ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ ತಾಲ್ಲೂಕಿನ ರಂಗಾಪುರ ಗ್ರಾಮ ದರ್ಶನ

3 Min Read

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ರಂಗಾಪುರ ಗ್ರಾಮವು ಆರ್. ನುಲೇನೂರು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹೊಳಲ್ಕೆರೆಯಿಂದ 13 ಕಿಲೋಮೀಟರ್ ದೂರ ನೈರುತ್ಯಕ್ಕೆ, ಹೊಳಲ್ಕೆರೆ- ರಾಮಗಿರಿ-ಶಿವನಿ ಮುಖ್ಯರಸ್ತೆಯಲ್ಲಿದೆ.

ಹೆಸರಿನ ಮೂಲ :
ಗ್ರಾಮದ ಮೂಲ ಹೆಸರು ಹಂದಿನಾಡು.1940 ರ ಸಮಯದಲ್ಲಿ ಹೊಳಲ್ಕೆರೆಯ ತಹಸೀಲ್ದಾರರು ಈ ಹೆಸರು ಸೂಕ್ತ ಎನಿಸದೆ, ಗ್ರಾಮದಲ್ಲಿದ್ದ ಶ್ರೀರಂಗನಾಥಸ್ವಾಮಿಯ ದೇವಾಲಯದ ಭಕ್ತರು ಹಾಗೂ ಗ್ರಾಮದ ಮುಕ್ಕಾಲು ಭಾಗದ ಜನರ ಹೆಸರುಗಳು ರಂಗಪ್ಪ -ರಂಗಮ್ಮ ಎಂದು ಇರುವುದನ್ನು ತಿಳಿದು ಈ ಗ್ರಾಮಕ್ಕೆ ರಂಗಾಪುರ ಎಂದು ಹೆಸರು ಬದಲಾಯಿಸಿದರು. ಹಿಂದಿನ ಹೆಸರು ಹಂದಿನಾಡು ಏಕೆ ಬಂದಿದೆ ಎಂಬುದು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.ಗ್ರಾಮಕ್ಕೆ ಹಳೆಊರು ಗ್ರಾಮ ನಿವೇಶನ ಇರುವುದಿಲ್ಲ.

 

ಸ್ವಾತಂತ್ರ ಹೋರಾಟಗಾರರ ಗ್ರಾಮ :
ಸ್ವಾತಂತ್ರ ಪೂರ್ವದ ಕಾಲದಲ್ಲಿ ಈ ಊರಿನ ಬಹಳಷ್ಟು ಜನರು ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಗ್ರಾಮವು ಮಾಜಿ ಶಾಸಕರಾದ ಕೊಟ್ರೆನಂಜಪ್ಪನವರ ಕಾರ್ಯ ಚಟುವಟಿಕೆಗಳ ಕೇಂದ್ರ ಸ್ಥಳವಾಗಿತ್ತು. ಗ್ರಾಮ ಹತ್ತಾರು ರೈತ ಚಳುವಳಿಗಳ ಕೇಂದ್ರವಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಭಾರತ ಸರ್ಕಾರದಿಂದ ತಾಮ್ರಪತ್ರ ಪಡೆದ 15ಕ್ಕೂ ಅಧಿಕ ಸ್ವಾತಂತ್ರ ಹೋರಾಟಗಾರರು ಇಲ್ಲಿ ಇದ್ದರು.‌ಈ ಊರಿನ ಬಹಳಷ್ಟು ಜನರು ಸಕ್ರಿಯವಾಗಿ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ನೆನಪಿಗಾಗಿ ಇಲ್ಲಿ ವೀರಸೌಧ ನಿರ್ಮಿಸಲಾಗಿದೆ.

ಕೆರೆ :
ಗ್ರಾಮದ ಪೂರ್ವಕ್ಕೆ ಇರುವ ಕೆರೆಯು ವಿಶಾಲ ಪ್ರದೇಶದಲ್ಲಿ ಹರಡಿದ್ದು, ಇದಕ್ಕೆ ಪೂರ್ವದ ಕಂಚಿನಮರಡಿ ಗುಡ್ಡದ ಕಡೆಯಿಂದ ನೀರು ಹರಿದುಬರುತ್ತದೆ.
ತುಂಬಿದ ನಂತರ ಗ್ರಾಮದ ಪಶ್ಚಿಮಕ್ಕೆ ಇರುವ ಹಿರೇಹಳ್ಳಕ್ಕೆ ನೀರು ಹರಿಯುತ್ತದೆ.

ರಾಮಗಿರಿ,ದಾಸಿಕಟ್ಟೆ,
ಆರ್. ನುಲೇನೂರು,ಹನುಮಲಿ ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1. ಶ್ರೀರಂಗನಾಥ ಸ್ವಾಮಿ ದೇವಾಲಯ:

ಶ್ರೀ ರಂಗನಾಥ ಸ್ವಾಮಿ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ. ಸ್ಥಳೀಯ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.1926 ರಲ್ಲಿ ಇದನ್ನು ನಿರ್ಮಿಸಲಾಗಿದ್ದು, 2004 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಶ್ರೀ ರಂಗನಾಥಸ್ವಾಮಿಯ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಸಭಾಮಂಟಪದ ಕಂಬಗಳನ್ನು ಚಚ್ಚೌಕದಲ್ಲಿ ಕಡೆಯಲಾಗಿದೆ. ಈ ದೇವಾಲಯದ ಜಾತ್ರೆ- ರಥೋತ್ಸವ ಏಪ್ರಿಲ್ ತಿಂಗಳಿನಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.

2. ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ರಂಗನಾಥ ಸ್ವಾಮಿಯ ದೇವಾಲಯದ ಆವರಣದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ದಕ್ಷಿಣಾಭಿಮುಖವಾಗಿದೆ.
ಸ್ಥಳೀಯ ಶೈಲಿಯಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಮಾತ್ರ ಇರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ 16-17 ನೇ ಶತಮಾನದ ಪಾಳೇಗಾರರ ಕಾಲದ ಆಂಜನೇಯ ಸ್ವಾಮಿಯ ಶಿಲ್ಪವಿದೆ. ಇದರ ಜೊತೆಗೆ ಬಾಣಪ್ಪ ಹಾಗೂ ಸೋಮಗಳನ್ನು ಇಡಲಾಗಿದ್ದು, ಜಾತ್ರಾ ಸಮಯದಲ್ಲಿ ಬಾಣಪ್ಪ ಹಾಗೂ ಸೋಮಗಳನ್ನು ಮೆರವಣಿಗೆಯಲ್ಲಿ ಹೊರಡಿಸಲಾಗುತ್ತದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ‌. ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ಹಾಗೂ ಪರೇವು ಆಚರಣೆ ನಡೆಯುತ್ತದೆ. ವಾರ್ಷಿಕ ಪರೇವು ಆಚರಣೆಯನ್ನು ಗ್ರಾಮದ ಹಿರೇಹಳ್ಳದ ಬಳಿಯಿರುವ ಚೌಡೇಶ್ವರಿ ಬಯಲು ದೇವಾಲಯದ ಆವರಣದಲ್ಲಿ ನಡೆಸಲಾಗುತ್ತದೆ. ದೇವಾಲಯದ ಹತ್ತಿರ ಒಕ್ಕೈ ಮಾಸ್ತಿಗಲ್ಲು ಇಡಲಾಗಿದೆ.

3.ಮರುಳಸಿದ್ದೇಶ್ವರ ದೇವಾಲಯ:
ಗ್ರಾಮದ ಹೊರಭಾಗದ ತಾಳಿಕಟ್ಟೆ ರಸ್ತೆಯಲ್ಲಿರುವ ಮರುಳು ಸಿದ್ದೇಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಮರುಳಸಿದ್ದೇಶ್ವರ ಉತ್ಸವಮೂರ್ತಿ ಹಾಗೂ ಶಿಲ್ಪವಿದ್ದು ಪೂಜಿಸಲಾಗುತ್ತದೆ.

4.ತಿಮ್ಮಪ್ಪ ದೇವಸ್ಥಾನ: ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ತಿಮ್ಮಪ್ಪ ದೇವರ ಶಿಲ್ಪವಿದ್ದು, ಪೂಜಿಸಲಾಗುತ್ತದೆ.

5.ಮಸಿಯಮ್ಮ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಮಸಿಯಮ್ಮ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪೂರ್ವಾಭಿಮುಖವಾಗಿದೆ.

6.ಕರಿಯಮ್ಮ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಗ್ರಾಮದೇವತೆ ಶ್ರೀ ಕರಿಯಮ್ಮದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪೂರ್ವಾಭಿಮುಖವಾಗಿದೆ.

7. ಶ್ರೀ ಸೇವಾಲಾಲ್ ಹಾಗೂ ತುಳಜಾಭವಾನಿ ದೇವಸ್ಥಾನ :
ಗ್ರಾಮದ ಉಪಗ್ರಾಮವಾದ ರಂಗಾಪುರ ಲಂಬಾಣಿಹಟ್ಟಿಯಲ್ಲಿ ಶ್ರೀ ಸೇವಾಲಾಲ್ ಸ್ವಾಮಿ ಹಾಗೂ ತುಳಜಾಭವಾನಿ, ದುರ್ಗಾಂಬಿಕ ದೇವಿಯ ದೇವಾಲಯವಿದೆ.

8. ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ SSY ಆಶ್ರಮ:
ಗ್ರಾಮದ ತಾಳಿಕಟ್ಟೆ ರಸ್ತೆಯಲ್ಲಿ ಸಿದ್ಧ ಸಮಾಧಿ ಯೋಗ ಸಂಸ್ಥೆಯ ಪ್ರಭಾಕರ ಗುರೂಜಿರವರು ಆಶ್ರಮ ಸ್ಥಾಪಿಸಿದ್ದು ಇಲ್ಲಿ ಯೋಗ, ಧ್ಯಾನ,ಪ್ರಾಣಾಯಾಮ ಶಿಬಿರಗಳು ಆಗಾಗ ನಡೆಯುತ್ತಿರುತ್ತವೆ. ಈ ಆಶ್ರಮದ ಆವರಣದಲ್ಲಿ
ಅನ್ನಪೂರ್ಣೇಶ್ವರಿ ಮಂದಿರವಿದೆ. ಇಲ್ಲಿ ಪೌರ್ಣಮಿ, ಅಮಾವಾಸ್ಯೆ, ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ.
ಆಶ್ರಮದ ವತಿಯಿಂದ ಋಷಿ ಗುರುಕುಲಂ ವಸತಿಯುತ ಶಾಲೆ ನಡೆಸಲಾಗುತ್ತದೆ. ಇದರ ಜೊತೆಯಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಗಣಪತಿ ದೇವಾಲಯವಿದೆ.

Share This Article
Enable Notifications OK No thanks