ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ : ಕೋಗುಂಡೆ ಗ್ರಾಮ ದರ್ಶನ

2 Min Read

 

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಕೋಗುಂಡೆ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು,
ಚಿತ್ರದುರ್ಗದಿಂದ 38 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಭರಮಸಾಗರ – ಬಹದ್ದೂರುಗಟ್ಟ -ಕೋಗುಂಡೆ ಮಾರ್ಗದಲ್ಲಿದೆ.

ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದ ಉತ್ತರ ಭಾಗದಲ್ಲಿ ಇದ್ದಿತು.ಇದಕ್ಕೆ ಕೊಳಗುಂಡಿ ಎಂಬ ಹೆಸರಿದ್ದಿತು.
ಈ ಹೆಸರು ಜಲವಾಚಕವಾಗಿದ್ದು ನೀರಿನ ಮೂಲದ ಕಾರಣ ಹೆಸರು ಬಂದಿತ್ತು. ಇದೇ ಮುಂದುವರಿದು ಕೊಳಗುಂಡಿ >ಕೋಗುಂಡಿ >ಕೋಗುಂಡೆ ಆಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಶಾಸನಗಳಲ್ಲಿ ಈ ಊರಿನ ಹೆಸರು ಕೊಗುಂಡಿ ಎಂದೇ ತಿಳಿಸಲಾಗಿದೆ.

ಇತಿಹಾಸ ಹಾಗೂ ದೇವಾಲಯ ಪರಿಚಯ:
1.ಬಾಚೇಶ್ವರ (ಈಶ್ವರ) ದೇವಾಲಯ:
ಗ್ರಾಮದ ಪೂರ್ವಭಾಗದಲ್ಲಿ ಕ್ರಿ. ಶ.1113 ರಲ್ಲಿ ಹೊಯ್ಸಳರ ಶೈಲಿಯಲ್ಲಿ ನಿರ್ಮಿಸಲಾಗಿದೆ.ಕನಿಷ್ಠ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ದೇವಾಲಯದ ಶಾಸನವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

ಇದು ಹೊಯ್ಸಳರ ದೊರೆ ಎರಡನೇ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿದೆ. ಈ ಶಾಸನದಲ್ಲಿ ಹೊಯ್ಸಳರ ಮನೆತನದ ಮೂಲ ಕುರಿತ, ಮನೆತನದ ವಂಶಾವಳಿಯ ವಿವರಗಳಿವೆ.ಹಿಂದೆ ಈ ಗ್ರಾಮವು ಮಹಾಅಗ್ರಹಾರವಾಗಿದ್ದು ಶಿವಪುರ ಎನಿಸಿತ್ತು. ಶ್ರೀ ವೀರ ಬಲ್ಲಾಳದೇವನು ರಾಜ್ಯವನ್ನು ಆಳುತ್ತಿರುವಾಗ ಈತನ ಪದ್ಮೋಪಜೀವಿಯಾದ ಕಶ್ಯಪ ಗೋತ್ರದ ಶ್ರೀ ಮಲ್ಲಿಯೋಗಪ್ಪನು ನೊಳಂಬವಾಡಿಗೆ ಸೇರಿದ್ದ ಕೋಗುಂಡಿಯ ದೊಡ್ಡಕೆರೆಯ ಈಶಾನ್ಯ ದಿಕ್ಕಿನಲ್ಲಿ ತನ್ನ ತಂದೆ ಹೆಸರಲ್ಲಿ ಬಾಚೇಶ್ವರ ಗುಡಿಯನ್ನು ಕಟ್ಟಿಸಿ ಬಾಚೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದೇ ದೇವಾಲಯದ ಬಳಿಯಲ್ಲಿ ಮತ್ತೊಂದು ಈಶ್ವರ ದೇವಾಲಯವಿದ್ದು, ಇದು ಕೂಡ 12-13 ನೇ ಶತಮಾನದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ.

2.ಬಸವೇಶ್ವರ ದೇವಾಲಯ:
ಗ್ರಾಮದ ಪೂರ್ವಕ್ಕೆ ಇರುವ ಈ ದೇವಾಲಯವು 17-18 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಶಿವಲಿಂಗ ಮತ್ತು ನಂದಿ ಶಿಲ್ಪಗಳಿವೆ. ಮುಖ ಮಂಟಪದ ಕಂಬಗಳು ಚಿತ್ರದುರ್ಗ ಪಾಳೆಗಾರರ ಕಾಲದ ಶೈಲಿಯಲ್ಲಿದೆ. ದೇವಾಲಯದ ಮುಂಭಾಗದಲ್ಲಿ ದೀಪಸ್ಥಂಭವಿದ್ದು,ಇದರ ಬುಡದಲ್ಲಿ ಪ್ರಾಚೀನ ಶಿವಲಿಂಗ ಹಾಗೂ ನಂದಿಯ ಶಿಲ್ಪಗಳಿವೆ.
ದೇವಾಲಯದ ಹಿಂಬದಿಯಲ್ಲಿ ಕ್ರಿ. ಶ.1606 ರ ಶಾಸನವಿದ್ದು, ಇದು ಅರವೀಡು ಮನೆತನದ ಶ್ರೀ ವೆಂಕಟಪತಿರಾಯನ ಕಾಲದ್ದಾಗಿದೆ. ಇದರಲ್ಲಿ ಕಾಮಗೇತಿ ಚಿಕ್ಕಣ್ಣನಾಯಕನ ಕಾರ್ಯಕರ್ತರಾದ ಬಿಳಿಚೋಡು ಸೀಮೆಯ ಪಾರುಪತ್ಯೇಗಾರರು ಮಲ್ಲಿಸೆಟ್ಟಿವೂರಿನ (ಜಗಳೂರು ತಾ.ಮಲ್ಲಸೆಟ್ಟಿಹಳ್ಳಿ )ಗ್ರಾಮದ ತೆರಿಗೆಯನ್ನು ಮನ್ನಾ ಮಾಡಿದ ವಿವರವಿದೆ.
ಈ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಕಾರ್ತಿಕೋತ್ಸವ ಮಹೇಶ್ವರ ಸ್ವಾಮಿ ಜಾತ್ರೆ, ಮಹಾನವಮಿ ಆಚರಣೆ, ದೊಡ್ಡ ರಥೋತ್ಸವ ಇಲ್ಲಿ ಪ್ರತಿ ವರ್ಷ ವಿಶೇಷವಾಗಿ ಆಚರಿಸಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಇದರ ಜೊತೆಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ,
ವೀರಭದ್ರೇಶ್ವರ ಸ್ವಾಮಿ, ದುರ್ಗಮ್ಮದೇವಿ, ಹುಲಿಗೆಮ್ಮ, ಮಾರಿಕಾಂಬಾ ದೇವಿ… ದೇವಾಲಯಗಳಿವೆ. ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.

ವೀರಗಲ್ಲುಗಳು :
ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ಎದುರು 4 ವೀರಗಲ್ಲುಗಳು ಇದ್ದು, ಇವೆಲ್ಲವೂ 12-13 ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದ ವೀರಗಲ್ಲುಗಳಾಗಿವೆ. 4 ವೀರಗಲ್ಲುಗಳಲ್ಲಿ ಪ್ರತಿಯೊಂದರಲ್ಲೂ ಮೂರು ಸಾಲುಗಳಿದ್ದು, ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುವ ಚಿತ್ರಣವನ್ನು ಕಾಣಬಹುದು. ಒಂದು ವೀರಗಲ್ಲಿನಲ್ಲಿ ವೀರನು ಬಿಲ್ಲು ಬಾಣಗಳನ್ನು ಹಿಡಿದಿದ್ದು, ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿರುವುದನ್ನು ಚಿತ್ರಿಸಲಾಗಿದೆ.
ಮತ್ತೊಂದರಲ್ಲಿ ಭಾಗಶಃ ತೃಟಿತವಾಗಿದೆ.

ಪೂರಕ ಮಾಹಿತಿ :
ಹಂಪಿ ಕನ್ನಡ ವಿವಿ ಕರ್ನಾಟಕ ದೇವಾಲಯ ಕೋಶ ಚಿತ್ರದುರ್ಗ ಜಿಲ್ಲೆ.ಡಾ.ಎಸ್.ವೈ.ಸೋಮಶೇಖರ್.

Share This Article