ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ಜಿಲ್ಲೆಯು ಸಂಪೂರ್ಣ ಬರಪೀಡಿತ ಪ್ರದೇಶವಾಗಿದ್ದು ಮಧ್ಯ ಕರ್ನಾಟಕದ ಅತ್ಯಂತ ಕಡಿಮೆ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ.
ವರ್ಷಗಟ್ಟಲೆ ಇಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಬೇಕಾಗುತ್ತದೆ. ಮಳೆಯನ್ನೇ ನಂಬಿ ಬದುಕುವ ರೈತಾಪಿ ವರ್ಗದವರು ಮಳೆ ಬರದಿದ್ದರೆ ಗುಳೇ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಕಂಡುಬರುತ್ತದೆ.
ಒಂದು ಶತಮಾನದಲ್ಲಿ 60 ವರ್ಷ ಕೇವಲ ಬರವೇ ಇಲ್ಲಿ ಆವರಿಸಿರುತ್ತದೆ. ಇದನ್ನು ಅರಿತ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರು ಇಲ್ಲಿ ಹರಿಯುವ ವೇದಾವತಿ ನದಿಗೆ ಒಂದು ಅಣೆಕಟ್ಟು ಕಟ್ಟಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಮ್ಮ ಮನೆಯ ಹೆಣ್ಣು ಮಕ್ಕಳ ಒಡವೆಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಅಡಮಾನ ಇಟ್ಟು ಇಲ್ಲಿನ ರೈತರಿಗೆ ಬಾಳು ಬೆಳಗಿಸುವಂಥ ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾದುದೇ ವಾಣಿವಿಲಾಸ ಸಾಗರ ಜಲಾಶಯ.
ಇದು ಹಿರಿಯೂರು- ಹೊಸದುರ್ಗ ತಾಲೂಕು ಗಡಿಯಲ್ಲಿ ಬರುತ್ತದೆ.
ಹಿನ್ನೀರು ಪ್ರದೇಶ ಸಂಪೂರ್ಣವಾಗಿ ಹೊಸದುರ್ಗ ತಾಲೂಕಿಗೆ ವ್ಯಾಪಿಸಿದ್ದರೆ, ಅಣೆಕಟ್ಟೆಯ ಮುಂಭಾಗ ಸಂಪೂರ್ಣವಾಗಿ ಹಿರಿಯೂರು ತಾಲೂಕಿಗೆ ಒಳಪಡುತ್ತದೆ. ಈ ಪ್ರದೇಶಕ್ಕೆ ಮಾರಿ ಕಣಿವೆ ಎಂದು ಕೂಡ ಕರೆಯಲಾಗುತ್ತದೆ. ಆ ಕಾರಣಕ್ಕೆ ಇದನ್ನು
ವಾಣಿ ವಿಲಾಸ ಸಾಗರ ಜಲಾಶಯ/ ಮಾರಿಕಣಿವೆ ಜಲಾಶಯ/ ವಿವಿ ಸಾಗರ ಎಂದು ಗುರುತಿಸಲಾಗುತ್ತದೆ. ಭಾರತದ ಮೊಟ್ಟಮೊದಲ ಅತ್ಯಂತ ಸುಭದ್ರ ಹಾಗೂ ಕಲಾತ್ಮಕ ವಿನ್ಯಾಸದ ಜಲಾಶಯ ಇದಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಿಂದ ಪಶ್ಚಿಮ ದಿಕ್ಕಿಗೆ 18 ಕಿಲೋಮೀಟರ್ ದೂರದಲ್ಲಿ ಹಿರಿಯೂರು- ಹೊಸದುರ್ಗ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ವಾಣಿವಿಲಾಸ ಸಾಗರ ಜಲಾಶಯವಿದೆ.
ಈ ಜಲಾಶಯವನ್ನು ಆಗಸ್ಟ್ 1898 ರಿಂದ ಆಗಸ್ಟ್ 1907 ರವರೆಗೆ ಒಂಭತ್ತು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಇದು ಭಾರತದ ಮೊಟ್ಟ ಮೊದಲನೇ ಅತ್ಯಂತ ಸುರಕ್ಷಿತ, ಸುಭದ್ರ ಹಾಗೂ ಕಲಾತ್ಮಕ ವಿನ್ಯಾಸದ ಜಲಾಶಯವೆಂಬ ಖ್ಯಾತಿ ಪಡೆದಿದೆ.
ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟು, ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ತಾಯಿಯಾದ ಮಹಾರಾಣಿ ಕೆಂಪನಂಜಮ್ಮಣ್ಣಿ ಯವರು ಬ್ರಿಟಿಷರಿಂದ Maharani Regent of Mysore ಆಗಿ ನೇಮಕಗೊಂಡು ಕೈಗೆತ್ತಿಕೊಂಡ ಕನಸಿನ ಕೂಸು ಇದಾದ ಕಾರಣದಿಂದ, ನಾಲ್ವಡಿಯವರು ಈ ಅಣೆಕಟ್ಟೆಗೆ ತಮ್ಮ ತಾಯಿಯ ಹೆಸರನ್ನೇ ‘ವಾಣಿವಿಲಾಸ ಕೆಂಪನಂಜಮ್ಮಣ್ಣಿ ಸನ್ನಿಧಾನ’ ಎಂದು ನಾಮಕರಣ ಮಾಡಿದ್ದಾರೆ.
ಈಗಿರುವಷ್ಟು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೃಹತ್ ಯಂತ್ರೋಪಕರಣಗಳಾಗಲೀ, ಮಾನವ ಸಂಪತ್ತಾಗಲೀ ಲಭ್ಯವಿರದಿದ್ದ ಆಗಿನ ಕ್ಲಿಷ್ಟ ಕಾಲದಲ್ಲಿ ನಾಲ್ವಡಿಯವರ ಉಸ್ತುವಾರಿಯಲ್ಲಿಯೇ ವಾಣಿವಿಲಾಸ ಸಾಗರ ಅಣೆಕಟ್ಟು ನಿರ್ಮಾಣವಾಯಿತು. ಸಿಮೆಂಟ್- ಮಾರ್ಬಲ್ ಬಳಸದೆಯೇ ಸ್ಥಳೀಯ ಬೆಟ್ಟಗುಡ್ಡಗಳಿಂದ ದೊರೆಯುತ್ತಿದ್ದ ಕರಿಕಲ್ಲು ಬಳಸಿಕೊಂಡು ಮತ್ತು ಸುಣ್ಣ-ಮರಳು ರುಬ್ಬಿದ ಗಚ್ಚುಗಾರೆ ಬಳಸಿಕೊಂಡು ಈ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿದ್ದ ಬಯಲುಸೀಮೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಯ ಅನುಕೂಲಕ್ಕಾಗಿ ನಾಲ್ವಡಿಯವರು ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ. ಇದು
ಹಿರಿಯೂರು ಭಾಗದ ಸಮಸ್ತ ಜೀವಮಂಡಲದ ಜೀವನಾಡಿಯಾಗಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರಿನ ಸೌಕರ್ಯ ಹಾಗೂ ಚಳ್ಳಕೆರೆ ಮಿಲಿಟರಿ ಸೇನಾ ನೆಲೆಗಳಿಗೂ ಇಲ್ಲಿಂದಲೇ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ.
ವೇದಾವತಿ ನದಿಯು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ಬೆಟ್ಟಸಾಲುಗಳಲ್ಲಿ ಪುಟ್ಟಿ ಮುಂದೆ ಅಯ್ಯನ ತೆರೆಯ ಮೂಲಕ ಕಡೂರು ಹೊಸದುರ್ಗ ತಾಲ್ಲೂಕಿನಲ್ಲಿ ಹರಿದು ಟಿವಿ ಸಾಗರ ಜಲಾಶಯ ತಲುಪುತ್ತದೆ ಇಲ್ಲಿಂದ ಮುಂದೆ ಇದು ಪರಶುರಾಮಪುರ ಮಾರ್ಗವಾಗಿ ಹಗರಿ ನದಿಗೆ ಮುಂದೆ ತುಂಗಭದ್ರಾ -ಕೃಷ್ಣೆಗೆ ಹರಿಯುತ್ತದೆ. ಅತ್ಯಂತ ನಯನ ಮನೋಹರ ವಾತಾವರಣ ಹಾಗೂ ಬೆಟ್ಟಸಾಲುಗಳ ಪರಿಸರ ಇರುವ ಈ ಪ್ರದೇಶವು ಒಂದು ದಿನದ ಪಿಕ್ನಿಕ್ ಸ್ಪಾಟ್ ಆಗಿದ್ದು ಹೇಳಿ ಮಾಡಿಸಿದ ಜಾಗವಾಗಿದೆ.
ಇಲ್ಲಿಗೆ ಸ್ನೇಹಿತರು,ಬಂಧು ಬಳಗದವರು, ಗುಂಪಿನಲ್ಲಿ ಬಂದರೆ ದಿನ ಕಳೆದು ಹೋದುದೆ ಗೊತ್ತಾಗುವುದಿಲ್ಲ ಜಲಾಶಯದ ಕೆಳಭಾಗದಲ್ಲಿ ಮಾರಮ್ಮ ದೇವಾಲಯವಿದ್ದು ಈ ಅಣೆಕಟ್ಟೆಯನ್ನು ಈ ದೇವಿಯೇ ಕಾಪಾಡುತ್ತಾಳೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಆಕರ್ಷಕ ಕಲಾತ್ಮಕ ಮೆಟ್ಟಿಲುಗಳು ಇರುವ ಈ ಅಣೆಕಟ್ಟೆಯ ಒಂದು ಭಾಗದಿಂದ ನಡೆದುಕೊಂಡು ಮೇಲೆ ಬರಬಹುದು ಜೊತೆಗೆ ಅಣೆಕಟ್ಟೆಯ ಮೇಲೆ ಕೂಡ ವಾಕಿಂಗ್ ಪಾತ್ ಇದ್ದು ಹತ್ತಾರು ಚಿತ್ರಗಳ ಹಾಡುಗಳ ಚಿತ್ರೀಕರಣ ಇಲ್ಲಿ ನಡೆದಿದೆ.
ಹುಚ್ಚ ಚಿತ್ರದ ಉಸಿರೇ ಉಸಿರೇ ಹಾಡು ಕೂಡ ಈ ಜಾಗದಲ್ಲಿಯೇ ಚಿತ್ರೀಕರಣವಾಗಿದೆ.
ಜಲಾಶಯದ ಪಶ್ಚಿಮಕ್ಕೆ ಉತ್ತರ ಗುಡ್ಡೆ ಗುಡ್ಡ ಸಾಲುಗಳು ಪ್ರಾರಂಭವಾಗಿ ಇದು ಆನೆ ಕಾರಿಡಾರ್ ಗೆ ಸಂಪರ್ಕ ಕಲ್ಪಿಸುತ್ತದೆ ಜೊತೆಗೆ ಸಂರಕ್ಷಿತ ಅರಣ್ಯ ಪ್ರದೇಶವು ಇದೇ ಜಾಗದಿಂದ ಪ್ರಾರಂಭವಾಗಿ ಮುಂದೆ ಹೊಸದುರ್ಗ ಚಿಕ್ಕನಾಯಕನಹಳ್ಳಿ, ಸಿರಾ ತಾಲೂಕು ಬುಕ್ಕಾಪಟ್ಟಣದ ವರೆಗೂ ಇದು ವ್ಯಾಪಿಸಿದೆ.
ಮಳೆಗಾಲದ ನಂತರ ಸಂಪೂರ್ಣ ಹಸಿರಿನಿಂದ ಆವರಿಸುವ ಈ ಪ್ರದೇಶವು ಬೇಸಿಗೆಯ ಕಾಲದಲ್ಲಿ ಎಲೆಗಳನ್ನು ಉದುರಿಸಿಕೊಂಡು ಬೋಳು ಗುಡ್ಡಗಳು ಮಾತ್ರ ಕಾಣುತ್ತವೆ. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ಅತ್ಯಂತ ಸುಂದರವಾಗಿ ಈ ಪ್ರದೇಶದಿಂದ ಕಂಡುಬರುತ್ತದೆ.
ಈ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದಿರುವ ಈ ಜಲಾಶಯದ ನೀರಿನ ಹರಿವು ಅಲೆ ಅಲೆಯಾಗಿ ಧಾರೆಯಾಗಿ ಹರಿಯುತ್ತದೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಪ್ರವಾಸಿಗರಂತೂ ವಾರಗಟ್ಟಲೆ ಇದನ್ನು ನೋಡಲು ಆಗಮಿಸುತ್ತಾರೆ. ಹತ್ತಿರದ ಗುಡ್ಡದ ಮೇಲೆ ಇರುವ ವೀಕ್ಷಣಾ ಸ್ಥಳದಿಂದ ನಿಂತು ನೋಡಿದರೆ ಜಲಾಶಯದ ನೀರು ಭಾರತದ ಭೂಪಟದಂತೆ ಗೋಚರಿಸುತ್ತದೆ.
ಜಲಾಶಯದ ಕೆಳಭಾಗದಲ್ಲಿ ಒಂದು ಮಿನಿ ಉದ್ಯಾನವನವು ನಿರ್ಮಿಸಲಾಗಿದೆ. ವಾಹನದ ಮೂಲಕವೂ ಜಲಾಶಯದ ಮೇಲ್ಭಾಗಕ್ಕೆ ತಲುಪಬಹುದು.
ವಾಣಿವಿಲಾಸ ಸಾಗರ ಅತ್ಯಂತ ಸುಂದರವಾಗಿದ್ದು ಎರಡು ಗುಡ್ಡಗಳ ಕಲಾತ್ಮಕ ಸುಂದರ ಮಂಟಪಗಳು,ಪ್ರವೇಶ ದ್ವಾರದ ಮಂಟಪ ನೋಡುಗರ ಮನಸಳೆಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಸರ್ಕಾರದ ವತಿಯಿಂದ ವಾಟರ್ ಗೇಮ್ಸ್ ಗಳನ್ನು, ಬೋಟಿಂಗ್.. ಕೂಡ ನಡೆಸಲಾಗುತ್ತದೆ.
ಇಲ್ಲಿಗೆ ಹಿರಿಯೂರು ,ಹೊಸದುರ್ಗದಿಂದ ನೇರ ಬಸ್ ಸೌಕರ್ಯ ಲಭ್ಯವಿದೆ. ವಾರದ ಎಲ್ಲಾ ದಿನಗಳಲ್ಲಿಯೂ ಇಲ್ಲಿಗೆ ತೆರಳಬಹುದು. ಇದರ ಬಗ್ಗೆ ಹಿರಿಯೂರಿನ ಖ್ಯಾತ ಸಂಶೋಧಕರಾದ ಎಂ. ಜಿ. ರಂಗಸ್ವಾಮಿ ಇವರು ಮಾರಿಕಣಿವೆ ಬಗ್ಗೆ ಸುದೀರ್ಘ ಮಾಹಿತಿ ಉಳ್ಳ ಬೃಹತ್ ಪುಸ್ತಕವನ್ನು ಹೊರ ತಂದಿದ್ದಾರೆ. ಇದರ ಜೊತೆಯಲ್ಲಿ ಇದೆ ಲೇಖಕರು ಯೂಟ್ಯೂಬ್ ನಲ್ಲಿ ಮಾಹಿತಿ ಉಳ್ಳ ವಿಡಿಯೋ ಕೂಡ ಮಾಡಿರುತ್ತಾರೆ. ಆಸಕ್ತರು ಗಮನಿಸಬಹುದು.









