ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಚಿತ್ರದುರ್ಗ ನಗರದ ಕೋಟೆಯ ವಾಯುವ್ಯ ದಿಕ್ಕಿನ ಮುಖ್ಯ ಪ್ರವೇಶ ದ್ವಾರವೇ ಉಚ್ಚಿಂಗಮ್ಮನ ಬಾಗಿಲು.ಇದು ಬುರುಜಿನಹಟ್ಟಿ ರಸ್ತೆಯಲ್ಲಿದೆ. 17-18 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಬಾಗಿಲು ಇಂಡೋ-ಸಾರ್ಸೇನಿಕ್ ಶೈಲಿಯ ಪ್ರಮುಖ ಬಾಗಿಲಾಗಿದೆ.ಈ ಮಹಾದ್ವಾರಕ್ಕೆ ಉಪಮಹಾದ್ವಾರವೊಂದಿದೆ.ಅವುಗಳ ಮಧ್ಯೆ ಚೌಕಾಕಾರದ ಅಂಕಣವಿದೆ.ಚೌಕಾಕಾರದ ವಿಶಾಲವಾದ ಅಂಕಣ ಹೊಂದಿರುವ ಏಕೈಕ ಬಾಗಿಲು ಇದಾಗಿದೆ.ಇದರ ಪೂರ್ವ ಭಾಗದಲ್ಲಿ 2 ದಿಡ್ಡಿ ಬಾಗಿಲುಗಳಿದ್ದು, ಅವುಗಳನ್ನು ಈಗ ಮುಚ್ಚಲಾಗಿದೆ.
ಇದನ್ನು ಹಿರೇಮದಕರಿನಾಯಕನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಮೇಲ್ಛಾವಣಿ ಸಂಪೂರ್ಣ ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ. ಸಂಪೂರ್ಣ ಶಿಲಾಮಯವಾದ ಗೋಡೆಗಳು ಇದನ್ನು ಆವರಿಸಿ ಸುತ್ತಲೂ ಮುಂದುವರೆದಿದೆ.ಇದರ ಎಡಭಾಗದಲ್ಲಿ ಬತೇರಿ ಗಳಿದ್ದು,ಕೋಟೆಗೆ ಸಂಪರ್ಕಿಸುತ್ತವೆ. ಈ ದ್ವಾರಕ್ಕೆ ಉಚ್ಚಂಗಿ ಹೊಂಡದ ಬಾಗಿಲು, ಸಿಹಿನೀರು ಹೊಂಡದ ಬಾಗಿಲು ,ಉತ್ಸವಾಂಬ ಬಾಗಿಲು… ಎನ್ನಲಾಗುತ್ತದೆ. ಹಿಂದೆ ಈ ದ್ವಾರವು ಹಳೆ ಊರನ್ನು ಹೊಂದಿತ್ತು. ಆದರೆ ಇಂದು ಈ ಬಾಗಿಲನ್ನು ದಾಟಿ ಚಿತ್ರದುರ್ಗ ನಗರವು ಬೃಹದಾಕಾರವಾಗಿ ಬೆಳವಣಿಗೆಯಾಗಿದೆ. ಕೋಟೆಯ ಹೊರಸುತ್ತಿನ (ಮೊದಲನೇ ಸುತ್ತು) ಪ್ರಮುಖ ದ್ವಾರವಾದ ಉಚ್ಚಿಂಗಮ್ಮನ ಬಾಗಿಲು ಹಿಂದೆ ಚಿತ್ರದುರ್ಗದ ಪ್ರವೇಶಕ್ಕೆ ಪ್ರಮುಖ ದ್ವಾರವಾಗಿದ್ದು, ಕೋಟೆಯ ವಾಯುವ್ಯ ದಿಕ್ಕಿನಲ್ಲಿದೆ.
ಇದರ ಮುಂದೆ ಎಡಭಾಗದಲ್ಲಿ ಸಿಹಿನೀರು ಹೊಂಡವಿದ್ದು, ನೀರಿನ ಸಂಗ್ರಹ ಹಾಗೂ ಅಗಳು.. ಎರಡೂ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಉಚ್ಚಿಂಗಮ್ಮ ದೇವರ ಹೆಸರಿನಲ್ಲಿ ಈ ಬಾಗಿಲಿಗೆ ಉಚ್ಚಿಂಗಮ್ಮನ ಬಾಗಿಲು ಎನ್ನಲಾಗುತ್ತದೆ.
ಹೊಂಡದಲ್ಲಿ ಹಿಂದೆ ದೇವಿಯ ತೆಪ್ಪೋತ್ಸವ ನಡೆಯುತ್ತಿದ್ದಿತ್ತಂತೆ.
ಈ ಹೊಂಡದ ನೀರನ್ನು ದೇವಿಯ ಅಭಿಷೇಕಕ್ಕೆ ಉಪಯೋಗಿಸಲಾಗುತ್ತಿತ್ತು.ಈ ಹೊಂಡವು ಮಧ್ಯಭಾಗದಲ್ಲಿ ಸುಮಾರು 40 ಅಡಿಗಳಷ್ಟು ಆಳವಿದ್ದು, ಮಧ್ಯಭಾಗದಲ್ಲಿ ಮತ್ತೊಂದು ಸಣ್ಣ ಹೊಂಡವಿದೆ. 3 ವರ್ಷಗಳ ಹಿಂದೆ ಈ ಹೊಂಡದ ಹೂಳನ್ನು ತೆಗೆದು ಸ್ವಚ್ಛತೆ ಮಾಡಲಾಯಿತು.ಈ ಹೊಂಡಕ್ಕೆ ಕೋಟೆಯ ಒಳಭಾಗದಿಂದ ನೀರು ಹರಿದು ಬರುತ್ತದೆ.ತುಂಬಿದ ನಂತರ ಶಿಲಾ ಕಾಲುವೆಯ ಮೂಲಕ ಸಂತೆ ಹೊಂಡಕ್ಕೆ ತಲುಪುತ್ತದೆ.
ಹಿಂದೆ ಇದರ ಬಲಭಾಗದಲ್ಲಿ ಆಳವಾದ ಕಂದಕಗಳಿದ್ದವು.ಈಗ ಅವುಗಳನ್ನು ಮುಚ್ಚಲಾಗಿದೆ. ಸುಂದರ ಬಾಗಿಲು ಹೊಂದಿರುವ ಇದರ ಗೋಡೆಗಳನ್ನು ಭಾರಿ ಶಿಲೆಗಳಿಂದ ನಿರ್ಮಿಸಲಾಗಿದ್ದು, 25 ಅಡಿಗಳಷ್ಟು ಎತ್ತರವಿದೆ. ಈ ಬಾಗಿಲ ಒಳಗಿನ ಕೊಠಡಿಯಲ್ಲಿ ಹಿಂದೆ ಪಾಳೆಯಗಾರರ ಕಾಲದಲ್ಲಿ ತಪಾಸಣಾ ಠಾಣೆ ಇದ್ದಿತು.ಅಂಕಣದ ಒಳಗೆ ಗೋಪಾಲಸ್ವಾಮಿ ಬೃಂದಾವನವಿದೆ.
ಉಚ್ಚಿಂಗಮ್ಮನ ಬಾಗಿಲು ಬಳಿಯಿರುವ ದೇವಸ್ಥಾನಗಳು :
1.ಹೊಂಡದ ಏರಿ ಆಂಜನೇಯ ದೇವಸ್ಥಾನ:
ಉಚ್ಚಿಂಗಮ್ಮನ ಬಾಗಿಲಿನ ಹೊರಗೆ ಎಡಭಾಗದಲ್ಲಿ ಬರಗೇರಮ್ಮ ಮಂದಿರದ ರಸ್ತೆಯಲ್ಲಿರುವ ಏರಿಯ ಮೇಲೆ ಇರುವ ಈ ದೇವಾಲಯದಲ್ಲಿ ಗರ್ಭಗೃಹ ಮಾತ್ರವಿದೆ. ಇದರಲ್ಲಿ ಆಂಜನೇಯಸ್ವಾಮಿ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದ್ದು, ದಕ್ಷಿಣಾಭಿಮುಖವಾಗಿದೆ.
2.ಆಂಜನೇಯಸ್ವಾಮಿ ದೇವಸ್ಥಾನ:
ಬಾಗಿಲಿನ ಹೊರಗೆ ಎದುರು ಭಾಗದಲ್ಲಿ ಇರುವ ಈ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದೆ.
ಗರ್ಭಗೃಹ , ಸಭಾಮಂಟಪಗಳಿವೆ.
ಇದರ ಹತ್ತಿರದಲ್ಲೇ ಈಶ್ವರ ದೇವಾಲಯವಿದೆ.








