ನಮ್ಮೂರ ದೇಗುಲ : ಚಿತ್ರದುರ್ಗ ಓಬಳ ನರಸಿಂಹ ಸ್ವಾಮಿ ದೇವಾಲಯದ ಪರಿಚಯ

4 Min Read

ವಿಶೇಷ ಲೇಖನ
ಡಾ.ಕೆ.ವಿ. ಸಂತೋಷ್.
ಹೊಳಲ್ಕೆರೆ.ಚಿತ್ರದುರ್ಗ ಜಿಲ್ಲೆ
ಮೊ : 9342466936

 

 

ಸುದ್ದಿಒನ್

ಚಿತ್ರದುರ್ಗ ಎಂದರೆ ಸಾಕು, ಬರೀ ಬೆಟ್ಟ ಗುಡ್ಡ, ಶಾಶ್ವತ ಬರಪೀಡಿತ ಒಣ ಭೂಪ್ರದೇಶವೇ ಹೆಚ್ಚಾಗಿರುತ್ತದೆ ಎಂಬ ಭಾವನೆ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಚಿತ್ರದುರ್ಗ ನಗರದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮವು ಒಂದು ಪ್ರಾಕೃತಿಕ ರಮ್ಯ ತಾಣವಾಗಿದೆ. ಚಿತ್ರದುರ್ಗದಲ್ಲಿ ಎಂತಹ ಬಿರುಬೇಸಿಗೆ ಇದ್ದರೂ ಕೂಡ ಇಲ್ಲಿ ಮಾತ್ರ  ತಂಪಾದ ಹವಾಗುಣ ಇರುತ್ತದೆ.

ಇಂತಹ ಜೋಗಿಮಟ್ಟಿ ಸಂರಕ್ಷಿತ ಅರಣ್ಯವು ಚಿತ್ರದುರ್ಗ,ಹೊಳಲ್ಕೆರೆ,ಹಿರಿಯೂರು ತಾಲೂಕಿನ ಭಾಗದಲ್ಲಿ ಹರಡಿಕೊಂಡಿದೆ. ನೂರಾರು ಜೀವ ವೈವಿಧ್ಯ ಹಾಗೂ ಅಪರೂಪದ ಪಕ್ಷಿ ಪ್ರಾಣಿ ಸಂಕುಲ ಇಲ್ಲಿ ಕಂಡುಬರುತ್ತದೆ.
ಮಳೆಗಾಲದಲ್ಲಿ ಈ ಜೋಗಿಮಟ್ಟಿ ಗಿರಿಧಾಮವು ಕೊಡಗು,ಚಿಕ್ಕಮಗಳೂರು… ಜಿಲ್ಲೆಗಳನ್ನು ಮೀರಿಸುವಂತಹ ಹಸಿರು ವೈಭವದಿಂದ  ಕಂಗೊಳಿಸುತ್ತದೆ.
ಉಷ್ಣ ವಲಯದ ಕುರುಚಲು ಕಾಡು ಇರುವ ಈ ಜೋಗಿಮಟ್ಟಿ ಅರಣ್ಯ ಧಾಮವು ಬೇಸಿಗೆಯಲ್ಲಿ ಸಂಪೂರ್ಣವಾಗಿ ಒಣಗಿರುತ್ತದೆ.

 

ಜೋಗಿಮಟ್ಟಿ ವಲಯವು ಸಂಪೂರ್ಣ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು, ಚಿತ್ರದುರ್ಗ ತಾಲೂಕಿನ ದೊಡ್ಡಾಪುರ ಗ್ರಾಮದ ಬಳಿ ಇರುವ ಭೈರವನ ಬೆಟ್ಟ ಇಲ್ಲಿರುವ ಅತ್ಯಂತ ಎತ್ತರದ ಶಿಖರವಾಗಿದ್ದು ಇದು 3863 ಅಡಿಗಳಷ್ಟು ಎತ್ತರವಾಗಿದೆ. ಇದರ ನಂತರ ಬರುವ ಈಚಲು ಗುಡ್ಡ ಹಾಗೂ ಜೋಗಿಮರಡಿ ಗುಡ್ಡಗಳು ಇದೇ  ಸಾಲಿನಲ್ಲಿ ಕಂಡು ಬಂದರೆ, ನಾಲ್ಕನೆಯ ಅತಿ ಎತ್ತರದ ಶಿಖರವಾದ ಓಬಳ ನರಸಿಂಹ ಬೆಟ್ಟವು (3700 ಅಡಿ )ಈ ಗುಡ್ಡಗಳ ಉತ್ತರಕ್ಕೆ ಕುರುಮರಡಿಕೆರೆ ಗ್ರಾಮದ ಬಳಿಯಲ್ಲಿ ಕಂಡುಬರುತ್ತದೆ. ಮೇಲೆ ತಿಳಿಸಿದ ಮೂರು ಗಿರಿ ಶಿಖರಗಳಿಗೆ ಸದ್ಯ ಕಾಲುದಾರಿಯಲ್ಲಿ ಮಾತ್ರ ಹತ್ತಬೇಕಾಗುತ್ತದೆ. ಆದರೆ ಓಬಳ ನರಸಿಂಹ ಗುಡ್ಡಕ್ಕೆ ಕಳೆದ 20 ವರ್ಷಗಳ ಹಿಂದೆ ಗಾಳಿಯಂತ್ರ ಸ್ಥಾಪಿಸಲು ರಸ್ತೆ ನಿರ್ಮಿಸಲಾಗಿದ್ದು ವಾಹನದಲ್ಲಿ ನೇರವಾಗಿ ದೇವಾಲಯದ ಬಳಿಗೆ ತಲುಪಬಹುದಾಗಿದೆ. ಇದೇ ಭಾಗದ ನಂದಿಪುರ ಗ್ರಾಮದಿಂದ ಅನಾದಿ ಕಾಲದಿಂದಲೂ ಪ್ರತ್ಯೇಕ ಕಾಲುದಾರಿ ಇದ್ದು ಅದರ ಮೂಲಕವೂ ಕೂಡ ಬರಬಹುದಾಗಿರುತ್ತದೆ.

ಓಬಳ ನರಸಿಂಹ ಸ್ವಾಮಿ ಬೆಟ್ಟ :
ಇಲ್ಲಿರುವ ಶ್ರೀ ಅಹೋಬಲ ನರಸಿಂಹಸ್ವಾಮಿ ದೇವಾಲಯದ ಕಾರಣದಿಂದ ಇದಕ್ಕೆ  ಅಹೋಬಲ ನರಸಿಂಹ ಸ್ವಾಮಿ ಬೆಟ್ಟ ಎಂದು ಕರೆಯುತ್ತಾರೆ.ಆಡುಭಾಷೆಯಲ್ಲಿ ಅಹೋಬಲ ಮುಂದುವರೆದು ಓಬಳ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ  ಎತ್ತಿನ ಭುಜದ ಆಕಾರದಂತೆಯೇ ಈ ಬೆಟ್ಟವು ಉತ್ತರ ದಿಕ್ಕಿನಿಂದ ಗೋಚರಿಸುತ್ತದೆ. ಇದರ ಜೊತೆಯಲ್ಲಿ  ಸಾಲು ಸಾಲು ಬೆಟ್ಟಗಳು ಇದ್ದರೂ ಕೂಡ ಎಂತಹವರು ಕೂಡ ಇದರ  ಸ್ಪಷ್ಟ ಆಕಾರದ ಮೂಲಕ ದೂರದಿಂದಲೇ ಸುಲಭವಾಗಿ ಗುರುತಿಸಿಬಿಡಬಹುದಾಗಿದೆ. ಬೃಹತ್ತಾದ ಏಕಶಿಲೆಯ ಕಲ್ಲುಗಳಿರುವ, ಅದರಿಂದ ಆವೃತವಾಗಿರುವ ಹಾಗೂ ಅಷ್ಟೇ ಪ್ರಮಾಣದಲ್ಲಿ ಎದ್ದಿರುವ ಬಂಡೆಗಳಿರುವುದು ಈ ಪ್ರದೇಶದ ವೈಶಿಷ್ಟ್ಯತೆ ಯಾಗಿದೆ.

ದಾರಿ :
ಚಿತ್ರದುರ್ಗ-ಇಂಗಳ್ ದಾಳ್- ಕುರುಮರಡಿಕೆರೆ  ಮಾರ್ಗದಲ್ಲಿ  ಚಿತ್ರದುರ್ಗದಿಂದ 26 ಕಿಲೋಮೀಟರ್ ದೂರ ಹಾಗೂ ಕುರುಮರಡಿಕೆರೆಯಿಂದ ದಕ್ಷಿಣಕ್ಕೆ  ಸಾಗಿ ಬಲಭಾಗದ ಗುಡ್ಡದ ಹಾದಿಯಲ್ಲಿ ಮುಖ್ಯರಸ್ತೆಯಿಂದ 9 ಕಿಲೋಮೀಟರ್ ಕಲ್ಲು-ಮಣ್ಣಿನ ಹಾದಿಯಲ್ಲಿ ಸಾಗಬೇಕು. ಕಚ್ಚಾ ರಸ್ತೆಯಲ್ಲಿಯೇ ಬೈಕ್ ನಲ್ಲಿ ಅಥವಾ ಕಾರ್, ನಲ್ಲಿ ಹೋಗಬೇಕು. ಕೆಳಭಾಗದಿಂದ ಮೇಲ್ಭಾಗದವರೆಗೂ ಸಂಪೂರ್ಣ ತಿರುವುಗಳು ಹಾಗೂ ಕಚ್ಚಾ ರಸ್ತೆಯಲ್ಲಿಯೇ ಹೋಗಬೇಕಾಗುತ್ತದೆ. ಅಲ್ಲಿಗೆ ತಲುಪಿದಾಗ
ದೇವಾಲಯದ ಮುಂಭಾಗದಿಂದ  ವೈಮಾನಿಕ ದೃಶ್ಯದಂತೆ ಕೆಳಭಾಗದ ಭೂ ಪ್ರದೇಶ ಕಂಡುಬರುತ್ತದೆ.

ದೃಶ್ಯ ವೈಭವ :
ಮೊದಲ ಬಾರಿಗೆ ಇಲ್ಲಿಗೆ ಬಂದವರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಿ ನಿಜಕ್ಕೂ ಮಂತ್ರ ಮುಗ್ದರಾಗುತ್ತಾರೆ. ಸುತ್ತಮುತ್ತಲ ಬೆಟ್ಟ ಸಾಲುಗಳ ಮೇಲೆ ಹರಡಿರುವ ನೂರಾರು ಗಾಳಿ ಗಿರಣಿಗಳು, ಬೆಂಕಿ ಪಟ್ಟಣದಂತೆ ಭಾಸವಾಗುವ ಹತ್ತಾರು ಸುತ್ತ ಮುತ್ತಲಿನ ಸಣ್ಣಪುಟ್ಟ ಹಳ್ಳಿಗಳು, ಕಿಲೋಮೀಟರ್ ಗಟ್ಟಲೆ ದೂರವಿರುವ ಚಳ್ಳಕೆರೆ ತಾ. ನನ್ನಿವಾಳ ಗುಡ್ಡ, ಹೊಳಲ್ಕೆರೆ ತಾಲೂಕಿನ ಕೊಳಾಳು, ಹೊರಕೆರೆ ದೇವರಪುರ ಬೆಟ್ಟಸಾಲುಗಳು, ಜೋಗಿಮಟ್ಟಿ ಗಿರಿ ಶೃಂಗದ ಸಾಲು ಬೆಟ್ಟಗಳು, ಪಶ್ಚಿಮದ ಕಡೆಗೆ ಇರುವ ಬೆಟ್ಟದ ನಾಗೇನಹಳ್ಳಿ ಗುಡ್ಡ,… ಕಣ್ತುಂಬಿಕೊಳ್ಳಬಹುದು. ಅದರಲ್ಲೂ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ಈ ಪರಿಸರದಿಂದ ಬಹಳ ಚೆನ್ನಾಗಿ ಕಂಡು ಬರುತ್ತದೆ.
ಮಳೆಗಾಲದ ಮಧ್ಯದ ದಿನಗಳಲ್ಲಿ ಮೋಡಗಳ ಸಾಲು ಸಾಲು ಮೆರವಣಿಗೆ ಪ್ರಕೃತಿ ಎಷ್ಟು ಸುಂದರ ಎಂಬುದನ್ನು ಸಾಬೀತುಪಡಿಸುತ್ತದೆ.

ಓಬಳ ನರಸಿಂಹಸ್ವಾಮಿ ದೇವಾಲಯ:
ಬೆಟ್ಟದ ತುದಿಯಲ್ಲಿ ಇರುವ ಈ ದೇವಾಲಯದಲ್ಲಿ ಉದ್ಭವ ನರಸಿಂಹಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯ ಸುಮಾರು 200 ವರ್ಷಗಳಷ್ಟು ಹಳೆಯದಾಗಿದೆ. ಮಕ್ಕಳಿಲ್ಲದವರು ಇಲ್ಲಿನ ದೇವರಿಗೆ ಹಾಲು ತುಪ್ಪ ನೈವೇದ್ಯವನ್ನು ಮಾಡಿ ದೇವರಿಗೆ ಹರಕೆ ಕಟ್ಟಿಕೊಂಡರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಕೆಲವು ದಶಕಗಳ ಹಿಂದೆ ಪುಟ್ಟ ಗುಡಿಯಾಗಿದ್ದ ಈ ದೇವಾಲಯ ಇಂದು ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಗೊಂಡಿದೆ. ಈ ದೇವಾಲಯದ ಬಗ್ಗೆ ಹಿರಿಯ ಸಂಶೋಧಕರಾದ  ಡಾ.ಲಕ್ಷ್ಮಣ್ ತೆಲಗಾವಿ ಅವರು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ವಾರ್ಷಿಕವಾಗಿ ಪರೇವು ಆಚರಣೆ ಕೂಡ ಮಾಡುತ್ತಾರೆ. ಭಾನುವಾರ ಹಾಗೂ ಶನಿವಾರ ಭಕ್ತರಿಂದ ವಿಶೇಷ ಪೂಜೆ ನೆರವೇರುತ್ತದೆ.

ಮೇಲಿನಿಂದ ಕಾಣುವ ಸುಂದರ ವಾತಾವರಣ ಕಣ್ಣಿಗೆ ಖುಷಿ, ಮನಸ್ಸಿಗೆ ಆನಂದ ತರುತ್ತದೆ. ಬಂದ ಆಯಾಸ ಬೀಸುವ ತಂಪಾದ ಗಾಳಿಗೆ ಮರೆತು ಹೋಗುತ್ತದೆ.ಇದಕ್ಕಾಗಿ ಬೆಳಗಿನ ಅಥವಾ ಸಂಜೆಯ ಹೊತ್ತು ಹೋಗಬೇಕು. ಚಾರಣಕ್ಕೆ 3-4 ಜನರು ಹೋದರೆ ಅನುಕೂಲ. ಈ ಸ್ಥಳವು ಚಳಿಗಾಲದಲ್ಲಂತೂ ಸಂಪೂರ್ಣ ಮೋಡಗಳ ಮರೆಯಲ್ಲಿ ಆವೃತವಾಗಿಬಿಡುತ್ತದೆ. ಮೋಡಗಳ ಚಾದರ ಸಂಪೂರ್ಣವಾಗಿ ಈ ಪ್ರದೇಶದ ಮೇಲೆ ಹಾಯ್ದು ಕೇವಲ ಗಾಳಿ ಯಂತ್ರಗಳು ಅಸ್ಪಷ್ಟವಾಗಿ ತಿರುಗುವುದನ್ನು ಗುರುತಿಸಬಹುದು.
ಮಳೆಗಾಲ ಹಾಗೂ ಅದರ ನಂತರದ ದಿನಗಳಲ್ಲಿ
ಯಾವುದೋ ಮಲೆನಾಡು, ಪಶ್ಚಿಮ ಘಟ್ಟದ ತಾಣದಂತೆ ಕಾಣುವ ಇಲ್ಲಿನ  ಪರಿಸರವು ಮಳೆಯ ನಂತರ ಹಸಿರಿನ ವೈಭವ ಶುರುವಾಗಿ ಹಿಂಗಾರು ಮಳೆಗೆ ಮತ್ತಷ್ಟು ಹಸಿರಿನಿಂದ ಹಿಗ್ಗುತ್ತದೆ. ಕರ್ನಾಟಕದ ತಂಪಾದ ಹಾಗೂ ದಕ್ಷಿಣ ಭಾರತದಲ್ಲಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಇದರ ಉತ್ತರ ದಿಕ್ಕಿಗೆ ಜೋಗಿಮಟ್ಟಿಯ ವೀಕ್ಷಣಾಲಯವಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks