ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್
ಹೇಮಾವತಿ ಗ್ರಾಮವು ಅಮರಾಪುರ ಮಂಡಲ, ಮಡಕಶಿರಾ ತಾಲೂಕು, ಶ್ರೀ ಸತ್ಯಸಾಯಿ ಜಿಲ್ಲೆ, ಆಂಧ್ರಪ್ರದೇಶ ಇಲ್ಲಿಗೆ ಸೇರಿದ್ದರೂ ಕರ್ನಾಟಕದ ಗಡಿಯಿಂದ ಕೇವಲ 4-5 ದೂರದಲ್ಲಿರುವ ಅಚ್ಚ ಕನ್ನಡ ಪ್ರದೇಶವಾಗಿದೆ.
ಇಲ್ಲಿರುವ ಹೆಂಜೇರು ಸಿದ್ದೇಶ್ವರನನ್ನು ಜನಪದರು ಹೆಂಜೇರಪ್ಪ, ಹೆಂಜಾರಪ್ಪ, ಯಂಜಾರಪ್ಪ, ಹೆಂಜಾರ ಸಿದ್ದಪ್ಪ, ಹೆಂಜಾರು ಸಿದ್ದೇಶ್ವರ ಮುಂತಾದ ಹೆಸರುಗಳಿಂದ ಆರಾಧಿಸುತ್ತಾರೆ. ಈಗ ಹೇಮಾವತಿ ಎಂಬ ಹೆಸರಿನಿಂದ ಕರೆಯಲಾಗುತ್ತಿರುವ ಈ ಊರನ್ನು ಹೆಂಜೇರು (ಕನ್ನಡ) – ಪೆಂಜೇರು ಅಥವಾ ಪೆರುಂಚೇರೈ (ತಮಿಳು) ಹೆಸರುಗಳಿಂದ ಕರೆಯಲಾಗುತ್ತಿತ್ತೆಂದು ಇಲ್ಲಿನ ಸ್ಥಳನಾಮ ಚರಿತ್ರೆಯಿಂದ ತಿಳಿದುಬರುತ್ತದೆ. ಹೆಂಜೇರು ಅಂದರೆ ಅತಿ ಹೆಚ್ಚು ವಿಸ್ತಾರವಾಗಿ ಹಾಗೂ ಬಹುದೂರ ಭೂಪರ್ಯಟನೆ ಮಾಡಿದ ಹಿರೀಕ ಎಂದರ್ಥ.
ಪ್ರಸ್ತುತ ರಾಯಲಸೀಮೆಯ ಸೀಮಾಂಧ್ರಕ್ಕೆ ಸೇರಿರುವ ಹೇಮಾವತಿಯು ಕರ್ನಾಟಕದ ತುಮಕೂರು ಜಿಲ್ಲೆಯ ಗಡಿಭಾಗದಲ್ಲಿದೆ. ಸಂಪೂರ್ಣ ಕನ್ನಡಮಯವಾಗಿರುವ ಇಲ್ಲಿನ ಜನರ ಭಾಷೆ ಆಚಾರ ವಿಚಾರ ವ್ಯವಹಾರ ಆಲೋಚನೆ ಎಲ್ಲವೂ ಕನ್ನಡತನದಿಂದಲೇ ತುಂಬಿಹೋಗಿದೆ. ಇಲ್ಲಿಗೆ ಭೇಟಿ ನೀಡುವ ಯಾವುದೇ ಪ್ರವಾಸಿಗರಿಗೆ ಇದು ಕನ್ನಡ ಭಾಷಿಕ ಕರ್ನಾಟಕದ ನೆಲವೇ ಹೊರತು ತೆಲುಗು ಭಾಷಿಕ ಆಂಧ್ರಪ್ರದೇಶದ ನೆಲವಾಗಿರಲು ಸಾಧ್ಯವೇ ಇಲ್ಲವೆಂಬಂತೆ ಭಾವಿಸುವ ಮಟ್ಟಿಗೆ ಇಲ್ಲಿ ಕನ್ನಡತನದ ವಾತಾವರಣ ಮನೆಮಾಡಿದೆ.
ಇಂತಹ ಹೇಮಾವತಿ ಪಟ್ಟಣವನ್ನು ರಾಜಧಾನಿ ಕೇಂದ್ರವನ್ನಾಗಿ ಮಾಡಿಕೊಂಡು 8 ನೇ ಶತಮಾನದಿಂದ 11 ನೇ ಶತಮಾನದವರೆಗೆ ನೊಳಂಬವಾಡಿ 32,000 ಎಂಬ ವಿಸ್ತಾರವಾದ ಸಾಮ್ರಾಜ್ಯವನ್ನು ನೊಳಂಬರಾಜರು ಆಳಿದ್ದಾರೆ. ಹೇಮಾವತಿ ಪಟ್ಟಣವು ಕರ್ನಾಟಕದ ಈಗಿನ ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರಂ, ಚಿತ್ತೂರು, ಧರ್ಮಪುರಿ ಹಾಗೂ ತಮಿಳುನಾಡಿನ ಕೊಯಮತ್ತೂರು ಜಿಲ್ಲಾ ಪ್ರಾಂತ್ಯಗಳ ರಾಜಧಾನಿ ಕೇಂದ್ರವಾಗಿತ್ತು.
ಈ ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದ ನೊಳಂಬರು ಪಲ್ಲವ ರಾಜವಂಶದ ಮೂಲದವರೆಂದು ಶಾಸನಗಳಲ್ಲಿ ಹೇಳಲಾಗಿದೆ.
ಚಾರಿತ್ರಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಅನೇಕ ವಿಷಯ ವಿಶೇಷಗಳನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ಈ ಪ್ರಸಿದ್ಧ ಶೈವ ಕ್ಷೇತ್ರದಲ್ಲಿ ನೊಳಂಬ ರಾಜರು ಕಪ್ಪು ಗ್ರಾನೈಟ್ ಶಿಲೆಯಲ್ಲಿ ಬೃಹತ್ತಾದ ಐದು ಲಿಂಗಗಳು ಹಾಗೂ ಐದು ನಂದಿಗಳನ್ನು ನಿರ್ಮಿಸಿದ್ದಾರೆ. ಇಲ್ಲಿನ ಕ್ಷೇತ್ರಪಾಲ ದೇವರಾಗಿ ನೆಲೆಸಿರುವ ಶಿವನು *ಹೆಂಜೇರು ಸಿದ್ದೇಶ್ವರ* ಎಂಬ ಹೆಸರಿನಲ್ಲಿ ಗುಡಿಯೊಳಗೆ ನರರೂಪದಲ್ಲಿದ್ದಾನೆ. ಹೇಮಾವತಿಯು ಆಂಧ್ರಪ್ರದೇಶಕ್ಕೆ ಸೇರಿದ್ದರೂ ಕೂಡಾ ಈ ದೇವತೆಯನ್ನು ನೂರಕ್ಕೆ ನೂರರಷ್ಟು ಕನ್ನಡ ನಾಡಿನ ಭಕ್ತರು ಮನೆದೇವರಾಗಿ ಆರಾಧಿಸುತ್ತಿದ್ದಾರೆ. ಈ ಪರಿಸರದ ಅಕ್ಕಪಕ್ಕದ ತಾಲೂಕು,ಜಿಲ್ಲೆಗಳ ಪ್ರತಿ ಮನೆಯಲ್ಲಿಯೂ ಹೆಂಜಾರಪ್ಪ ಹೆಸರಿನ ವ್ಯಕ್ತಿಗಳು ಸಿಗುತ್ತಾರೆ.
ಹೇಮಾವತಿಯಲ್ಲಿ ನೆಲೆಸಿರುವ ಪರಶಿವನು ಚತುರ್ಭುಜ ಮಾನವನ ರೂಪದಲ್ಲಿ ಕಾಣಿಸುತ್ತಾನೆ. ಒಂದು ಕೈನಲ್ಲಿ ತ್ರಿಶೂಲ, ಮತ್ತೊಂದು ಕೈನಲ್ಲಿ ಡಮರುಗ, ಒಂದು ಕೈನಲ್ಲಿ ಕಪಾಲ ಭಿಕ್ಷಾಪಾತ್ರೆ (ಶಿರವೋಡು) ಮತ್ತೊಂದು ಕೈ ಅಭಯ ಹಸ್ತ ಮುದ್ರೆಯನ್ನು ಹೊಂದಿ ಪಾಣಿಪೀಠದ ಮೇಲೆ ಶಾಂತ ವದನನಾಗಿ ಧ್ಯಾನಸ್ಥ ಭಂಗಿಯಲ್ಲಿ ಒಂದು ಕಾಲನ್ನು ಇಳಿಬಿಟ್ಟು ಮತ್ತೊಂದು ಕಾಲನ್ನು ಮಡಚಿಕೊಂಡು ಲಲಿತಾಸನದಲ್ಲಿ ಕುಳಿತಿದ್ದಾನೆ. ವೈರಿಗಳ ಶಿರಗಳ ತರಿದು ರುಂಡಗಳನ್ನೇ ಮಾಲೆ ಧರಿಸಿ ಶಾಂತ ಚಿತ್ತನಾದಂತೆ ಕಾಣಿಸುವ ಸಿದ್ದೇಶ್ವರನ ಎದೆಯ ಮೇಲೆ ರುಂಡಮಾಲೆ ಅಲಂಕರಿಸಿದೆ.
ಎತ್ತರವಾದ ಆಲಯ ಶಿಖರ, ಗುಡಿಯ ಪ್ರವೇಶ ದ್ವಾರದಲ್ಲಿ ಮೂರು ಗೋಪುರಗಳು, ವಿಶಾಲವಾದ ಗುಡಿಪೌಳಿ ಹಾಗೂ ಒಳಭಾಗದಲ್ಲಿರುವ ಮಂಟಪಗಳು, ಗಣಪತಿ ಮತ್ತು ಕಾಲಭೈರವನ ಉಪದೇಗುಲಗಳು ಇಲ್ಲಿದ್ದು ಮಾನವನ ರೂಪದಲ್ಲಿ ಸಿದ್ದೇಶ್ವರನಾಗಿ ನೆಲೆಸಿರುವ ಪರಶಿವನ ಮೂರ್ತಿಯ ಎದುರು ನಂದಿಯ ವಿಗ್ರಹ ಇರುವುದಿಲ್ಲ. ಉಳಿದ ಬಹುತೇಕ ಶಿವದೇವಾಲಯಗಳಲ್ಲಿ ಲಿಂಗರೂಪದ ಶಿವ ಮತ್ತು ನಂದಿಯ ವಿಗ್ರಹಗಳನ್ನು ಎದುರುಬದುರಾಗಿ ಪ್ರತಿಷ್ಠಾಪಿಸಲಾಗಿರುವುದನ್ನು ನಾವು ನೋಡುತ್ತೇವೆ.
ಮುಖ್ಯ ಗುಡಿಯಲ್ಲಿರುವ ಸಿದ್ದೇಶ್ವರನ ಮೂರ್ತಿಯ ಮೇಲೆ ಉತ್ತರಾಯಣ ಸಂಕ್ರಮಣ ಕಾಲದಲ್ಲಿ ಸೂರ್ಯಾಸ್ತಮಾನದ ಕಿರಣಗಳು ನೇರವಾಗಿ ಸಿದ್ದೇಶ್ವರನ ತಲೆಯನ್ನು ಸ್ಪರ್ಶಿಸಿ ಸೂರ್ಯಾಭಿಷೇಕ ಮಾಡುವುದು ಇಲ್ಲಿನ ವಿಶೇಷ.
ಹೆಂಜೇರು ಹೇಮಾವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಖನನ ಮಾಡಿದಾಗ ದೊರಕಿರುವ ಆನೇಕ ಪುರಾತನ ವಿಗ್ರಹಗಳು ಇಂದಿನ ಚೆನ್ನೈನಲ್ಲಿರುವ ಮದ್ರಾಸ್ ಮ್ಯೂಸಿಯಂನಲ್ಲಿವೆ ಎಂದು ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ ಹೇಮಾವತಿಯಲ್ಲಿ ನೊಳಂಬರ ಶಿಲ್ಪಕಲಾ ಸೌಂದರ್ಯ ಮತ್ತು ಕಲಾನೈಪುಣ್ಯವನ್ನು ನೋಡಿ ಮಾರುಹೋದ ರಾಜೇಂದ್ರ ಚೋಳನು
ಹೇಮಾವತಿಯಿಂದ ನಲವತ್ತಕ್ಕೂ ಅಧಿಕ ಸಂಖ್ಯೆಯ ಶಿಲ್ಪಗಳನ್ನು ಹಾಗೂ ಶಿಲಾಕಂಬಗಳನ್ನು ತನ್ನ ಸಾಮ್ರಾಜ್ಯಕ್ಕೆ ಹೊತ್ತೊಯ್ದನೆಂದು ಶಾಸನಗಳು ತಿಳಿಸುತ್ತವೆ.
ಹೇಮಾವತಿಯ ಶಿಲಾಸ್ತಂಬಗಳು, ಶಿವಲಿಂಗಗಳು, ನಂದಿ ವಿಗ್ರಹಗಳು ಹಾಗೂ ಗುಡಿಯ ಮೇಲ್ಚಾವಣಿ ಗವಾಕ್ಷಿ ಮತ್ತು ಕಿಟಕಿಗಳಿಗೆ ಅಳವಡಿಸಿರುವ ಕುಸುರಿ ಕೆತ್ತನೆಯ ಶಿಲ್ಪಗಳು ಕಲಾರಸಿಕರ ಮನಸೂರೆ ಮಾಡುತ್ತವೆ. ಇಂತಹ ಶಿಲ್ಪಸೌಂದರ್ಯದ ಕಾರಣದಿಂದಲೇ ರಾಜೇಂದ್ರ ಚೋಳನು ಇಲ್ಲಿಂದ ತಮಿಳುನಾಡಿಗೆ ಶಿಲಾಸ್ತಂಬಗಳನ್ನು ಹೊತ್ತೊಯ್ದು ತಿರುವಾಡಿ (ತಿರುವಾಡಿಗೈ) ಎಂಬ ಶಿವಾಲಯದಲ್ಲಿ ಶೇಖರಿಸಿದನೆಂದು ಚರಿತ್ರೆ ತಿಳಿಸುತ್ತದೆ.
ಸುಂದರ ಕಲಾಕುಸುರಿಯ ಅನೇಕ ಮೂರ್ತಿ ಶಿಲ್ಪಗಳು, ಲಿಂಗ ಶಿಲ್ಪಗಳು, ಶಿಲಾಕಂಬಗಳು ಮತಧ್ವೇಷದ ದಾಳಿಗೆ ಸಿಲುಕಿ ಮತ್ತು ನಿಧಿಚೋರರಿಂದಾಗಿ ಭಗ್ನಗೊಂಡು ಕೈಕಾಲು ರುಂಡಮುಂಡ ಕತ್ತರಿಸಿ ಚೆಲ್ಲಾಪಿಲ್ಲಿಯಾಗಿ ಈಡಾಡಿದಂತೆ ಹೆಂಜೇರು ಹೇಮಾವತಿ ಸಿದ್ದೇಶ್ವರನ ಗುಡಿಯ ಸುತ್ತಲೂ ಇವೆ.
ಜಾತ್ರೆಯ ಸಮಯದಲ್ಲಿ ಹೆಂಜೇರು ಸಿದ್ದೇಶ್ವರನ ಅಪಾರ ಭಕ್ತರು ಗುಡಿಯ ಮುಂದಿರುವ ಅಗ್ನಿಕುಂಡಕ್ಕೆ ಸಿಪ್ಪೆ ಸುಲಿಯದಿರುವ ಉಂಡೆ ತೆಂಗಿನಕಾಯಿ, ಕಳ್ಳೇಕಾಯಿ, ಹರಳುಬೀಜ(ಔಡಲ), ಎಳ್ಳು, ಹುಚ್ಚೆಳ್ಳು ಮುಂತಾದ ಧಾನ್ಯಗಳನ್ನು ಅರ್ಪಿಸಿ ಹಾಗೂ ತುಪ್ಪ ಎಣ್ಣೆ ಸಾಂಭ್ರಾಣಿ ಊದಗಡ್ಡಿ ಕರ್ಪೂರ ವಿಭೂತಿಘಟ್ಟಿ ಧೂಪ ನೈವೇದ್ಯ ಮಾಡಿ ಎಲ್ಲವನ್ನೂ ಸುಡಲಾಗುತ್ತದೆ. ಸುಟ್ಟ ಬೂದಿಯನ್ನು ನೊಸಲು ಮುಂಗೈಮಣಿಕಟ್ಟು ಹಾಗೂ ಕುತ್ತಿಗೆ ಇಕ್ಕೆಲಗಳಿಗೆ, ಭ್ರೂಮಧ್ಯ ಮೂಗಂಬಕ್ಕೆ ಭಕ್ತರು ಬಳಿದುಕೊಳ್ಳುತ್ತಾರೆ.
ಇಂತಹ ಅಪರೂಪದ ಸಾಂಸ್ಕೃತಿಕ ಮಹಿಮೆಯ ಹೆಂಜೇರು ಹೇಮಾವತಿಗೆ ಸಾಧ್ಯವಾದರೆ ನೀವೂ ಒಮ್ಮೆ ಹೋಗಿಬನ್ನಿ.
ಹೆಂಜೇರು ಹೇಮಾವತಿ ಸಿದ್ದೇಶ್ವರ ಕ್ಷೇತ್ರದಲ್ಲಿ..,
-ಕ್ರಿ.ಶ. ಒಂಭತ್ತು ಮತ್ತು ಹತ್ತನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ನೊಳಂಬ ಸಾಮ್ರಾಜ್ಯಕ್ಕೆ ಈಗಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿ ಗ್ರಾಮವು ರಾಜಧಾನಿಯಾಗಿತ್ತು. ರಾಜರು ಗತಿಸಿದರೂ, ರಾಜ್ಯಗಳು ಅಳಿದರೂ, ರಾಜಧಾನಿಗಳು ನಾಶವಾಗಿ ಹೋದರೂ ರಾಜಾಶ್ರಯದ ಪೋಷಣೆಯಲ್ಲಿ ಬೆಳೆದ ಶಾಸ್ತ್ರ, ಸಾಹಿತ್ಯ, ಸಂಗೀತ, ಶಿಲ್ಪಕಲೆ ಮುಂತಾದವು ಇಂದಿಗೂ ಉಳಿದುಕೊಂಡಿವೆ. ಅಂದಿನ ನೊಳಂಬ ರಾಜವಂಶ ಇಂದು ಉಳಿದಿಲ್ಲ. ಒಂದು ಕಾಲದಲ್ಲಿ ನೊಳಂಬರ ವೈಭವದ ರಾಜಧಾನಿ ಕೇಂದ್ರವಾಗಿದ್ದ ಹೇಮಾವತಿಯು ಈಗ ಕುಗ್ರಾಮವಾಗಿ ನೊಳಂಬರ ಗತವೈಭವದ ಶಿಲ್ಪಾವಶೇಷ ಸಂಪತ್ತಿನೊಂದಿಗೆ ಉಳಿದುಕೊಂಡಿದೆ.
ಜಾತ್ರೆ ವಿಶೇಷ:
ಪ್ರತಿವರ್ಷ ಮಹಾಶಿವರಾತ್ರಿ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಾತ್ರೆಯು ಅತ್ಯಂತ ಸಡಗರದಿಂದ ನಡೆಯುತ್ತದೆ.
ಲಕ್ಷಾಂತರ ಭಕ್ತರು ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದು ವಿಶೇಷ. ಜಾತ್ರೆಯ ಸಂದರ್ಭದಲ್ಲಿ ತಂಬಿಟ್ಟಿನ ಆರತಿ, ಹರಕೆ, ಅಗ್ನಿಕೊಂಡ ರಥೋತ್ಸವ ಮುಂತಾದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ಜರುಗುತ್ತವೆ. ದೇವಾಲಯದ ಆವರಣದಲ್ಲಿ ದೊಡ್ಡೇಶ್ವರ,ಮತ್ತೇಶ್ವರ, ಚಿತ್ತೇಶ್ವರ,ವಿರೂಪಾಕ್ಷೇಶ್ವರ ನೊಳಂಬೇಶ್ವರ.. ಪಂಚ ದೇವಾಲಯಗಳಿವೆ.
ಕಳೆದ 30 ವರ್ಷಗಳಿಂದ ಇಲ್ಲಿ ಭೂ ಉತ್ಖನನ ನಡೆಸಿ ನೂರಾರು ಶಿವಲಿಂಗಗಳು, ನಂದಿ ವಿಗ್ರಹಗಳು, ಶಿಲಾ ಮೂರ್ತಿಗಳು, ಪ್ರಾಚ್ಯ ವಸ್ತುಗಳನ್ನು ಇಲ್ಲಿ ಹತ್ತಿರವಿರುವ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದ್ದು ದಿನನಿತ್ಯ ಸಾವಿರಾರು ಪ್ರವಾಸಿಗರು ಬಂದು ದರ್ಶನ ಮಾಡಿ ವೀಕ್ಷಿಸುತ್ತಾರೆ. ತುಮಕೂರು ಜಿಲ್ಲೆಯ ಶಿರಾ, ಪಾವಗಡ,ಚಿತ್ರದುರ್ಗ ಜಿಲ್ಲೆಯ ಹಿರಿಯೂರು.. ಗಳಿಂದ ಇಲ್ಲಿಗೆ ದಿನನಿತ್ಯ ಬಸ್ ಸೇವೆ ಲಭ್ಯವಿರುತ್ತದೆ.
ಮಾಹಿತಿ :
6 ಜೂನ್ 1965, ‘ಆಂಧ್ರಜ್ಯೋತಿ’ ಪತ್ರಿಕೆಯಲ್ಲಿ ಪ್ರಕಟಿತವಾದ ‘ನೊಳಂಬರ ಶಿಲ್ಪಗಳು’ ಗ್ರಂಥ.
ಡಾ. ವಡ್ಡಗೆರೆ ನಾಗರಾಜಯ್ಯ ಇವರ ಲೇಖನಗಳು.





