ನಮ್ಮೂರು ನಮ್ಮ ಹೆಮ್ಮೆ : ಚಿತ್ರದುರ್ಗ : ಕರೆಕಲ್ಲು ಶ್ರೀರಂಗನಾಥ

2 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿಯ ಹೊರಕೆರೆದೇವರಪುರದ ಪಕ್ಕದ ಹನ್ನೊಂದನೇ ಹೊಸೂರು ಗ್ರಾಮದ ಪಶ್ಚಿಮಕ್ಕೆ ಇರುವ ಕರೆಕಲ್ಲು ಶ್ರೀರಂಗನಾಥ ಸ್ವಾಮಿ ದೇವಾಲಯವು ಪುರಾಣ ಪ್ರಸಿದ್ಧ ದೇವಾಲಯವಾಗಿದ್ದು ಪಾಳೇಗಾರರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಬೆಟ್ಟಕ್ಕೆ ತಲುಪಲು ಸುಲಭವಾದ ಟಾರು ರಸ್ತೆ ಇದ್ದು ದೇವಾಲಯದ ಬಳಿಗೆ ವಾಹನಗಳ ಮೂಲಕ ಸಾಗಬಹುದು.

 

ಹೊರಕೆರೆದೇವರಪುರದಿಂದ 3 ಕಿ.ಮೀ ದೂರದಲ್ಲಿ ಇರುವ ಈ ದೇವಾಲಯಕ್ಕೆ ತಲುಪಲು ಸ್ವಂತ ವಾಹನದಿಂದ ಮಾತ್ರ ಸಾಧ್ಯ.
ಗರ್ಭಗೃಹ,ಸಭಾಮಂಟಪ ಹಾಗೂ ಐದು ಅಡಿ ಎತ್ತರದ ದೀಪ ಸ್ತಂಭಗಳಿರುವ ದೇವಾಲಯ ಇದಾಗಿದೆ. ದೇವಾಲಯದ ಅವರಣದಲ್ಲಿ ಆಂಜನೇಯ ಮತ್ತು ಪಾದ ದೇವರ ಗುಡಿಗಳನ್ನು ಕಾಣಬಹುದು. ಪಾದ ದೇವರ ಗುಡಿಯಲ್ಲಿರುವ ಪಾದಗಳು ಶ್ರೀ ವೆಂಕಟೇಶ್ವರ ಸ್ವಾಮಿಯದ್ದು ಎನ್ನುತ್ತಾರೆ.

 

ಗರ್ಭಗೃಹದಲ್ಲಿ ಕೀರ್ತಿ ಮುಖದ ಪ್ರಭಾವಳಿ ಇದ್ದು ಅದರ ಕೆಳಭಾಗದಲ್ಲಿ ಸರ್ಪದ ಕೆತ್ತನೆ ಇದೆ. ಮೂರು ಅಡಿ ಅಗಲ ಮೂರು ಅಡಿ ಎತ್ತರದ ಬಂಡೆ ಗಲ್ಲಿನಲ್ಲಿ ಲಕ್ಷ್ಮಿ ನರಸಿಂಹ ಶಿಲ್ಪವನ್ನು ಕಡೆಯಲಾಗಿದೆ. ಸ್ಥಳೀಯರು ಇದನ್ನು ತಿಮ್ಮಪ್ಪ ದೇವರು ಹಾಗೂ ಈ ಸ್ಥಳವನ್ನು ಕೃಷ್ಣಾಚಲ ಬೆಟ್ಟ ಎನ್ನುತ್ತಾರೆ . ಹೊರಕೆರೆದೇವರಪುರದ ದೇವಸ್ಥಾನವಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಜಾತ್ರೆ ಪೂಜೆ,ಉತ್ಸವ,ಗುಂಡಿನ ಸೇವೆ. ಮುಂತಾದ ಎಲ್ಲಾ ಆಚರಣೆಗಳು ಇದೇ ಸ್ಥಳದಲ್ಲಿ ನಡೆಯುತ್ತವೆ. ಗರ್ಭಗೃಹದ ಮೇಲ್ಭಾಗದಲ್ಲಿ ದ್ರಾವಿಡ ಮಾದರಿಯ ದ್ವಿತಲ ಶಿಖರವಿದೆ.

 

ದೇವಾಲಯದ ಹಿಂಭಾಗದಲ್ಲಿ ವಿಶಾಲವಾಗಿ ಹರಡಿರುವ ಎರೇಗುಡ್ಡದ ಸಾಲು ಹಾಗೂ ಅದರ ಮೇಲ್ಭಾಗದಲ್ಲಿ ಅಳವಡಿಸಿರುವ ಗಾಳಿ ಯಂತ್ರಗಳು ನೈಸರ್ಗಿಕ ಸೌಂದರ್ಯ ಹಾಗೂ ಆಹ್ಲಾದಕರ ವಾತಾವರಣ ಸೃಷ್ಟಿಸಿದೆ. ದೇವಾಲಯದ ಮುಂಭಾಗದಿಂದ ಸುತ್ತಲ ಹತ್ತಾರು ಕಿಲೋಮೀಟರ್ ದೂರದ ಸ್ಥಳಗಳು ಅತ್ಯಂತ ಸುಂದರವಾಗಿ ಕಂಡುಬರುತ್ತವೆ. ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಇಲ್ಲಿನ ದೇವರಿಗೆ ಮಾಂಸಹಾರ ನೈವೇದ್ಯ ಮಾಡಿ ಎಡೆ ತಯಾರಿಸಿ , ಅಡುಗೆ ಮಾಡಿಕೊಂಡು ಊಟ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ತಮ್ಮ ನೆಂಟರು ಬಂಧು ಬಳಗದವರೊಂದಿಗೆ ಇಲ್ಲಿ ಸಾಮೂಹಿಕ ಭೋಜನ ಮಾಡುವ ಪದ್ಧತಿ ಇದೆ.

Share This Article
Leave a Comment

Leave a Reply

Your email address will not be published. Required fields are marked *