ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ : ಇಲ್ಲಿ ಪ್ರತಿ ವೀರಗಲ್ಲುಗಳಿಗೂ ದೇವಾಲಯ

5 Min Read

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ವೀರಗಲ್ಲುಗಳು ಅಂದರೆ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ವೀರ ಮರಣವನ್ನಪ್ಪಿ ಹುತಾತ್ಮರಾದ ಸೈನಿಕರಿಗೆ, ಅವರ ನೆನಪಿನಲ್ಲಿ ರಾಜ ಮಹಾರಾಜರುಗಳು, ಆಡಳಿತಗಾರರು..
ಅವರ ಚಿತ್ರಗಳನ್ನು ಕೆತ್ತಿಸಿ ಆಯಾ ಗ್ರಾಮಗಳಲ್ಲಿ ನೆಡುತ್ತಿದ್ದರು, ಅವರ ನೆನಪು ಎಂದಿಗೂ ಶಾಶ್ವತ ಹಾಗೂ ಅವರ ಸೇವೆ ನಾಡು ಎಂದಿಗೂ ಮರೆಯದು. ಜೊತೆಗೆ ಅವುಗಳನ್ನು ನೋಡಿ ಇತರ ಸಾಮಾನ್ಯ ನಾಗರಿಕರು ಸಹ ತಾಯಿ ನಾಡಿಗಾಗಿ ಪ್ರಾಣ ತ್ಯಾಗಕ್ಕೆ ಸಿದ್ದರಾಗುವಂತೆ ಪ್ರೇರೇಪಣೆ ನೀಡುತ್ತಿದ್ದವು.

ಅವುಗಳು ಹಾಳಾಗದಂತೆ ಅವುಗಳಿಗೆ ಸೂಕ್ತ ರಕ್ಷಣೆ ಮನ್ನಣೆ ನೀಡುತ್ತಿದ್ದರು,ಜೊತೆಗೆ ಹುತಾತ್ಮರಾದ ಸೈನಿಕರ ಕುಟುಂಬಗಳು ಅನಾಥವಾಗದಂತೆ ಅವರಿಗೆ ಭೂಮಿಯನ್ನು ದತ್ತಿ ನೀಡಲಾಗುತ್ತಿತ್ತು ಹಾಗೂ ಅವರ ಕುಟುಂಬ ನಿರ್ವಹಣೆಗೆ ಎಂದಿಗೂ ತೊಂದರೆ ಆಗದಂತೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿದ್ದರು.
ಹಸುಗಳು,ಕರುಗಳು, ರಕ್ಷಿಸುವುದು, ಸ್ತ್ರೀಯರ ಮಾನ ಪ್ರಾಣ ಕಾಪಾಡುವುದು, ಊರುಗಳನ್ನು ಕಳ್ಳರಿಂದ ರಕ್ಷಿಸುವುದು, ಶತ್ರುಗಳ ದಾಳಿಯನ್ನು ತಡೆಯುವುದು.. ಹೀಗೆ ನಾನಾ ರೀತಿಯ ಕಾರಣಗಳಲ್ಲಿ ತಮ್ಮ ಶೌರ್ಯ ಪರಾಕ್ರಮವನ್ನು ಮೆರೆದು ಹುತಾತ್ಮರಾದ ಯೋಧರ ನೆನಪಿನಲ್ಲಿ ಈ ವೀರಗಲ್ಲುಗಳನ್ನು ನೀಡಲಾಗುತ್ತಿತ್ತು.
ಇಂತಹ ವೀರಗಲ್ಲುಗಳು ನಮ್ಮ ನಾಡಿನ ಬಹಳಷ್ಟು ಊರುಗಳಲ್ಲಿ ಕಂಡು ಬರುತ್ತವೆ.

 

ಕೆಲವು ಕಡೆ ಇದರ ಐತಿಹಾಸಿಕ ಮಹತ್ವವನ್ನು ತಿಳಿದು ರಕ್ಷಣೆ ಮಾಡಿದರೆ ಮತ್ತೆ ವೀರಗಲ್ಲುಗಳನ್ನು ಕೆಲವು ಕಡೆ ರಕ್ಷಣೆ ಇಲ್ಲದೆ ತಿಪ್ಪೆಗುಂಡಿಯಲ್ಲೋ,ಕಸದ ತೊಟ್ಟಿಯಲ್ಲೋ, ದೇವಾಲಯದ ಕಸದ ರಾಶಿಯಲ್ಲಿ ಬಿದ್ದಿರುವುದನ್ನು ಹಾಗೂ ರಕ್ಷಣೆ ಇಲ್ಲದೆ ಚರಂಡಿಗಳ ಗೋಡೆಗಳಿಗೆ ಕಲ್ಲಾಸರೆಯಾಗಿರುವುದನ್ನು ನಾವು ನೋಡಿರುತ್ತೇವೆ.

ಆದರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಇರುವ ವೀರಗಲ್ಲುಗಳಿಗೆ ದೇವಾಲಯಗಳನ್ನು ನಿರ್ಮಿಸಿ ಅವುಗಳ ರಕ್ಷಣೆಗೆ ಇಲ್ಲಿನ ಜನರು ಮುಂದಾಗಿರುವುದು ಒಂದು ಅನುಕರಣೀಯ ಹಾಗೂ ಮಾದರಿ ನಡೆಯಾಗಿದೆ. ಇದು ಈಗಿನ ಇತ್ತೀಚಿನ ಬೆಳವಣಿಗೆಯಲ್ಲ.
ತಲೆತಲಾಂತರಗಳಿಂದ ನೂರಾರು ವರ್ಷಗಳಿಂದ ಇವುಗಳಿಗೆ ಇಲ್ಲಿ ರಕ್ಷಣೆ ನೀಡಲಾಗಿದೆ ಹಾಗೂ ಇವುಗಳನ್ನು ದೇವರ ಸಮಾನವಾಗಿ ಆರಾಧಿಸಿ ಪ್ರತಿ ವರ್ಷ ಪೂಜೆ,ಹಬ್ಬ ಜಾತ್ರೆಗಳನ್ನು ನೆರವೇರಿಸಲಾಗುತ್ತದೆ.

 

ಹೊಳಲ್ಕೆರೆ ಪಟ್ಟಣವು ಹಿಂದಿನಿಂದಲೂ ವೀರರ ಭೂಮಿಯಾಗಿದೆ. ಕರ್ನಾಟಕದ ಬಹಳಷ್ಟು ಊರುಗಳಲ್ಲಿ ನೂರಾರು ಸೈನಿಕರು, ಸೈನಿಕರ ಸ್ಮಾರಕಗಳು ಇರುವ ಗ್ರಾಮಗಳಿವೆ. ಅಂತಹದ್ದೇ ವೀರ ಸೈನಿಕರ ಊರಾಗಿ ಹಿಂದೆ ಹೊಳಲ್ಕೆರೆ ಗುರುತಿಸಲ್ಪಡುತ್ತಿತ್ತು. ಅದಕ್ಕೆ ಇಲ್ಲಿರುವ ವೀರಗಲ್ಲುಗಳೇ ಸಾಕ್ಷಿ. ರಾಷ್ಟ್ರಕೂಟರ,ಹೊಯ್ಸಳರ, ವಿಜಯನಗರ ಅರಸರ ಪಾಳೇಗಾರರ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಇಲ್ಲಿನ ಬಹಳಷ್ಟು ಯೋಧರು ಭಾಗವಹಿಸಿ ಹುತಾತ್ಮರಾಗಿದ್ದಾರೆ. ಅವರ ನೆನಪಿಗಾಗಿ ಇಲ್ಲಿ ಬಹಳಷ್ಟು ವೀರಗಲ್ಲುಗಳನ್ನು ಕಾಣಬಹುದು.

 

ಇಂದು ಕೆಲವು ಮಾತ್ರ ಉಳಿದಿದ್ದರೂ ಹಿಂದಿನ ತಲೆಮಾರಿನವರು ಹೇಳುವಂತೆ ಇಲ್ಲಿ ನೂರಕ್ಕೂ ಅಧಿಕ ವೀರಗಲ್ಲುಗಳು ಇದ್ದವು. ಕೆಲವು ಕಾಲನ ಹೊಡೆತಕ್ಕೆ ಹಾಳಾಗಿದ್ದರೆ,ಮತ್ತೆ ಕೆಲವು ಸಂರಕ್ಷಣೆ ಇಲ್ಲದೆ ಕಾಣೆಯಾಗಿವೆ. ಐತಿಹಾಸಿಕ ಮಹತ್ವ ಅರಿಯದ ಬಹಳಷ್ಟು ಜನರು ಇದರ ರಕ್ಷಣೆಗೆ ಮುಂದಾಗದೆ ಹತ್ತಾರು ವೀರಗಲ್ಲುಗಳು ಮಣ್ಣಿನ ಅಡಿಯಲ್ಲಿ ಸೇರಿ ಹೋಗಿವೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಂತೆ ನಡೆಸಿದರೆ ಇಲ್ಲಿಯು ಅಧಿಕ ವೀರಗಲ್ಲುಗಳು ದೊರೆಯುತ್ತದೆ ಎಂಬುದು ಇಲ್ಲಿನ ಹಿರಿಯರ ಅನಿಸಿಕೆಯಾಗಿದೆ. ಹತ್ತನೇ ಶತಮಾನದಿಂದಲೂ ಈ ಊರು ಇರುವ ಬಗ್ಗೆ ಇಲ್ಲಿನ ಶಾಸನಗಳು ತಿಳಿಸುತ್ತವೆ. ಆಗಲೇ ಇದೊಂದು ಪ್ರಮುಖ ವ್ಯಾಪಾರಿ ಪಟ್ಟಣವಾಗಿದ್ದು ಹತ್ತಾರು ಊರುಗಳ ವ್ಯಾಪಾರಸ್ಥರು, ವರ್ತಕರು ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಿದ್ದರು.

 

ತಮ್ಮ ಸಾಮಾನು, ಧನ,ಧಾನ್ಯ, ಹಸು ಕರುಗಳನ್ನು ಕಳ್ಳರಿಂದ ರಕ್ಷಿಸಲು ರಕ್ಷಣೆಗೆ ಯೋಧರ ಅವಶ್ಯಕತೆ ಬೇಕಾಗಿರುತ್ತಿತ್ತು. ಆಗ ಸಾಮಾನ್ಯವಾಗಿ ನಡೆಯುತ್ತಿದ್ದ ಹೋರಾಟಗಳಿಂದ ಇಲ್ಲಿ ಯೋಧರು ಹುತಾತ್ಮರಾಗಿ ಅವರುಗಳ ನೆನಪಿಗೆ ಇಲ್ಲಿ ವೀರಗಲ್ಲುಗಳನ್ನು ನೆಡಲು ಶುರುವಾಯಿತು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

ಇಲ್ಲಿನ ಅತ್ಯಂತ ಹಳೆಯ ವೀರಗಲ್ಲು ಒಂಬತ್ತನೇ ಶತಮಾನಕ್ಕೆ ಸೇರಿದ್ದರೆ ನಂತರದಲ್ಲಿ ಹೊಯ್ಸಳ ಹಾಗೂ ವಿಜಯನಗರ ಕಾಲದ ವೀರಗಲ್ಲುಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿವೆ. ಎಲ್ಲಾ ವೀರಗಲ್ಲುಗಳಿಗೂ ಇಲ್ಲಿ ಸೂಕ್ತ ಸಂರಕ್ಷಣೆ ಹಾಗೂ ಪೂಜನೀಯ ಸ್ಥಾನವನ್ನು ನೀಡಲಾಗಿದೆ

ಹೊನ್ನಮ್ಮ -ಹೊಳಲಮ್ಮ ದೇವಾಲಯ:
ಊರು ಬಾಗಿಲು ಬಳಿಯಲ್ಲಿ ಇರುವ ಹೊನ್ನಮ್ಮ, ಹೊಳಲಮ್ಮ ಸ್ತ್ರೀ ದೇವತೆಗಳ ದೇವಾಲಯಗಳು ಮೂಲತಃ ವೀರಗಲ್ಲುಗಳಾಗಿದ್ದು ಇವು 9-10 ನೇ ಶತಮಾನದ ರಾಷ್ಟ್ರಕೂಟರ ಕಾಲಕ್ಕೆ ಸೇರಿದಾಗಿದ್ದು ಇವರು ಈ ಊರಿನ ಪ್ರಮುಖ ದೇವರುಗಳೆಂದು ಪೂಜಿಸಲಾಗುತ್ತದೆ. ಇದೇ ಹೊಳಲಮ್ಮ ದೇವಿಯ ಹೆಸರಿನಿಂದ ಹೊಳಲ್ಕೆರೆ ಪಟ್ಟಣಕ್ಕೆ ಹೆಸರು ಬಂದಿದೆ ಎಂದು ಕೂಡ ಹೇಳಲಾಗುತ್ತದೆ.
ನೇಗಿಲಿನ ಚಿತ್ರ ಇರುವ ಅಪರೂಪದ ವೀರಗಲ್ಲು ಇದಾಗಿದೆ. ಈ ಎರಡು ವೀರಗಲ್ಲುಗಳಿಗೆ ಪ್ರತ್ಯೇಕ ದೇವಾಲಯ ನಿರ್ಮಿಸಲಾಗಿದೆ.

ಕಾಲಭೈರವೇಶ್ವರ ದೇವಾಲಯದ ವೀರಗಲ್ಲು:
ಕಾಲಭೈರವೇಶ್ವರ ದೇವಾಲಯದ ಎದುರು ಭಾಗದಲ್ಲಿ ಸೂಕ್ತ ರಕ್ಷಣೆ ಹಾಗೂ ಮಂಟಪದಲ್ಲಿ ಈ ವೀರಗಲ್ಲನ್ನು ಇಡಲಾಗಿದೆ. ಅತ್ಯಂತ ದೊಡ್ಡದಾದ ವೀರಗಲ್ಲು ಇದಾಗಿದ್ದು ಇದರಲ್ಲಿ ಗೋ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ವೀರನನ್ನು ಚಿತ್ರಿಸಲಾಗಿದೆ. ಇದು 11 ನೇ ಶತಮಾನಕ್ಕೆ ಸೇರಿದೆ.

ಚೌಡಮ್ಮ :
ಹೊಳಲ್ಕೆರೆ ಪಟ್ಟಣದ ದಾವಣಗೆರೆ ರಸ್ತೆಯ ಹಿರೇಕೆರೆಯ ಏರಿಯ ಭಾಗದಲ್ಲಿ ಇರುವ ಮಟ್ಟಿಯ ಬಳಿಯ ರಂಗನಾಥ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಈ ವೀರಗಲ್ಲು ಇದೆ.ಮೂಲತಃ ಇದು 2000 ವರ್ಷಗಳ ಹಿಂದಿನ ಬೃಹತ್ ಶಿಲಾಯುಗದ ಕಲ್ಲುಗೋರಿಯಾಗಿದೆ. ತುರುಬನ್ನು ಹೊಂದಿರುವ ಪುರುಷ ವೀರನ ವೀರಗಲ್ಲು ಇದಾಗಿದ್ದರೂ ಜನರು ಇದನ್ನು ಸ್ತ್ರೀ ದೇವತೆ ಎಂದು ಭಾವಿಸಿ ಪೂಜಿಸಿ ಚೌಡಮ್ಮ ಎಂದು ಕರೆಯುತ್ತಾರೆ.ಇದು ವಿಜಯನಗರ ಕಾಲಕ್ಕೆ ಸೇರಿದೆ.

ಸಣ್ಣ ಚೌಡಮ್ಮ:
ಹೊಳಲ್ಕೆರೆಯ ಹಿರೇಕೆರೆಯ ಮುಂಭಾಗದಲ್ಲಿ ಮಲ್ಕಾಪುರಕ್ಕೆ ಹೋಗುವ ದಾರಿಯಲ್ಲಿ ಕಂಡು ಬರುವ ಈ ಗುಡಿಯಲ್ಲಿ 15-16 ನೇ ಶತಮಾನಕ್ಕೆ ಸೇರಿದ ವೀರಗಲ್ಲು ಶಿಲ್ಪವಿದ್ದು ಇದಕ್ಕೆ ಕೂಡ ಸಣ್ಣ ಚೌಡಮ್ಮ ಎಂದು ಪೂಜಿಸಿ ಗುಡಿಯನ್ನು ನಿರ್ಮಿಸಲಾಗಿದೆ. ವೀರಯೋಧನು ಕುದುರೆ ಸವಾರನಾಗಿದ್ದು ಯುದ್ಧದಲ್ಲಿ ಹುತಾತ್ಮನಾಗಿದ್ದಾನೆ.

ದೊಡ್ಡ ಚೌಡಮ್ಮ :
ಹೊಳಲ್ಕೆರೆಯ ದಾವಣಗೆರೆ ರಸ್ತೆಯ ಕೆರೆಯ ಏರಿಯ ಕೆಳಭಾಗದಲ್ಲಿ ಇರುವ ಈ ವೀರಗಲ್ಲು ವೀರನಿಗೆ ಸಮರ್ಪಿತವಾಗಿದ್ದು ಇದಕ್ಕೆ ಕೆಲವು ದಶಕಗಳ ಹಿಂದೆ ಗುಡಿಯನ್ನು ನಿರ್ಮಿಸಲಾಗಿದೆ. ವಿಜಯನಗರ ಕಾಲದ ವೀರಗಲ್ಲು ಇದಾಗಿದೆ. ಹೊಳಲ್ಕೆರೆಯಿಂದ ದಾವಣಗೆರೆಗೆ ಸಾಗುವ ರಸ್ತೆಯು ತೆರೆಯ ಏರಿಯ ಕೆಳಭಾಗದಲ್ಲಿ ಅತ್ಯಂತ ಕಿರಿದಾದ ಸ್ಥಿತಿಯಲ್ಲಿ ಇದ್ದಿತು. ಅವುಗಳ ಬಳಿಯಲ್ಲಿ ಇದ್ದ ಮರಗಳ ಆಸರೆಗೆ ಸಣ್ಣ ಮಂಟಪಗಳಲ್ಲಿ ಈ ವೀರಗಲ್ಲುಗಳನ್ನು ಇಡಲಾಗಿತ್ತು ರಸ್ತೆಯನ್ನು ಅಗಲೀಕರಣ ಮಾಡುವ ಸಂದರ್ಭದಲ್ಲಿ ರಸ್ತೆಯ ಅಂಚಿಗೆ ವೀರಗಲ್ಲುಗಳನ್ನು ಸರಿಸಿ ಅತ್ಯಂತ ಸುಸ್ಥಿತಿಯ ಸಣ್ಣ ಗುಡಿಗಳನ್ನು ನಿರ್ಮಿಸಲಾಗಿದೆ.
2010 ಸುಮಾರಿಗೆ ಈ ಮೇಲೆ ತಿಳಿಸಿದ ವೀರಗಲ್ಲುಗಳಿಗೆ ಮಂದಿರಗಳನ್ನು ನಿರ್ಮಿಸಲಾಯಿತು.
ಇಂದಿಗೂ ಈ ಎಲ್ಲಾ ವೀರಗಲ್ಲುಗಳನ್ನು ದೇವರ ರೂಪವೆಂದು ನಂಬಿ ಆರಾಧಿಸುತ್ತಾರೆ. ಯೋಧರನ್ನು ದೇವರೆಂದು ಧ್ಯಾನಿಸಿ ಅವರ ಸೇವೆಯನ್ನು ಇಂದಿಗೂ ಚಿರಸ್ಮರಣೀಯವಾಗಿಸಿದ್ದಾರೆ.

Share This Article
Enable Notifications OK No thanks