ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಬಿ.ದುರ್ಗ ಎಂದು ಸಂಕ್ಷಿಪ್ತವಾಗಿ ಕರೆಯಲಾಗುವ ಭರಮಣ್ಣನಾಯಕನ ದುರ್ಗ ಗ್ರಾಮವು ಹೊಳಲ್ಕೆರೆಯಿಂದ 17 ಕಿಲೋಮೀಟರ್ ದೂರಕ್ಕೆ ವಾಯುವ್ಯ ದಿಕ್ಕಿನಲ್ಲಿ ,ಹೊಳಲ್ಕೆರೆ-ದಾವಣಗೆರೆ ರಾ.ಹೆ.47 ಹಾಗೂ ಚಿತ್ರದುರ್ಗ- ಶಿಕಾರಿಪುರ ರಾ.ಹೆ ಯಲ್ಲಿ ಚಿತ್ರದುರ್ಗದಿಂದ 32 ಕಿ.ಮೀ. ದೂರದಲ್ಲಿದೆ.
ಹೋಬಳಿ ಮುಖ್ಯ ಕೇಂದ್ರವಾದ ಭರಮಣ್ಣನಾಯಕನ ದುರ್ಗ (ಬಿ.ದುರ್ಗ) ಗ್ರಾಮವು ಐತಿಹಾಸಿಕ ಮಹತ್ವದ ಸ್ಥಳವಾಗಿದೆ. ಗ್ರಾಮದ ಹಳೆ ಊರು ನವಿಲುಕಲ್ಲು/ನವಿಲೂರು.ಇದು ಗ್ರಾಮದಿಂದ ಆಗ್ನೇಯಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿದೆ .ಇಲ್ಲಿ ಹೆಚ್ಚಿನ ಸಂಖ್ಯೆಯ
ನವಿಲುಗಳು ಇರುವ ಕಾರಣಕ್ಕೆ ಇದನ್ನು ನವಿಲುಕಲ್ಲುದುರ್ಗ ಅಥವಾ ನವಿಲೂರು ಎಂದು ಹೇಳಲಾಗುತ್ತದೆ.ಇಂದಿಗೂ ಇಲ್ಲಿ ನವಿಲುಗಳು ಹೆಚ್ಚಾಗಿ ಕಂಡು ಬರುತ್ತವೆ.
ಚಿತ್ರದುರ್ಗ ಸಂಸ್ಥಾನದ ಗಡಿಬಾಂದ್ / ಗಡಿಕೋಟೆ/ಪಹರೆ ನೆಲೆಯಾಗಿದ್ದ ಇಲ್ಲಿನ ಬೆಟ್ಟದ ಮೇಲೆ ಹಿಂದೆ ನಿರ್ಮಿಸಿದ್ದ ಕೋಟೆ,ಬುರುಜು,ಅವಶೇಷಗಳನ್ನು ಕಾಣಬಹುದು. 17 ನೇ ಶತಮಾನದಲ್ಲಿ ಕೋಟೆ ನಿರ್ಮಿಸಿ ಆಳ್ವಿಕೆ ನಡೆಸಿದ ಪಾಳೇಗಾರನಾದ ಭರಮಣ್ಣನಾಯಕನ ನೆನಪಿಗಾಗಿ ಗ್ರಾಮಕ್ಕೆ ಭರಮಣ್ಣನಾಯಕನ ದುರ್ಗ ಎಂದು ಹೆಸರು ಬಂದಿದೆ.
ಬಿ.ದುರ್ಗ ಗ್ರಾಮದ ಮಂದಿರಗಳು:
1. ಗುಂಡಿನ ವೀರಭದ್ರ ದೇವಾಲಯ:
ಈ ದೇವಾಲಯವು 17- 18 ನೇ ಶತಮಾನದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು ,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದ್ದು, ಜೀರ್ಣೋದ್ಧಾರ ಮಾಡಲಾಗಿದೆ .ಬೃಹತ್ ಬಂಡೆಗಲ್ಲಿನ ಕೆಳಗಿನ ಗುಹಾಲಯವನ್ನು ಬಳಸಿಕೊಂಡು ಕಟ್ಟಲಾದ ದೇವಾಲಯವಿದು. ಗರ್ಭಗೃಹ ,ಸಭಾಮಂಟಪ ಗಳಿರುವ ಈ ಗುಹಾಲಯದಲ್ಲಿ ಮೂರು ಅಡಿ ಎತ್ತರದ ವೀರಭದ್ರ ಶಿಲ್ಪವನ್ನು ಆರಾಧಿಸುತ್ತಿರುವರು. ಪಕ್ಕದಲ್ಲಿ ಗಣೇಶ ,ಗುಂಡಬ್ರಹ್ಮಯ್ಯ ಶಿಲ್ಪಗಳಿವೆ. ಶ್ರಾವಣಮಾಸದ ಮೂರನೇ ಸೋಮವಾರದಂದು ವೀರಭದ್ರನ ಕೆಂಡೋತ್ಸವ ಮಾಡಲಾಗುತ್ತದೆ.
2.ಕಲ್ಲೇಶ್ವರ ಮಂದಿರ:
ಬಿ.ದುರ್ಗ ಗ್ರಾಮದಿಂದ ಆಗ್ನೇಯಕ್ಕೆ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ನವಿಲೂರು/ಭರಗನಮಟ್ಟಿ ಬಳಿಯಲ್ಲಿರುವ ಕಲ್ಲೇಶ್ವರ ದೇವಾಲಯವು 11-12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದೆ. ಈ ದೇವಾಲಯವು ಪೂರ್ವಾಭಿಮುಖವಾಗಿದೆ.ಭರಗದ ಮಟ್ಟಿಯಲ್ಲಿರುವ ಜೀರ್ಣೋದ್ಧಾರಗೊಂಡ ದೇವಾಲಯ ಇದಾಗಿದ್ದು ,ಗರ್ಭಗೃಹ ,ಅಂತರಾಳ ಮತ್ತು ಸಭಾಮಂಟಪ ಗಳಿಂದ ಕೂಡಿದೆ .
ಎರಡು ಅಡಿ ಎತ್ತರದ ಕಲ್ಯಾಣ ಚಾಲುಕ್ಯರ ಕಾಲದ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ಲಿಂಗದಲ್ಲಿ ಸೋಮಸೂತ್ರವಿದೆ.ಗರ್ಭಗೃಹದ ಬಾಗಿಲುವಾಡದಲ್ಲಿ ಪೂರ್ಣಕುಂಭಗಳಿದ್ದು ಅವುಗಳ ಮೇಲೆ ಲತಾ ಮತ್ತು ಸ್ತಂಭ ಶಾಖೆಗಳಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮೀಯನ್ನು ಕಡೆದಿರುವರು.ಅಂತರಾಳದಲ್ಲಿ ಚಿಕ್ಕದಾದ ನಂದಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳು ಸರಳವಾದ ರಚನೆಯಲ್ಲಿವೆ.
ಭರಗನಮಟ್ಟಿ ಸ್ಥಳವು ಇಂದಿಗೂ ನವಿಲುಗಳ ಆವಾಸಸ್ಥಾನವಾಗಿದೆ.ಇಂದಿಗೂ ಇಲ್ಲಿ ನೂರಾರು ನವಿಲುಗಳು ಸ್ವಚ್ಛಂದವಾಗಿ ಓಡಾಡುವುದನ್ನು ಕಣ್ಣಿಗೆ ಕಾಣಬಹುದಾಗಿದೆ.
3.ಏಕನಾಥೇಶ್ವರಿ ದೇವಾಲಯ:
17 -18ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿದೆ. ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿಂದ ಕೂಡಿದೆ. ಉತ್ಸವಮೂರ್ತಿ ಇರುವ ಮಂದಿರ ಇದಾಗಿದೆ.ಪಾಳೇಯಗಾರರ ಕಾಲದಲ್ಲಿ ಕಟ್ಟಲಾದ ಏಕನಾಥೇಶ್ವರಿ ಮಂದಿರ ಬೆಟ್ಟದ ಮೇಲೆ ಇದ್ದು ,ಅಲ್ಲಿ ದೇವಿಯ ಶಿರವಿರುವ ಮೂಲ ಮೂರ್ತಿ ಇದೆ.ಬೆಟ್ಟದ ಕೆಳಗೆ
ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಈ ದೇವಾಲಯವನ್ನು ಕಟ್ಟಲಾಗಿದೆ .ದೇವಾಲಯದ ಸಭಾಮಂಟಪದಲ್ಲಿ ನಾಲ್ಕು ಕಂಬಗಳಿದ್ದು,ಅವುಗಳನ್ನು ಚಚ್ಚೌಕ ಹಾಗೂ ಅಷ್ಟ ಮುಖಗಳಲ್ಲಿ ಕಡೆದಿದ್ದಾರೆ. ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಲಾಗಿದೆ. ಯುಗಾದಿ ನಂತರದ 9 ದಿನಗಳ ಬಳಿಕ ಇಲ್ಲಿ ಜಾತ್ರೆ ಆಚರಿಸಲಾಗುತ್ತದೆ. ಏಕನಾಥೇಶ್ವರಿ ಜಾತ್ರೆ ಎಂದು ಇದನ್ನು ಕರೆಯುತ್ತಾರೆ. ಜಾತ್ರೆಯಲ್ಲಿ ಹಲವಾರು ಆಚರಣೆಗಳು ನಡೆಯುತ್ತದೆ. ಜಾತ್ರೆಯ ಬಳಿಕ ಐದು ದಿನಗಳ ಕಾಲ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.ಐದು ದಿನಗಳ ನಂತರ ಬಾಗಿಲು ತೆಗೆದು ಪುನಃ ಪೂಜೆ ಮಾಡುತ್ತಾರೆ.
4.ಸಂತರ ಕಟ್ಟೆ ದರ್ಗಾ:
ಬಿ.ದುರ್ಗ ಗ್ರಾಮದ ಆಸ್ಪತ್ರೆ ರಸ್ತೆಯ ಕೊನೆಯಲ್ಲಿ ಸಂತರ ಕಟ್ಟೆ ಎಂಬ ಸ್ಥಳವಿದ್ದು, ಇಲ್ಲಿ ಹಿಂದೆ ಜೀವಿಸಿದ್ಧ ಸೂಫಿ ಸಂತರಾದ ಸೈಯದ್ ಷಾಃ ಖಾದ್ರಿ ಅವರ ಸಮಾಧಿ ಸ್ಥಳವಿದೆ.ಪ್ರತಿ ವರ್ಷ ಫೆಬ್ರವರಿಯಲ್ಲಿ ಉರುಸ್ ಆಚರಿಸಲಾಗುತ್ತದೆ. ಹಿಂದೂ ಧರ್ಮದ ರಾಮಸ್ವಾಮಿ ಅವರ ಮನೆಯಿಂದ ಗಂಧ ಪಡೆದ ನಂತರ ಉರುಸ್ ಕಾರ್ಯಕ್ರಮ ಶುರುವಾಗುತ್ತದೆ.ಈ ಆಚರಣೆಯಲ್ಲಿ ಅಕ್ಕಪಕ್ಕದ ಜಿಲ್ಲೆ -ತಾಲ್ಲೂಕುಗಳಿಂದ ಸಾವಿರಾರು ಮುಸ್ಲಿಂ ಭಕ್ತರು ಆಗಮಿಸುತ್ತಾರೆ .ಆಗ ಇಲ್ಲಿ ಖವ್ವಾಲಿ, ಮೆರವಣಿಗೆ,ಗಂಧ ಉತ್ಸವ ….ಮಾಡಲಾಗುತ್ತದೆ. ಹಿಂದೂಗಳು ಇದನ್ನು ಗೋರಿಸ್ವಾಮಿ ಎಂದು ಕರೆಯುತ್ತಾರೆ .ತಮ್ಮ ಮನೆಯ ಹಸು ಮೊದಲ ಕರು ಹಾಕಿದಾಗ ಬರುವ ಗಿಣ್ಣು ಈ ಸ್ವಾಮಿಗೆ ಸಮರ್ಪಿಸಿ ನೈವೇದ್ಯ ಮಾಡುತ್ತಾರೆ.
ಇದರ ಜೊತೆಗೆ ಗ್ರಾಮದಲ್ಲಿ ಸತ್ಯಮ್ಮ ಮಠ,ಜೇಡೆ ನಂಜುಂಡೇಶ್ವರ ಸಮಾಧಿ, ವಿರಕ್ತ ಮಠ,ಕರಿಯಮ್ಮ, ಈಶ್ವರ.. ಮಂದಿರಗಳಿವೆ.





