ಸಒನ್
ಸಿಂಗಾಪುರ ಗ್ರಾಮವು ಹುಲ್ಲೂರು ಪಂಚಾಯತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ನೈರುತ್ಯಕ್ಕೆ 13 ಕಿಲೋಮೀಟರ್ ದೂರದಲ್ಲಿ
ಚಿತ್ರದುರ್ಗ- ಹೊಳಲ್ಕೆರೆ ರಸ್ತೆಯ ಸಿಂಗಾಪುರ ಗೇಟ್ ನಿಂದ ಪಶ್ಚಿಮದಲ್ಲಿ 1.5 ಕಿ.ಮೀ.ದೂರದಲ್ಲಿದೆ.
ಮೂಲತಃ ಇದೊಂದು ಶಾಸನಸ್ತ ಮತ್ತು ಐತಿಹಾಸಿಕ ಗ್ರಾಮ.
ಗ್ರಾಮದ ಮೂಲ ಸ್ಥಳವು ಗ್ರಾಮದಿಂದ 1 ಕಿ.ಮೀ.ದೂರದಲ್ಲಿ ಮಾಡದಕೆರೆಹಟ್ಟಿ ರಸ್ತೆಯಲ್ಲಿದೆ.ಇದನ್ನು ಸಿಂಗೇಶನಹಳ್ಳಿ/ಸಿಂಗೇಸನಹಾಳ್ ಎನ್ನಲಾಗುತ್ತದೆ. ಈಗ ಇದು ಬೇಚರಾಕ್ ಸ್ಥಳವಾಗಿದೆ. ಇಂದಿಗೂ ಇಲ್ಲಿ ಪಾಳು ಬಿದ್ದ ಸಿಂಗೇಶ್ವರ (ಈಶ್ವರ ) ದೇವಾಲಯವಿದೆ. ಇದನ್ನು 12 ನೇ ಶತಮಾನದ ಹೊಯ್ಸಳರ ಶೈಲಿಯಲ್ಲಿ ನಿರ್ಮಿಸಲಾಗಿದೆ.ಈ ದೇವರ ಹೆಸರಿನಿಂದಲೇ ಈ ಗ್ರಾಮಕ್ಕೆ ಸಿಂಗೇಶ್ವರನ ಪುರದಿಂದ ಸಿಂಗಾಪುರ ಹೆಸರು ಬಂದಿದೆ.
ಸಿಂಗಾಪುರ ಗ್ರಾಮದ ಉಲ್ಲೇಖವು ಚಿತ್ರದುರ್ಗದ ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನದ ಮುಂದಿರುವ ಶಾಸನದಲ್ಲಿದೆ.ಈ ಶಾಸನದಲ್ಲಿ ಸಿಂಗಾಪುರದ ಗ್ರಾಮದ ಪ್ರಮುಖರು ಗೋಪಾಲಸ್ವಾಮಿ ದೇವರಿಗೆ ಈಗಿನ ಚಿತ್ರದುರ್ಗದ ಗೋಪಾಲಪುರವನ್ನು ದತ್ತಿ ಕೊಡುವಾಗ ಹಾಜರಿರುವುದಾಗಿ ತಿಳಿಸುತ್ತದೆ.
ಈಗಿನ ಚಿತ್ರದುರ್ಗ ತಾಲ್ಲೂಕಿನ ಅಡಿಕೆ ಬೆಳೆಯುವಲ್ಲಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಗ್ರಾಮ ಇದಾಗಿದೆ .
ಜೋಡಿ ಗ್ರಾಮಗಳಾದ ಹುಲ್ಲೂರು -ಸಿಂಗಾಪುರ ನಡುವೆ ಹರಿಯುವ ಜಿನಿಗಿ ಹಳ್ಳದ ಫೀಡರ್ ಕಾಲುವೆ 2 ಗ್ರಾಮಗಳನ್ನು ಪ್ರತ್ಯೇಕಿಸುತ್ತದೆ .
ಮುಂದೆ ಈ ಕಾಲುವೆ ಹುಲ್ಲೂರು ಕೆರೆಗೆ ಸೇರಿಕೊಳ್ಳುತ್ತದೆ.
ಗ್ರಾಮದ ಪಶ್ಚಿಮಕ್ಕೆ ಉಂಬಳಿ ಬಸಪ್ಪನ(ಉಂಬ್ಳಪ್ಪನ) ಗುಡ್ಡವಿದೆ. ದಕ್ಷಿಣದಲ್ಲಿ ಜಿನಗಿಹಳ್ಳ ಹರಿಯುತ್ತದೆ. ಮಾಡದಕೆರೆಹಟ್ಟಿ, ದೇವಪುರದಹಟ್ಟಿ , ಹುಲ್ಲೂರು…ಹತ್ತಿರದ ಗ್ರಾಮಗಳಾಗಿವೆ .
ಮಾಡದಕೆರೆಹಟ್ಟಿ , ಕಾವಲುಹಟ್ಟಿ ಈ ಗ್ರಾಮದ ಉಪಗ್ರಾಮಗಳಾಗಿವೆ.
ಗ್ರಾಮದ ಪಶ್ಚಿಮಕ್ಕೆ ಇರುವ ಉಂಬಳಪ್ಪನ ಗುಡ್ಡದ ಪರಿಸರದಲ್ಲಿ ಹಿಂದೆ ನವಶಿಲಾಯುಗದ ಮಾನವರು ವಾಸಿಸುತ್ತಿದ್ದ ಬಗ್ಗೆ ಪತ್ತೆಯಾಗಿದ್ದು ,ಇವರ ಕಾಲ ಕ್ರಿ.ಪೂ 2500-1500 ರಲ್ಲಿ.ಇವರು ಬಳಸುತ್ತಿದ್ದ ಕೈಗೊಡಲಿ, ಕಲ್ಲಿನ ಆಯುಧಗಳು ದೊರೆತಿದ್ದು,ಇದರ ಬಗ್ಗೆ ಕಲ್ಲಿನಲ್ಲಿರುವ ಮತ್ತಷ್ಟು ಸಂಶೋಧನೆಯ ಅಗತ್ಯತೆ ಇದೆ.ಗ್ರಾಮದ ಸುತ್ತಲೂ ಹತ್ತಾರು ಲಿಂಗಮುದ್ರೆಗಳಿದ್ದು, ಇವು ಹಿಂದೆ ದೇವರ/ದೇವಸ್ಥಾನದ/ಗ್ರಾಮದ ಗಡಿಗಳನ್ನು ಸೂಚಿಸುವ ಕಲ್ಲುಗಳಾಗಿವೆ.
ಸಿಂಗಾಪುರ ಗ್ರಾಮದಲ್ಲಿರುವ ಮಂದಿರಗಳು:
1.ವೀರಭದ್ರೇಶ್ವರ ದೇವಾಲಯ:
ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿರುವ ಶ್ರೀ ವೀರಭದ್ರೇಶ್ವರ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಉತ್ತರಾಭಿಮುಖವಾಗಿದೆ. ಗರ್ಭಗೃಹ, ಅಂತರಾಳ, ನವರಂಗಗಳಿರುವ ದೇವಸ್ಥಾನ ಇದಾಗಿದೆ. ಗರ್ಭಗೃಹದಲ್ಲಿ 4 ಅಡಿ ಎತ್ತರದ ವೀರಭದ್ರೇಶ್ವರ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಈ ದೇವಾಲಯದ ನವರಂಗದ ಎಡ ಗೋಡೆಯೊಳಗೆ ಇರುವ ಗುಂಡಬ್ರಹ್ಮಯ್ಯ ಅಥವಾ ಶೂಲಬ್ರಹ್ಮ ಎಂದು ಕರೆಯುವ ಉಬ್ಬುಶಿಲ್ಪವಿದೆ. ಇಲ್ಲಿ ನೀಳಕಾಯರಾಗಿ ನಿಂತ ಗುಂಡಯ್ಯ -ಬ್ರಹ್ಮಯ್ಯರು ಒಂದೊಂದು ಕೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಶೂಲದತ್ತ ಮುಖಮಾಡಿ ನಿಂತಿರುವುದನ್ನು ಚಿತ್ರಿಸಲಾಗಿದೆ. ವೀರಭದ್ರ ದೇವರ ಎದುರಿನಲ್ಲಿ ನೆಲಹಾಸಿನಲ್ಲಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವ ದಂಪತಿಗಳ ಎರಡು ಜೋಡಿಗಳ ಉಬ್ಬುಶಿಲ್ಪವಿದೆ.ಈ ದೇವರ ಆಚರಣೆಗಳು ,ಕೆಂಡೋತ್ಸವಶಿವರಾತ್ರಿ ಹಬ್ಬದಂದು ನಡೆಸಲಾಗುತ್ತದೆ.
2.ಶ್ರೀ ಕರಿಯಮ್ಮ ದೇವಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.ಈ ಮಂದಿರದಲ್ಲಿ ಗರ್ಭಗೃಹ ಸಭಾಮಂಟಪಗಳಿದ್ದು, ಗರ್ಭಗೃಹದಲ್ಲಿ 3 ಅಡಿ ಎತ್ತರದ ಕರಿಯಮ್ಮ ದೇವಿಯ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.ಈ ಮಂದಿರದ ಎದುರು ಶಿಲಾಶಾಸನವಿದೆ.
3.ಆಂಜನೇಯ ಸ್ವಾಮಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
4.ಕೊಲ್ಲಾಪುರದಮ್ಮ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಕೊಲ್ಲಾಪುರದಮ್ಮ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
5. ಸಿದ್ದಪ್ಪ ದೇವಸ್ಥಾನ (ಸಿದ್ಧೇಶ್ವರ)ಗ್ರಾಮದ ಮುಖ್ಯರಸ್ತೆಯಲ್ಲಿ ಇರುವ ಶ್ರೀ ಸಿದ್ದೇಶ್ವರ ದೇವಸ್ಥಾನ ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ಶಿವಲಿಂಗವನ್ನು ಪೂಜಿಸಲಾಗುತ್ತದೆ.
6.ಬಸವೇಶ್ವರ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಬಸವೇಶ್ವರ ದೇವಾಲಯವನ್ನು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ನಂದಿಯ ಮೂರೂವರೆ ಅಡಿ ಎತ್ತರದ ಶಿಲ್ಪವನ್ನು ಪೂಜಿಸಲಾಗುತ್ತದೆ.ಹಿಂದೆ ಸಂಪೂರ್ಣ ಶಿಲಾಮಯವಾಗಿದ್ದ ಈ ದೇವಾಲಯ ಶಿಥಿಲವಾದ ಕಾರಣಕ್ಕೆ ಅದನ್ನು ತೆಗೆದು ಇದೀಗ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲಾಗಿದೆ.
ಇದು ಬಹುಶಃ ನೊಳಂಬ ಪಲ್ಲವರ ಶೈಲಿಯಲ್ಲಿ ಇರುವುದಲ್ಲದೆ ಇದು ಅವರ ಕಾಲದ ಒಂದು ಕೊಡುಗೆ ಎಂದು ಹೇಳಬಹುದಾಗಿದೆ .
ಈ ದೇವಸ್ಥಾನದ ಹಿಂದಿನ ಶಿಲಾ ಕಂಬಗಳನ್ನು ಹತ್ತಿರದ ಜಿನಗಿ ಹಳ್ಳಕ್ಕೆ ಬಿಡಲಾಗಿದೆ.ಈ ನಂದಿಯ ವಿಗ್ರಹ ಕೆಲ ದಶಕಗಳ ಹಿಂದೆ 5 ಅಡಿ ಎತ್ತರವಿದ್ದು,ದಿನ ಕಳೆದಂತೆ ಗಾತ್ರದಲ್ಲಿ ಕುಗ್ಗಿದೆ ಎಂದು ಸ್ಥಳೀಯರು ಹೇಳುತ್ತಾರೆ.ಈ ದೇವರ ಆಚರಣೆಗಳು ಬಸವ ಜಯಂತಿಯಂದು ನಡೆಸಲಾಗುತ್ತದೆ. ಇದರ ಜೊತೆಗೆ ದುರ್ಗಮ್ಮ,ಕುಕ್ಕುವಾಡೇಶ್ವರಿ.. ಮಂದಿರಗಳಿವೆ.






