು ಹಂತಗಳಿದ್ದು, ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುವ ಚಿತ್ರಣವನ್ನು ಕಾಣಬಹುದು. ವೀರಗಲ್ಲಿನಲ್ಲಿ ವೀರನು ಬಿಲ್ಲು ಬಾಣಗಳನ್ನು ಹಿಡಿದಿದ್ದು, ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿರುವುದನ್ನು ಚಿತ್ರಿಸಲಾಗಿದೆ.
ಪೂರಕ ಮಾಹಿತಿ :
ಹಂಪಿ ಕನ್ನಡ ವಿವಿ ಕರ್ನಾಟಕ ದೇವಾಲಯ ಕೋಶ ಚಿತ್ರದುರ್ಗ ಜಿಲ್ಲೆ.ಡಾ.ಎಸ್.ವೈ.ಸೋಮಶೇಖರ್.







