ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ತುಮಕೂರು ಜಿಲ್ಲೆಯು ಕಲ್ಪತರು ನಾಡು ಎಂದು ಪ್ರಸಿದ್ಧಿ ಪಡೆದಿದ್ದರೂ ಜಿಲ್ಲೆಯ ಉತ್ತರ ಭಾಗ ಸಂಪೂರ್ಣವಾಗಿ ಕುರುಚಲು ಹಾಗೂ ಬೆಟ್ಟ ಪ್ರದೇಶಗಳಿಂದ ಆವೃತವಾಗಿದ್ದು ಕೊರಟಗೆರೆ ತಾಲೂಕಿನಲ್ಲಿ ಶುರುವಾಗಿ ಮುಂದೆ ಚನ್ನರಾಯನದುರ್ಗ, ಮಧುಗಿರಿ, ಪಾವಗಡ.. ದವರೆಗೂ ಬೆಟ್ಟಸಾಲುಗಳು ಕಂಡು ಬರುತ್ತವೆ. ಕೊರಟಗೆರೆ ತಾಲೂಕು ಸಂಪೂರ್ಣ ಒಣ ಭೂಪ್ರದೇಶ ಹೊಂದಿರುವ ಒಂದು ತಾಲೂಕಾಗಿದೆ.ಆದರೆ ಇಲ್ಲಿನ ಚನ್ನರಾಯನದುರ್ಗ
ಹೋಬಳಿಯು ಬಯಲುಸೀಮೆಯಾದರೂ ಕುರುಚಲು ಕಾಡು ವ್ಯಾಪಿಸಿದ ಒಂದು ಬೃಹತ್ತಾದ ಪ್ರದೇಶವಾಗಿದೆ.
ಇಂತಹ ಪ್ರದೇಶದಲ್ಲಿ ಕಂಡುಬರುವ ಒಂದು ಅಪರೂಪದ ಪ್ರವಾಸಿ ತಾಣವೇ ಸಿದ್ಧರಬೆಟ್ಟ.
ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದ್ದು ಭಕ್ತರು,ಆಧ್ಯಾತ್ಮಿಕ ಒಲವುಳ್ಳವರು, ನಿಸರ್ಗವನ್ನು ಪ್ರೀತಿಸುವವರು, ಪ್ರಕೃತಿಯನ್ನು ಬಯಸುವವರು, ಪ್ರಕೃತಿಯನ್ನು ಆರಾಧಿಸುವವರು, ಹೊಸ ಸ್ಥಳವನ್ನು ನೋಡ ಬಯಸುವವರು..ಎಲ್ಲರಿಗೂ ಈ ಸ್ಥಳವು ಅಚ್ಚುಮೆಚ್ಚಿನ ಜಾಗವಾಗಿದೆ. ತುಮಕೂರಿನಿಂದ 32 ಕಿ.ಮೀ ಹಾಗೂ ಬೆಂಗಳೂರಿನಿಂದ 100 ಕಿಲೋಮೀಟರ್ ದೂರವಿರುವ ಸಿದ್ದರಬೆಟ್ಟವು ನಿಸರ್ಗ ಸೌಂದರ್ಯದಿಂದ ಹಾಗೂ ಅಲ್ಲಿರುವ ಅಪರೂಪದ ಗಿಡಮೂಲಿಕೆಗಳ ಔಷಧಿಯ ಸಸ್ಯಗಳ ಆಗರಗಳಿಂದ ಪ್ರಸಿದ್ಧಿ ಪಡೆದಿದೆ.
ಇಲ್ಲಿರುವ ಅಪರೂಪದ ಔಷಧೀಯ ಸಸ್ಯಗಳನ್ನು ಇತರೆಡೆ ಕಂಡು ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಸಿದ್ಧರಬೆಟ್ಟವೆಂದರೆ ಹೆಸರೇ ಹೇಳುವಂತೆ ಸಿದ್ಧರು ನೆಲೆಸಿದ ಬೆಟ್ಟವಿರುವ ಸ್ಥಳ ಇದಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3600ಅಡಿ ಎತ್ತರವಿರುವ ಈ ಬೆಟ್ಟವನ್ನು ತಲುಪಲು ಕಾಲುನಡಿಗೆಯಿಂದ ಮಾತ್ರವೇ ಸಾಧ್ಯ.
ಕೆಳಭಾಗದಿಂದ ಮೇಲಿನ ತುದಿಗೆ ತಲುಪಲು ಸರಿ ಸುಮಾರು 45-60 ನಿಮಿಷಗಳು ಬೇಕಾಗುತ್ತದೆ. ಬೆಟ್ಟದ ಹಾದಿಯನ್ನು ನಾಲ್ಕು ವಿಧದಲ್ಲಿ ನಾವು ವಿಭಾಗಿಸಿದರೆ ಅದರಲ್ಲಿ ಮೊದಲಿಗೆ ಕಲ್ಲು ಮೆಟ್ಟಲುಗಳು, ಎರಡನೆಯ ಹಂತದಲ್ಲಿ ನೈಸರ್ಗಿಕ ಬಂಡೆಗಳನ್ನು ಕೊರೆದು ಮೆಟ್ಟಿಲು ಮಾಡಿರುವುದು,ನಂತರ ಕಾಡುಗಲ್ಲುಗಳ ಕಲ್ಲು ಹಾದಿ,ಕೊನೆಗೆ ನೈಸರ್ಗಿಕ ಬಂಡೆ ಗವಿಗಳ ದಾರಿ.. ಹೀಗೆ ಈ ವಿಧಾನದಲ್ಲಿ ನಾವು ನಡೆದು ಮೇಲ್ಬಾಗದ ಗವಿಯಲ್ಲಿರುವ ಸಿದ್ಧರು ನೆಲೆಸಿದ ತಪಸ್ಸು ಮಾಡಿದ ಸ್ಥಳವನ್ನು ಕಾಣಬಹುದು. ಇಲ್ಲಿ ಒಂದು ನೈಸರ್ಗಿಕ ನೀರಿನ ಸೆಲೆ ಇರುವ ಬಾವಿ ಇದ್ದು ಎಂತಹ ಸಮಯದಲ್ಲೂ ಕೂಡ ಇಲ್ಲಿ ನೀರು ಬತ್ತಿದ ನಿದರ್ಶನವಿಲ್ಲ.
ಈ ನೀರು ಅತ್ಯಂತ ಸ್ಪಟಿಕ ಶುಭ ನೀರಾಗಿದ್ದು ಗಿಡಮೂಲಿಕೆ ಔಷಧಿಗಳ ಆಗರವಾಗಿದೆ.ಇದರಲ್ಲಿ ಸ್ನಾನ ಮಾಡಿ ನಂತರ ಇಲ್ಲಿರುವ ಶಿವಲಿಂಗದ ದರ್ಶನ ಪಡೆದರೆ ನಿಜಕ್ಕೂ ಈ ಜನ್ಮವೇ ಸಾರ್ಥಕ ಎನ್ನಿಸುತ್ತದೆ. ಈ ಶುದ್ಧ ನೀರಿನಲ್ಲಿ ಸ್ನಾನ ಮಾಡಿದಾಗ ಮೈಯೆಲ್ಲಾ ಒಂದು ರೀತಿಯಲ್ಲಿ ವಿಶೇಷ ಅನುಭವ ಪಡೆದಂತಾಗಿದ್ದು ಜಡತ್ವವೇ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ. ಬೆಟ್ಟದ ತುದಿಯಲ್ಲಿರುವ ಗವಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ಲಿಂಗ ರೂಪಿಯಲ್ಲಿದ್ದು ಪ್ರತಿ ಸೋಮವಾರ ಹಾಗೂ ಶಿವರಾತ್ರಿ ಸಮಯದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಧಾರ್ಮಿಕ ಕ್ಷೇತ್ರವಾದ ಈ ಸ್ಥಳವು ವಿವಿಧ ಔಷಧಿ ಗಿಡಮೂಲಿಕೆಗಳಿಗೆ ಪ್ರಸಿದ್ಧವಾಗಿದೆ.
ಪ್ರತಿ ಶನಿವಾರ, ಭಾನುವಾರ ದೇವಾಲಯವು ಭಕ್ತರಿಂದ ತುಂಬಿ ತುಳುಕುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಕುರುಚಲು ಕಾಡು ಇಲ್ಲಿ ಮುಖ್ಯವಾಗಿ ಕಂಡು ಬಂದರೂ ಮಳೆಗಾಲದ ನಂತರ ಬರುವ ಹಿಂಗಾರು ಮಳೆಗೆ ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಮೈ ತುಂಬಿಕೊಂಡು ಮಲೆನಾಡನ್ನು ಮೀರಿಸುವಂತೆ ಹಸಿರಿನಿಂದ ಕಂಗೊಳಿಸುತ್ತದೆ. ಈ ಪ್ರದೇಶದಲ್ಲಿ ಇರುವ ಕುರುಚಲು ಕಾಡು ಪ್ರದೇಶವೇ ಕಿಲೋಮೀಟರ್ ಗಟ್ಟಲೆ ಹರಡಿಕೊಂಡಿದೆ,
ಸಂರಕ್ಷಿತ ಸ್ಥಳವಾದ ಇಲ್ಲಿ ಅಪರೂಪದ ಜೀವಿ ಜೀವವೈವಿಧ್ಯ, ನೂರಾರು ಜಾತಿಯ ಪಕ್ಷಿಗಳನ್ನು
ಅಪರೂಪದ ಪ್ರಭೇದವನ್ನು ಕೂಡ ಇಲ್ಲಿ ಗಮನಿಸಬಹುದು.
ಒಂದು ದಿನದ ಪಿಕ್ನಿಕ್ ತಾಣವಾದ ಇಲ್ಲಿಗೆ ಸಂಸಾರ ಸಮೇತರಾಗಿ, ಸ್ನೇಹಿತರ ಜೊತೆಗೆ ಬಂದರೆ ಮರೆಯಲಾಗದ ಅನುಭವ ಪಡೆಯಬಹುದು.
ಪ್ರಕೃತಿಯ ಜೊತೆಗೆ ಕಾಲ ಕಳೆಯಬೇಕೆನ್ನುವರು ಇಲ್ಲಿಗೆ ಭೇಟಿ ನೀಡಬಹುದು. ಇಡೀ ದಿನ ಇಲ್ಲಿ ಸಮಯ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ. ಮುಖ್ಯ ರಸ್ತೆಯಿಂದ ಇಲ್ಲಿಗೆ ಉತ್ತಮ ರಸ್ತೆ ಹಾಗೂ ಸರ್ಕಾರಿ ಖಾಸಗಿ ಬಸ್ ಹಾಗೂ ಆಟೋ ವ್ಯವಸ್ಥೆ ಇರುತ್ತದೆ.
ನಡೆದುಕೊಂಡು ಬರುವಾಗ ಪ್ರಕೃತಿಯನ್ನು ಆಸ್ವಾದಿಸಬಹುದು. ಅಪರೂಪದ ಸಸ್ಯ ಸಂಕುಲ ಪಕ್ಷಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು.
ಬಂದ ಭಕ್ತರಿಗೆ ಬೆಟ್ಟದ ಕೆಳಭಾಗದಲ್ಲಿ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಬಂದ ಭಕ್ತರಿಗೆ ಆಯಾಸ ಪರಿಹರಿಸಿಕೊಳ್ಳಲು ವಿಶಾಲವಾದ ಪ್ರಾಂಗಣ ಹಾಗೂ ವಿಶಾಲವಾಗಿ ವಸತಿಗೃಹಗಳು ಕೂಡ ಲಭ್ಯವಿದೆ. ಬೆಟ್ಟದ ಮೇಲ್ಭಾಗದಿಂದ ನಿಂತು ನೋಡಿದಾಗ ದೂರ ದೂರದವರೆಗೆ ಹರಡಿರುವ ವಿಶಾಲವಾದ ಭೂಪ್ರದೇಶ, ಅಲ್ಲಲ್ಲಿ ಹರಡಿಕೊಂಡಿರುವ ಬೃಹತ್ ಕೆರೆಗಳು,ದೂರದಲ್ಲಿ ಕಾಣುವ ಗ್ರಾಮಗಳು, ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಹರಡಿಕೊಂಡಿರುವ, ಗುಡ್ಡ ಸಾಲುಗಳನ್ನು ಗಮನಿಸಬಹುದು.
ಬೆಟ್ಟದ ಮೇಲ್ಭಾಗದಿಂದ ಅತ್ಯಂತ ರಮಣೀಯವಾಗಿ ಪ್ರಕೃತಿಯು ಗೋಚರಿಸುತ್ತದೆ. ಬೆಳಗಿನ ಹಾಗೂ ಸಂಜೆಯ ಸಮಯ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ.
ಪ್ರಕೃತಿಯ ಮಡಿಲಲ್ಲಿ ರಮಣೀಯ ಸುಂದರ ವನಗಳ ಮಧ್ಯದಲ್ಲಿ ರಾರಾಜಿಸುತ್ತಿದೆ. ಪ್ರಕೃತಿಯ ಮಡಿಲಿನಲ್ಲಿರುವ ಒಂದು ದಿವ್ಯ ಕ್ಷೇತ್ರ ಇದಾಗಿದೆ.
ಪೌರಾಣಿಕ ಹಿನ್ನೆಲೆ:
ಸಿದ್ಧರ ಬೆಟ್ಟವು ಪೌರಾಣಿಕ ಹಿನ್ನೆಲೆಯಲ್ಲಿ ಹಿಂದೆ ರಾಮಾಯಣ ಕಾಲದಲ್ಲಿ ಲಕ್ಷ್ಮಣನ್ನು ಬಾಣದಿಂದ ಗಾಯಗೊಂಡು ಮೂರ್ಛೆ ಹೋದಾಗ ಹನುಮಂತನು ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋಗುವಾಗ ಅದರಲ್ಲಿ ಇದ್ದ ಕೆಲವು ಗಿಡಗಳು ಈ ಜಾಗದಲ್ಲಿ ಉದುರಿ ನಂತರ ಉದುರಿದ ಗಿಡಮೂಲಿಕೆಗಳು ಈ ಬೆಟ್ಟದಲ್ಲಿ ಬೆಳೆದವು ಎನ್ನುವ ನಂಬಿಕೆಯಿದೆ.
ಇದು ಶಿವಯೋಗಿ ಸಿದ್ದೇಶ್ವರರ ತಪೋ ಭೂಮಿಯಾಗಿದ್ದು ಗುಹೆಯೊಳಗೆ ಸಿದ್ದೇಶ್ವರರ ಗದ್ದುಗೆ ಇದ್ದು ಹಿಂದೆ ಅವರು ಈ ಸ್ಥಳದಲ್ಲಿ ಧ್ಯಾನಯೋಗ ನಡೆಸಿದ್ದರು.
ಯೋಗಿ ಮುನಿಗಳ ಹಾಗೂ ಅವರ ಅನುಯಾಯಿಗಳ ಕೆಲ ಶತಾಯುಷಿಗಳು ಈಗಲೂ ಇಲ್ಲಿ ಕಾಣಬಹುದು.
1802 ರಲ್ಲಿ ಇಲ್ಲಿಗೆ ಆಗಮಿಸಿದ್ದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಖಾನನ್ ತನ್ನ ಬರಹದಲ್ಲಿ ಸಿದ್ದರಬೆಟ್ಟ ಹಾಗೂ ಇಲ್ಲಿನ ನದಿ ಮೂಲ ಸುತ್ತಲೂ ತುಂಬಿ ತುಳುಕುತ್ತಿದ್ದ ಕೆರೆಗಳ ಸೊಬಗು ಕುರಿತು ವರ್ಣಿಸಿದ್ದಾನೆ .
ಇಲ್ಲಿ ಬೆಟ್ಟದ ಕೆಳಭಾಗದಲ್ಲಿ ಸಿದ್ದೇಶ್ವರ ದೇವಾಲಯವಿದೆ, ಬೆಟ್ಟವನ್ನು ಹತ್ತಲಾಗದವರು ಇಲ್ಲಿಯೇ ದರ್ಶನ ಪಡೆಯಬಹುದು.
ಬೆಟ್ಟದ ಕೆಳಭಾಗದಲ್ಲಿ ಅನ್ನ ದಾಸೋಹ ಭವನವಿದ್ದು ಪ್ರತಿನಿತ್ಯ ಅನ್ನದಾನ ನಡೆಯುತ್ತದೆ.
*ಬೆಂಗಳೂರು -ಸಿರಾ ಮಧ್ಯದ ನೆಲಹಾಲ್ ನಿಂದ ಪೂರ್ವಕ್ಕೆ 18 ಕಿಲೋಮೀಟರ್.
*ತುಮಕೂರು – ತುಂಬಾಡಿ -ಸಿದ್ದರಬೆಟ್ಟ.
*ತುಮಕೂರು- ಚಿಕ್ಕ ತೊಟ್ಲು ಕೆರೆ – ನೇಗಿಲಾಲ- ಸಿದ್ದರಬೆಟ್ಟ. ಮಳೆಗಾಲದ ನಂತರ ಇಲ್ಲಿಗೆ ಹೋದರೆ ಅತ್ಯುತ್ತಮ. ಈ ಎಲ್ಲಾ ಮಾರ್ಗಗಳಿಂದ ಸಿದ್ಧರಬೆಟ್ಟ ತಲುಪಬಹುದು. ಊಟ ತಿಂಡಿಗೆ ಹತ್ತಾರು ಸಣ್ಣಪುಟ್ಟ ಹೋಟೆಲ್ ಗಳಿವೆ.




