ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್
ಕುರುಮರಡಿಕೆರೆ ಗ್ರಾಮವು ಇಂಗಳದಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 13 ಕಿಲೋಮೀಟರ್ ದೂರ ಆಗ್ನೇಯಕ್ಕೆ, ಚಿತ್ರದುರ್ಗ- ಇಂಗಳದಾಳ್-
ಕುರುಮರಡಿಕೆರೆ – ಕೆನ್ನೆಡಲು ಮಾರ್ಗದಲ್ಲಿದೆ.
ಹೆಸರು:
ಗ್ರಾಮದ ಹೆಸರು ಸ್ಥಳವಾಚಕವಾಗಿದ್ದು,
ಒಂದು ಐತಿಹ್ಯದಂತೆ ಹಿಂದೆ ಇಲ್ಲಿ ಕುರುಬ ಜನಾಂಗದವರು ವಾಸವಾಗಿದ್ದು, ಇದು ಕುರುಬರ ಮರಡಿಕೆರೆಯಾಗಿದ್ದು ಕಾಲಕ್ರಮೇಣ ಕುರುಮರಡಿಕೆರೆಯಾಗಿದೆ ಎಂದು ಹೇಳಲಾಗುತ್ತದೆ. ಕಾಲಾನಂತರ ಇಲ್ಲಿಂದ ಈ ಸಮುದಾಯವು ಬೇರೆ ವಿವಿಧ ಕಾರಣಗಳಿಂದ ಗ್ರಾಮ ತೊರೆದು ವಲಸೆ ಹೋಯಿತು. ಆದರೆ ಹೆಸರು ಹಾಗೆ ಉಳಿಯಿತು.ಇಂದು ಇಲ್ಲಿ ಯಾವುದೇ ಕುರುಬ ಸಮುದಾಯದ ಮನೆಗಳು ಇರುವುದಿಲ್ಲ. ಮತ್ತೊಂದು ಐತಿಹ್ಯದ ಪ್ರಕಾರ ಈ ಗ್ರಾಮವು ಸುತ್ತಲೂ ಹತ್ತಾರು ಮರಡಿಗಳಿಂದ ಆವೃತವಾಗಿದ್ದು ಊರನ್ನು ಗುರುತಿಸಲು ಕುರುಹು( ಗುರುತು) ಮಾಡಲಾಗಿತ್ತು. ಗುರುತು ಮಾಡಿದ(ಕುರುಹು)ಬೆಟ್ಟದ (ಮರಡಿ )ಬಳಿ ನಿರ್ಮಿಸಿದ ಕೆರೆ ಹಾಗೂ ಊರಿನ ಕಾರಣಕ್ಕೆ ಈ ಊರಿಗೆ ಕುರುಹಿನ ಮರಡಿಕೆರೆ ಎಂದು ಹೆಸರಾಗಿ ಮುಂದೆ ಇದೇ ಕುರುಮರಡಿಕೆರೆಯಾಗಿದೆ ಎನ್ನಲಾಗುತ್ತದೆ. ಗ್ರಾಮದ ಹಿಂದಿನ ಜನವಸತಿ ಪ್ರದೇಶವು ರುದ್ರಪ್ಪ ಮಠದ ಬಳಿಯ ಹಳ್ಳದ ದಕ್ಷಿಣ ದಿಕ್ಕಿಗೆ ಕೆನ್ನೆಡಲು ಗ್ರಾಮಕ್ಕೆ ಹೋಗುವ ರಸ್ತೆಯ ಬಳಿಯಲ್ಲಿ ಇದ್ದಿತು.
ಈಗ ಇದು ಬೇಚಾರಕ್ ಆಗಿದ್ದು ಜನವಸತಿರಹಿತವಾಗಿದೆ.ಇದು ಗ್ರಾಮದ ಮೂಲಸ್ಥಳವಾಗಿದೆ. ಇದನ್ನು ಕಂಚುಗಾರರ ಪಟ್ಟಣ ಎನ್ನಲಾಗುತ್ತದೆ. ಈ ಜಾಗದಲ್ಲಿ ಅಂದಿನ ಕಾಲದ ಮಡಿಕೆ, ಕುಡಿಕೆ, ಭಗ್ನಾವಶೇಷಗಳು, ಶಿಲ್ಪಾವಶೇಷಗಳು,ವೀರಗಲ್ಲು ಮಾಸ್ತಿಕಲ್ಲು ಕಂಡುಬರುತ್ತದೆ. ಗ್ರಾಮವು ಹಿಂದೆ ನವಶಿಲಾಯುಗದ ಜನವಸತಿಯ ನೆಲೆಯಾಗಿತ್ತು. ಇಲ್ಲಿ ಇಂದಿಗೂ ಕೆಲವು ಶಿಲಾ ಸಮಾಧಿಗಳು ಕಂಡುಬರುತ್ತವೆ. ನವಶಿಲಾಯುಗದ ಕವಣೆ ಕಲ್ಲುಗಳು, ಕಲ್ಲಿನ ಕೊಡಲಿಗಳು…ಇಲ್ಲಿ ದೊರಕಿದ್ದು ಇದನ್ನು ಚಿತ್ರದುರ್ಗದ ರಂಗಯ್ಯನ ಬಾಗಿಲು ಹತ್ತಿರದ ಪ್ರಾಚ್ಯವಸ್ತು ಇಲಾಖೆಯಲ್ಲಿ ಸಂಗ್ರಹಿಸಿಡಲಾಗಿದೆ.
ಕೆರೆ :
ಗ್ರಾಮದ ಪೂರ್ವ ಭಾಗಕ್ಕೆ ಇರುವ ಕೆರೆಗೆ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳು ಹಾಗೂ ಜೋಗಿಮಟ್ಟಿ ಗಿರಿಸಾಲುಗಳ ಪೂರ್ವಭಾಗದ ನೀರು ಲಕ್ಕಪ್ಪನಹಳ್ಳ, ಊರ ಮುಂದಲ ಹಳ್ಳ ಹಾಗೂ ರುದ್ರದೇವರ ಮಠದ ಹಳ್ಳದ ಮೂಲಕ ತಲುಪುತ್ತದೆ.
ಇದು ತುಂಬಿದ ನಂತರ ಮುಂದೆ ಜಂಪಣ್ಣನಾಯಕನ ಕೋಟೆ (ಜೆ. ಎನ್.ಕೋಟೆ )ಕೆರೆಗೆ ನೀರು ಹರಿಯುತ್ತದೆ.
ಭೌಗೋಳಿಕ ವಿವರ:
ಈ ಗ್ರಾಮವು ಸಂಪೂರ್ಣ ಜೋಗಿಮಟ್ಟಿ ಗುಡ್ಡ ಸಾಲುಗಳಿಂದ ಆವೃತವಾಗಿದ್ದು, ಗುಡ್ಡದ ಇಳಿಜಾರು ಪ್ರದೇಶದ ನಡುವೆ ಇರುವ ಸಮತಟ್ಟು ಪ್ರದೇಶದಲ್ಲಿ ಈ ಗ್ರಾಮವು ನಿರ್ಮಾಣವಾಗಿದೆ. ಸಂಪೂರ್ಣ ಗುಡ್ಡಗಳಿಂದಲೇ ಆವೃತವಾದ ಈ ಗ್ರಾಮವು ಗುಡ್ಡಗಳ ನಡುವಿನ ಸಣ್ಣ ಮರಡಿಯ ಮೇಲೆ ನಿರ್ಮಾಣಗೊಂಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಯೇ ಈ ರೀತಿ ನಿರ್ಮಾಣ ಆಗಿರುವ ಕೆಲವೇ ಕೆಲವು ಗ್ರಾಮಗಳಲ್ಲಿ ಇದು ಒಂದಾಗಿದೆ.ಮಳೆಗಾಲದಲ್ಲಿ
ಈ ಕಾರಣಕ್ಕೆ ಇಲ್ಲಿ ಮಳೆಗಾಳಿಯ ತೀವ್ರತೆ ಹೆಚ್ಚಾಗಿ, ಜೌಗು ತೇವಾಂಶದ ವಾತಾವರಣ ನಿರ್ಮಾಣವಾಗಿರುತ್ತದೆ. ಗ್ರಾಮದ ಸುತ್ತಲೂ ದೇವರಗುಡ್ಡ,ಸೂಜಿಕಲ್ಲು ಮಟ್ಟಿ,9 ಕೊಲ್ರ, ಕೆನ್ನೆಡಲುಕಣಿವೆ,ಕ್ಯಾದಿಗೆರೆ ಮಟ್ಟಿ,ಓಬಳ ದೇವರಗುಡ್ಡ, ಜೋಗಿಮಟ್ಟಿ… ಮುಂತಾದ ಹತ್ತಾರು ಗುಡ್ಡಗಳ ಸಾಲು ಇದೆ.
ಗ್ರಾಮದ ಉತ್ತರಕ್ಕೆ ಇರುವ ದೇವರಗುಡ್ಡದಲ್ಲಿ ಆಂಜನೇಯ ದೇವರ ಪಾದಗಳಿದ್ದು,ಅಲ್ಲಿಗೆ ಪ್ರತಿವರ್ಷಗ್ರಾಮದಿಂದ ಭಕ್ತರು ತೆರಳಿ ಪೂಜಿಸಲಾಗುತ್ತದೆ. ದೊಡ್ಡಸಿದ್ದವನಹಳ್ಳಿ ಗ್ರಾಮದ ಆಂಜನೇಯ ರಥೋತ್ಸವದ ಸಮಯದಲ್ಲಿ ಇಲ್ಲಿಂದ ಧೂಪದ ಮರವನ್ನು ತೆಗೆದುಕೊಂಡು ಹೋಗಲಾಗುತ್ತದೆ.
ವೀರಮಾಸ್ತಿಗಲ್ಲು:
ಗ್ರಾಮದ ದಕ್ಷಿಣಕ್ಕೆ ಕೆನ್ನೆಡಲು ರಸ್ತೆಯಲ್ಲಿ ಇರುವ ಕಂಚುಗಾರರ ಪಟ್ಟಣದಲ್ಲಿ ವೀರ ಮಾಸ್ತಿಗಲ್ಲು ಇದ್ದು, ಇದು 3 ಅಡಿ ಎತ್ತರವಿದ್ದು ಹಿಂದೆ ಯುದ್ಧದಲ್ಲಿ ಮಡಿದ ಯೋಧ ಹಾಗೂ ಆತನ ಸತಿ ಸ್ಮರಣಾರ್ಥವಾಗಿ ಇದನ್ನು ನಿಲ್ಲಿಸಲಾಗಿದೆ. ಇದು 16 ನೇ ಶತಮಾನದ ಪಾಳೇಗಾರರ ಕಾಲಕ್ಕೆ ಸೇರಿದ ಶಿಲ್ಪಗಳಿವೆ. ಇದನ್ನು ಸ್ಥಳೀಯರು ಬರೆ ದೇವರು ಎನ್ನುತ್ತಾರೆ. ಇತ್ತೀಚಿಗೆಯಷ್ಟೇ ಇದನ್ನು ಚಿತ್ರದುರ್ಗದ ಶಿಕ್ಷಕರಾದ ದೇವೇಂದ್ರಪ್ಪ ಹಾಗೂ ಮಹೇಶ್ ಕುಂಚಿಗನಾಳ್ ಎಂಬುವವರು ಪತ್ತೆಹಚ್ಚಿದ್ದಾರೆ.
ಇಂಗಳದಾಳ್,ಸೇವಾಲಾಲ್ ನಗರ ಲಂಬಾಣಿಹಟ್ಟಿ, ಕೆನ್ನೆಡಲು .. ಹತ್ತಿರದ ಗ್ರಾಮಗಳಾಗಿವೆ.
ಗ್ರಾಮದಲ್ಲಿರುವ ದೇವಾಲಯಗಳು :
1. ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು ,
ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯವಿದು.
ಗರ್ಭಗೃಹದಲ್ಲಿ ಆಂಜನೇಯ ಶಿಲ್ಪವಿದ್ದು,
ಪೂಜಿಸಲಾಗುತ್ತದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ .
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದರ ಜೊತೆಯಲ್ಲಿ ಶ್ರಾವಣಮಾಸದಲ್ಲಿ ಗ್ರಾಮದ ನೈರುತ್ಯಕ್ಕೆ ಇರುವ ಓಬಳ ದೇವರಗುಡ್ಡದ ಓಬಳ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಕೂಡ ವಿಶೇಷ ಪೂಜೆ ಹಾಗೂ ಪರೇವು ಆಚರಣೆ ನಡೆಸಲಾಗುತ್ತದೆ.
2. ಬಸವೇಶ್ವರ( ಈಶ್ವರ) ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಬಸವೇಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಮಾತ್ರ ಇರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ನಂದಿಯ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜಿಸಲಾಗುತ್ತದೆ. ಈ ದೇವರ ಆಚರಣೆಗಳನ್ನು ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ ನಡೆಸಲಾಗುತ್ತದೆ.
ಆಗ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತವೆ.
3. ಕುಕ್ಕುವಾಡೇಶ್ವರಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಗ್ರಾಮದೇವತೆ ಕುಕ್ಕುವಾಡೇಶ್ವರಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪೂರ್ವಾಭಿಮುಖವಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ.
ಈ ದೇವರ ಜಾತ್ರೆಯನ್ನು ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ.
4. ದುರ್ಗಾಂಬಿಕ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಾಲಯವು ಸ್ಥಳೀಯ ನಿರ್ಮಿಸಲಾಗಿದ್ದು ಗರ್ಭಗೃಹದಲ್ಲಿ ದುರ್ಗಾದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.
5. ಗ್ರಾಮದ ಹೊರಗಿನ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ:
ಗ್ರಾಮದಿಂದ ದಕ್ಷಿಣಕ್ಕೆ ನಂದಿಪುರಕ್ಕೆ ಹೋಗುವ ದಾರಿಯಲ್ಲಿರುವ ಶ್ರೀ ಕುಕ್ಕವಾಡೇಶ್ವರಿ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಮಾತ್ರ ಇರುವ ಈ ದೇವಾಲಯದ ಗರ್ಭಗೃಹದಲ್ಲಿ ಕುಕ್ಕುವಾಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.ಒಂದು ದಂತಕಥೆಯಂತೆ ಹಿಂದೆ ಚನ್ನಗಿರಿ ತಾಲ್ಲೂಕು ಅಮ್ಮನಗುಡ್ಡಕ್ಕೆ ಗ್ರಾಮಸ್ಥರು ಕುಕ್ವಾಡೇಶ್ವರಿ ದೇವಿಯ ದರ್ಶನಕ್ಕೆ ಹೋಗಿ ವಾಪಸ್ ಬರುವಾಗ ಈಗಿರುವ ಜಾಗದಲ್ಲಿ ಗಾಡಿಗಳು ನಿಂತು ಬಿಟ್ಟವಂತೆ. ಗ್ರಾಮಸ್ಥರು ಅವರ ಚೀಲಗಳನ್ನು ಇಳಿಸಿ ಗಾಡಿ ತಳ್ಳಲು ಚೀಲಗಳನ್ನು ತೆಗೆದಾಗ ದೇವಿಯು ಅದರಲ್ಲಿ ಇದ್ದು, ತಾನು ಇಲ್ಲಿಯೇ ನೆಲೆ ಗೊಳ್ಳುವುದಾಗಿ ಹೇಳಿದಾಗ ಇಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹಿರಿಯರು ಹೇಳುತ್ತಾರೆ. ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಇಲ್ಲಿ ಪರೇವು ಆಚರಣೆ ಮಾಡಲಾಗುತ್ತದೆ.
6. ರುದ್ರಜ್ಜನ ಮಠ :
ಗ್ರಾಮದಿಂದ ದಕ್ಷಿಣಕ್ಕೆ ಕೆನ್ನೆಡಲು ರಸ್ತೆಯಲ್ಲಿರುವ ರುದ್ರಸ್ವಾಮಿ (ರುದ್ರಜ್ಜನ) ಮಠವು ಕೊಳಾಳು ಕೆಂಚಾವಧೂತರ ಗುರುಗಳಾದ ಅವಧೂತ ಪರಂಪರೆಯ ಶ್ರೀ ರುದ್ರಸ್ವಾಮಿ ಅವರಿಗೆ ಸೇರಿದ್ದು. ಇವರು ಹೊಸಪೇಟೆ ತಾಲೂಕಿನ ಕಾಳಘಟ್ಟದಿಂದ 1870 ರ ಸಮಯದಲ್ಲಿ ಬಂದು ಇಲ್ಲಿ ಕೆಲಕಾಲ ನೆಲೆನಿಂತು ಆಧ್ಯಾತ್ಮಿಕ ಪ್ರವಚನವನ್ನು ನೀಡಿದ್ದರು. ಈಗ ಅವರ ಹೆಸರಿನ ಒಂದು ಗದ್ದುಗೆ ಮಾಡಿ ಪೂಜಿಸಲಾಗುತ್ತದೆ. ಗರ್ಭಗೃಹದಲ್ಲಿ ಗುರು-ಶಿಷ್ಯರ ಮುಖಪದ್ಮಗಳನ್ನು ಇಟ್ಟು ಪೂಜಿಸಲಾಗುತ್ತದೆ.
ಇಲ್ಲಿ ಆಗಾಗ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಲ್ಲಿನ ನರಹರಿ ಶಿಷ್ಯವೃಂದದಿಂದ ಅಕ್ಕಪಕ್ಕದ ಗ್ರಾಮದಲ್ಲಿ ಭಜನಾ ಕಾರ್ಯಕ್ರಮವನ್ನು ನೀಡಲಾಗುತ್ತದೆ. ಪ್ರತಿ ಸೋಮವಾರ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಈ ಮಠವು ಅಪಾರ ಭಕ್ತವೃಂದವನ್ನು ಹೊಂದಿದ್ದು ಭಕ್ತರಿಂದ ಸದಾಕಾಲ ಇಲ್ಲಿ ಪೂಜೆಗಳು ನೆರವೇರುತ್ತವೆ.ಇದರ ಆವರಣದಲ್ಲಿ ಮಾಸ್ತಿಗಲ್ಲು ಇದ್ದು, ಅಪರೂಪದ್ದಾಗಿದೆ. ಗೋಪುರವನ್ನು ಚಿತ್ರಿಸಿ ಅದರೊಳಗೆ ಸತಿಯನ್ನು ಚಿತ್ರಿಸಲಾಗಿದೆ.









