ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ : ದುಮ್ಮಿ ಗ್ರಾಮದ ಪರಿಚಯ

11 Min Read

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಹೊಳಲ್ಕೆರೆಯಿಂದ 15 ಕಿ.ಮೀ ದೂರವಿರುವ ದುಮ್ಮಿ ಗ್ರಾಮ ಹೊಳಲ್ಕೆರೆ-ಚನ್ನಗಿರಿ ಮಾರ್ಗದಲ್ಲಿ ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿ-13 ರಲ್ಲಿದೆ. ಐತಿಹಾಸಿಕ ಗ್ರಾಮವಾದ ದುಮ್ಮಿಗೆ ಹಿಂದೆ ದುಮ್ಮಿ, ದುರ್ಮಾಯ, ದಮ್ಮೆ’ ಎಂಬ ಹೆಸರುಗಳಿದ್ದವು. ಸ್ಥಳೀಯ ಐತಿಹ್ಯಗಳಂತೆ ಮಹಾಭಾರತದ ಕಾಲದಲ್ಲಿ ದೌಮ್ಯ ಮಹಾಋಷಿಗಳು ತಪಸ್ಸನ್ನು ಇಲ್ಲಿನ ಗುಡ್ಡದ ಗುಹೆಯಲ್ಲಿ ಮಾಡಿದ್ದರು ಎನ್ನಲಾಗುತ್ತದೆ. ಆದ ಕಾರಣ ಈ ಗ್ರಾಮಕ್ಕೆ ದುಮ್ಮಿ ಎಂಬ ಹೆಸರು ಬಂದಿತು. ಅವರು ತಪ್ಪಸ್ಸನ್ನು ಆಚರಿಸಿದ ಗುಹೆಯು ಗ್ರಾಮದ ಪಕ್ಕದ ಗುಡ್ಡದಲ್ಲಿದ್ದು ಇಂದು ಅದು ಕೆಂಚಮ್ಮನ ಗುಡಿಯಾಗಿದೆ. ಇದರ ಇತಿಹಾಸವನ್ನು ನಿರೂಪಿಸುವ ಒಂಬತ್ತು ಶಾಸನಗಳು ಇದೇ ಗ್ರಾಮದ ಪರಿಸರದಲ್ಲಿದ್ದರೆ ಒಂದು ತಾಮ್ರ ಶಾಸನ ದಾವಣಗೆರೆ ತಾಲ್ಲೂಕು ಕಾಶೀಪುರದಲ್ಲಿದೆ. ದುಮ್ಮಿಯ ಪ್ರಾಚೀನತೆಯನ್ನು ಶಾಸನಗಳು ಕದಂಬರ ಕಾಲಕ್ಕೆ ಕೊಂಡೊಯ್ಯುತ್ತವೆ.

ಗ್ರಾಮದ ಅಂಕಿ ಅಂಶ
ಒಟ್ಟು ಮನೆ – 816
ಒಟ್ಟು ಜನಸಂಖ್ಯೆ – 3955
ಪಿನ್ – 577531 ಭೌಗೋಳಿಕ ವಿಸ್ತೀರ್ಣ : 1126.96 ಹೆಕ್ಟರ್

ಗ್ರಾಮದ ಪರಿಚಯ : ಬಯಲು ಸೀಮೆಯ ವಾತಾವರಣ ಹೊಂದಿರುವ ಈ ಗ್ರಾಮದಲ್ಲಿ ಎಲ್ಲಾ ಜಾತಿಯ ಜನರು ವಾಸವಾಗಿದ್ದಾರೆ. ಡೊಳ್ಳುಕುಣಿತ, ವೀರಗಾಸೆ, ಕೋಲಾಟ, ಭಜನೆ, ಮುಂತಾದ ಕಲಾತಂಡಗಳಿವೆ. ಗ್ರಾಮದಲ್ಲಿ ಪ್ರೌಢಶಾಲೆಯ ಹಂತದವರೆಗೂ ಶಿಕ್ಷಣ ಲಭ್ಯವಿದೆ. ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾಗಿರುವ ಇಲ್ಲಿಗೆ ದುಮ್ಮಿ, ದೊಗ್ಗನಾಳ್, ಕಾಲ್ಕೆರೆ, ವನಕೆಮರಡಿಕಾವಲು ಸೇರುತ್ತವೆ.

 

ದುಮ್ಮಿಯ ಇತಿಹಾಸ- ಕಾಳಗ ಭೂಮಿ :
ಪ್ರಾಚೀನ ಇತಿಹಾಸ ಗಮನಿಸಿದರೆ ನೂರಾರು ಯುದ್ಧಗಳು ಆಗಾಗ ನಡೆಯುತ್ತಲೇ ಇದ್ದವು. ಶತ್ರುಗಳನ್ನು ದಮನಿಸಲು, ಸಾಮ್ರಾಜ್ಯ ವಿಸ್ತರಣೆ, ಪರಸ್ಪರ ವೈರತ್ವ ಮುಂತಾದ ಕಾರಣಗಳಿಂದ ಸದಾ ಯುದ್ಧಗಳು ನಡೆದ ಬಗ್ಗೆ ತಿಳಿಯುತ್ತದೆ. ಇಂತಹ ಹತ್ತಾರು ಸ್ಥಳಗಳು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಕಾಣುತ್ತವೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗಡಿ ಗ್ರಾಮ ದುಮ್ಮಿ ಕೂಡ ಹಿಂದೊಮ್ಮೆ ಕಾಳಗ ಭೂಮಿಯಾಗಿತ್ತು. ಇಲ್ಲಿನ ಶಾಸನಗಳಲ್ಲಿ ದುಮ್ಮಿಯ ಕಾಳಗ ತಿಳಿಸುವ ವಿಚಾರಗಳೇ ತುಂಬಿದೆ. ಲೆಕ್ಕವಿಲ್ಲದಷ್ಟು ಯುದ್ಧ, ಸಾವು, ನೋವು ರಕ್ತಪಾತ ಕಂಡಿದ್ದ ಸ್ಥಳಗಳ ಇತಿಹಾಸದ ಪರಿಚಯವೇ ಇಲ್ಲದಂತೆ ಹಾಯಾಗಿದೆ. ಇಲ್ಲಿನ ಐತಿಹಾಸಿಕ ಮಂದಿರಗಳಿಂದ ಇದು ಒಂದು ಪ್ರಾಚೀನ ಗ್ರಾಮ ವೆಂದು ಮಾತ್ರ ಇಲ್ಲಿನ ಜನರಿಗೆ ತಿಳಿದಿದೆ. ಬಹಳಷ್ಟು ಜನರಿಗೆ ತಮ್ಮ ಊರು ಹಿಂದೊಮ್ಮೆ ಬೃಹತ್ ರಣರಂಗವಾಗಿದ್ದ ಬಗ್ಗೆ ಮಾಹಿತಿ ಇಲ್ಲ . ಇತಿಹಾಸದಲ್ಲಿ ಈ ಗ್ರಾಮಕ್ಕೆ ದುಮ್ಮಿ. ದುಂಮೆ. ದುರ್ಮಾಯ. ದಮ್ಮೆ ಎಂಬೆಲ್ಲ ಹೆಸರುಗಳಿದ್ದವು 10-15 ಶಾಸನಗಳೆಲ್ಲಿ ಉಲ್ಲೇಖವಾದ ದುಂಮೆಯ ಕಾಳಗಕ್ಕೆ ಈ ಸ್ಥಳ ಆಯಕಟ್ಟಿನ ರಕ್ಷಣಾ ದೃಷ್ಟಿಯಿಂದ ಮಹತ್ವಪೂರ್ಣವಾದ ಜಾಗವಾಗಿರುವುದು ಕಾರಣವಾಗಿತ್ತು . ಇಲ್ಲಿರುವ ಕೆಂಚಮ್ಮ ಗುಡ್ಡ ಹಿಂದೆ ಚಾಲುಕ್ಯರಿಗೂ ಹೊಯ್ಸಳರಿಗೂ ಗಡಿ ರೇಖೆಯಾಗಿತ್ತು. ಅಂದು ಎಳೆದಿದ್ದ ಗಡಿ ಬಾಂದ್ ಕಲ್ಲುಗಳೆ ಇಂದಿಗೂ ಚಿತ್ರದುರ್ಗ- ಶಿವಮೊಗ್ಗ (ದಾವಣಗೆರೆ) ಜಿಲ್ಲೆಗಳಿಗೆ ಗಡಿಯಾಗಿದೆ. ಅಂದರೆ 1000 ವರ್ಷ ಮಿಗಿಲಾದ ಈ ಗಡಿ ಇಂದಿಗೂ 2 ತಾಲ್ಲೂಕು (ಹೊಳಲ್ಕೆರೆ-ಚನ್ನಗಿರಿ) 2 ಜಿಲ್ಲೆಗಳ ಗಡಿಯಾಗಿದೆ. (ಚಿತ್ರದುರ್ಗ-ದಾವಣಗೆರೆ) (ಆಗೆಲ್ಲ ನದಿ. ತೊರೆ, ಬೆಟ್ಟ, ಗುಡ್ಡಗಳೇ ಗಡಿಯಾಗಿರುತ್ತಿದ್ದವು. )
ಹೊಯ್ಸಳ ಚಾಲುಕ್ಯರ ನಡುವಿನ ತಿಕ್ಕಾಟದ ಮಹತ್ವದ ಒಂದು ಘಟ್ಟವೇ ದುಂಮೆಯ ಕಾಳಗ. ಈ ಕಾಳಗ ನಡೆಯಲು ಪ್ರಮುಖ ಕಾರಣವೇ ಈ ದುಂಮೆ ಗ್ರಾಮ (ಈಗಿನ ದುಮ್ಮಿ) ಎರಡು ಪ್ರಮುಖ ಆಡಳಿತ ಪ್ರದೇಶಗಳ ಆಯಕಟ್ಟಿನ ಸ್ಥಳವಾಗಿದ್ದ ದುಂಮೆ ವಾಣಿಜ್ಯ ಕೇಂದ್ರವಾಗಿತ್ತು. ಮೊದಲ ಕದನ ಹೊಯ್ಸಳರ ಕಾಲದಲ್ಲಿ ಸೇವುಣರ ಸೇನೆ ದ್ವಾರಸಮುದ್ರವನ್ನು (ಹಳೆಬೀಡು) ಮುತ್ತಿತ್ತು. ಆಗ ರೊಚ್ಚಿಗೆದ್ದ ಹೊಯ್ಸಳರ ಸೇನೆ ಸೇವುಣರನ್ನು ದುಮ್ಮಿವರೆಗೂ ಅಟ್ಟಾಡಿಸಿ ಬಂದಿತ್ತು.
ನಂತರ ನಡೆದ ಕಾಳಗದಲ್ಲಿ ಹೊಯ್ಸಳರೊಂದಿಗೆ ಚಾಲುಕ್ಯರು ನೇರವಾಗಿ ಯುದ್ಧ ಮಾಡದಿದ್ದರೂ ಪಾಂಡ್ಯರೊಡನೆ ಚಾಲುಕ್ಯರ ನಡುವೆ ಕದನ ನಡೆತು. ಎಷ್ಟು ಬಾರಿ ನಡೆದಿದೆ ಎಂದು ಹೇಳಲಾಗದಿದ್ದರೂ ಪ್ರತಿಬಾರಿ ಘರ್ಷಣೆಗಳಂತೂ ನಡೆಯುತ್ತಲೇ ಇದ್ದವು. ಈ ಕದನ ನಡೆದ ಅವಧಿಯ ಶಾಸನಗಳಲ್ಲದೆ ತದನಂತರದ ಕಾಲದ ಅನೇಕ ಶಾಸನಗಳು ದುಂಮೆಯ ಕದನವನ್ನು ಸ್ಮರಿಸಿವೆ.

 

” ಒಂದನೆಯ ಬಲ್ಲಾಳನ ಕಾಲದಲ್ಲಿ ಕ್ರಿ.ಶ 1103 ರಲ್ಲಿ ನಡೆದ ದಾಳಿಯಲ್ಲಿ ಹೊಯ್ಸಳರು ಪಾಂಡ್ಯರನ್ನು ಸೋಲಿಸಿದರೆಂಬ ವಾಕ್ಯ ಶಾಸನದಲ್ಲಿದೆ.
” ಮುಂದೆ ಕಲ್ಯಾಣ ಚಾಲುಕ್ಯರ ಪರವಾಗಿ ಸಿಂಧರ 2 ನೇ ಅಚುಗಿಯು ಹೊಯ್ಸಳರನ್ನು “ಮ್ಮೆಟ್ಟಿಸಿದ.
” 1111-13 ರ ನಡುವೆ ನಡೆದಿದ್ದ ಕಾಳಗವು ಹೊಯ್ಸಳರ ವಿಷ್ಣುವರ್ಧನನ ಸಾರ್ವಭೌಮತ್ವ ಸಾಧಿಸುವ ಗಂಭೀರ ಪ್ರಯತ್ನ ಮಾಡಿದ. ಉಚ್ಚಂಗಿ ಪಾಂಡ್ಯರಿಗೆ ಇಲ್ಲಿ ಆಗ ಸೋಲಾತು. ಈ ಯುದ್ಧದಲ್ಲಿ ಗೆದ್ದ ವಿಷ್ಣುವರ್ಧನ ಉಚ್ಚಂಗಿಕೊಂಡ ಎಂಬ ಬಿರುದು ಪಡೆದ.
” ಇದಾದ ನಂತರ ಮತ್ತೆ 1116 ರ ಮಧ್ಯಭಾಗದಲ್ಲಿ ಮತ್ತೆ ವಿಷ್ಣುವರ್ಧನನ ತ್ರಿಭುವನ ಮಲ್ಲ ಪಾಂಡ್ಯನ ನಡುವೆ ನಡೆದ ಯುದ್ಧ, ಇದನ್ನೆ ಪ್ರಮುಖ ದುಂಮೆಯ ಕಾಳಗ ಎನ್ನಲಾಗುತ್ತದೆ. ಇದು ಈಗಿನ ಕೆಂಚಮ್ಮನ ಗುಡ್ಡದ ಕೆಳಭಾಗದಲ್ಲಿ ಎಂದು ಶಾಸನ ತಜ್ಞ ಬಿ.ಎಲ್ ರೈಸ್ ಗುರುತಿಸಿದ್ದಾರೆ. ಇದನ್ನು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದು ಸುಮಾರು 1116 ರ ಮೇ 20 ರಂದು ಎಂದು ಸಂವತ್ಸರದ ಆಧಾರದಲ್ಲಿ ದೃಢಪಡಿಸಲಾಗಿದೆ. ಈ ಯುದ್ಧವು ಆನೆ ಅಶ್ವದಳ ಕಾಲ್ದಳಗಳಿಂದ ಕೂಡಿತ್ತೆಂದು ಹೇಳಲಾಗಿದೆ. ಇದರಲ್ಲಿ ಪಾಂಡ್ಯರಿಗೆ ಸೋಲಾದರೂ ಮುಂದೆ ಅವರ ಆಡಳಿತ 1126 ರವರೆಗೆ ಮುಂದುವರೆಯುತ್ತದೆ. ಆದ್ದರಿಂದ ದುಮ್ಮಿಯ ಕಾಳಗ ಭೀಕರವಾಗಿದ್ದರೂ ವ್ಯಾಪಕವಾಗಿದ್ದರೂ ಯಾವುದೇ ಪ್ರಮುಖ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿಲ್ಲ. ತಾಳಿಕೋಟೆ ಪ್ಲಾಸಿ ಕದನದಂತೆ ಯಾವುದೇ ಪ್ರಮುಖ ಘಟನಾವಳಿಗಳಿಗೆ ಕಾರಣವಾಗುವುದಿಲ್ಲ. ಪಾಂಡ್ಯರ ಆಳ್ವಿಕೆಯನ್ನು ಕೊನೆಗಾಣಿಸಲಿಲ್ಲ. ಆದರೆ ಹೊಯ್ಸಳರಿಗೆ ಮುಂದೆ ಪಾಂಡ್ಯರ ಸಾಮ್ರಾಜ್ಯ ಗೆಲ್ಲಲು ಆತ್ಮ ವಿಶ್ವಾಸ ಮೂಡಿಸಿತು.

 

ದುಂಮೆಯ ಕಾಳಗದ ಪ್ರಾಮುಖ್ಯತೆ
” ಈ ಕದನವು ಹೊಯ್ಸಳರಿಗೆ ಚಾಲುಕ್ಯರ ಸಾಮಂತತನದಿಂದ ಮುಕ್ತಿ ಪಡೆವ ಪ್ರಯತ್ನಕ್ಕೆ ಬಲ ನೀಡಿತು ಆತ್ಮ ವಿಶ್ವಾಸ ಮೂಡಿಸಿತು.
” ತ್ರಿಭುವನಮಲ್ಲ ಪಾಂಡ್ಯನು ಹಿಮ್ಮೆಟ್ಟಿದರೂ ತಕ್ಷಣದ ತೀವ್ರ ಪರಿಣಾಮ ಬೀರಲಿಲ್ಲ
” ಪಾಂಡ್ಯರ ಆಕ್ರಮಣ ತಡೆಯಲಾತು. 15ನೇ ಶತಮಾನದ ನಂತರ ಇಲ್ಲಿ ಯಾವುದೇ ಯುದ್ಧ ನಡೆಯಲಿಲ್ಲ.

 

ನೂರಾರು ವರ್ಷಗಳ ಕಾಲ ನಡೆದ ಸತತ ಯುದ್ಧ ಕ್ಷೋಭೆಗಳಿಂದ ಬೇಸತ್ತ ಜನ ಇತರೆಡೆ ವಲಸೆ ಹೋಗಿ ಪುನಃ ಕೆಲ ದಿನಗಳಲ್ಲಿ ಶಾಂತಿ ನೆಲೆಸಿದ ಮೇಲೆ ಹಿಂತಿರುಗಿದರು. ನಿರ್ಜನವಾಗುವ ಹಂತಕ್ಕೆ ತಲುಪಿ ನಂತರ ಮೊದಲಿನ ರೀತಿ ಆಗಿದ್ದನ್ನು ಶಾಸನವೊಂದು ತಿಳಿಸುತ್ತದೆ. 1527 ರಲ್ಲಿ ದುಮ್ಮಿ ಕೆರೆ ಹಾಳಾಗಿ ಹೋಗಿ ಪ್ರಜೆಗಳಿಗೆ ವ್ಯವಸಾಯ ಆದಾಯ ನಿಂತರೂ ಅಲ್ಲಿನ ಪಾರುಪತ್ಯದಾರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದ. ಇದ್ನು ಅರಿತ ಕೃಷ್ಣದೇವರಾಯ ತಕ್ಷಣ ವ್ಯವಸ್ಥೆ ಮಾಡಿ, ವಲಸೆ ಹೋಗಿದ್ದ ಜನರನ್ನು ಹಿಂತಿರುಗಲು ತಿಳಿಸಿ ಕರವಸೂಲಿ ನಿಲ್ಲಿಸಿ, ಕೆರೆಯನ್ನು ಸರಿಪಡಿಸಲು ನಿರೂಪ ಕಳಿಸಿದನು. ಇದೊಂದು ಪ್ರಜಾ ಪಾಲನೆಯ ಅಪರೂಪದ ನಿದರ್ಶನ. ದುಮ್ಮಿಯು ಇದಕ್ಕೆ ಸಾಕ್ಷಿಯಾಗಿದೆ.

 

ಇಷ್ಟೆಲ್ಲ ಐತಿಹಾಸಿಕ ಘಟನೆಗಳ ಸಾಕ್ಷಿಯಾದ ದುಮ್ಮಿ ಗ್ರಾಮದಲ್ಲಿ ರಾಜ್ಯ ಪುರಾತತ್ವ ಇಲಾಖೆ ಒಂದು ಮಾಹಿತಿಯುಳ್ಳ ಬೋರ್ಡ್ ಕೂಡ ಹಾಕಿಲ್ಲ. ಕೇವಲ ಇತಿಹಾಸ ಸಂಶೋಧಕರಿಗೆ ಮಾತ್ರ ಇದರ ಬಗ್ಗೆ ಮಾಹಿತಿಯಿದೆ. ತಮ್ಮ ಊರಿನಲ್ಲಿ ಭವ್ಯ ಇತಿಹಾಸ ಇರುವ ಬಗ್ಗೆ ಇಲ್ಲಿನವರಿಗೂ ಅಷ್ಟಾಗಿ ಗೊತ್ತಿಲ್ಲ ಇದೆಲ್ಲವನ್ನು ಶತಮಾನಗಳಿಂದಲೂ ನೋಡುತ್ತಾ ನಿಂತಿರುವ ದುಮ್ಮಿ ಗುಡ್ಡ ವೀಗ ಮೌನವಾಗಿ ನಿಂತಿದೆ.

 

ದುಮ್ಮಿಯಲ್ಲಿರುವ ಮಂದಿರಗಳ ವಿವರ:

1. ಪಂಚಲಿಂಗೇಶ್ವರ ಮಂದಿರ:
ದುಮ್ಮಿ ಕೆರೆಯ ಉತ್ತರ ಭಾಗದ ಏರಿಯ ಬಳಿಯಲ್ಲಿರುವ ಈ ಮಂದಿರ 12 ಶತಮಾನದ ಹೋಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದೆ. 2008 ರಲ್ಲಿ ಜೀರ್ಣೋದ್ಧಾರ ಮಾಡಲಾದ ಈ ಮಂದಿರ ಹಿಂದೆ ಶತ್ರುಗಳ ದಾಳಿಯಿಂದ ರಕ್ಷಿಸಲು ಮಣ್ಣಿನಿಂದ ಮುಚ್ಚಲಾಗಿತ್ತು. ಪೂರ್ವ ಅಭಿಮುಖವಾಗಿ ಇರುವ ಈ ಮಂದಿರ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿಂದ ಕೂಡಿದ ಸುಂದರವಾದ ಪ್ರಾಚೀನ ದೇವಾಲಯವಾಗಿದೆ. ದೇವಾಲಯವನ್ನು ಇತ್ತೀಚಿಗೆ ಜೀರ್ಣೋದ್ಧಾರಗೊಳಿಸಲಾಗಿದೆ. ನಾರುಗಲ್ಲನ್ನು ಬಳಸಿ ಕಟ್ಟಲಾದ ಈ ದೇಗುಲದ ಗರ್ಭಗೃಹದಲ್ಲಿ ಎರಡೂವರೆ ಅಡಿ ಎತ್ತರದ ಪಾಣಿಪೀಠದ ಮೇಲೆ ಎರಡು ಅಡಿ ಎತ್ತರದ ಶಿವಲಿಂಗವನ್ನು ಪ್ರತಿಷ್ಟಾಪಿಸಿರುವರು. ಇದು ಕಪ್ಪುಶಿಲೆಯ ನಯವಾದ ಲಿಂಗವಾಗಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಸ್ಥಂಭಶಾಖೆ, ಲತಾಶಾಖೆ, ಪದ್ಮಶಾಖೆಗಳಿದ್ದು, ಗರ್ಭಗೃಹದ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಲಲಾಟದಲ್ಲಿ ಗಜಲಕ್ಷ್ಮೀಯ ಶಿಲ್ಪವಿದೆ. ಇದರ ಇಕ್ಕೆಲಗಳಲ್ಲಿ ಮೊಗ್ಗುಗಳನ್ನು ಚಿತ್ತಿಸಲಾಗಿದೆ. ಗಜಲಕ್ಷ್ಮೀಯ ಮೇಲ್ಬಾಗದ ಉತ್ತರಾಂಗದಲ್ಲಿ ನಾಗರ, ವೇಸರ ಶೈಲಿಯ ಗೋಪುರಗಳ ಮಾದರಿಗಳನ್ನು ಇಡಲಾಗಿದೆ. ಮಧ್ಯದಲ್ಲಿ ನಟರಾಜನ ಶಿಲ್ಪವಿದೆ. ಅಂತರಾಳದಲ್ಲಿ ನಂದಿಯ ಶಿಲ್ಪವಿದೆ. ಇದು ಮೂರೂವರೆ ಅಡಿ ಉದ್ದ ಮತ್ತು ಎರಡೂವರೆ ಅಡಿ ಎತ್ತರವಾಗಿದೆ. ಇದನ್ನು ಗಂಟೆಸರ. ದಂಡೆ, ಹಣೆಪಟ್ಟಿಗಳಿಂದ ಅಲಂಕರಿಸಲಾಗಿದೆ. ಅಂತರಾಳದ ಮೇಲ್ಭಾಗದಲ್ಲಿ ಮುಗುಚಿದ ಪದ್ಮವನ್ನು ಕೆತ್ತಲಾಗಿದೆ. ಇದರಲ್ಲಿ ಸ್ತಂಭಶಾಖೆ, ವಜ್ರಶಾಖೆ, ಲತಾಶಾಖೆ, ಜಾಲಂಧ್ರಗಳಿದ್ದು, ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರನ್ನು ಕಡೆದಿರುವರು. ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಡೆದಿದ್ದಾರೆ. ಗಜಲಕ್ಷ್ಮಿಯ ಇಕ್ಕೆಲಗಳಲ್ಲಿ ಮೊಗ್ಗುಗಳಿವೆ. ಉತ್ತರಾಂಗದಲ್ಲಿ ವ್ಯಾಳಗಳು. ಮಧ್ಯೆ. ನಟರಾಜನ ಉಬ್ಬುಗೆತ್ತನೆದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಇವುಗಳನ್ನು ಚಚ್ಚೌಕ ಮತ್ತು ವೃತ್ತಾಕಾರಗಳಲ್ಲಿ ಕಡೆದಿದ್ದಾರೆ. ಇವುಗಳನ್ನು ತಿರುಗಣೆ ಯಂತ್ರದಿಂದ ಮಾಡಿದ್ದು ಹೊಳಪನ್ನು ಹೊಂದಿದೆ. ನವರಂದ ಎಡಭಾಗದಲ್ಲಿ “ಷ್ಣು ಮತ್ತು ಗಣೇಶ ಶಿಲ್ಪಗಳನ್ನು ಪ್ರತಿಷ್ಟಾಪಿಸಿದ್ದಾರೆ. ನವರಂಗದ ಬಾಗಿಲುವಾಡವು ಸರಳವಾಗಿದ್ದು. ಸ್ತಂಭಶಾಖೆಗಳನ್ನು ಮಾತ್ರ ಹೊಂದಿದೆ. ಗರ್ಭಗೃಹದ ಮೇಲ್ಭಾಗದಲ್ಲಿ ದ್ರಾವಿಡ ಮಾದರಿಯ ಶಿಖರವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ದೇವಾಲಯವನ್ನು ಉಪಾನ, ಜಗತಿ, ಕುಮುದ. ಕಂಠ. ದಂತಪಂಕ್ತಿ ಹಾಗೂ ವೇದಿಗಳಿಂದ ಕೂಡಿದ ಅಧಿಷ್ಠಾನದ ಮೇಲೆ ಕಟ್ಟಲಾಗಿದ್ದು ಅದರ ಮೆಲೆ ಭಿತ್ತಿ ಮತ್ತು ಕಪೋತಗಳಿವೆ. ಭಿತ್ತಿಯನ್ನು ಅರೆಗಂಬಳಿಂದ ಅಲಂಕರಿಸಿದ್ದು. ನಾಗಶಿಲ್ಪಗಳಿವೆ. ಈ ನಾಗಶಿಲ್ಪವು ಮನುಷ್ಯ ದೇಹವನ್ನು ಹೊಂದಿದ್ದು ಕೈಗಳಲ್ಲಿ ಕತ್ತಿ ಮತ್ತು ಗುರಾಣಿಗಳನ್ನು ಹಿಡಿದಿರುವುದು ವಿಶೇಷವಾಗಿದೆ.
ದೇವಾಲಯದ ಬಲಭಾಗದಲ್ಲಿ ಶಿಲಾಶಾಸನ, ಸಪ್ತಮಾತೃಕೆ, ಎರಡು ಶಿವಲಿಂಗ ಮತ್ತು ನಂದಿಯ ಶಿಲ್ಪಗಳನ್ನು ಕಾಣಬಹುದು. ವೀರಶೈವರು ಈ ದೇವಾಲಯದ ಪೂಜಾರಿಗಳಾಗಿದ್ದಾರೆ.

2. ಈಶ್ವರ ಮಂದಿರ :
ದುಮ್ಮಿ ಕೆರೆಯ ಪಶ್ಚಿಮದ ಭಾಗದ ದಂಡೆಯ ಮೇಲೆ ಇರುವ ಈ ಮಂದಿರ ಜೀರ್ಣಾವಸ್ಥೆಯಲ್ಲಿದೆ. ಪೂರ್ವಾಭಿಮುಖಿಯಾಗಿರುವ ಈ ದೇವಸ್ಥಾನದ 12-13 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಹೊಯ್ಸಳ ಶೈಲಿಯಲ್ಲಿದೆ. ಇದರ ಗರ್ಭಗೃಹ. ಅಂತರಾಳ ಮತ್ತು ಸಭಾಮಂಪಟಗಳಿಂದ ಕೂಡಿದ ಪ್ರಾಚೀನ ದೇವಾಲಯವಿದು. ಗರ್ಭಗೃಹದ ಬಾಗಿಲುವಾಡದಲ್ಲಿ ಸ್ತಂಭ ಶಾಖೆಗಳಿವೆ. ಅಂತರಾಳದಲ್ಲಿ ಲಿಂಗಕ್ಕೆ ಎದುರಾಗಿ ನಂದಿಯ ಶಿಲ್ಪವನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಒಂದೂವರೆ ಅಡಿ ಎತ್ತರ ಹಾಗೂ ಎರಡೂವರೆ ಅಡಿ ಉದ್ದ”ರುವ ಹೊಯ್ಸಳ ಶೈಲಿಯ ಸುಂದರವಾದ ಶಿಲ್ಪವಾಗಿದೆ. ಇದರ ಪಕ್ಕದಲ್ಲಿ ಇದೇ ಕಾಲದ ಸೂಕ್ಷ್ಮ ಶೈಲಿಯ ಗಣೇಶನ ಶಿಲ್ಪವನ್ನು ಇಡಲಾಗಿದೆ. ಅಂತರಾಳದ ಬಾಗಿಲುವಾಡದಲ್ಲಿ ಸ್ತಂಭಶಾಖೆ ಮತ್ತು ಜಾಲಂಧ್ರಗಳನ್ನು ನಿರ್ಮಿಸಲಾಗಿದೆ. ದೇವಾಲಯವು ಶಿಥಿಲವಾಗಿದ್ದು ಜೀರ್ಣೋದ್ಧಾರ ಕಾರ್ಯವು ಶೀಘ್ರವಾಗಿ ಆಗಬೇಕಾಗಿದೆ. ಸಭಾಮಂಟಪದ ಒಳಭಾಗದ ಬಲಬದಿಯ ಗೋಡೆಯಲ್ಲಿ ಶಿಲಾಶಾಸನವಿದೆ. ಈ ಶಾಸನವು ಕ್ರಿ.ಶ 1574 ರ ಅಚ್ಯುತರಾಯನ ಕಾಲಕ್ಕೆ ಸೇರಿದೆ. ಇದರಲ್ಲಿ ಚೆನ್ನಪ್ಪರಾಯ. ಆಣಿಕಯ್ಯ ಮತ್ತು ಮಲ್ಲರಸಯ್ಯರು ಅಂದಿನ ಕಾರ್ಯ ಕರ್ತರಾಗಿದ್ದು ಇವರು ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆಯ ಸುಂಕವನ್ನು ಸರ್ವಮಾನ್ಯವಾಗಿ ಬಿಟ್ಟರೆಂಬುದಾಗಿ ಹೇಳುತ್ತದೆ. ದೇವಾಲಯದ ಹೊರಗೆ. ಗರ್ಭಗೃಹದ ಬಲಕ್ಕೆ ಜೈನಶಿಲ್ಪವೊಂದನ್ನು ಇಡಲಾಗಿದೆ. ಇದರಿಂದ ದುಮ್ಮಿ ಗ್ರಾಮದಲ್ಲಿ ಜಿನಾಲಯವಿದ್ದುದು ಗೊತ್ತಾಗುತ್ತದೆ.
ಈ ದೇವಸ್ಥಾನದ ರಂಗ ಮಂಟಪದ ದಕ್ಷಿಣದ ಗೋಡೇಕಲ್ಲಿನಲ್ಲಿ ಕೆತ್ತಲಾದ ಶಾಸನದ ವಿವರ ಇಲ್ಲಿದೆ. 1456 ರ ಮಾರ್ಚ್ (ಚೈತ್ರಮಾಸ) ರಲ್ಲಿ ಅಚ್ಯುತ ದೇವರಾಯರ ಕಾಲದಲ್ಲಿ ಹಾಕಲಾಗಿದೆ. ಇದನ್ನು ಮೀರಿದವರಿಗೆ ತಂದೆ- ತಾ- ಗೋವು – ಬ್ರಾಹ್ಮಣರನ್ನು ಕೊಂದ ಪಾಪಕ್ಕೆ ಹೋಗುವರು ಎಂದು ಬರೆಯಲಾಗಿದೆ.

 

3. ಮೈಲಾರಲಿಂಗೇಶ್ವರ ದೇವಸ್ಥಾನ :
ದುಮ್ಮಿ ಗ್ರಾಮದ ಮಧ್ಯ ಇರುವ ಈ ಮಂದಿರ 17-18 ನೇ ಶತಮಾನಕ್ಕೆ ಸೇರಿದ್ದಾಗಿದೆ. ಪೂರ್ವಾಭಿಮುಖಿಯಾಗಿರುವ ಈ ಗುಡಿಯು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹ, ಅಂತರಾಳದ ಇಕ್ಕೆಲಗಳಲ್ಲಿ ಎರಡು ಗರ್ಭಗೃಹಗಳು, ನವರಂಗ, ಮುಖಮಂಟಪ ಹಾಗೂ ಮುಂಭಾಗದಲ್ಲಿ ಭೈರವ ಪಾದ, ಶಿಬಾರಗಳನ್ನು ಒಳಗೊಂಡ ದೇವಾಲಯವಿದು. ಗರ್ಭಗೃಹದಲ್ಲಿ ಒಂದೂವರೆ ಅಡಿ ಎತ್ತರದ ಕುದುರೆ ಪೀಠದ ಮೇಲೆ ಮೂರೂವರೆ ಅಡಿಗಳೆತ್ತರ ಮೈಲಾರಲಿಂಗಪ್ಪನ ಶಿಲ್ಪವನ್ನು ಪ್ರತಿಷ್ಟಾಪಿಸಿ ಪೂಜಿಸಲಾಗುತ್ತದೆ. ಅಂತರಾಳದ ಎಡಬದಿಯ ಗರ್ಭಗೃಹದಲ್ಲಿ ಕಾಳಹಸ್ತ್ಯಮ್ಮ ಮತ್ತು ಬಲಭಾಗದ ಗರ್ಭಗೃಹದಲ್ಲಿ ತಿಮ್ಮಪ್ಪನೆಂದು ಕರೆಯುತ್ತಿರುವ ವಿಷ್ಣು ಶಿಲ್ಪಗಳನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಿರುವರು. ಸುಮಾರು ಎರಡು ಅಡಿ ಎತ್ತರದ ವಿಷ್ಣು ಶಿಲ್ಪವು ತನ್ನ ನಾಲ್ಕು ಕೈಗಳಲ್ಲಿ ಚಕ್ರ, ಶಂಖ, ಪದ್ಮ ಹಾಗೂ ಎಡಗೈಯಲ್ಲಿ ಪುಸ್ತಕರೂಪದ ವಸ್ತುವನ್ನು ಹಿಡಿದೆದೆ. ದೇವಲಯದ ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ. ಮುಂಭಾಗದಲ್ಲಿ ಭೈರವನ ಪಾದ ಮತ್ತು ಶೀಬಾರಗಳಿವೆ. ಭೈರವನ ಪಾದದಲ್ಲಿ ನಾಲ್ಕು ಪಾದಗಳು ಈ ಪಾದಗಳನ್ನು ಸರ್ಪವು ಸುತ್ತುವರಿದಿದೆ. ಇಕ್ಕೆಲಗಳಲ್ಲಿ ಇಬ್ಬರು ವ್ಯಕ್ತಿಗಳ ಬೇರ್ಪಡಿಸಿದ ರುಂಡ ಮತ್ತು ಮುಂಡಗಳು ಹಾಗೂ ಎರಡು ಟಗರುಗಳ ತಲೆಗಳನ್ನು ಕಡೆಯಲಾಗಿದೆ. ಇಲ್ಲಿ ಕಡೆಯಲಾದ ನಾಲ್ಕು ಪಾದಗಳನ್ನು ಮೈಲಾರಲಿಂಗಪ್ಪ ಮತ್ತು ಗಂಗಮಾಳಮ್ಮನೆಂದು ಹೇಳಲಾಗುತ್ತದೆ.

 

4. ವೀರಭದ್ರೇಶ್ವರ ದೇವಸ್ಥಾನ : ಪಾಳೆಯಗಾರರ ಶೈಲಿಯಲ್ಲಿ 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಮಂದಿರ ಉತ್ತರಾಭಿಮುಖವಾಗಿದೆ. ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ಸುಮಾರು ಹದಿನೆಂಟು ಅಡಿಗಳೆತ್ತರದ ದೀಪಸ್ತಂಭಗಳನ್ನು ಒಳಗೊಂಡ ದೇವಾಲಯವಿದು. ಗರ್ಭಗೃಹದಲ್ಲಿ ಸುಮಾರು ನಾಲ್ಕೂವರೆ ಅಡಿಗಳಷ್ಟು ಎತ್ತರದ ವೀರಭದ್ರನು ಕರಂಡ ಮುಕುಟಧಾರಿಯಾಗಿದ್ಧಾನೆ. ನಾಲ್ಕು ಕೈಗಳಲ್ಲಿ ಕತ್ತಿ ಗುರಾಣಿ ಮತ್ತು ಬಿಲ್ಲು-ಬಾಣಗಳಿವೆ. ಕೆಳಗೆ ಬಲಬದಿಯಲ್ಲಿ ದಕ್ಷಬ್ರಹ್ಮನಿರುವನು. ಗರ್ಭಗೃಹದ ಬಾಗಿಲುವಾಡಕ್ಕೆ ಟೈಲ್ಸ್‌ಗಳಿಂದ ಮುಚ್ಚಿರುವುದರಿಂದ ಅಲಂಕರಣೆಗಳು ಗೋಚರಿಸುತ್ತಿಲ್ಲ. ಅಂತರಾಳದ ಬಾಗಿಲುವಾಡವನ್ನು ಹಿತ್ತಾಳೆಯ ತಗಡಿನಿಂದ ಮುಚ್ಚಲಾಗಿದೆ. ಇದರಲ್ಲಿ ಶೈವ ದ್ವಾರಪಾಲಕರು, ಹೂ ಬಳ್ಳಿ ಶಾಕೆಗಳಿದ್ದು ಲಲಾಟದಲ್ಲಿ ಶಿವನ ಪ್ರತಿಮೆದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಈ ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿದ್ದು ಇವುಗಳ ಚಚ್ಚೌಕಭಾಗದಲ್ಲಿ ಉಬ್ಬುಶಿಲ್ಪಗಳಿವೆ. ಅವುಗಳಲ್ಲಿ ಕೈಮುಗಿದು ನಿಂತ ಭಕ್ತ, ನಂದಿ, ಸಿಂಹ, ಭಕ್ತದಂಪತಿ, ಬೇಡರ ಕಣ್ಣಪ್ಪ, ಲಿಂಗಕ್ಕೆ ಹಾಲುಣಿಸುತ್ತಿರುವ ಹಸು, ಗಿಳಿ, ವಾದ್ಯ ಯೋಗಪಟ್ಟದಲ್ಲಿರುವ ಯತಿ ಮುಖ್ಯವಾಗಿದೆ. ನವರಂಗದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರಿದ್ದು ಲಲಾಟದಲ್ಲಿ ಗಣೇಶನನ್ನು ಕಡೆಯಲಾಗಿದೆ.
ವೀರಭದ್ರನ ಜಾತ್ರೆಯು ಹಂಪೆ ಹುಣ್ಣಿಮೆಯಲ್ಲಿ ವಿಜೃಂಭಣೆಯಿಂದ ಜರುಗುತ್ತದೆ. ಒಂದು ವಾರಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮೊದಲನೆಯ ದಿನ ಮದಲಿಂಗಶಾಸ್ತ್ರ, ಇತರೆ ದಿನಗಳಂದು ಕೆಂಡ ತುಳಿಯುವುದು, ಸಿಡಿ ಉತ್ಸವ, ದೊಡ್ಡೆಡೆ, ಓಕಳಿಯಾಟ ಮೊದಲಾದ ಕಾರ್ಯಕ್ರಮಗಳಿರುತ್ತದೆ.
ಈ ದೇವಾಲಯ ಕ್ರಿ.ಶ 1535 ರ ಅಚ್ಯುತರಾಯನ ಕಾಲದ ಶಾಸನವು ದಕ್ಷಿಣ ಭುಜದಂಡನೆನಿಸಿದ ಕೃಷ್ಣಪ್ಪನಾಯಕರ ಕಾರ್ಯಕರ್ತನಾದ ಮಲ್ಲರಸನು ದುಮ್ಮಿ ಸೀಮೆಯನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ದುಮ್ಮಿಯ ಪುರವರಾಧೀಶ್ವರ ಶ್ರೀ ವೀರಭದ್ರದೇವರ ಅಮೃತಪಡಿಗೆಗಾಗಿ ದು”ಯ ನಿರಾಶ್ರಯ ಮಠದ ಕೆಂಚರಣ್ಣೊಡೆಯರು ತಮಗೆ ದುಮ್ಮಿಯ ಗೌಡ, ಪುಟ್ಟಣಸ್ವಾಮಿ, ಪ್ರಜೆಗಳು ಬಿಟ್ಟುಕೊಟ್ಟ ಮೂಲೆವೀಸದಲ್ಲಿ ಅರ್ಧ ಪಾಲನ್ನು ಈ ಸಕಲಜನಗಳಿಗೆ ಧರ್ಮಾಭಿವೃದ್ಧಿ ಯಾಗಬೇಕೆಂದು ನೀಡಿದರೆಂದು ಹೇಳುತ್ತದೆ. ಈ ಶಾಸನದಲ್ಲಿ ವೀರಭದ್ರ ದೇವರನ್ನು ದುಮ್ಮಿಯ ಪುರವರಾಧೀಶ್ವರನೆಂದು ಕರೆದಿರುವುದು, ಗ್ರಾಮದಲ್ಲಿ ನಿರಾಶ್ರಯ ಮಠವು 16ನೇ ಶತಮಾನದಲ್ಲಿ ಇತ್ತೆಂಬುದು ಗಮನಾರ್ಯ, ಹಾಗೆಯೆ ಕೊನೆಯಲ್ಲಿ ಶಾಪಶಯವಿದ್ದು ಇದಕ್ಕೆ ಯಾರಾದರೂ ತಪ್ಪಿದರೆ ದೇವಾ ಪೃಥ್ವಿ ಮಹಾಮತ್ತಿಗೆ ಹೊರಗು ವಿಭೂತಿ ರುದ್ರಾಕ್ಷಿಗೆ ಹೊರಗು ಎಂದಿದೆ ಇದೇ ಗ್ರಾಮದ ಇನ್ನೊಂದು ಶಾಸನದಲ್ಲಿ ವಿರಕ್ತಮಠವೊಂದು ಇದ್ದುದಾಗಿ ಹೇಳಿದೆ.

ಈ ಗ್ರಾಮದಲ್ಲಿ ಆಂಜನೇಯ, ಕೆಂಚಮ್ಮ, ಬೀರೇದೇವರು, ಕುಕ್ಕವಾಡದಮ್ಮ, ಸಿದ್ದಪ್ಪ, ಮೊದಲಾದ ದೇವಾಲಯಗಳಿವೆ.

5. ದುಮ್ಮಿ ಕೆರೆ:
ದುಮ್ಮಿ ಕೆರೆ ಐತಿಹಾಸಿಕವಾಗಿ ಪ್ರಮುಖವಾದ ಕೆರೆ. ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದು 400- ಎಕರೆಯಷ್ಟು ವ್ಯಾಪಿಸಿದೆ. ಈ ಕೆರೆಯು 500 ವರ್ಷಗಳಷ್ಟು ಹಳೆಯದಾಗಿದ್ದು, ಇದರ ಉಲ್ಲೇಖ ಶಾಸನಗಳಲ್ಲೂ ಇರುವುದು ವಿಶೇಷವಾಗಿದೆ.

6. ದುಮ್ಮಿ ಗುಡ್ಡ: ತಾಲ್ಲೂಕಿನ ಎತ್ತರದ ಬೆಟ್ಟಗಳಲ್ಲಿ ಒಂದಾದ ಈ ಗುಡ್ಡದ ಮೇಲ್ಬಾಗದಲ್ಲಿ ಕೆಂಚಮ್ಮ – ಮಾತಂಗಿಯರ ಮಂದಿರಗಳಿವೆ. ಹಿಂದೆ ಸೇನಾಕಾವಲಿಗೆ, ಶತ್ರುಗಳ ಚಲನವಲನ ತಿಳಿಯಲು ಈ ಬೆಟ್ಟವು ಆಯಕಟ್ಟಿನ ಸ್ಥಳವಾಗಿತ್ತು. ಸುತ್ತ ಮುತ್ತಲ 20-30 ಕಿ.ಮಿ.ದೂರದ ಸುಂದರ ಪರಿಸರವನ್ನು ಗುಡ್ಡದ ಮೇಲಿನಿಂದ ಕಾಣಬಹುದು.

ಎಲ್ಲಾ ಸರ್ಕಾರಿ, ಖಾಸಗಿ ಬಸ್ ಸೇವೆಗಳು ಇಲ್ಲಿ ಲಭ್ಯವಿದೆ. ವಾರದ ಎಲ್ಲಾ ದಿನ ಇಲ್ಲಿನ ಮಂದಿರಗಳು ತೆರೆದಿರುತ್ತವೆ ತಿಂಡಿ-ಊಟಕ್ಕೆ ಸಣ್ಣ ಪುಟ್ಟ ಹೋಟೇಲ್‌ಗಳಿವೆ. ವರ್ಷದ ಎಲ್ಲಾ ದಿನಗಳಲ್ಲೂ ಇಲ್ಲಿಗೆ ಬರಬಹುದಾಗಿದೆ.

ಮಾಹಿತಿ: ಅಒ ತಿಪ್ಪೇಸ್ವಾಮಿ ಚಿತ್ರದುರ್ಗ.Sಙ ಸೋಮಶೇಖರ್ ಹಂಪಿ ಕನ್ನಡ ವಿವಿ, ಜಗದೀಶ್ ಮಲ್ಲಾಡಿಹಳ್ಳಿ.

Share This Article
Enable Notifications OK No thanks