ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಸಂಪೂರ್ಣ ಒಣ ಭೂಪ್ರದೇಶ ಹೊಂದಿರುವ ಒಂದು ತಾಲೂಕಾಗಿದೆ.ಆದರೆ ಇಲ್ಲಿನ ಬುಕ್ಕಾಪಟ್ಟಣ ಹೋಬಳಿಯು ಬಯಲುಸೀಮೆಯಾದರೂ ಕುರುಚಲು ಕಾಡು ವ್ಯಾಪಿಸಿದ ಒಂದು ಬೃಹತ್ತಾದ ಪ್ರದೇಶವಾಗಿದೆ. ಇದು ಮುಂದೆ ಚಿಕ್ಕನಾಯಕನಹಳ್ಳಿ ತಾಲೂಕು, ಹೊಸದುರ್ಗ, ಹಿರಿಯೂರು ತಾಲೂಕಿನವರೆಗೂ ವ್ಯಾಪಿಸಿದೆ. ಇಂತಹ ಪ್ರದೇಶದಲ್ಲಿ ಕಂಡುಬರುವ ಒಂದು ಅಪರೂಪದ ಪ್ರವಾಸಿ ತಾಣವೇ ಮರಡಿ ಬೆಟ್ಟ. ಮರಡಿ ಎಂದರೆ ಸಣ್ಣ ಬೆಟ್ಟವೆಂದು ಲೆಕ್ಕವಿದ್ದರೂ ಕೂಡ ಇದು ಸಣ್ಣ ಬೆಟ್ಟವಲ್ಲ.
ಬದಲಿಗೆ ಸಮತಟ್ಟು ಭೂಪ್ರದೇಶದಲ್ಲಿ ಒಂದು ಮಧ್ಯಮ ಗಾತ್ರದ ಬೆಟ್ಟವಾಗಿದ್ದು ಇದರ ಮೇಲೆ ಇರುವ ಮರಡಿ ರಂಗನಾಥ ಸ್ವಾಮಿ ದೇವಾಲಯವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.ಕಿಲೋಮಿಟರ್ ಗಟ್ಟಲೆ ದೂರದಿಂದಲೇ ಈ ದೇವಾಲಯವಿರುವ ಗುಡ್ಡ ಗೋಚರಿಸುತ್ತದೆ.
ಹಿಂದೆಲ್ಲ ಇಲ್ಲಿಗೆ ಪ್ರವಾಸಿಗರು ಭಕ್ತರು ನಡೆದೇ ಬರಬೇಕಾಗಿತ್ತು. ಆದರೆ ಇಂದು ದೇವಾಲಯದ ಹತ್ತಿರದವರೆಗೂ ವಾಹನಗಳು ಹೋಗಬಹುದಾದಂತಹ ರಸ್ತೆ ನಿರ್ಮಿಸಲಾಗಿದೆ. ಈ ಸ್ಥಳವು ಶಿರಾ – ಹುಳಿಯಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಕಂಬದಹಳ್ಳಿ ಗೇಟ್ನಿಂದ ಎಡಭಾಗಕ್ಕೆ 4 ಕಿ.ಮೀ ಹಾಗೂ ಶಿರಾದಿಂದ 18 ಕಿಲೋಮೀಟರ್ ದೂರದಲ್ಲಿದೆ.
ಹತ್ತಿರದ ಗ್ರಾಮವಾದ ರಂಗನಾಥಪುರ, ಗುಡ್ಡದ ರಂಗನಹಳ್ಳಿ..ಈ ದೇವರ ಹೆಸರಿನಿಂದ ಕರೆಯಲ್ಪಟ್ಟಿದೆ. ಶಿರಾ ತಾಲೂಕಿನ ಒಂದು ಪ್ರವಿತ್ರ ಹಾಗೂ ಪ್ರಸಿದ್ಧ ದೇವಾಲಯವಾದ ಈ ಜಾಗಕ್ಕೆ ನೂರಾರು ಊರುಗಳ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ. ಭಕ್ತರ ಮನೆಯಲ್ಲಿ ಕಡ್ಡಾಯವಾಗಿ ಈ ದೇವರ ಫೋಟೋ ಇದ್ದೇ ಇರುತ್ತದೆ. ಈ ದೇವರನ್ನು ತಮ್ಮ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಪ್ರತಿ ಶನಿವಾರ, ಭಾನುವಾರ ದೇವಾಲಯವು ಭಕ್ತರಿಂದ ತುಂಬಿ ತುಳುಕುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.
ಕುರುಚಲು ಕಾಡು ಇಲ್ಲಿ ಮುಖ್ಯವಾಗಿ ಕಂಡು ಬಂದರೂ ಮಳೆಗಾಲ ಅದರ ನಂತರ ಬರುವ ಹಿಂಗಾರು ಮಳೆಗೆ ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಮೈ ತುಂಬಿಕೊಂಡು ಮಲೆನಾಡನ್ನು ಮೀರಿಸುವಂತೆ ಹಸಿರಿನಿಂದ ಕಂಗೊಳಿಸುತ್ತದೆ. ಈ ಪ್ರದೇಶದಲ್ಲಿ ಅಷ್ಟಾಗಿ ಎತ್ತರದ ಮರ ಗಿಡಗಳು ಕಂಡುಬರುವುದಿಲ್ಲ. ಇರುವ ಕುರುಚಲು ಕಾಡು ಪ್ರದೇಶವೇ ಕಿಲೋಮೀಟರ್ ಗಟ್ಟಲೆ ಹರಡಿಕೊಂಡಿದೆ, ಸಿರಾ ತಾಲೂಕಿನ ಏಕೈಕ ಪ್ರಕೃತಿ ನಿರ್ಮಿತ ನಿಸರ್ಗಧಾಮ ಇದಾಗಿದೆ.
ಜೊತೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ ಆನೆ ಕಾರಿಡಾರ್ ಹಾಗೂ ಬುಕ್ಕಾಪಟ್ಟಣ ಸಂರಕ್ಷಿತ ಅರಣ್ಯ ಪ್ರದೇಶವು ಇದರ ಬಳಿಯಲ್ಲಿಯೇ ಬರುತ್ತದೆ.
ಅಪರೂಪದ ಜಿಂಕೆ ಪ್ರಭೇದವನ್ನು ಕೂಡ ಇಲ್ಲಿ ಗಮನಿಸಬಹುದು. ಒಂದು ದಿನದ ಪಿಕ್ನಿಕ್ ತಾಣವಾದ ಇಲ್ಲಿಗೆ ಸಂಸಾರ ಸಮೇತರಾಗಿ, ಸ್ನೇಹಿತರ ಜೊತೆಗೆ ಬಂದರೆ ಮರೆಯಲಾಗದ ಅನುಭವ ಪಡೆಯಬಹುದು. ಒಂದು ದಿನದ ಮಟ್ಟಿಗೆ ವಾಹನದ ಭರಾಟೆ, ಜನ ಜಂಗುಳಿ, ಗದ್ದಲ ಗಲಾಟೆಯಿಂದ ಹೊರಬಂದು ಪ್ರಕೃತಿಯ ಜೊತೆಗೆ ಕಳೆಯಬೇಕೆನ್ನುವರು ಇಲ್ಲಿಗೆ ಭೇಟಿ ನೀಡಬಹುದು. ಇಡೀ ದಿನ ಇಲ್ಲಿ ಸಮಯ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ.
ಮುಖ್ಯ ರಸ್ತೆಯಿಂದ ಇಲ್ಲಿಗೆ ವಾಹನದ ವ್ಯವಸ್ಥೆ ಇರುವುದಿಲ್ಲ. ಸಿರಾ, ಹುಳಿಯಾರು ಪಟ್ಟಣಗಳಿಂದ ಹತ್ತಾರು ಖಾಸಗಿ ಸರ್ಕಾರಿ ಬಸ್ ಗಳು ಮುಖ್ಯ ರಸ್ತೆಯಲ್ಲಿ ಜೊತೆಗೆ ನೂರಾರು ವಾಹನಗಳು ಪ್ರತಿದಿನ ಸಂಚರಿಸುತ್ತವೆ.
ಸ್ವಂತ ವಾಹನದಲ್ಲಿಯೇ ಬರಬೇಕಾಗುತ್ತದೆ. ಆದರೂ ಮುಖ್ಯ ರಸ್ತೆಯಿಂದ ಗುಡ್ಡದ ತುದಿಯವರೆಗೂ ವಿಶಾಲವಾದ ರಸ್ತೆ ಇರುವ ಕಾರಣ ನಡೆದುಕೊಂಡು ಬಂದರೆ ಪ್ರಕೃತಿಯನ್ನು ಆಸ್ವಾದಿಸಬಹುದು. ಅಪರೂಪದ ಸಸ್ಯ ಸಂಕುಲ ಪಕ್ಷಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು.
ಗುಡ್ಡದ ಮೇಲ್ಭಾಗದಲ್ಲಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನವಿದ್ದು ಬಂದ ಭಕ್ತರಿಗೆ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಬಂದ ಭಕ್ತರಿಗೆ ಆಯಾಸ ಪರಿಹರಿಸಿಕೊಳ್ಳಲು ವಿಶಾಲವಾದ ಪ್ರಾಂಗಣ ಹಾಗೂ ವಿಶಾಲವಾಗಿ ಹರಡಿರುವ ಆಲದ ಮರವು ಇದ್ದು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಕೂಡ ಎಲ್ಲವನ್ನು ಮರೆತು ಪ್ರಕೃತಿಯಲ್ಲಿ ಲೀನವಾಗುವುದರಲ್ಲಿ ಅನುಮಾನವಿಲ್ಲ.
ದೇವಾಲಯದ ಮುಂಭಾಗದಿಂದ ದೂರ ದೂರದವರೆಗೆ ಹರಡಿರುವ ವಿಶಾಲವಾದ ಭೂಪ್ರದೇಶ, ಅಲ್ಲಲ್ಲಿ ಹರಡಿಕೊಂಡಿರುವ ಬೃಹತ್ ಕೆರೆಗಳು,ದೂರದಲ್ಲಿ ಕಾಣುವ ಗ್ರಾಮಗಳು, ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಹರಡಿಕೊಂಡಿರುವ, ಗುಡ್ಡ ಸಾಲುಗಳನ್ನು ಗಮನಿಸಬಹುದು.
ಬೆಟ್ಟದ ಮೇಲ್ಭಾಗದಿಂದ ಅತ್ಯಂತ ರಮಣೀಯವಾಗಿ ಪ್ರಕೃತಿಯು ಗೋಚರಿಸುತ್ತದೆ. ಬೆಳಗಿನ ಹಾಗೂ ಸಂಜೆಯ ಸಮಯ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ. ಪ್ರಕೃತಿಯಲ್ಲಿ ದೇವರಿದ್ದಾನೆ ಎಂಬುದನ್ನು ಇಲ್ಲಿನ ದೇವಾಲಯವು ಸಾರುತ್ತದೆ. ಈ ದೇವಾಲಯವು ವಿಜಯನಗರ ಕಾಲದ ನಿರ್ಮಾಣವಾಗಿದೆ. ದೇವಾಲಯಗವು ಸಮೀಪದ ಭೂಪ್ರದೇಶದ ಮಟ್ಟದಿಂದ ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಪ್ರಕೃತಿಯ ಮಡಿಲಲ್ಲಿ ರಮಣೀಯ ಚೇತೋಹಾರಿಯಾದ ಸುಂದರ ವನಗಳ ಮಧ್ಯದಲ್ಲಿ ರಾರಾಜಿಸುತ್ತಿದೆ. ಭಗವಂತನ ದಿವ್ಯ ಸಾನಿಧ್ಯಕ್ಕೆ ಸೋಪಾನದಂತಿದೆ. ಎಂತಹ ನೂರಾರು ಚಿಂತೆಗಳಿಂದ ಇಲ್ಲಿಗೆ ಬಂದರೂ ಕೂಡ ಕ್ಷಣಮಾತ್ರದಲ್ಲಿ ಇಲ್ಲಿನ ವಾತಾವರಣ ಮಾನವನ ಮನಸ್ಸನ್ನು ಬದಲಾಯಿಸಿ ಶಾಂತ ಸ್ಥಿತಿಗೆ ತಂದುಬಿಡುತ್ತದೆ.ಪ್ರಕೃತಿಯ ಮಡಿಲಿನಲ್ಲಿರುವ ಒಂದು ದಿವ್ಯ ಕ್ಷೇತ್ರ ಇದಾಗಿದೆ.







