ನಮ್ಮ ಊರು ನಮ್ಮ ಹೆಮ್ಮೆ : ಚಿತ್ರದುರ್ಗದಲ್ಲೊಂದು ಹಸಿರುಡುಗೆಯ ಮಿನಿಕಾಡು

6 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಚಿತ್ರದುರ್ಗವು ಬಯಲು ಸೀಮೆಯ ಒಂದು ಪ್ರಮುಖ ಪ್ರದೇಶವಾಗಿದ್ದು ಎತ್ತ ಕಣ್ಣು ಹಾಯಿಸಿದರೂ ದೂರ ದೂರದವರೆಗೂ ವಿಶಾಲವಾಗಿ ಸಮತಟ್ಟು ಭೂಪ್ರದೇಶವಿದ್ದು ಮರಗಳು ಗಿಡಗಳು ಎತ್ತರವಾಗಿ ಬೆಳೆಯುವ ಅವಕಾಶವೇ ಇಲ್ಲಿ ಇರುವುದಿಲ್ಲ.
ಅದರಲ್ಲೂ ಚಿತ್ರದುರ್ಗ ನಗರದ ಸುತ್ತಲ ಯಾವುದೇ ಪ್ರದೇಶಕ್ಕೆ ಹೋದರು ಕೂಡ ಬೆಟ್ಟ ಗುಡ್ಡಗಳೇ ಕಂಡು ಬರುತ್ತದೆ. ನಗರದ ಯಾವುದೇ ಬಡಾವಣೆಯಲ್ಲಿ ಮನೆ ಕಟ್ಟಲು ಪಾಯ ತೋಡಿದಾಗ ಮೊದಲು ಸಿಗುವುದೇ ಕಲ್ಲು ಬಂಡೆಗಳ ಭೂಸ್ತರ.
ಕಲ್ಲಿನ ರಾಶಿಯೇ ವ್ಯಾಪಿಸಿದ್ದು ಅದನ್ನೇ ಪಾಯಕ್ಕೆ ಬಳಸಿದ ಉದಾಹರಣೆಗಳು ಬಹಳಷ್ಟು ಕಡೆ ಕಂಡು ಬರುತ್ತದೆ. ಇಂತಹ ಭೂಪ್ರದೇಶದ ಭೌಗೋಳಿಕ ಲಕ್ಷಣ ಇರುವ ಜಾಗದಲ್ಲಿ ಗಿಡ ಮರಗಳು ಬೃಹತ್ತಾಗಿ ಬೆಳೆಯಲು ಬೃಹತ್ ಆಗಿ ಹರಡಲು ಆಳಕ್ಕೆ ಬೇರುಗಳನ್ನು ಇಳಿಸಲು ಗಿಡ ಮರಗಳಿಗೂ ಕೂಡ ಬಹಳಷ್ಟು ಕಷ್ಟಕರ, ಆ ಕಾರಣಕ್ಕೆ ಇಲ್ಲಿ ಅಂತರ್ಜಲ ಕೂಡ ಬಹಳಷ್ಟು ಕಷ್ಟ. ಇಂತಹ ಪ್ರದೇಶದಲ್ಲಿ ನಂಬಲು ಅಸಾಧ್ಯವಾದ ಮಿನಿ ಕಾಡೇ ತಲೆಯೆತ್ತಿದೆ. ಇಡೀ ಪ್ರದೇಶವೇ ಹಸಿರುಮಯವಾಗಿ ಕಂಡು ಬರುತ್ತಿದೆ. ಇಂತಹ ಮಿನಿ ಕಾಡು ಸೃಷ್ಟಿಯಾಗಲು ಇಲ್ಲಿನ ನೂರಾರು ಜನರ ಸ್ಥಳೀಯರ ಸಹಕಾರ ಸಹಾಯ ಜೊತೆಗೆ ಉದ್ಯಾನವನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಯು ಕಾರಣಕರ್ತರಾಗಿದ್ದಾರೆ. ಹೌದು ಇಂತಹ ದೃಶ್ಯ,ಹಸಿರು, ಮಿನಿ ಕಾಡು ಇರುವುದು ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣದ ಹತ್ತಿರ ಇರುವ ಮಹಾವೀರ ನಗರ ಉದ್ಯಾನವನದಲ್ಲಿ.

ಮೊದಲು ಇದು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸುಪರ್ದಿನಲ್ಲಿ ಇದ್ದು ನಂತರ ಇದೀಗ ನಗರಸಭೆಯ ಆಡಳಿತಕ್ಕೆ ಹಸ್ತಾಂತರವಾಗಿದೆ. ಸಾಮಾನ್ಯವಾಗಿ ಸರ್ಕಾರದ ಉದ್ಯಾನವನಗಳು ಅಥವಾ ನಗರಸಭೆಯ ವ್ಯಾಪ್ತಿಯಲ್ಲಿರುವ ಉದ್ಯಾನವನಗಳಲ್ಲಿ ನಾವು ನೀವು ಕಂಡಂತೆ ಬಾಡಿರುವ ಗಿಡಮರಗಳು, ಅಲ್ಲೊಂದು ಇಲ್ಲೊಂದು ದೊಡ್ಡ ಮರಗಳು ಪ್ಲಾಸ್ಟಿಕ್ ಕವರ್ ಗಳ ರಾಶಿ, ಕಸ ಎಲೆ, ತಿಂದು ಬಿಸಾಡಿದ ಪೇಪರ್ ಗಳು ಚೀಲಗಳು ಕುಡಿದು ಬಿದ್ದಿರುವ ಬಾಟಲುಗಳು, ವ್ಯವಸ್ಥಿತವಾಗಿ ಇರದ ಮಕ್ಕಳ ಆಟದ ಸಾಮಾನುಗಳು ಮುರಿದ ಆಟಿಕೆಗಳು. ಇಂತಹದೇ ದೃಶ್ಯಗಳು ನಮ್ಮ ನಿಮ್ಮ ಕಣ್ಣ ಮುಂದೆ ಕಂಡುಬರುತ್ತದೆ.

ಆದರೆ ಇದೆಲ್ಲದರ ವ್ಯತಿರಿಕ್ತವಾಗಿ ಅತ್ಯಂತ ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಟ್ಟ ಉದ್ಯಾನವನ ಇದಾಗಿದ್ದು, ಈ ಭಾಗದ ಸಾರ್ವಜನಿಕರ ನೆಚ್ಚಿನ ಸ್ಥಳವಾಗಿದೆ.
ಮೊದಲು ಈ ಜಾಗದಲ್ಲಿ ಸಂಪೂರ್ಣ ಬಯಲು ಪ್ರದೇಶವಿದ್ದು ಅಲ್ಲೊಂದು ಇಲ್ಲೊಂದು ಮನೆಗಳು ಇದ್ದು ಇದು ನಗರದಹೊರವಲಯವಾಗಿತ್ತು. 2006-07 ರ ಸುಮಾರಿಗೆ ಬಡಾವಣೆ ರಚನೆಯ ಸಂದರ್ಭದಲ್ಲಿ ಇಲ್ಲಿ ಒಂದು ಉದ್ಯಾನವನವನ್ನು ಮಾಡಲಾಯಿತು. ಮೊದಲಿಗೆ ಎಲ್ಲಾ ಕಡೆ ಇದ್ದಂತೆ ಇಲ್ಲೂ ಕೂಡ ಯಾವುದೇ ನಿರ್ವಹಣೆ ಇಲ್ಲದೆ ಉದ್ಯಾನವನವು ಸೊರಗಿತ್ತು.

ಆದರೆ ಮೆಲ್ಲಮೆಲ್ಲನೆ ಬಡಾವಣೆಯ ಅಕ್ಕಪಕ್ಕದಲ್ಲಿ ಮನೆಗಳು ನಿರ್ಮಿಸಿದ ನಂತರ ಸ್ಥಳೀಯ ನಿವಾಸಿಗರೆಲ್ಲ ಸೇರಿಕೊಂಡು ಮಹಾವೀರ ನಗರ ಕ್ಷೇಮಾಭಿವೃದ್ಧಿ ಸಂಘ ಎಂಬ ಸಂಘದ ಅಡಿಯಲ್ಲಿ ಸೇವೆ ಸಹಕಾರ ಎಂಬ ತತ್ವದ ಆಧಾರದಲ್ಲಿ ಬಡಾವಣೆಯ ಸುತ್ತಮುತ್ತಲ 100 ಮನೆಗಳ ಎಲ್ಲಾ ಜನರು ಇದರ ಸದಸ್ಯರಾಗಿದ್ದು ಇದರ ಕಮಿಟಿಯಲ್ಲಿ ಹಾಲಿ ಈಗ 26 ಮಂದಿ ಇದ್ದು, ಇವರೆಲ್ಲರ ಮಾರ್ಗದರ್ಶನದಲ್ಲಿ ಈ ಉದ್ಯಾನವನವು ಸುತ್ತಮುತ್ತಲ ಅಕ್ಕ ಪಕ್ಕದ ಬಡಾವಣೆಗಳ ಸಾವಿರಾರು ಜನರ ನೆಚ್ಚಿನ ಸ್ಥಳವಾಗಿದೆ.

ಉದ್ಯಾನವನದಲ್ಲಿ ಏನೇನಿದೆ?
ಉದ್ಯಾನವನದಲ್ಲಿ 400ಕ್ಕೂ ಅಧಿಕ ವಿಧ ಜಾತಿಯ ಸಸ್ಯ ಸಂಕುಲವನ್ನು ಕಾಣಬಹುದು ಇದರಲ್ಲಿ ಐದು ವರ್ಷಗಳ ಗಿಡಗಳಿಂದ ಹಿಡಿದು 15 -20 ವರ್ಷಗಳ ದೊಡ್ಡ ಮರಗಳು ಸೇರಿವೆ.‌ನೇರಳೆ, ಹೊಂಗೆ,ಸಂಪಿಗೆ, ಆಲ,ಕಾಡು ಸಂಪಿಗೆ,ಕಾಡು ಬೇವು, ಬಿಲ್ವಪತ್ರೆ, ಈಚಲು, ಅರಳಿ… ಮುಂತಾದ ಹತ್ತಾರು ರೀತಿಯ ಮರಗಳನ್ನು ಕಾಣಬಹುದು. ಮಳೆಗಾಲದಲ್ಲಿ ಬಿಡಿ,ಬೇಸಿಗೆ ಕಾಲದಲ್ಲೂ ಪ್ರಕಾರ ಬಿಸಿಲು ಕೂಡ ನೆಲಕ್ಕೆ ತಾಕದಷ್ಟು ದಟ್ಟವಾಗಿ ಮರಗಳ ಕೊಂಬೆಗಳು ಚಾಚಿಕೊಂಡಿದ್ದು ಚಪ್ಪರದಂತೆ ವಿಶಾಲವಾಗಿ ಆಗಸದೆತ್ತರಕ್ಕೆ ಚಾಚಿಕೊಂಡಿವೆ. ಇದನ್ನು ಆಮ್ಲಜನಕದ ಫ್ಯಾಕ್ಟರಿ ಎಂದರೂ ತಪ್ಪಾಗಲಾರದು. ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಈ ಉದ್ಯಾನವನವು ತೆರೆದಿದ್ದು, ವಾಯು ವಿಹಾರಿಗಳ ಸಾರ್ವಜನಿಕರ ಗೃಹಿಣಿಯರ ಆಪ್ತ ಜಾಗವಾಗಿದೆ.

ಉದ್ಯಾನವನದ ನೋವುಗಳು?
ಕಣ್ಣ ಮುಂದೆ ನಾವೀಗ ಹಸಿರು ಉದ್ಯಾನವನವು ಕಾಡಿನಂತೆ ತೋರ್ಪಡಿಸುವ ಈ ಜಾಗವನ್ನು ವ್ಯವಸ್ಥಿತವಾಗಿ ಈ ಹಂತಕ್ಕೆ ತರುವುದಕ್ಕೆ ಇಲ್ಲಿನ ಹಿಂದಿನ ಸಿಬ್ಬಂದಿ ಹಾಗೂ ಈಗಿನ ಸಿಬ್ಬಂದಿ ಇವರ ಶ್ರಮವೂ ಬಹಳಷ್ಟು ಕಾರಣವಾಗಿದೆ.
ಮೊದಲಿಗೆ ಈ ಉದ್ಯಾನದಲ್ಲಿ ಕಸ ಕಡ್ಡಿ ಹಾಕುವುದು, ಕಿರಿಕಿರಿ ಜಗಳ ಮಾಡುವುದು, ಮಕ್ಕಳ ಆಟಿಕೆಗಳಲ್ಲಿ ದೊಡ್ಡವರು ಆಟ ಆಡುವುದು, ರಾತ್ರಿಯ ಸಮಯದಲ್ಲಿ ಕುಡುಕರ ಹಾವಳಿ, ಮರಗಿಡಗಳನ್ನು ಮುರಿದು ಹಾಕುವುದು ರೆಂಬೆಗಳನ್ನು ಕೀಳುವುದು ತಮ್ಮ ವಾಹನಗಳನ್ನು ತಂದು ಇಲ್ಲಿ ಬಿಡುವುದು, ಅದರ ಹೊರಗಡೆ ಭಾಗದಿಂದ ಹಸು ಹೆಮ್ಮೆಯ ದನ ಕರುಗಳನ್ನು ಮೇಯಿಸುವುದು, ಗುಂಪು ಗುಂಪಾಗಿ ಆಗಮಿಸಿ ಗಲಾಟೆ ಮಾಡುವುದು… ಹೀಗೆಲ್ಲಾ ಪ್ರತಿನಿತ್ಯವೂ ನಡೆಯುತ್ತಿತ್ತು. ಆದರೆ ಇಲ್ಲಿನ ಸಂಘದ ಸದಸ್ಯರ ಸಹಕಾರ ಸಹಾಯದಿಂದ, ಇಲ್ಲಿನ ಸಿಬ್ಬಂದಿಯವರ ಶಿಸ್ತಿನ ಕಾರ್ಯ ನಿರ್ವಹಣೆಯಿಂದ ಎಲ್ಲವೂ ನಿಂತಿದ್ದು, ಇದೀಗ ಇಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ,ಶಾಂತತೆ, ಪರಿಸರ ಪ್ರಜ್ಞೆಯ ಜಾಗೃತಿ… ಕಂಡು ಬರುತ್ತದೆ. ಇಲ್ಲಿನ ಸಿಬ್ಬಂದಿಯವರಾದ ಕೃಷ್ಣಮೂರ್ತಿಯವರು ಬಹಳಷ್ಟು ನೋವುಗಳನ್ನು ಹಿಂದೆಲ್ಲಾ ಈ ವಿಚಾರವಾಗಿ ಅನುಭವಿಸಿದ್ದು ಮಳೆ ಇರಲಿ,ಬಿಸಿಲಿರಲಿ.. ತಮ್ಮೆಲ್ಲ ವೈಯಕ್ತಿಕ ಕೆಲಸ ಕಾರ್ಯಗಳು, ಆರೋಗ್ಯವನ್ನು ಲೆಕ್ಕಿಸದೆ  ಬೆಳಿಗ್ಗೆ ಐದಕ್ಕೆ ಉದ್ಯಾನವನಕ್ಕೆ ಹಾಜರಾಗಿ ಮೊದಲು ಬೀಗ ತೆಗೆದು ಇಂದಿನ ಕಸವನ್ನೆಲ್ಲ ತೆಗೆದು ಅಚ್ಚುಕಟ್ಟು ಮಾಡಿ ವಾಕಿಂಗ್ ಮಾಡುವವರಿಗೆ ಇಷ್ಟವಾಗುವ ರೀತಿಯಲ್ಲಿ ಬಿದ್ದ ಎಲೆಗಳನ್ನು ತೆಗೆದು ಉದ್ಯಾನವನದ ಕೊನೆಗೆ ಇರುವ ಗುಂಡಿಗೆ ಹಾಕುತ್ತಾರೆ. ಇದರ ಮೇಲೆ ಮಣ್ಣು ಹಾಕಿ ಇದನ್ನು ಗೊಬ್ಬರವಾಗಿಸಿ ಅದನ್ನೇ ಇಲ್ಲಿನ ಗಿಡಗಳಿಗೆ ಬಳಸುತ್ತಾರೆ.

ನೋಡಲು ಸುಲಭವಾಗಿ ಕಾಣುವ ಈ ಕೆಲಸವನ್ನು ಮಾಡಲು ಕನಿಷ್ಠವೆಂದರೂ ಪ್ರತಿದಿನ ಎರಡು ಗಂಟೆ ಸಮಯ ಮೀಸಲಿಡುತ್ತಾರೆ. ಇಲ್ಲಿನ ಉದ್ಯಾನಕ್ಕೆ ಅರಣ್ಯ ಇಲಾಖೆಯು ಸಸಿಗಳನ್ನು ನೀಡಿದ್ದು ಅದನ್ನು ಜೋಪಾನ ಮಾಡಿ ಅದರ ಆರೈಕೆಯನ್ನು ವ್ಯವಸ್ಥಿತವಾಗಿ ಒಣಗದಂತೆ ನೋಡಿಕೊಂಡು ಮರಗಳಾಗುವಂತೆ ಮಾಡಲಾಗುತ್ತಿದೆ. ಕೆಲವು ಒಣಗಿ ಗಿಡಗಳಾಗದಿದ್ದಾಗ ಅದನ್ನು ತೆಗೆದು ಬೇರೆ ಸಸಿಗಳನ್ನು ನೆಡಲಾಗುತ್ತದೆ. ಮೊದಮೊದಲಿಗೆ ಇಂತಹ ಕೆಲಸಗಳನ್ನು ಸ್ಥಳೀಯರು ಹೀಯಾಳಿಸಿ ಎಲ್ಲಾ ಆಗದ ಕೆಲಸ ಎಂದು ಹೇಳುತ್ತಿದ್ದರು ಇಂದು ಅವರೇ ನಿಬ್ಬೆರಗಾಗುವಂತೆ ಇಲ್ಲಿ ಉದ್ಯಾನವನವು ಹಸಿರಿನಿಂದ ತುಂಬಿದೆ.
ಇವರ ಜೊತೆಗೆ ವಾಕಿಂಗ್ ಮಾಡಲು ಬರುವ ಸಂಘದ ಸದಸ್ಯರು ಉದ್ಯಾನವನವನ್ನು ತಮ್ಮ ಮನೆಯ ಕೆಲಸವೆಂದು ಭಾವಿಸಿ ಸಹಾಯ ಹಸ್ತ ಚಾಚುತ್ತಾರೆ. ಮೊದಲಿಗೆ ಅಕ್ಕ-ಪಕ್ಕದ ಮನೆಗಳಿಂದ ಪೈಪ್ ಲೈನ್ ಮೂಲಕ ನೀರನ್ನು ಪಡೆದು ಉದ್ಯಾನವನಕ್ಕೆ ಕೊಡಲಾಗುತ್ತಿತ್ತು, ಆದರೆ ಕಳೆದ 4-5 ವರ್ಷಗಳ ಹಿಂದೆ ಇಲ್ಲಿ ಕೊಳವೆ ಬಾವಿ ಕೊರೆಸಿದ್ದು ಇದೀಗ ಇಲ್ಲಿ ಯಾವುದೇ ನೀರಿನ ಕೊರತೆ ಇರುವುದಿಲ್ಲ.
ಇಲ್ಲಿನ ಸಂಘದ ಸದಸ್ಯರೆಲ್ಲ ಪ್ರತಿ ಮನೆಗೆ ಪ್ರತಿ ವರ್ಷ ನಿರ್ವಹಣೆ ಎಂದು ಸಾವಿರ ರೂಪಾಯಿಯನ್ನು ಪಡೆದು ಅದನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದರಿಂದ ಬಡ್ಡಿ ಪಡೆದು ಇಲ್ಲಿನ ಸಿಬ್ಬಂದಿಗೆ ಸಂಬಳ ರೂಪದಲ್ಲಿ ನೀಡುತ್ತಾರೆ. ಜೊತೆಗೆ ಪ್ರತಿ ತಿಂಗಳು ಈ ಉದ್ಯಾನವನದ ಕಾರ್ಯನಿರ್ವಹಣೆಗೆ ಹಾಗೂ ವ್ಯವಸ್ಥೆಗೆ ಖರ್ಚು ಕನಿಷ್ಠವೆಂದರೂ ಮೂರರಿಂದ ನಾಲ್ಕು ಸಾವಿರ ಬರುತ್ತದೆ. ಇವೆಲ್ಲವನ್ನೂ ಇಲ್ಲಿನ ಸಂಘದ ಸದಸ್ಯರೇ ಭರಿಸುತ್ತಾರೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಆಗಸ್ಟ್ 15 ಸ್ವಾತಂತ್ರೋತ್ಸವ ಹೊನ್ನು ಆಚರಿಸಲಾಗುತ್ತದೆ. ಜೊತೆಗೆ ಪ್ರತಿನಿತ್ಯ ರಾತ್ರಿಯ ಸಮಯ ಇದರ ಬೀಗ ಹಾಕಿರುವಾಗ ಇದರ ಸುತ್ತ ದಿನ ರಸ್ತೆಯಲ್ಲಿ ಕೂಡ ವಾಕಿಂಗ್ ಮಾಡಿ ಯಾರಾದರೂ ಕಾಂಪೌಂಡ್ ಎಗರಿ ಹೋಗಿ ಅನೈತಿಕ ಚಟುವಟಿಕೆಗಳನ್ನು ಮಾಡುವುದು ಕಂಡು ಬಂದರೆ ಸಂಘದ ಸದಸ್ಯರೇ ಕರೆದು ಬುದ್ಧಿ ಹೇಳಿ ಅಲ್ಲಿಂದ ವಾಪಸ್ ಕಳಿಸುತ್ತಾರೆ.

 

ಎಂತಹ ದಣಿದ ಮನಸ್ಸು,ದೇಹಕ್ಕೆ ನವೋಲ್ಲಾಸ ತರುವ ತಾಣ ಇದಾಗಿದೆ. ಮನಸ್ಸಿನಲ್ಲಿ ಎಷ್ಟೇ ದುಃಖ ದುಗುಡ ದುಮ್ಮಾನಗಳಿದ್ದರೂ ಈ ಜಾಗಕ್ಕೆ ಬಂದರೆ ಎಲ್ಲವನ್ನು ಮರೆತು ಬಿಡುತ್ತೇವೆ.
ಇರುವ ಸಣ್ಣ ಜಾಗದಲ್ಲೇ ಒಂದು ಸುಂದರ ಉದ್ಯಾನವನ ನಿರ್ವಹಿಸಿ ಅದನ್ನು ಕಾಪಾಡಿಕೊಳ್ಳುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿನಿತ್ಯ ಬೆಳಿಗ್ಗೆ 5:30 ಯಿಂದ 10:00 ಮತ್ತೆ ಮಧ್ಯಾಹ್ನ 3:30 ಇಂದ ಸಂಜೆ 6:30 ತನಕ ಉದ್ಯಾನವನವು ಸಾರ್ವಜನಿಕರಿಗಾಗಿ ತೆರೆದಿರುತ್ತದೆ.

ಮಾಹಿತಿ :
ಸಂಘದ ಅಧ್ಯಕ್ಷರು ಶಶಿಧರ ಬಾಬು.09448131666.

Share This Article