ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ಜಿಲ್ಲೆಯು ಸಂಪೂರ್ಣ ಕಲ್ಲು ಬೆಟ್ಟಗಳಿಂದ ಆವೃತವಾದ ಒಂದು ಭೂಪ್ರದೇಶವಾಗಿದೆ. ಇದರಲ್ಲಿ ಚಿತ್ರದುರ್ಗ
ತಾಲ್ಲೂಕು ಸಂಪೂರ್ಣ ಒಣ ಭೂಪ್ರದೇಶ ಹೊಂದಿರುವ ಒಂದು ತಾಲೂಕಾಗಿದೆ.
ಬಯಲುಸೀಮೆಯ ಪ್ರದೇಶವಾದ ಇಲ್ಲಿ ಚಿತ್ರದುರ್ಗ ನಗರ ಕೇಂದ್ರಕ್ಕೆ ನಾವು ಹೋಲಿಸಿಕೊಂಡರೆ ಚಿತ್ರದುರ್ಗ ನಗರದಿಂದ ಉತ್ತರಕ್ಕೆ ಸಂಪೂರ್ಣ ಕಲ್ಲು ಬೆಟ್ಟಗಳು, ಅಷ್ಟೇನೂ ಎತ್ತರವಿಲ್ಲದ ಬೆಟ್ಟ ಗುಡ್ಡಗಳ ಸಾಲುಗಳು, ಗೋಮಾಳ ಪ್ರದೇಶವು ದೂರದ ಕೂಡ್ಲಿಗಿವರೆಗೂ ವ್ಯಾಪಿಸಿದೆ.
ಇದು ಮುಂದೆ ಮೊಳಕಾಲ್ಮೂರು ತಾಲೂಕಿನವರೆಗೂ ಹಬ್ಬಿದೆ. ಚಿತ್ರದುರ್ಗ ನಗರದ ದಕ್ಷಿಣಕ್ಕೆ ಇರುವ ಚಿತ್ರದುರ್ಗ ತಾಲೂಕು ಪ್ರದೇಶವು ಸಂಪೂರ್ಣ ಕುರುಚಲು ಕಾಡುಗಳ ಜೋಗಿಮಟ್ಟಿ ಕಾಡು ವ್ಯಾಪಿಸಿದೆ. ಒಂದು ತಾಲೂಕಿನಲ್ಲಿ ಸಂಪೂರ್ಣ ಭೌಗೋಳಿಕವಾಗಿ ವೈರುಧ್ಯಗಳು ಕಂಡುಬರುವ ಒಂದು ಅಪರೂಪದ ಭೂ ಪ್ರದೇಶವಿರುವ ತಾಲೂಕು ಚಿತ್ರದುರ್ಗ.
ಚಿತ್ರದುರ್ಗ ನಗರದಿಂದ ಹೊಸಪೇಟೆ ರಸ್ತೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 13ರ ಬಲ ಹಾಗೂ ಎಡಬದಿಯಲ್ಲಿ ಬೆಟ್ಟ ಗುಡ್ಡದ ಸಾಲು ಸಾಲು ಕಿ.ಮೀ ಗಟ್ಟಲೆ ವ್ಯಾಪಿಸಿದ್ದು ಅದರ ಮೇಲೆ ಅಳವಡಿಸಿರುವ ಗಾಳಿ ಯಂತ್ರಗಳ ಸೊಬಗು ನೋಡುವುದೇ ಕಣ್ಣಿಗೆ ಆನಂದ.
ಚಿತ್ರದುರ್ಗ ನಗರದಿಂದ 13 ಕಿಲೋಮೀಟರ್ ದೂರವಿರುವ ಬಂಗಾರಕ್ಕನಹಳ್ಳಿ ಬಳಿಯ ಗುಡ್ಡವೇ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ ಗುಡ್ಡ. ಇದು ತುರುವನೂರು ಕಂದಾಯ ಗ್ರಾಮ ವ್ಯಾಪ್ತಿಯಲ್ಲಿದೆ.
ಅಷ್ಟೇನೂ ಎತ್ತರವಿಲ್ಲದ ಒಂದು ಸಣ್ಣ ಮರಡಿ ಇದಾಗಿದ್ದು ಸಾಲು ಗುಡ್ಡಗಳಲ್ಲಿ ಈ ಜಾಗದಲ್ಲಿ ಮಾತ್ರ ಗಾಳಿಯಂತ್ರವನ್ನು ದೇವಾಲಯದ ಕಾರಣಕ್ಕೆ ಅಳವಡಿಸಲಾಗಿಲ್ಲ. ದೇವಾಲಯದ ಬಳಿಯವರೆಗೂ ವಾಹನವನ್ನು ಸಾಗಬಹುದಾದ ಕಚ್ಚಾ ರಸ್ತೆ ಇದೆ.
ಇದು ಒಂದು ಮಧ್ಯಮ ಗಾತ್ರದ ಬೆಟ್ಟವಾಗಿದ್ದು ಇದರ ಮೇಲೆ ಇರುವ ಋಷ್ಯ ಶೃಂಗೇಶ್ವರ ಸ್ವಾಮಿ ದೇವಾಲಯವು ಭಕ್ತರ ನೆಚ್ಚಿನ ತಾಣವಾಗಿದೆ. ಹಿಂದೆ ಇಲ್ಲಿ ನೆಲೆಸಿದ ಸ್ವಾಮಿಗಳು ಇದನ್ನು ಆಧ್ಯಾತ್ಮಿಕ, ಭಕ್ತಿಯ ಕೇಂದ್ರವನ್ನಾಗಿ ಮಾಡಿದರು.
ಕಿಲೋಮಿಟರ್ ಗಟ್ಟಲೆ ದೂರದಿಂದಲೇ ಈ ದೇವಾಲಯವಿರುವ ಗುಡ್ಡ ಗೋಚರಿಸುತ್ತದೆ.
ಹಿಂದೆಲ್ಲ ಇಲ್ಲಿಗೆ ಭಕ್ತರು ನಡೆದೇ ಬರಬೇಕಾಗಿತ್ತು. ಆದರೆ ಇಂದು ದೇವಾಲಯದ ಹತ್ತಿರದವರೆಗೂ ವಾಹನಗಳು ಹೋಗಬಹುದಾದಂತಹ ರಸ್ತೆ ನಿರ್ಮಿಸಲಾಗಿದೆ. ಈ ಸ್ಥಳವು ಮುಖ್ಯರಸ್ತೆಯಿಂದ ಪೂರ್ವಕ್ಕೆ ಮೂರು ಕಿಲೋಮೀಟರ್ ದೂರದಲ್ಲಿದೆ.
ಹತ್ತಿರದ ಗ್ರಾಮಗಳ ಜನರು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ ಹಾಗೂ ಇಲ್ಲಿಯೇ ನೂತನವಾಗಿ ನಿರ್ಮಿಸಲಾಗಿರುವ ಸಭಾಭವನದಲ್ಲಿ ಪರೇವು ಆಚರಣೆ, ಅಡುಗೆ ಪ್ರಸಾದ ಸದಾಕಾಲ ನಡೆಯುತ್ತಲೇ ಇರುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.
ಕುರುಚಲು ಕಾಡು ಇಲ್ಲಿ ಮುಖ್ಯವಾಗಿ ಕಂಡು ಬಂದರೂ ಮಳೆಗಾಲದ ನಂತರ ಬರುವ ಹಿಂಗಾರು ಮಳೆಗೆ ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಮೈ ತುಂಬಿಕೊಂಡು ಮಲೆನಾಡನ್ನು ಮೀರಿಸುವಂತೆ ಹಸಿರಿನಿಂದ ಕಂಗೊಳಿಸುತ್ತದೆ.
ಈ ಪ್ರದೇಶದಲ್ಲಿ ಅಷ್ಟಾಗಿ ಎತ್ತರದ ಮರ ಗಿಡಗಳು ಕಂಡುಬರುವುದಿಲ್ಲ.
ಇರುವ ಕುರುಚಲು ಕಾಡು ಪ್ರದೇಶವೇ ಕಿಲೋಮೀಟರ್ ಗಟ್ಟಲೆ ಹರಡಿಕೊಂಡಿದೆ,
ಮುಖ್ಯ ರಸ್ತೆಯಿಂದ ಗುಡ್ಡದ ತುದಿಯವರೆಗೂ ವಿಶಾಲವಾದ ರಸ್ತೆ ಇರುವ ಕಾರಣ ನಡೆದುಕೊಂಡು ಬಂದರೆ ಪ್ರಕೃತಿಯನ್ನು ಆಸ್ವಾದಿಸಬಹುದು.
ದೇವಾಲಯದ ಮುಂಭಾಗದಿಂದ ದೂರ ದೂರದವರೆಗೆ ಹರಡಿರುವ ವಿಶಾಲವಾದ ಭೂಪ್ರದೇಶ, ಅಲ್ಲಲ್ಲಿ ಹರಡಿಕೊಂಡಿರುವ ಬೃಹತ್ ಕೆರೆಗಳು,ದೂರದಲ್ಲಿ ಕಾಣುವ ಗ್ರಾಮಗಳು, ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಹರಡಿಕೊಂಡಿರುವ, ಗುಡ್ಡ ಸಾಲುಗಳನ್ನು ಗಮನಿಸಬಹುದು.
ಬೆಟ್ಟದ ಮೇಲ್ಭಾಗದಿಂದ ಅತ್ಯಂತ ರಮಣೀಯವಾಗಿ ಪ್ರಕೃತಿಯು ಗೋಚರಿಸುತ್ತದೆ. ಬೆಳಗಿನ ಹಾಗೂ ಸಂಜೆಯ ಸಮಯ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ.ಇಲ್ಲಿಂದ
ಸೂರ್ಯಸ್ತಮಾನ, ಸೂರ್ಯೋದಯ ಅತ್ಯಂತ ಸುಂದರವಾಗಿ ಗೋಚರಿಸುತ್ತದೆ. ಮರೆಯಲಾರದ ಆಧ್ಯಾತ್ಮಿಕ ಅನುಭೂತಿ ಪಡೆಯಬಹುದು.







