ನಮ್ಮ ಊರು ನಮ್ಮ ಹೆಮ್ಮೆ : ಚಿತ್ರದುರ್ಗದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಿಚಯ

1 Min Read

 

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ದುರ್ಗದ ಚಿಕ್ಕಪೇಟೆ ಹಾಗೂ ಬುರುಜನಹಟ್ಟಿಗೆ ಹೋಗುವ ರಸ್ತೆಯ ಭಾಗದಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠವು ಈ ಭಾಗದ ಪ್ರಮುಖ ಧಾರ್ಮಿಕ ಸ್ಥಳವಾಗಿದೆ.ಆಸ್ತಿಕರ ಮನೋಭಿಲಾಷೆ ಪೂರೈಸುವ ಆಧ್ಯಾತ್ಮಿಕ ತಾಣವಾಗಿದೆ.

ಮಾಧ್ವ ಅಥವಾ ದ್ವೈತ ಸಂಪ್ರದಾಯಕ್ಕೆ ಸೇರಿದ ಈ ಮಠವು 17 ನೇ ಶತಮಾನದಲ್ಲಿ ಮಂತ್ರಾಲಯದ ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿಗಳ ಕಾಲದಲ್ಲಿಯೇ ಇಲ್ಲಿ ಆದದ್ದೆಂದು ತಿಳಿದು ಬರುತ್ತದೆ. ಚಿತ್ರದುರ್ಗಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳು ಮೂರು ಬಾರಿ ಬಂದು ಹೋಗಿದ್ದರೆಂದು ಕೂಡ ಹೇಳಲಾಗುತ್ತದೆ.(1669-70)
ಅವರ ಆಪ್ತ ಶಿಷ್ಯನಾಗಿದ್ದ ನೀರಿನ ವೆಂಕಣ್ಣ ಎಂಬುವನು ಮೂಲತಃ ಚಿತ್ರದುರ್ಗದವನಾಗಿದ್ದು, ಅವನು ಗುರುಗಳ ಅಪ್ಪಣೆ ಪಡೆದು ತನ್ನ ಕೊನೆಗಾಲವನ್ನು ಚಿತ್ರದುರ್ಗದಲ್ಲಿ ಕಳೆಯುತ್ತಿದ್ದಾಗ ಒಮ್ಮೆ ಇಲ್ಲಿಗೆ ಬಂದ ರಾಘವೇಂದ್ರ ಸ್ವಾಮಿಗಳು ಅವನ ಪ್ರಾರ್ಥನೆಯಂತೆ ಅವನಿಗೆ ಮೋಕ್ಷ ಕರುಣಿಸಿದರೆಂದು ತಿಳಿದು ಬರುತ್ತದೆ. ಮಠದ ಸಮೀಪದಲ್ಲಿಯೇ ಗ್ರಾನೆಟ್ ಕಲ್ಲಿನಿಂದ ನಿರ್ಮಿಸಲಾದ ವೆಂಕಣ್ಣನ ಸುಂದರ ಬೃಂದಾವನ (ಸಮಾಧಿ) ಇಂದಿಗೂ ಇಲ್ಲಿ ಕಾಣಬಹುದು.17 ನೇ ಶತಮಾನದ ವಾಸ್ತುಶೈಲಿ ಸ್ಪಷ್ಟವಾಗಿ ಇರುವುದನ್ನು ಗುರುತಿಸಬಹುದು.ಇದರ ಬಗ್ಗೆ ಮಾಹಿತಿ ಬೃಂದಾವನದ ಮುಂಭಾಗದಲ್ಲಿ ಹಾಕಲಾಗಿದೆ.

ಅವರ ಶಿಷ್ಯರಾದ ಯೋಗೇಂದ್ರ,ಸುರೇಂದ್ರ ಸುಮತಿಂದ್ರರು ಸಹ ಇಲ್ಲಿಗೆ ಬಂದು ಹೋಗಿದ್ದಾರೆ.1700ರ ರ ಸುಮಾರಿಗೆ ಸುಮತೀಂದ್ರ ಸ್ವಾಮಿಗಳು ಈ ಮಠವನ್ನು ಪ್ರವರ್ಧಮಾನಕ್ಕೆ ತರುತ್ತಾರೆ. ಅವರಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಗೆ ಕನಸಿನಲ್ಲಿ ಬಂದು ಹೇಳಿದಂತೆ ಮಠದ ಒಂದು ಭಾಗದ ನೆಲವನ್ನು ಅಗೆಸಿದಾಗ ಅಲ್ಲಿ ಶ್ರೀರಾಮ, ಆಂಜನೇಯ ಸ್ವಾಮಿ ಮೂರ್ತಿಗಳ ದೊರೆತಿದ್ದರಿಂದ ಅದೇ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಬಳಸಿದ್ದ ಕಲ್ಲಿನ ತುಂಡು ಇಲ್ಲಿ ಸ್ಥಾಪಿಸಲಾಯಿತು ಎಂದು ಹೇಳಲಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳು, ಸುಮತಿಂದ್ರ ಸ್ವಾಮಿಗಳು, ಮುಂತಾದವರ ಸತತ ಸಂಪರ್ಕ ಈ ಮಠಕ್ಕೆ ಹಿಂದಿನಿಂದಲೂ ಇದ್ದು ವಿಶೇಷ ಚಾರಿತ್ರಿಕ ಮಹತ್ವವಿದೆ. ಶ್ರಾವಣ ಮಾಸದಲ್ಲಿ ಮೂರು ದಿನಗಳ ವಿಶೇಷ ಪೂಜೆಗಳು, ಆರಾಧನೆ,ರಥೋತ್ಸವ, ಅನ್ನ ದಾಸೋಹ.. ವಿಜೃಂಭಣೆಯಿಂದ ಜರುಗುತ್ತವೆ.ಪ್ರತಿ ಗುರುವಾರ ಭಕ್ತರಿಂದ ಈ ಮಠವು ತುಂಬಿ ತುಳುಕುತ್ತದೆ.

Share This Article