ನಮ್ಮ ಊರು ನಮ್ಮ ಹೆಮ್ಮೆ | ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯ

3 Min Read

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಬೋರನಕಣಿವೆ ಜಲಾಶಯವು ತುಮಕೂರು ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದ್ದು ಇದನ್ನು ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
ತುಮಕೂರು ಜಿಲ್ಲೆಯು ಮಧ್ಯ ಕರ್ನಾಟಕದ ಒಂದು ಬರಪೀಡಿತ ಪ್ರದೇಶವಾಗಿದ್ದು ಇಲ್ಲಿ ದೊಡ್ಡ ನದಿಗಳಾಗಲಿ, ದೊಡ್ಡ ನೀರಾವರಿ ಯೋಜನೆಗಳಾಗಲಿ, ದೊಡ್ಡ ಜಲಾಶಯಗಳಾಗಲಿ ಇರುವುದಿಲ್ಲ. ಬೀಳುವ ಅಲ್ಪಸ್ವಲ್ಪ ಮಳೆಯಲ್ಲಿಯೇ, ಮಳೆಗಾಲದಲ್ಲಿ ಮಾತ್ರ ಹರಿಯುವ ಸಣ್ಣಪುಟ್ಟ ಹಳ್ಳಗಳು,ಸಣ್ಣ ನದಿಗಳನ್ನೇ ತಡೆದು ನಿಲ್ಲಿಸಿ ಸಣ್ಣ ಜಲಾಶಯಗಳನ್ನು ನಿರ್ಮಿಸಲಾಗಿದೆ.

 


ಇದರಿಂದ ಅಕ್ಕಪಕ್ಕದ ಗ್ರಾಮಗಳ ನೂರಾರು ಎಕರೆ ಜಮೀನುಗಳು ನೀರಾವರಿ ಪ್ರದೇಶವಾಗಿದೆ, ಜೊತೆಗೆ ಜನರಿಗೆ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತದೆ.
ಈ ಜಲಾಶಯವು ಬಹಳಷ್ಟು ಜನರಿಗೆ ಇಂದಿಗೂ ಅಪರಿಚಿತವಾಗಿದೆ. ಹಾಗಾಗಿ ಇಲ್ಲಿ ಗೌಜುಗದ್ದಲ,ಜನದಟ್ಟಣೆ ಇರದೇ ಪ್ರಶಾಂತವಾದ ವಾತಾವರಣವಿದ್ದು ಪ್ರಕೃತಿಯ ಮಡಿಲಿನಲ್ಲಿರುವ ಸುಂದರ ಜಲಾಶಯವನ್ನು ನೋಡಬಹುದಾಗಿದೆ. ನೈಸರ್ಗಿಕವಾಗಿ ಇರುವ ಬೆಟ್ಟ ಗುಡ್ಡಗಳನ್ನೇ ಇದಕ್ಕೆ ಆಧಾರವಾಗಿಸಲಾಗಿದೆ. ಎರಡು ಗುಡ್ಡಗಳ ನಡುವೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯೇ ಬೋರನ ಕಣಿವೆ.
ಚಿಕ್ಕನಾಯಕನಹಳ್ಳಿಯಿಂದ 35 ಕಿಲೋ ಮೀಟರ್ ದೂರದಲ್ಲಿ ಬೋರನ ಕಣಿವೆ ಡ್ಯಾಮ್ ಸಿರಾ- ಹುಳಿಯಾರು ರಾಷ್ಟ್ರೀಯ ಹೆದ್ದಾರಿಯ ಮುಖ್ಯರಸ್ತೆಯಿಂದ ಒಳಭಾಗದಲ್ಲಿ ಒಂದು ಕಿಲೋಮೀಟರ್ ದೂರದಲ್ಲಿದೆ.

 

ಸುವರ್ಣಮುಖಿ ನದಿಯು ವೇದಾವತಿ ನದಿಯ ಉಪನದಿಯಾಗಿದೆ.ಈ ನದಿಯು ಗುಬ್ಬಿ ತಾಲೂಕಿನ
ಮೂಗನಾಯಕನ ಕೋಟೆಯ ಗುಡ್ಡ ಸಾಲುಗಳಲ್ಲಿ ಹುಟ್ಟಿ ಮುಂದೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹರಿದು ಬೋರನಕಣಿವೆ ಜಲಾಶಯದ ಮೂಲಕ ಸಾಗಿ ಮುಂದೆ ಗಾಯತ್ರಿ ಜಲಾಶಯ ತಲುಪುತ್ತದೆ.

 

ಮುಂಜಾನೆ ಮತ್ತು ಸಂಜೆಯ ಸಮಯ ಇಲ್ಲಿಗೆ ಭೇಟಿ ನೀಡಿದರೆ ಬಹಳಷ್ಟು ಮನಸ್ಸಿಗೆ ಸಂತೋಷವಾಗುತ್ತದೆ. ಇದರ ಬಳಿಯಿಂದ ಮುಂದೆ ಆನೆ ಕಾರಿಡಾರ್ ಪ್ರದೇಶ ಶುರುವಾಗುವ ಕಾರಣ ಸುತ್ತಮುತ್ತಲ ವಾತಾವರಣ ಬೆಟ್ಟ-ಗುಡ್ಡಗಳು ಹಚ್ಚಹಸಿರಿನ ತಾಣವಾಗಿದ್ದು ಟ್ರಕ್ಕಿಂಗ್ ಗೆ ಹೇಳಿ ಮಾಡಿಸಿದ ಜಾಗವಾಗಿದೆ.

 

ಅರ್ಧ ದಿನದ ಪಿಕ್ನಿಕ್ಕಿಗೆ ಹೇಳಿಮಾಡಿಸಿದ ಜಾಗವಾಗಿದೆ.
ಜಲಾಶಯದ ಮೇಲಿನಿಂದ ನಿಂತು ನೋಡಿದರೆ ಸುತ್ತಮುತ್ತಲ ಹತ್ತಾರು ಕಿಲೋಮೀಟರ್ ದೂರಕ್ಕೆ ಹಬ್ಬಿದ ಬೆಟ್ಟ-ಗುಡ್ಡಗಳು, ಹಚ್ಚಹಸುರಿನ ವಾತಾವರಣ, ವಿಶಾಲವಾಗಿ ಹರಡಿರುವ ಹಿನ್ನೀರು ಪ್ರದೇಶವನ್ನು ಕಣ್ತುಂಬಿಕೊಳ್ಳಬಹುದು.

ಹೋಗುವ ದಾರಿ:
ಶಿರಾ- ಹುಳಿಯಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಹೊಯ್ಸಳಕಟ್ಟೆ ಗ್ರಾಮದಿಂದ ದಕ್ಷಿಣಕ್ಕೆ 1 ಕಿಲೋಮೀಟರ್ ರಸ್ತೆಯಲ್ಲಿ ಸಾಗಿದರೆ ಡ್ಯಾಮ್ ಸಿಗುತ್ತದೆ.
ಮಳೆಗಾಲದ ನಂತರ ಫೆಬ್ರವರಿ ತನಕ ನೋಡುವ ಸಮಯ .

ಅಣೆಕಟ್ಟಿನ ನಿರ್ಮಾಣ ಕಾರ್ಯ ಮೇ ತಿಂಗಳು 1888ನೇ ಇಸವಿಯಲ್ಲಿ ಪ್ರಾರಂಭಿಸಿ ಅಕ್ಟೋಬರ್ ತಿಂಗಳು 1892ನೇ ಇಸವಿಯಲ್ಲಿ ಪೂರ್ಣಗೊಳಿಸಲಾಗಿದೆ.

ಬೋರ ಎಂಬ ಕುರಿ ಕಾಯುವ ಯುವಕನ ಮನವಿ ಮೇರೆಗೆ ನಿರ್ಮಾಣವಾದ ಡ್ಯಾಂ ಇದು ಆದ್ದರಿಂದಲೇ ಬೋರನಕಣಿವೆ ಎಂಬ ಹೆಸರುಬಂದಿದೆ ಎನ್ನಲಾಗುತ್ತದೆ.

ಇದನ್ನು ಕಟ್ಟಿಸಿದವರು ಮೈಸೂರು ಸಂಸ್ಥಾನದ ಮಹಾರಾಜರಾದ ಚಾಮರಾಜೇಂದ್ರ ಒಡೆಯರ್. ಆಗ ದಿವಾನರಾಗಿದ್ದವರು ಕೆ.ಶೇಷಾದ್ರಿಅಯ್ಯರ್.

ಈ ಜಲಾಶಯ ನಿರ್ಮಿಸಲು ಬರ ಪರಿಹಾರ ಕಾಮಗಾರಿಯಾಗಿ ಅಂದಿನ ಮಹಾರಾಜರು ನೀಡಿದ ಆದೇಶದಂತೆ ನಿರ್ಮಾಣ ಮಾಡಲಾಗಿತ್ತು. ಆಗ ಇದಕ್ಕೆ ತಗುಲಿದ ವೆಚ್ಚ 2,20,000 (ಎರಡು ಲಕ್ಷದ ಇಪ್ಪತ್ತು ಸಾವಿರ) ರೂಪಾಯಿಗಳು.

ಜಲಾಶಯದ ಮುಂಭಾಗದಲ್ಲಿ ಪುರಾತನವಾದ ಭೈರವೇಶ್ವರನ ದೇವಸ್ಥಾನ ಇದೆ. ಹಾಗಾಗಿ ಈ ಪ್ರದೇಶಕ್ಕೆ ಭೈರವ ಕಣಿವೆ ಎಂಬ ಹೆಸರಿತ್ತು, ಬೋರನ ಮನವಿ ಮೇರೆಗೆ ನಿರ್ಮಾಣವಾದ ಡ್ಯಾಂ ಆದರಿಂದ ಕ್ರಮೇಣ ಬೋರನಕಣಿವೆ ಎಂದಾಯಿತು.

ಈ ಕಣಿವೆಯನ್ನು ಬಳಸಿಕೊಂಡು ಎರಡೂ ಗುಡ್ಡಗಳನ್ನು ಪ್ರಕೃತಿದತ್ತ ಏರಿಗಳನ್ನಾಗಿಸಿ ಒಂದು ಚಿಕ್ಕ ಅಣೆಕಟ್ಟೆಯನ್ನು ಕಟ್ಟಲಾಗಿದೆ. ಬೋರನ ಕಣಿವೆ ಡ್ಯಾಂ ಚಿಕ್ಕನಾಯಕನಹಳ್ಳಿಯಂತಹ ಬರದ ನಾಡಿನಲ್ಲೂ ಸದಾ ನೀರು ತುಂಬಿಸಿಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ಹಚ್ಚಹಸಿರಾಗಿರುವಂತೆ ಮಾಡಿದೆ.
ಅಣೆಕಟ್ಟೆಯ ಮೇಲೆ ನಿಂತು ನೋಡಿದರೆ ಹನ್ನೆರಡು ಕಿಲೋಮೀಟರ್ ದೂರದ ತನಕ ನೀರು ನಿಲ್ಲುವ ಜಾಗದ ವಿಸ್ತಾರ ಕಾಣುತ್ತದೆ. ಇದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.  ಡ್ಯಾಂ ನ ನೀರು ನಿಲ್ಲುವ ಪಶ್ಚಿಮದ ಅಂಚಿನಲ್ಲಿ ಕಾರೇಹಳ್ಳಿ ಪುರಾತನವಾದ ರಂಗನಾಥಸ್ವಾಮಿಯ ದೇವಸ್ಥಾನವಿದೆ.

ಇಲ್ಲಿನ ಸೂರ್ಯಾಸ್ತ ರಮಣೀಯವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೋರನ ಕಣಿವೆ ತುಂಬಿದಾಗ ಅಣೆಕಟ್ಟೆಯ ಮೇಲೆ ನಿಂತು ಸೂರ್ಯಾಸ್ತವನ್ನು ನೋಡುವುದು ವಿಶೇಷ ಅನುಭವ ನೀಡುತ್ತದೆ. ಸಮೀಪದಲ್ಲಿಯೇ ನೂತನವಾಗಿ ನಿರ್ಮಿಸಿರುವ ಸಾಯಿಬಾಬಾ ಮಂದಿರವಿದೆ. ಸುತ್ತಲೂ ಸುಂದರ ಹೂತೋಟದ ಉದ್ಯಾನವನವಿದೆ.
ಒಂದು ದಿನದ ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ.

Share This Article