ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ವಡ್ಡನಹಳ್ಳಿ ಗ್ರಾಮದ ಪರಿಚಯ

2 Min Read

ಸುದ್ದಿಒನ್ : ವಡ್ಡನಹಳ್ಳಿ ಗ್ರಾಮವು ಐನಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 14 ಕಿಲೋಮೀಟರ್ ದೂರ ವಾಯುವ್ಯಕ್ಕೆ,
ಚಿತ್ರದುರ್ಗ- ತಮಟಕಲ್ಲು- ಪಾಪೇನಹಳ್ಳಿ ಮುಖ್ಯ ರಸ್ತೆಯಲ್ಲಿದೆ. ಗ್ರಾಮದ ಮೂಲ ಸ್ಥಳವು ಈಗಿನ ಗ್ರಾಮದ ಈಗಿರುವ ವಡ್ಡನಹಳ್ಳಿ ಮಾರಮ್ಮ ದೇವಾಲಯದ ಬಳಿಯಲ್ಲಿ ಇದ್ದಿತು. ಇದು ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರವಿದೆ. ಇದೀಗ ಹಳೆ ಸ್ಥಳವು ಬೇಚರಾಕ್ ಗ್ರಾಮವಾಗಿದೆ. ಹೊಳೆಪೂಜೆಗಾಗಿ ದೇವರುಗಳನ್ನು ಹತ್ತಿರದ ಜಿನಗಿ ಹಳ್ಳಕ್ಕೆ ಕರೆದೊಯ್ಯಲಾಗುತ್ತದೆ. ವಡ್ಡನಹಳ್ಳಿ ಮಾರಮ್ಮ ದೇವಾಲಯದ ಬಳಿ ಇರುವ ಗುಡ್ಡೆಕಲ್ಲು ಸ್ಥಳವು ಹಿಂದೆ ಗ್ರಾಮಕ್ಕೆ ಹುಗಿ ಹೊಯ್ದ ಸ್ಥಳವಾಗಿದ್ದು, ಇದಕ್ಕೆ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಪೂಜಿಸಿ ನಂತರ ಮುಂದುವರೆಯಲಾಗುತ್ತದೆ.

ಹೆಸರಿನ ಮೂಲ :
ಗ್ರಾಮದ ಹೆಸರು ವ್ಯಕ್ತಿ ಹಾಗೂ ವಾಚಕವಾಗಿದ್ದು, ವಡ್ಡರ ಸಮುದಾಯವು ವಾಸವಾಗಿದ್ದ ಕಾರಣಕ್ಕೆ ವಡ್ಡನಹಳ್ಳಿ ಹೆಸರು ಬಂದಿದೆ. ಆಡುಭಾಷೆಯಲ್ಲಿ ಜನರು ಇದನ್ನು ವಡ್ನಳ್ಳಿ ಎನ್ನುತ್ತಾರೆ. ಇದೇ ಹೆಸರಿನ ಗ್ರಾಮಗಳು ಕರ್ನಾಟಕದಲ್ಲಿ ಐವತ್ತಕ್ಕೂ ಅಧಿಕವಾಗಿವೆ.

ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು ಆಗ್ನೇಯಕ್ಕೆ ಜಿನಗಿ ಹಳ್ಳ ಹರಿಯುತ್ತದೆ. ಸುತ್ತಲೂ ಸಮತಟ್ಟು ಭೂ ಪ್ರದೇಶ, ಶಿಲಾಪದರವೇ ಗ್ರಾಮದ ಸುತ್ತಲೂ ಹರಡಿದೆ. ಮಳೆಯಾಶ್ರಿತ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಪಾಪೇನಹಳ್ಳಿ,ರುಮ್ಮಘಟ್ಟ..
ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯ ಸ್ವಾಮಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯನ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ರಾಮನವಮಿಯ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.

2.ಚೌಡಮ್ಮದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಈ ದೇವರ ಪುಟ್ಟ ಗುಡಿಯಿದೆ. ಈ ದೇವರ ಜಾತ್ರೆಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ನಡೆಸಲಾಗುತ್ತದೆ.

3.ವಡ್ಡನಹಳ್ಳಿ ಮಾರಮ್ಮದೇವಿ ದೇವಸ್ಥಾನ :
ಗ್ರಾಮದ ಹೊರಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಹಿಂದೆ ಪುಟ್ಟ ಗುಡಿ ಇದ್ದ ಈ ದೇವಾಲಯವನ್ನು ಇತ್ತೀಚಿಗೆ ಪುನರ್ ನಿರ್ಮಿಸಲಾಗಿದೆ. ಈ ಹಿಂದೆ ದೇವಿಯು ನಾಯಕನಹಟ್ಟಿಯಿಂದ ಈ ಹಳ್ಳಿಗೆ ಆಗಮಿಸಿ ಇಲ್ಲಿಯೇ ನೆಲೆ ನಿಂತಿದ್ದಾಳೆ ಎಂದು ಹೇಳಲಾಗುತ್ತದೆ. ಹಿಂದೆಲ್ಲವೂ ಸುತ್ತಲಿನ ಏಳು ಊರುಗಳ ಗ್ರಾಮಸ್ಥರು ಸೇರಿ ಈ ದೇವಿಯ ಜಾತ್ರೆಯನ್ನು ನಡೆಸುತ್ತಿದ್ದರು. ಆದರೆ ಇಂದು ಆಯಾ ಊರುಗಳಲ್ಲೇ ಈ ದೇವಿಯ ದೇವಾಲಯವನ್ನು ನಿರ್ಮಿಸಿದ್ದು ಅಲ್ಲಿಯೇ ಜಾತ್ರೆಗಳನ್ನು ನಡೆಸುತ್ತಾರೆ.

4.ದುರ್ಗಾಂಬಿಕಾ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಿಯ
ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

5. ಈಶ್ವರ ದೇವಸ್ಥಾನ :
ಗ್ರಾಮದ ಹೊರಭಾಗದ ವಡ್ಡನಹಳ್ಳಿ ಮಾರಮ್ಮ ದೇವಾಲಯದ ಬಳಿಯಲ್ಲಿ ಈಶ್ವರ ದೇವಾಲಯವಿದ್ದು ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗ್ರಾಮದಲ್ಲಿ ಗೌರಸಂದ್ರ ಮಾರಮ್ಮ ದೇವಾಲಯವಿದೆ.

Share This Article