ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್

ಮಲ್ಲಾಪುರ ಗ್ರಾಮವು ಗೋನೂರು ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಚಿತ್ರದುರ್ಗದಿಂದ ಐದು ಕಿಲೋಮೀಟರ್ ದೂರ ಉತ್ತರಕ್ಕೆ ,ಚಿತ್ರದುರ್ಗ-ಹೊಸಪೇಟೆ ಮುಖ್ಯ ರಸ್ತೆ ರಾ. ಹೆ 13 (ಹೊಸ ರಸ್ತೆ ರಾ.ಹೆ.50)ರಲ್ಲಿದೆ.
ಈ ಗ್ರಾಮದ ಹಳೆಯ ಹೆಸರು ಕುಂಚಿಗನಹಳ್ಳಿ.1411 ರಲ್ಲಿ
ವೀರಮಲ್ಲಣ್ಣ ಒಡೆಯನು ತನ್ನ ತಾಯಿ ಮಲ್ಲವ್ವೆಗೆ ಪುಣ್ಯವಾಗಲೆಂದು ಬೆಟ್ಟದ ಮೇಲಿರುವ ಹಿಡಿಂಬೇಶ್ವರ ದೇವರಿಗೆ ಈ ಗ್ರಾಮವನ್ನು ದತ್ತಿ ಬಿಟ್ಟು ಗ್ರಾಮಕ್ಕೆ ಮಲ್ಲಾಪುರ ಎಂದು ಕರೆದನು.ಗ್ರಾಮದ ಹಳೆ ಸ್ಥಳ ಈಗಿರುವ ಊರಿನಿಂದ ಪೂರ್ವಕ್ಕೆ ಗೋನೂರು ರಸ್ತೆಯಲ್ಲಿತ್ತು.ನಂತರ ಈಗಿರುವ ಜಾಗಕ್ಕೆ ಸ್ಥಳಾಂತರವಾಗಿದೆ. ರಾಷ್ಟ್ರೀಯ ಹೆದ್ದಾರಿ 13 ( ಹೊಸ ರಸ್ತೆ 50.) ಗ್ರಾಮದ ಮೂಲಕ ಸಾಗುತ್ತದೆ. ಇದೀಗ ರಸ್ತೆ ವಿಸ್ತರಣೆಯಾಗಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿದೆ.
ಮೂಲತಃ ಇದೊಂದು ಶಾಸನಸ್ಥ-ಐತಿಹಾಸಿಕ ಸ್ಥಳವಾಗಿದೆ .11 ನೇ ಶತಮಾನದಿಂದಲೂ ಈ ಗ್ರಾಮವು ಅಸ್ತಿತ್ವದಲ್ಲಿದೆ.ಅಂದರೆ ಈ ಸ್ಥಳಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ.ಗ್ರಾಮದ ಪ್ರಾರಂಭದಲ್ಲಿರುವ ಮಲ್ಲಾಪುರ ಕೆರೆಯು ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತೆ ವಿಶಾಲ ಪ್ರದೇಶದಲ್ಲಿ ಹರಡಿದೆ. ತುಂಬಿದ ಜಲರಾಶಿ ನೋಡುಗರ ಕಣ್ಮನ ಸೆಳೆಯುತ್ತದೆ.
ಚಿತ್ರದುರ್ಗ ಕೋಟೆ-ಬೆಟ್ಟದ ಮೇಲೆ ಬೀಳುವ ಮಳೆ ನೀರು ಸಂಪೂರ್ಣವಾಗಿ ಕೊನೆಯದಾಗಿ ಈ ಕೆರೆಗೆ ಸೇರುತ್ತದೆ.

ಗ್ರಾಮದಲ್ಲಿರುವ ಮಂದಿರಗಳು:
1.ಕಲ್ಲೇಶ್ವರ ದೇವಾಲಯ:
ಗೋನೂರು ರಸ್ತೆಯ ಬಲಬದಿಯಲ್ಲಿ ಹಳೆಯೂರು ಜಾಗದಲ್ಲಿರುವ ಕಲ್ಲೇಶ್ವರ ದೇವಾಲಯ ಪೂರ್ವಾಭಿಮುಖವಾಗಿದ್ದು ,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ .ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಕ್ರಿಸ್ತಶಕ ಸುಮಾರು 11-12ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. 2010 ರವರೆಗೆ ಈ ದೇವಾಲಯ ಶಿಥಿಲವಾಗಿತ್ತು .2011ರಲ್ಲಿ ಈ ಮಂದಿರವನ್ನು ಧರ್ಮಸ್ಥಳ ಸಂಸ್ಥೆಯ ಸಹಯೋಗದಲ್ಲಿ ಸಂಪೂರ್ಣ ಜೀರ್ಣೋದ್ಧಾರ ಮಾಡಲಾಗಿದೆ. 3 ಗರ್ಭಗೃಹಗಳನ್ನು ಹೊಂದಿದ ತ್ರಿಕೂಟ ದೇವಾಲಯವಿದು.3 ಗರ್ಭಗೃಹ ,ಅಂತರಾಳಗಳು, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿವೆ .ಮುಖ್ಯ ಗರ್ಭಗೃಹದಲ್ಲಿ ಅರ್ಧ ಅಡಿ ಎತ್ತರದ ಪೀಠದ ಮೇಲೆ ಒಂದೂವರೆ ಅಡಿಗಳೆತ್ತರದ ಪಾನವಟ್ಟವಿದೆ. ಇದರ ಮೇಲೆ ಅರ್ಧ ಅಡಿ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು.ಅಂತರಾಳದಲ್ಲಿ ನಂದಿಯ ಶಿಲ್ಪವಿದೆ .ನಂದಿಯು ಎರಡು ಅಡಿ ಎತ್ತರ ,ಮೂರು ಅಡಿ ಉದ್ದವಾಗಿದ್ದು ಗಂಟೆ,ಲೊಡಗಗಳ ಸರ ಹಾಗೂ ಹಣೆಪಟ್ಟಿಯ ಅಲಂಕರಣೆಯನ್ನು ಹೊಂದಿದೆ.ಗರ್ಭಗೃಹ ಮತ್ತು ಅಂತರಾಳದ ಬಾಗಿಲುವಾಡಗಳು ಸರಳವಾಗಿದೆ.
ಈ ದೇವಾಲಯದ ಮೂರು ಗರ್ಭಗೃಹದ ಮೇಲೆ ಶಿಖರ ಗಳನ್ನು ನಿರ್ಮಿಸಲಾಗಿದೆ. ಮುಖ್ಯ ಗರ್ಭಗೃಹದ ಮೇಲೆ ಮಾದರಿಯ ಪಾಂಸನ ಮಾದರಿಯ ಶಿಖರವಿದೆ.
2.ರಾಮಲಿಂಗೇಶ್ವರ ದೇವಾಲಯ :
(ರಾಮದೇವರ ಗುಡಿ) ರಾಮಲಿಂಗೇಶ್ವರ ದೇವಾಲಯವು ಗ್ರಾಮದ ಈಶಾನ್ಯಕ್ಕೆ ಇದೆ.ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದ್ದು ,17 -18 ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಅಂತರಾಳ ಮತ್ತು ನವರಂಗ ಗಳಿರುವ ಈ ದೇವಾಲಯದಲ್ಲಿ ಎರಡು ಅಡಿ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು.ಅಂತರಾಳದಲ್ಲಿ ಒಂದು ಅಡಿ ಎತ್ತರದ ಪೀಠದ ಮೇಲೆ ಚಿಕ್ಕದಾದ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ.ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅವುಗಳನ್ನು ಚಚ್ಚೌಕ ಹಾಗೂ ಅಷ್ಟ ಮುಖ ಹಾಗೂ ವೃತ್ತಾಕಾರದಲ್ಲಿ ಕಡೆದಿದ್ದಾರೆ .ದೇವಾಲಯದ ಮುಂಭಾಗದಲ್ಲಿರುವ 6 ನಾಗಶಿಲ್ಪಗಳು ಹಾಗೂ ಕಲ್ಯಾಣ ಚಾಲುಕ್ಯರ ಕಾಲದ 2 ವೀರಗಲ್ಲುಗಳಿವೆ.
3.ಆಂಜನೇಯಸ್ವಾಮಿ ದೇವಾಲಯ :
ಗ್ರಾಮದ ಪೂರ್ವಕ್ಕೆ ಗೋನೂರು ರಸ್ತೆಯಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯವು ಕ್ರಿಸ್ತಶಕ 17 -18 ನೇ ಶತಮಾನದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ದೇವಾಲಯದಲ್ಲಿ ಗರ್ಭಗೃಹ, ನವರಂಗ ,ಮುಖಮಂಟಪ ಹಾಗೂ ದೀಪಸ್ತಂಭಗಳಿವೆ. ದೇವಾಲಯದಲ್ಲಿ ಐದು ಅಡಿ ಎತ್ತರದ ಆಂಜನೇಯ ಶಿಲ್ಪವನ್ನು ಇಟ್ಟು ಪೂಜಿಸುತ್ತಿರುವರು. ಗರ್ಭಗೃಹದ ಬಾಗಿಲುವಾಡವು ಸರಳವಾಗಿದ್ದು ,ಪದ್ಮಗಳನ್ನು ಕಡೆಯಲಾಗಿದೆ .ನವರಂಗದಲ್ಲಿ ನಾಲ್ಕು ಚಚ್ಚೌಕವಾದ ಕಂಬಗಳಿವೆ. ಇಲ್ಲಿ ಸೋಮದ ಮುಖವಾಡಗಳನ್ನು ಇಡಲಾಗಿದೆ.ಮುಖಮಂಟಪದಲ್ಲಿ ಎರಡು ಕಂಬಗಳಿವೆ.
ಗ್ರಾಮದಲ್ಲಿ ಇದರ ಜೊತೆಗೆ ಉಡುಸಲಮ್ಮ , ಮಾರಮ್ಮ ದುರ್ಗಮ್ಮ ಮುಂತಾದ ದೇವಾಲಯಗಳಿವೆ.














