ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಮಠದಕುರುಬರಹಟ್ಟಿ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 3 ಕಿಲೋಮೀಟರ್ ದೂರ ವಾಯುವ್ಯಕ್ಕೆ, ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿದೆ. ಹಿಂದೆ ಚಿತ್ರದುರ್ಗದ ಹೊರವಲಯದಲ್ಲಿದ್ದ ಈ ಗ್ರಾಮವು ಇದೀಗ ಸಂಪೂರ್ಣವಾಗಿ ಚಿತ್ರದುರ್ಗದ ಒಂದು ಬಡಾವಣೆಯಾಗಿ ಪರಿವರ್ತನೆಯಾಗಿದೆ.
ಈ ಗ್ರಾಮದ ಹಳೆಗ್ರಾಮ ನಿವೇಶನವು ಈಗಿನ ಮಾದಾರ ಚೆನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ಗ್ರಾಮದ ನೈರುತ್ಯಕ್ಕೆ ಇರುವ ವೀರಾಂಜನೇಯ ದೇವಾಲಯದ ಬಳಿಯಲ್ಲಿ ಇದ್ದಿತು ಎಂದು ಹೇಳಲಾಗುತ್ತದೆ. ಇಂದು ಈ ಸ್ಥಳವು ಬೇಚರಾಕ್ ಆಗಿದ್ದು,ಜನವಸತಿ ರಹಿತ ಸ್ಥಳವಾಗಿದೆ. ಇದರ ಬಳಿಯಲ್ಲಿ ಹಿಂದೆ ಹಳೆಊರು ಇದ್ದಿರುವ ಬಗ್ಗೆ ಸ್ಥಳೀಯರು ಹೇಳುತ್ತಾರೆ. ಹಳೆ ಗ್ರಾಮನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.
ಹೆಸರಿನ ಮೂಲ :
1689-1721 ರಲ್ಲಿ ಚಿತ್ರದುರ್ಗವನ್ನು ಆಳುತ್ತಿದ್ದ ಬಿಚ್ಚುಗತ್ತಿ ಭರಮಣ್ಣ ನಾಯಕನು ತನ್ನ ಗುರುಗಳಾದ ಮುರುಘರಾಜೇಂದ್ರ ಸ್ವಾಮೀಜಿಗಳಿಗೆ ಇಲ್ಲಿ ಒಂದು ಮಠವನ್ನು ನಿರ್ಮಿಸಿ ಎರಡು ಕೆರೆಗಳನ್ನು ನಿರ್ಮಾಣ ಮಾಡಿಸಿದನು. ಆಗ ಇದರ ಹತ್ತಿರದಲ್ಲಿಯೇ ಈ ಗ್ರಾಮವನ್ನು ನಿರ್ಮಾಣ ಮಾಡಲಾಯಿತು. ಆಗ ಈ ಗ್ರಾಮಕ್ಕೆ ಕುರುಬರೇ ಬಹುಸಂಖ್ಯಾತರಾಗಿ ಬಂದು ನೆಲೆಸಿದ ಕಾರಣಕ್ಕೆ ಈ ಗ್ರಾಮಕ್ಕೆ ಮಠದ ಕುರುಬರಹಟ್ಟಿ ಎಂದು ಹೆಸರು ಬಂದಿದೆ. ಇದೀಗ ಇಲ್ಲಿ ಎಲ್ಲಾ ಜಾತಿ ಜನಾಂಗದವರು ಬಂದು ನೆಲೆ ನಿಂತಿದ್ದಾರೆ. ಸಂಕ್ಷಿಪ್ತವಾಗಿ ಈ ಗ್ರಾಮಕ್ಕೆ ಈಗ ಎಂ.ಕೆ. ಹಟ್ಟಿ,ಮಠದಹಟ್ಟಿ ಎಂದು ಕರೆಯಲಾಗುತ್ತದೆ.
ಕಳೆದ 20 -25 ವರ್ಷಗಳ ಹಿಂದೆ ಇದೊಂದು ಚಿತ್ರದುರ್ಗ ನಗರದ ಹೊರವಲಯದ ದೂರದ ಗ್ರಾಮವಾಗಿತ್ತು. ಆದರೆ ಬದಲಾದ ಕಾಲಮಾನದಲ್ಲಿ ನಗರೀಕರಣದ ಪ್ರಭಾವದಿಂದ ಗ್ರಾಮವು ಸಂಪೂರ್ಣ ಚಿತ್ರದುರ್ಗದ ಒಂದು ಬಡಾವಣೆಯಾಗಿ ಬದಲಾಗಿದೆ. ಗ್ರಾಮದ ಹತ್ತಿರದ ಬಡಾವಣೆಗಳಲ್ಲಿ ಒಂದಾದ ಮಲ್ಲನಕಟ್ಟೆ ( ಕೊಡೇನಹಟ್ಟಿ ), ಹನುಮಂತನಗರ.. ಗಳಲ್ಲಿ ಆಧುನಿಕ ಬಡಾವಣೆಯ ಲೇಔಟ್ ಗಳು,ನೂರಾರು ಬೃಹತ್ ಬಂಗಲೆಗಳು ತಲೆ ಎತ್ತಿವೆ.
ಆದರೆ ಮೂಲ ಗ್ರಾಮ ಎಂ. ಕೆ.ಹಟ್ಟಿಯಲ್ಲಿ ಇಂದಿಗೂ ಗ್ರಾಮ್ಯ ಸಂಸ್ಕೃತಿಯ ವಾತಾವರಣ ಕಂಡುಬರುತ್ತದೆ.
ಮಠಗಳ ಗ್ರಾಮ :
ಈ ಗ್ರಾಮವು ಮಠದ ಹೆಸರಿಗೆ ಅನ್ವರ್ಥಕವಾಗಿದ್ದು, ಮೊದಲಿಗೆ ಮುರುಘರಾಜೇಂದ್ರ ಮಠವು 17ನೇ ಶತಮಾನದಲ್ಲಿ ಇಲ್ಲಿ ಸ್ಥಾಪನೆಯಾಯಿತು. ಆನಂತರ ಕಳೆದ ಎರಡು ದಶಕಗಳಲ್ಲಿ ಎಲ್ಲಾ ಪ್ರಮುಖ ಸಮುದಾಯಗಳ ಮಠಗಳು ಸ್ಥಾಪನೆಗೊಂಡಿವೆ. ಈ ಗ್ರಾಮದ ಹೊರವಲಯವು ಧಾರ್ಮಿಕ ಕೇಂದ್ರಗಳು, ಶಾಲಾ ಕಾಲೇಜುಗಳ ತಾಣವಾಗಿದೆ.
ಗುರುಪಾದ ಸ್ವಾಮಿಗಳ ಮಠ : ಗ್ರಾಮದಿಂದ ಮುಂದಕ್ಕೆ ಎರಡು ಕಿಲೋಮೀಟರ್ ಪಶ್ಚಿಮಕ್ಕೆ ಯಾದವ ಮಠದ ಎದುರು ಭಾಗದಲ್ಲಿ ಇರುವ ಈ ಮಠವು ಹಿಂದೆ ಧಾರ್ಮಿಕ ಕೇಂದ್ರವಾಗಿದ್ದು ಇಂದು ಸಂರಕ್ಷಣೆಯ ಅಗತ್ಯತೆ ಇದೆ. ಬೆಟ್ಟದ ತಳ ಭಾಗದಲ್ಲಿ ನಿರ್ಮಾಣಗೊಂಡಿರುವ ಈ ಮಠದ ಬಗ್ಗೆ ಮತ್ತಷ್ಟು ಸಂಶೋಧನೆ ಹಾಗೂ ಮಾಹಿತಿಯ ಅಗತ್ಯವಿರುತ್ತದೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ, ಒಣ ಭೂ ಪ್ರದೇಶ ಹೊಂದಿದೆ. ಗ್ರಾಮದ ಉತ್ತರಕ್ಕೆ ಸಣ್ಣ ಗುಡ್ಡಗಳ ಸಾಲು ಹರಡಿದೆ. ದಕ್ಷಿಣಕ್ಕೆ ಇರುವ ಎರಡು ಅರಸನ ಕೆರೆಗಳು ಉತ್ತಮ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಕವಾಡಿಗರಹಟ್ಟಿ, ಮಲ್ಲನಕಟ್ಟೆ. ಹತ್ತಿರದ ಗ್ರಾಮಗಳಾಗಿವೆ.
ವೀರಗಲ್ಲು :
ಗ್ರಾಮದ ದಾರಾ ಮಾದಲಿಂಗೇಶ್ವರ ದೇವಾಲಯದ ಎದುರಿನ ಕಟ್ಟೆಯ ಬಳಿಯಲ್ಲಿ ವಿಜಯನಗರದ ಕಾಲದ ವೀರಮಾಸ್ತಿಗಲ್ಲು ಇದ್ದು, ಇದನ್ನು ಸಂರಕ್ಷಿಸಲಾಗಿದೆ. ಇದರಲ್ಲಿ ವೀರನು ಬಾಕು ಹಿಡಿದಿದ್ದು ಯುದ್ಧದಲ್ಲಿ ಹುತಾತ್ಮನಾಗಿದ್ದಾನೆ. ಆತನ ಹೆಂಡತಿಯು ಸತಿಯಾಗಿದ್ದು ಚಿತ್ರಿಸಲಾಗಿದೆ.
ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯಸ್ವಾಮಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯವಿದು.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ.
ಹಳೆಗ್ರಾಮ ನಿವೇಶನದ ಜಾಗದಲ್ಲಿ ಕೂಡ ವೀರಾಂಜನೇಯ ಸ್ವಾಮಿ ದೇವಾಲಯವಿದ್ದು ಇದು ಪಾಳೇಗಾರರ ಕಾಲದ್ದಾಗಿದೆ. ಇಲ್ಲಿ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಪರೇವು ಆಚರಣೆಗಳನ್ನು ನಡೆಸಲಾಗುತ್ತದೆ. ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಜೆಎಂಐಟಿ ವೃತ್ತದ ಬಳಿ ಹನುಮಂತ ನಗರ ಆಂಜನೇಯ ಸ್ವಾಮಿ ದೇವಾಲಯವಿದ್ದು ಇದನ್ನು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
2..ಈಶ್ವರ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಈಶ್ವರ ಲಿಂಗ ಹಾಗೂ ನಂದಿ ಇದ್ದು, ಪೂಜಿಸಲಾಗುತ್ತದೆ.
3.ಕೊಲ್ಲಾಪುರದಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯ ಭಾಗದಲ್ಲಿರುವ ಕೊಲ್ಲಾಪುರದಮ್ಮ ದೇವಿ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಶ್ರೀ ಕೊಲ್ಲಾಪುರದಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜಿಸಲಾಗುತ್ತದೆ. ಈ ದೇವಾಲಯದ ಎದುರು ಭಾಗದಲ್ಲಿ ಮಾತಂಗಮ್ಮ ದೇವಾಲಯವಿದೆ.
4. ದುರ್ಗಾಂಬಿಕಾ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
5.ತಾಯೇಶ್ವರಿ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ತಾಯೇಶ್ವರಿ ದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
6. ಆದಿಶಕ್ತಿ ದೇವಸ್ಥಾನ:
ಗ್ರಾಮದಿಂದ ಉತ್ತರಕ್ಕೆ ಇರುವ ಶ್ರೀ ಆದಿಶಕ್ತಿ ದೇವಸ್ಥಾನ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
7.ಮಾರಮ್ಮ ದೇವಸ್ಥಾನ :
ಗ್ರಾಮದ ಹೊರಭಾಗದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಸರ್ವಿಸ್ ರಸ್ತೆಯಲ್ಲಿ ಇರುವ ಮಾರಮ್ಮ ದೇವಸ್ಥಾನ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಇದರ ಜೊತೆಗೆ ಗ್ರಾಮದಲ್ಲಿ ಸವದತ್ತಿ ಶ್ರೀ ಎಲ್ಲಮ್ಮ ದೇವಸ್ಥಾನ,
ದಾರಾ ಮಾದಲಿಂಗೇಶ್ವರ ದೇವಸ್ಥಾನ, ಕರಿಬಸವೇಶ್ವರ ಅಜ್ಜಯ್ಯ, ಮೈಲಾರಲಿಂಗೇಶ್ವರ ದೇವಸ್ಥಾನಗಳಿವೆ.ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾದ ದೇವಾಲಯಗಳಾಗಿವೆ.







