ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಕುರುಬರಹಳ್ಳಿ ಗ್ರಾಮವು ಹುಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 12 ಕಿಲೋಮೀಟರ್ ದೂರ ನೈರುತ್ಯಕ್ಕೆ,
ಚಿತ್ರದುರ್ಗ- ಮಾನಂಗಿ- ಕಳ್ಳಿಹಟ್ಟಿ – ಕುರುಬರಹಳ್ಳಿ.
(ಮತ್ತೊಂದು ಮಾರ್ಗ ಚಿತ್ರದುರ್ಗ- ರಾಷ್ಟ್ರೀಯ ಹೆದ್ದಾರಿ 13 – ಹೊಳಲ್ಕೆರೆ ರಸ್ತೆಯಲ್ಲಿ ದೇವಪುರದ ಹಟ್ಟಿ ಕ್ರಾಸ್ -ಸಿಂಗಾಪುರ -ಹುಲ್ಲೂರು ಮಾರ್ಗ, ಹಳಿಯೂರು -ಕುರುಬರಹಳ್ಳಿ ಹಾಗೂ ಕರಿಹಟ್ಟಿ- ತಿರುಮಲಾಪುರ- ಕುರುಬರಹಳ್ಳಿ) ಮಾರ್ಗದಲ್ಲಿದೆ.
ಗ್ರಾಮದ ಮೂಲ ಸ್ಥಳವು ಈಗಿನ ಗ್ರಾಮದ ಪಶ್ಚಿಮಕ್ಕೆ ಒಂದು ಕಿಲೋಮೀಟರ್ ದೂರದ ರೊಟ್ಟಿಹಳ್ಳಿ. ಈಗ ಈ ಗ್ರಾಮವು ಬೇಚಾರಾಗಿದ್ದು ಜನವಸತಿ ರಹಿತವಾಗಿದೆ.ಇಲ್ಲಿನ ನಿವಾಸಿಗಳೆಲ್ಲ ಈಗಿನ ಕುರುಬರಹಳ್ಳಿ ಗ್ರಾಮಕ್ಕೆ ವಲಸೆ ಬಂದು ಇಲ್ಲಿಯೇ ನೆಲೆಗೊಂಡಿದ್ದಾರೆ. ಈಗಿನ ರೊಟ್ಟಿಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಾಲಯ ಮಾತ್ರ ಉಳಿದಿದೆ.
ವಾರದಲ್ಲಿ ಪ್ರತಿ ಶನಿವಾರ ಹಾಗೂ ವರ್ಷದ ಎಲ್ಲಾ ಹಬ್ಬ ಹರಿದಿನಗಳಲ್ಲಿ,ಶ್ರಾವಣದಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಾರೆ
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾನುಕೊಂಡ ರಸ್ತೆಯಲ್ಲಿ ಬರುವ ಶ್ರೀ ಆಂಜನೇಯ ಸ್ವಾಮಿ ದರ್ಶನ ಮಾಡಿˌ ಅದೇ ದೇವಸ್ಥಾನದ ಎದುರಿಗೆ ಗುಡ್ಡದಲ್ಲಿ ಎಕಬಂಡೆಯಲ್ಲಿ ನೆಲೆಸಿರುವ ಮಾತೆ ಶ್ರೀ ಆಕಳೇರಮ್ಮನ ಬಂಡೆ ಎಂದೇ ಪ್ರಸಿದ್ಧಿಯಾದ ಆಕಳೇರಿ ಬಂಡೆಯಲ್ಲಿ ವಾರ್ಷಿಕ ಪರೇವು ಆಚರಣೆಯನ್ನು ನಡೆಸಲಾಗುತ್ತದೆ.
ಹೆಸರಿನ ಮೂಲ :
ಹಿಂದಿನಿಂದಲೂ ಗ್ರಾಮದಲ್ಲಿ ಕುರುಬ ಜನಾಂಗವೇ ಮೂಲ ನಿವಾಸಿಗಳಾಗಿರುವ ಕಾರಣಕ್ಕೆ ಈ ಗ್ರಾಮಕ್ಕೆ ಕುರುಬರಹಳ್ಳಿ ಹೆಸರು ಬಂದಿದೆ. ಹಿಂದೆ ಈ ಕುರುಬ ಜನಾಂಗವು ಭೀಮಸಮುದ್ರ ರಸ್ತೆಯ ಸಿದ್ದಾಪುರದಲ್ಲಿ ನೆಲೆ ನಿಂತು ಆನಂತರ ಈಗಿನ ಹಳಿಯೂರು ಹಳೆಗ್ರಾಮ ನಿವೇಶನದ ಬಳಿಯಿಂದ ಇಲ್ಲಿಗೆ ವಲಸೆ ಬಂದು ನೆಲೆ ನಿಂತಿದ್ದಾರೆ ಎಂದು ಇಲ್ಲಿನ ಹಿರಿಯರು ಅಭಿಪ್ರಾಯ ಪಡುತ್ತಾರೆ. ಇದೇ ಹೆಸರಿನ ಐವತ್ತಕ್ಕೂ ಅಧಿಕ ಗ್ರಾಮಗಳು ಕರ್ನಾಟಕದಲ್ಲಿವೆ. ಆಡುಭಾಷೆಯಲ್ಲಿ ಜನರು ಈ ಊರನ್ನು ಜನರು ಕುರ್ಬಳ್ಳಿ ಎನ್ನುತ್ತಾರೆ. ನಾಗರಪಂಚಮಿಯ ದಿನ ಈಗಲೂ ಅಲ್ಲಿಗೆ ತೆರಳಿ ನಾಗರ ಕಲ್ಲುಗಳಿಗೆ ಹಾಲನ್ನು ಎರೆದು ಪೂಜಿಸುವ ಪರಿಪಾಠವಿದೆ. ಜೊತೆಗೆ ಸಿದ್ದಾಪುರದ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವರಿಗೂ ನಡೆದುಕೊಳ್ಳುತ್ತಾರೆ.
ಈಗ ಇಲ್ಲಿ ಎಲ್ಲಾ ಜಾತಿ,ಜನಾಂಗದವರು ವಾಸವಾಗಿದ್ದಾರೆ. ಅದರಲ್ಲೂ ಮುಸ್ಲಿಂ ಜನಾಂಗದವರು ಹೆಚ್ಚು ಇರುವ ಈ ಗ್ರಾಮದಲ್ಲಿ ಐಕ್ಶತೆ-ಭಾವೈಕ್ಶತೆಯಿಂದ ಎಲ್ಲರೂ ಒಟ್ಟಾಗಿ ಸಹೋದರರಂತೆ ಜೀವನ ನಡೆಸುತ್ತಿದ್ದಾರೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು,ಪಶ್ಚಿಮಕ್ಕೆ ಜಿನಗಿಹಳ್ಳ ಹರಿಯುತ್ತದೆ. ಸುತ್ತಲೂ ಸಮತಟ್ಟು ಭೂಪ್ರದೇಶ ಗ್ರಾಮದ ಸುತ್ತಲೂ ಹರಡಿದೆ. 70 ರ ದಶಕದವರೆಗೂ ಹತ್ತಿರದ ಭೀಮಸಮುದ್ರ ಕೆರೆಯ ನೀರಾವರಿ ಕಾಲುವೆಗಳಿಂದ ಕಬ್ಬು, ಶೇಂಗಾ ಮತ್ತು ಹಸಿಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿತ್ತು. ಕೆರೆಗೆ ನೀರು ಹಾಗೂ ಮಳೆ ಪ್ರಮಾಣ ಕಡಿಮೆಯಾದ ನಂತರ ಈ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತಿಲ್ಲ.
ಈಗ ಇಲ್ಲಿ ಮಳೆಯಾಶ್ರಿತ ಬೆಳೆಗಳ ಜೊತೆಗೆ ವಿಶೇಷವಾಗಿ ನೀರಾವರಿ ಜಮೀನುಗಳನ್ನು ಮಾಡಿಕೊಂಡಿದ್ದು ಅಡಿಕೆˌ ಮೆಣಸಿನಕಾಯಿ.. ಮುಂತಾದ ಬೇಡಿಕೆಯ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿನ ಮೆಣಸಿನ ಕಾಯಿ ಬೆಳೆಯನ್ನು ಕನಿಷ್ಠ ನೂರು ವರ್ಷಗಳಿಂದಲೂ ಈ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಮೆಣಸಿನಕಾಯಿಯನ್ನು ರಾಜ್ಯ,ಅಂತರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ.
ಮೊಹರಂ ಆಚರಣೆ :
(ಅಲೈವಿ ಆಚರಣೆ )
ಗ್ರಾಮದಲ್ಲಿ ಹಿಂದಿನಿಂದಲೂ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಸಾವಿರಾರ ಜನರ ಸಮ್ಮುಖದಲ್ಲಿ ಕೆಂಡೋತ್ಸವದ ಮೂಲಕ ನಡೆಸಲಾಗುತ್ತಿತ್ತು. ಇದರಲ್ಲಿ ಭಾಗವಹಿಸಲು ಅಕ್ಕಪಕ್ಕದ ಗ್ರಾಮದ ಜನರು ಕೂಡ ಬರುತ್ತಿದ್ದರು. ಈ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ.
ಬೆನಕನಹಳ್ಳಿ, ತಿರುಮಲಾಪುರˌ ಕಳ್ಳಿಹಟ್ಟಿ ಹಾಗೂ ಹಳಿಯೂರು
ಹತ್ತಿರದ ಗ್ರಾಮಗಳಾಗಿವೆ.
ರೊಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ:
ಗ್ರಾಮದಿಂದ ಪಶ್ಚಿಮಕ್ಕೆ ಹಿರೇಗುಂಟನೂರು ರಸ್ತೆಯಲ್ಲಿರುವ ರೊಟ್ಟಿಹಳ್ಳಿ ಗ್ರಾಮವು ಬೇಚರಾಕ್ ಸ್ಥಳವಾಗಿದ್ದು ಇಲ್ಲಿ 16 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಆಂಜನೇಯ ಸ್ವಾಮಿ ದೇವಾಲಯವಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯಕ್ಕೆ ಸಂರಕ್ಷಣೆಯ ಅಗತ್ಯತೆ ಇರುತ್ತದೆ.ಗರ್ಭಗೃಹದಲ್ಲಿ ಪಾಳೇಗಾರರ ಕಾಲದ ಆಂಜನೇಯ ಸ್ವಾಮಿಯ ಶಿಲ್ಪವಿದೆ.
ಇದರ ಬಳಿಯಲ್ಲಿಯೇ ಕ್ರಿ. ಶ.1581 ರ ಶಿಲಾ ಶಾಸನವಿದೆ. ಇದರಲ್ಲಿ ರೊಟ್ಟಿಹಳ್ಳಿ ಗ್ರಾಮದ ಗೌಡಿಕೆಯನ್ನು 200 ವರಹಗಳಿಗೆ ಸಾಕ್ಷಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಿದ ಮಾಹಿತಿ ಇದೆ. ಇದನ್ನು 1903 ರಲ್ಲಿ ಲೂಯಿಸ್ ರೈಸ್ ರವರ ಎಪಿಗ್ರಾಫಿಯ ಕರ್ನಾಟಕ ಶಾಸನ ಸಂಪುಟ 11 ರ ಶಾಸನ 48 ರಲ್ಲಿ ದಾಖಲಾಗಿದೆ.
ದೊಣ್ಣೆ ಕೆಂಚಮ್ಮ ದೇವಾಲಯ :
ಗ್ರಾಮದ ಪಶ್ಚಿಮಕ್ಕೆ ಹಿರೇಗುಂಟನೂರು ರಸ್ತೆಯಲ್ಲಿರುವ ದೊಣ್ಣೆ (ದೋಣೆ) ಕೆಂಚಮ್ಮ ದೇವರ ಬಯಲು ಆಲಯವಿದೆ.
ಇದರ ಬಳಿಯಲ್ಲಿಯೇ ವಿಜಯನಗರ ಕಾಲದ ವೀರಮಾಸ್ತಿಗಲ್ಲು ಇದೆ. ಇದರಲ್ಲಿ ವೀರನು ಬಿಲ್ಲು- ಬಾಣ ಹಿಡಿದಿದ್ದು, ಯುದ್ಧದಲ್ಲಿ ಹುತಾತ್ಮನಾಗಿರುವುದನ್ನು ಚಿತ್ರಿಸಲಾಗಿದೆ.ಜೊತೆಗೆ
ಅದರಲ್ಲಿ ಆತನ ಹೆಂಡತಿ ಸತಿಯಾಗಿರುವುದನ್ನು ಚಿತ್ರಿಸಲಾಗಿದೆ.
ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗೃಹದಲ್ಲಿ ಪಾಳೇಗಾರರ ಕಾಲದ 17-18 ನೇ ಶತಮಾನದ
ಆಂಜನೇಯನ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಮತ್ತೊಂದು ಗರ್ಭಗೃಹದಲ್ಲಿ ಹಿಂದೆ ಗ್ರಾಮದಲ್ಲಿ ಇದ್ದ ಹಳೆ ಆಂಜನೇಯ ಸ್ವಾಮಿ ದೇವಾಲಯದ ಶಿಲ್ಪವನ್ನು ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ಈ ದೇವಾಲಯವು ವಿಜಯನಗರೋತ್ತರ ಶೈಲಿಯಲ್ಲಿದೆ. ರಾಮನವಮಿಯ ಹಾಗೂ ಕಾರ್ತೀಕ ಮಾಸದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
2.ಕೊಲ್ಲಾಪುರದಮ್ಮದೇವಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವಿದೆ. ಗರ್ಭಗೃಹ ಹಾಗೂ ಸಭಾಮಂಟಪ ಇರುವ ಈ ದೇವಾಲಯದ ಗರ್ಭಗೃಹದಲ್ಲಿ ಕೊಲ್ಲಾಪುರದಮ್ಮ ದೇವಿಯನ್ನು ಪೂಜಿಸಲಾಗುತ್ತದೆ.
3.ಮಾರಮ್ಮದೇವಿ ದೇವಸ್ಥಾನ
ಗ್ರಾಮದ ಪೂರ್ವಭಾಗದಲ್ಲಿ ಕಳ್ಳಿಹಟ್ಟಿ ರಸ್ತೆಯಲ್ಲಿ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವಿದೆ.
ಹಿಂದೆ ಇಲ್ಲಿದ್ದ ಪುಟ್ಟ ಗುಡಿಯನ್ನು ತೆಗೆದು ಇತ್ತೀಚಿನ ದಶಕದಲ್ಲಿ ನೂತನವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ.
ಪ್ರತಿವರ್ಷ ಗೌರಸಮುದ್ರ ಮಾರಮ್ಮ ದೇವರ ಜಾತ್ರೆಯ ನಂತರದ ವಾರಗಳಲ್ಲಿ ಇಲ್ಲಿಯೂ ದೇವರ ಪೂಜೆ ಮತ್ತು ಆಚರಣೆ ಮಾಡುತ್ತಾರೆ.
4.ದುರ್ಗಾಂಬಿಕಾ ದೇವಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಿಯ
ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
5.ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯದ ಗರ್ಭಗೃಹದಲ್ಲಿ ಬೀರಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ಪೂಜಿಸಲಾಗುತ್ತದೆ.
ಇದರ ಜೊತೆಗೆ ಗ್ರಾಮದಲ್ಲಿ ಕೊಲ್ಲಮ್ಮ ದೇವಸ್ಥಾನ, ಜಾಮೀಯ ಮಸೀದಿ, ಹಳಿಯೂರು ರಸ್ತೆಯಲ್ಲಿ ಅಮ್ಮನ ದೇವಸ್ಥಾನ, ಬೆನಕನಹಳ್ಳಿ ರಸ್ತೆಯಲ್ಲಿ ಚೌಡಮ್ಮ ದೇವಸ್ಥಾನ,ವಾರ್ಷಿಕ ದಸರಾ ಹಬ್ಬದಲ್ಲಿ ಅಂಬು ಹೊಡೆಯುವ ಕಟ್ಟೆ ಇದೆ.






