ನಮ್ಮೂರ ದೇಗುಲ : ಹೊಸದುರ್ಗ : ಬಾಗೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ

3 Min Read

ವಿಶೇಷ ಲೇಖನ :
ಡಾ.ಕೆ.ವಿ.ಸಂತೋಷ್
ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ
ಮೊ : 9342466936

ಸುದ್ದಿಒನ್

ಹೊಸದುರ್ಗ ತಾಲೂಕು ಕೇಂದ್ರದಿಂದ 11 ಕಿಲೋಮೀಟರ್ ದೂರ ಪಶ್ಚಿಮಕ್ಕೆ ,ಹೊಸದುರ್ಗ – ಬಾಗೂರು ಮುಖ್ಯ ರಸ್ತೆಯಲ್ಲಿರುವ ಬಾಗೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯವು  ಹೊಸದುರ್ಗ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ  ಒಂದಾಗಿದೆ.

ಪ್ರಾಚೀನ ಕಾಲದಲ್ಲಿ ಬಾಗೆಊರು, ಬಾಗೂರು ಸೀಮೆ, ಭಾಗ್ಯಪುರ, ಸಣ್ಣಕ್ಕಿ ಬಾಗೂರು, ಎಂದೆಲ್ಲಾ ಶಾಸನ ಮತ್ತು ಜಾನಪದ ಸಾಹಿತ್ಯಗಳಲ್ಲಿ ಈ ಗ್ರಾಮವು ಕರೆಸಿಕೊಂಡಿದೆ. ಗ್ರಾಮದ ಪ್ರಸಿದ್ಧ ದೇವಾಲಯವಾದ ಶ್ರೀ ಚನ್ನಕೇಶವಸ್ವಾಮಿ ದೇವಾಲಯವು ವಿಜಯನಗರ ಕಾಲದ ಆಳ್ವಿಕೆಯ ಪ್ರಮುಖ ದೇವಾಲಯವಾಗಿದೆ. ಗರ್ಭಗೃಹ, ಅಂತರಾಳ, ನವರಂಗ, ಮಹಾಮಂಟಪ, ಮುಖಮಂಟಪ , ಪ್ರಾಂಗಣ, ಮಹಾದ್ವಾರಗಳು, ದೇವಾಲಯದ ಮುಂಭಾಗದಲ್ಲಿ ಉಯ್ಯಾಲೆ ಕಂಬ,ತುಳಸಿಕಟ್ಟೆ, ದೀಪಸ್ತಂಭಗಳನ್ನು ಒಳಗೊಂಡ ಬೃಹತ್ ದೇವಾಲಯವಾಗಿದೆ.
ದೇವಾಲಯದ ಬಲಭಾಗದಲ್ಲಿ ಲಕ್ಷ್ಮಿಯ ದೇವಸ್ಥಾನ,ವೈಕುಂಠ ನಾರಾಯಣ, ಆಳ್ವಾರರ ಗುಡಿ, ಬೃಂದಾವನ, ಓಕುಳಿಮಂಟಪ, ಸಾಲುಮಂಟಪಗಳನ್ನು ಒಳಗೊಂಡಿದೆ.
ದೇವಾಲಯವು 15 -16 ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.

ಗರ್ಭಗೃಹದಲ್ಲಿ ಎರಡು ಅಡಿಗಳೆತ್ತರದ ಗರುಡಪೀಠದ ಮೇಲೆ ಮೂರೂವರೆ ಅಡಿಗಳಷ್ಟು ಎತ್ತರವಿರುವ ಶ್ರೀ ಚನ್ನಕೇಶವಸ್ವಾಮಿಯ ಶಿಲ್ಪವನ್ನು ಪ್ರತಿಷ್ಠಾಪಿಸಿರುವರು.
ಸಮಭಂಗಿಯಲ್ಲಿ ನಿಂತಿರುವ ಶ್ರೀಚನ್ನಕೇಶವ ಸ್ವಾಮಿಯು ತನ್ನ 4 ಕೈಗಳಲ್ಲಿ ಶಂಖ,ಚಕ್ರ ಪದ್ಮ ಮತ್ತು ಗದೆಗಳನ್ನು ಹಿಡಿದಿದ್ದಾನೆ. ಕಿರೀಟ ಮುಕುಟ ದಾರಿಯಾದ ಕೇಶವನು ಕೆಯೂರ, ಕಂಠಹಾರ, ವೈಜಯಂತಿ ಮಾಲೆ, ಕೈಬಳೆ, ಕಾಲ್ಕಡಗ, ಮುಂತಾದ ಆಭರಣಗಳನ್ನು ಧರಿಸಿದ್ದಾನೆ.
ಇಕ್ಕೆಲಗಳಲ್ಲಿ ತ್ರಿಭಂಗಿಯಲ್ಲಿ ನಿಂತಿರುವ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ. ಅಂತರಾಳದಲ್ಲಿ ವಿಶ್ವಕ್ಷಯನ ಶಿಲ್ಪವಿದೆ.
ವೈಷ್ಣವ ಸಂಪ್ರದಾಯದಲ್ಲಿ ಗಣೇಶನಂತೆ ವಿಶ್ವಕ್ಷಯನಿಗೆ ಮೊದಲ ಪೂಜೆ ಸಲ್ಲುತ್ತದೆ. ಮೂರು ಅಡಿ ಎತ್ತರದ ಈ ಶಿಲ್ಪವು ತನ್ನ ಕೈಗಳಲ್ಲಿ ಶಂಖ ಚಕ್ರ,ಗದೆ ಮತ್ತು ಸೂಚಿಮುದ್ರೆಗಳನ್ನು ಹಿಡಿದಿದೆ. ಅಂತರಾಳದಲ್ಲಿ ಶ್ರೀ ರಾಮ, ಲಕ್ಷ್ಮಣ,ಸೀತೆಯರ ಉತ್ಸವ ಮೂರ್ತಿ ಶಿಲ್ಪಗಳು,ಆಳ್ವಾರರ ಕಂಚಿನ ಮೂರ್ತಿಗಳಿವೆ.

ದೇವಾಲಯದ ಬಲಭಾಗದಲ್ಲಿ ಲಕ್ಷ್ಮಿಯ ದೇವಾಲಯವಿದೆ. ಗರ್ಭಗೃಹ ಅಂತರಾಳ ಮತ್ತು ತೆರೆದ ಸಭಾ ಮಂಟಪಗಳಿಂದ ಕೂಡಿದೆ. ದೇವಾಲಯದ ಮುಂಭಾಗದ ಪ್ರಾಂಗಣಕ್ಕೆ ಹೊಂದಿಕೊಂಡಂತೆ ವೈಕುಂಠ ನಾರಾಯಣ ದೇಗುಲವಿದೆ.
ಗರ್ಭಗೃಹ ಮಾತ್ರ ಇರುವ ಈ ದೇಗುಲದಲ್ಲಿ 3ಅಡಿ ಎತ್ತರದ ಲಕ್ಷ್ಮೀನಾರಾಯಣ ಶಿಲ್ಪವನ್ನು ಪ್ರತಿಷ್ಠಾಪಿಸಿದ್ದಾರೆ.

 

ಶಾಸನಗಳು: ವಿಜಯನಗರದ ಸದಾಶಿವರಾಯನ ಕಾಲದ ಶಾಸನಗಳೇ ಇಲ್ಲಿ ಹೆಚ್ಚಾಗಿವೆ.  1523 ರ ಕೃಷ್ಣದೇವರಾಯನ ಕಾಲದ ಶಾಸನದಲ್ಲಿ ರಾಯರ ಕರಣಿಕನಾದ ಪ್ರಭುಕಯ್ಯನ ಸಹೋದರನಾದ ಬಸವಪ್ಪಯ್ಯ ಆಳುತ್ತಿರುವಾಗ ಅವನಿಗೆ ಸಕಲ ಸಾಮ್ರಾಜ್ಯವಾಗಬೇಕೆಂದು ತಿಮ್ಮಪ್ಪನು ಕಂನೆರಸಟಿಯನ್ನು ನಿಲ್ಲಿಸಿದನೆಂದು  ಹೇಳಿದೆ.
ಅಚ್ಯುತ ದೇವರಾಯನ ಶಾಸನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ಶ್ರೀಪಾದವೇ ಗತಿ ಎಂದಿದೆ.

1546 ರ ಸದಾಶಿವರಾಯನ ಶಾಸನವು ರಾಮರಾಜ ಅಯ್ಯನವರು ಯೆರೇಕೃಷ್ಣಪ್ಪನಾಯಕರಿಗೆ ಬಾಗೂರು ಸೀಮೆಯ ನಾವಿಂದರ ತೆರಿಗೆ ಸಿದ್ದಾಯ ಬಿಟ್ಟೆ ಬಿರಾಡಸುಂಕ ತಳವಾರಿಕೆ ಇನ್ನು ಮುಂತಾಗಿ ಸರ್ವಮಾನ್ಯವಾಗಿ ಬಿಟ್ಟುಕೊಟ್ಟುದಾಗಿ ಹೇಳುತ್ತದೆ.

1554 ರ ಮತ್ತೊಂದು ಸದಾಶಿವರಾಯನ ಕಾಲದ ಶಾಸನವು ಪೋತಪನಾಯಕರ ಕೃಷ್ಣಪ್ಪನಾಯಕರ ಕಾರ್ಯಕರ್ತರಾದ ವೀರಣ್ಣ ನಾಯಕ ಬಾಗೂರ ಸೀಮೆಯ ಪಾರುಪತ್ಯವನ್ನು ಮಾಡುತ್ತಿದ್ದಾನೆ ಎಂದು ಹೇಳುತ್ತದೆ.

1555 ರ ಶಾಸನವು ಬಾಗೂರ ಶ್ರೀ ಚನ್ನಕೇಶವ ಸ್ವಾಮಿಯನ್ನು  ಭಾಗ್ಯಪುರ ಚೆನ್ನಿಗರಾಯ ಎಂದು ಕರೆದಿದೆ. ಇದರಲ್ಲಿ ಮಧುರೆ,ಅರಳಿಹಳ್ಳಿ, ಹಾದರಿಕಟ್ಟೆ, ನಾಗೇನಹಳ್ಳಿ,ಕೃಷ್ಣಾಪುರ.. ಗ್ರಾಮದ ಮೂಲೆವೀದ ಸೇವೆಯನ್ನು ಹಾಗೂ ಗದ್ದೆಗಳನ್ನು ದೇವಾಲಯಕ್ಕೆ ಬಿಟ್ಟು ಕೊಟ್ಟಿದ್ದಾಗಿ ಹೇಳುತ್ತದೆ.

1571 ದರ ಲಕ್ಷ್ಮಿ ದೇವಾಲಯದ ಗುಡಿಯ ಶಾಸನದಲ್ಲಿ ಸಂತೆಬೆನ್ನೂರ ಹನುಮಪ್ಪ ನಾಯಕರ ಮಗ ರಾಜಪ್ಪನಾಯಕನು ತನ್ನ ತಂದೆತಾಯಿಗಳಿಗೆ ಪುಣ್ಯವಾಗಬೇಕೆಂದು ಲಕ್ಷ್ಮಿ ದೇವಾಲಯವನ್ನು ಜೀರ್ಣೊದ್ಧಾರ ಮಾಡಿಸಿ ಅದರ ನಿರ್ವಹಣೆಗಾಗಿ ಎರೆಬಯಲಿನ ಗದ್ದೆಯನ್ನು ದಾನ ನೀಡಿದನೆಂದು ಹೇಳುತ್ತದೆ.

ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವರ ರಥೋತ್ಸವ, ಗರುಡೋತ್ಸವ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ನಡೆಯುತ್ತದೆ.
ಪ್ರತಿವರ್ಷ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಮತ್ತು ಅಂದು ಸಾವಿರಾರು  ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks