ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್
ನಮ್ಮ ಕಣ್ಣಿಗೆ ಕಂಡದ್ದನ್ನು ಅದರಲ್ಲೂ ಸುಂದರವಾಗಿ ಕಾಣುವ ಯಾವುದೇ ವಸ್ತು, ವ್ಯಕ್ತಿ, ಪಕ್ಷಿ, ಕಾಡು, ಪ್ರಾಣಿ… ಇವೆಲ್ಲವನ್ನು ದಾಖಲಿಸುವ ಯತ್ನ ಪ್ರಾಚೀನ ಕಾಲದಿಂದಲೂ ಇರುವ ಬಗ್ಗೆ ಸಾಕಷ್ಟು ಚಿತ್ರಗಳು, ರೇಖಾಚಿತ್ರಗಳು,ತೈಲ ವರ್ಣ ಚಿತ್ರಗಳು,ಬಂಡೆ ಚಿತ್ರಗಳು, ಗೀರು ಚಿತ್ರಗಳು.. ಇರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಶಿಲಾಯುಗದ ಶಿಲಾ ಮಾನವರು ಕೂಡ ಉತ್ತಮ. ಕಲಾವಿದರಾಗಿದ್ದರೆಂಬುದು ಇವು ಸಾಕ್ಷಿಕರಿಸುತ್ತದೆ.
ಶಿಲಾಯುಗದ ಕಾಲ ಅಂದರೆ ಮೂರು ಸಾವಿರದಿಂದ ಐದು ಸಾವಿರ ವರ್ಷಗಳ ಹಿಂದೆ ಈಗಿನಂತೆ ಬಣ್ಣವಾಗಲಿ, ಬ್ರಷ್ ಆಗಲಿ…ಯಾವುದೇ ಸಲಕರಣೆಗಳಿರಲಿಲ್ಲ. ಕೇವಲ ಮಣ್ಣು ಕಲ್ಲು ಮಾತ್ರ ಲಭ್ಯವಿದ್ದಿತ್ತು, ಅದನ್ನೇ ಬಳಸಿಕೊಂಡು ಉತ್ತಮ ಕಲಾಚಾತುರ್ಯದಿಂದ ಬಂಡೆಗಳಲ್ಲಿ ಚಿತ್ರಗಳನ್ನು ಮೂಡಿಸಿರುವುದು ನಿಜಕ್ಕೂ ಬೆರಗುಗೊಳಿಸುತ್ತದೆ.
ಸಾಮಾನ್ಯವಾಗಿ ಇಂಥ ರೇಖಾ ಚಿತ್ರಗಳು,ಗೀರು ಚಿತ್ರಗಳು. ಹಾಳಾಗದಿರಲಿ ಎಂಬ ಉದ್ದೇಶದಿಂದ ಬಂಡೆಗಳ ಸಂಧಿಗಳಲ್ಲಿ ಕಾಡು ಮೆಡುಗಳ ಒಳಭಾಗದ ಬಂಡೆಗಳ ಮೇಲೆ ಪ್ರಾಚೀನ ಮಾನವನು ಚಿತ್ರಗಳನ್ನು ಬಿಡಿಸಿರುವುದು ರಕ್ಷಣೆಯ ಸದುದ್ದೇಶದಿಂದ.
ಇಂತಹದ್ದೇ ಪ್ರಾಚೀನ ಮಾನವನು ಬಿಡಿಸಿದ ಚಿತ್ರಗಳನ್ನು ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿಯ ಚಿಕ್ಕಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಬರುವ ಸಂಗೇನಹಳ್ಳಿ ಕೆರೆಯ ಹಿನ್ನೀರು ಪ್ರದೇಶದಲ್ಲಿ ಇರುವ ಬಂಡೆಗಳ ಮೇಲೆ ಕಾಣಬಹುದು.
ಎಲ್ಲಿದೆ :
ಚಿತ್ರದುರ್ಗ ತಾಲೂಕಿನ ಉತ್ತರ ಭಾಗ ಹಾಗೂ ಜಗಲೂರು ತಾಲೂಕಿನ ಗಡಿಭಾಗದಲ್ಲಿರುವ ಸಂಗೇನಹಳ್ಳಿ ಕೆರೆಯು ಪ್ರಾಗೈತಿಹಾಸಿಕ ಕಾಲದಿಂದಲೂ ಪ್ರಸಿದ್ಧ ಪಡೆದ ಸ್ಥಳವಾಗಿದೆ ಎಂದು ಇಲ್ಲಿ ವ್ಯಾಪಕ ಸಂಶೋಧನೆ ಮಾಡಿರುವ ಡಾ.ಎಸ್. ವೈ.ಸೋಮಶೇಖರ್ ತಿಳಿಸುತ್ತಾರೆ. ಸಂಗೇನಹಳ್ಳಿ ಗ್ರಾಮದ ದಕ್ಷಿಣಕ್ಕೆ ಇರುವ ಅಣೆಕಟ್ಟು ಜಾಗವನ್ನು ಬಳಸಿಕೊಂಡು 60 ರ ದಶಕದಲ್ಲಿ ಇಲ್ಲಿ ಹರಿಯುವ ಜಿನಿಗಿ ಹಳ್ಳಕ್ಕೆ ಅಡ್ಡಲಾಗಿ ಕೆರೆಯನ್ನು ಕಟ್ಟಲಾಗಿದೆ.ಇದು ಈ ಭಾಗದ ಪ್ರಮುಖ ಕೆರೆಯಾಗಿದ್ದು ಚಿತ್ರದುರ್ಗ ತಾಲೂಕಿನ ಕೆರೆಗಳು ತುಂಬಿದ ನಂತರ ನೀರು ಇಲ್ಲಿಗೆ ತಲುಪುತ್ತದೆ. ಇಲ್ಲಿ ಕೆರೆಯನ್ನು ಕಟ್ಟುವ ಪೂರ್ವದಲ್ಲಿ ಕೆರೆಯ ಮಧ್ಯದ ನಡುಗಡ್ಡೆಯಾದ ಓಬಳಾಪುರ ಗ್ರಾಮವು ಪ್ರಾಚೀನ ಮಾನವನ ಕಾಲದಿಂದ ಇಂದಿನವರೆಗೂ ಜನವಸತಿಯ ಪ್ರದೇಶವಾಗಿತ್ತು. ಕೆರೆ ನಿರ್ಮಾಣದ ಸಮಯಕ್ಕೆ ಇಲ್ಲಿ ಇದ್ದ ಗ್ರಾಮವನ್ನು ಹತ್ತಿರದ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಕೆರೆಯ ನೀರು ನಿಲ್ಲುವ ಜಾಗದ ಅಕ್ಕಪಕ್ಕ ಹಾಗೂ ಕೆರೆಯ ವಿಶಾಲ ಅಂಗಳದಲ್ಲಿ ನೂರಾರು ಸಣ್ಣ- ದೊಡ್ಡ ಕಲ್ಲು ಬಂಡೆಗಳ ರಾಶಿ ಕಾಣಬಹುದು. ಇದನ್ನು ಕ್ಯಾನ್ವಾಸ್ ರೀತಿ ಬಳಸಿದ ಶಿಲಾ ಮಾನವನು ಬಂಡೆಗಲ್ಲು ಸಮೂಹದಲ್ಲಿ ನೂರಾರು ರೇಖಾ ಚಿತ್ರಗಳನ್ನು ಬಂಡೆಗಳ ಮೇಲೆ ಕುಟ್ಟಿ ಮೂಡಿಸಿರುವುದು ಅಚ್ಚರಿ ತರಿಸುತ್ತದೆ.
ಇದು ಅಂದಿನ ಮಾನವರ ಜೀವನಕ್ರಮ ಮತ್ತು ಕಲೆಗಾರಿಕೆ ಪ್ರತಿನಿಧಿಸುತ್ತದೆ.
ಹಿಂದಿನ ಮಾನವ ತನ್ನ ಕಣ್ಣಿಗೆ ಗೋಚರಿಸಿದ ವಸ್ತು, ವ್ಯಕ್ತಿ ಪ್ರಾಣಿಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿ ಪಡಿಸಿದ್ದಾನೆ. ಇದರಿಂದ ಅಂದು ಇಲ್ಲಿ ಯಾವ ರೀತಿಯ ಪ್ರಾಣಿಗಳು ಇದ್ದಿರಬಹುದು ಜೊತೆಗೆ ಯಾವ ಎತ್ತರ ಗಾತ್ರವನ್ನು ಈ ಚಿತ್ರಗಳಿಂದ ತಿಳಿದುಕೊಳ್ಳಬಹುದು. ಗುಂಪು ಗುಂಪಾಗಿ ಓಡಾಡುವ ದನಗಳು ಇರುವುದರಿಂದ ಮಾನವನು ಹಸು ದನಗಳನ್ನು ಆಗಲೇ ಸಾಕುತ್ತಿದ್ದಾನೆಂಬುದು ಸ್ಪಷ್ಟವಾಗುತ್ತದೆ . ಕೆಲವು ಚಿತ್ರಗಳಲ್ಲಿ ಜಿಂಕೆಯಾಕಾರದ ಪ್ರಾಣಿಯು ಕಾಣುತ್ತದೆ. ಇದರಿಂದ ಜಿಂಕೆಗಳು ಯಥೇಚ್ಛವಾಗಿದ್ದು ಹಿಂದೆ ಇಲ್ಲಿ ಕಾಡು, ಹುಲ್ಲುಗಾವಲು ಈ ಪರಿಸರದಲ್ಲಿ ಇದ್ದಿರಬಹುದು. ಬಂಡೆಗಳ ಮೇಲಿನ ಚಿತ್ರಗಳು ಕೆರೆಯಲ್ಲಿ ಹಿನ್ನೀರು ಹೆಚ್ಚಾದಾಗ ಮುಚ್ಚಿ ಹೋಗುತ್ತವೆ. ಬೇಸಿಗೆಯ ಸಮಯದಲ್ಲಿ ನೀರು ಕಡಿಮೆಯಾದಾಗ ಪುನಃ ಇವುಗಳು ನೋಡಲು ಸಿಗುತ್ತವೆ. ಸಾವಿರಾರು ವರ್ಷಗಳ ಮಳೆ,ಚಳಿ, ಬಿಸಿಲು ನೀರಿನ ಹರಿವಿನಲ್ಲಿ ಇದ್ದರೂ ಬಂಡೆಗಳ ಚಿತ್ರಗಳು ಇಂದಿಗೂ ಸ್ವಲ್ಪ ಮಸುಕಾಗದೆ, ಹಾಳಾಗದಂತೆ ಇರುವುದು ನಿಜಕ್ಕೂ ಬೆರಗುಗೊಳಿಸುತ್ತದೆ. ಇಲ್ಲಿನ ಪ್ರತಿ ಬಂಡೆಯ ಮೇಲೆ ರೇಖಾಚಿತ್ರಗಳು ಮೂಡಿಸಿರುವ ಮಾನವ ಕೆಲವೊಂದು ಬಂಡೆಗಳ ಮೇಲೆ ನಾಲ್ಕೈದು ಗುಂಪು ಚಿತ್ರಗಳನ್ನು ಮೂಡಿಸಿದ್ದಾನೆ. ಹಗುರ ಬಂಡೆಗಳು ನೀರಿನ ಸತತ ಸೆಳೆತದಿಂದ ಸ್ವಲ್ಪ ಜರುಗಿದ್ದರೆ, ಮತ್ತೆ
ಕೆಲವು ಬಂಡೆ ಕಲ್ಲುಗಳು ಅತಿ ಭಾರವಿದ್ದು ಇವು ಜರುಗದೆ ನಿಂತಲ್ಲೇ ನಿಂತಿವೆ.
ಯಾವ ಯಾವ ಚಿತ್ರಗಳಿವೆ?
ರೇಖಾ ಚಿತ್ರಗಳಲ್ಲಿ ಪ್ರಮುಖವಾಗಿ ದನ, ಗೂಳಿ, ಎತ್ತು, ಪಕ್ಷಿ, ಮಾನವ, ಕಲ್ಲಿನ ಆಯುಧಗಳ ಚಿತ್ರಗಳನ್ನು ಕಾಣಬಹುದು . ಇಲ್ಲಿ ನೂರಾರು ಗೀರು ಚಿತ್ರಗಳಿದ್ದು,ಇವೆಲ್ಲವೂ ನವ ಶಿಲಾಯುಗದ ಕಾಲಕ್ಕೆ ಸೇರಿದೆ. ಪ್ರಾಚೀನ ಶಿಲಾ ಮಾನವನು ತನ್ನ ಕಲಾ ನೈಪುಣ್ಯತೆಯಿಂದ ಉತ್ತಮ ಕಲಾವಿದನಾಗಿರುವ ಬಗ್ಗೆ ಗಮನಿಸಬಹುದು.
ಕೆರೆಯ ಹಿನ್ನೀರು ಪ್ರದೇಶವು ವಿಶಾಲವಾಗಿ ವ್ಯಾಪಿಸಿದ್ದು ಚಿತ್ರದುರ್ಗ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. 1997 ರಲ್ಲಿ ಬರಗಾಲದ ಕಾರಣ ನೀರಿನ ಹರಿವು ತೀವ್ರ ಕಡಿಮೆಯಾಗಿ ಕೆರೆಯು ಸಂಪೂರ್ಣ ಒಣಗಿದ್ದಾಗ ಹಂಪಿ ವಿ.ವಿ. ಯ ಡಾ. ಎಸ್.ವೈ.ಸೋಮಶೇಖರ್ ಹಾಗೂ ಅವರ ಸಂಶೋಧಕರ ತಂಡವು ಇಲ್ಲಿ ಪ್ರಾಚೀನ ಮಾನವನ ನೆಲೆ ಹಾಗೂ ನವಶಿಲಾಯುಗಕ್ಕೆ ಸೇರಿದ ಕೈ ಕೊಡಲಿ, ಬೂದಿದಿಬ್ಬ, ಕವಣೆಕಲ್ಲು, 12ನೇ ಶತಮಾನಕ್ಕೆ ಸೇರಿದ ವೀರಗಲ್ಲುಗಳನ್ನು ಪತ್ತೆ ಹಚ್ಚಿದರು. ಆಗಲೇ ಈ ಚಿತ್ರಗಳು ಇರುವ ಬಗ್ಗೆ ಮಾಹಿತಿ ತಿಳಿಯಿತು.
ಹಿಂದಿನಿಂದಲೂ ನೀರಿನ ಹರಿವಿನ ಪ್ರದೇಶ,ಹಳ್ಳ, ನದಿ… ಎಲ್ಲವೂ ಪ್ರಾಚೀನ ಮಾನವನ ಜನವಸತಿಯ ಪ್ರದೇಶಗಳಾಗಿದ್ದವು. ನಾಗರೀಕತೆಯ ಉಗಮಕ್ಕೆ ಇವೇ ಪ್ರಮುಖ ಸ್ಥಳಗಳಾಗಿದ್ದವು. ಇವುಗಳ ಆಧಾರದ ಮೇಲೆ ಇಲ್ಲಿ ಹಿಂದಿನಿಂದಲೂ ಜನವಸತಿ ಪ್ರದೇಶವಿದ್ದ ಬಗ್ಗೆ ತಿಳಿಯಲಾಯಿತು.



















