ವಿಶೇಷ ಲೇಖನ:
ಡಾ ಕೆ.ವಿ ಸಂತೋಷ್.
ಹೊಳಲ್ಕೆರೆ ಚಿತ್ರದುರ್ಗ ಜಿಲ್ಲೆ.
ಮೊ : 93424 66936
ದೇವರಹಳ್ಳಿ ಗ್ರಾಮವು ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರ ಹಾಗೂ ಹೋಬಳಿ ಮುಖ್ಯ ಕೇಂದ್ರವಾಗಿದೆ. ಈ ಗ್ರಾಮವು ಚನ್ನಗಿರಿ-ದೇವರಹಳ್ಳಿ- ಸಂತೆಬೆನ್ನೂರು ರಸ್ತೆಯಲ್ಲಿದ್ದು,ತಾಲೂಕು ಕೇಂದ್ರ ಚನ್ನಗಿರಿಯಿಂದ 13 ಕಿಲೋಮೀಟರ್ ದೂರ ಸಮ್ಮಸಗಿ -ಬೀರೂರು ರಾಜ್ಯ ಹೆದ್ದಾರಿಯಲ್ಲಿದೆ. ದೇವರು ನೆಲೆಸಿದ ಸ್ಥಳವಾದ ಕಾರಣಕ್ಕೆ ಈ ಗ್ರಾಮಕ್ಕೆ ದೇವರಹಳ್ಳಿ ಹೆಸರು ಬಂದಿದೆ.
ಇದು ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ.
1. ಶ್ರೀ ಉಡುಗಿರಿ ರಂಗನಾಥಸ್ವಾಮಿ ದೇವಾಲಯ:
ಗ್ರಾಮದ ಪೂರ್ವಭಾಗದ ಉಡುಮರಡಿ ಬೆಟ್ಟದ ಮೇಲೆ ಈ ದೇವಾಲಯ ನಿರ್ಮಾಣವಾಗಿದೆ. ಈ ದೇವಾಲಯವು ಹಲವು ದೇವಾಲಯಗಳ ಸಂಕೀರ್ಣವಾಗಿದೆ.
ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದು, ಸರಳ ರಚನೆಯಿಂದ ಕೂಡಿದೆ. ದೇವಾಲಯವನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಗೊಳಿಸಲಾಗಿ ದೆ.
ಗರ್ಭಗೃಹ, ಅಂತರಾಳ ನವರಂಗ ಹಾಗೂ ಮುಖಮಂಟಪ ಭಾಗಗಳನ್ನು ಈ ದೇವಾಲಯದಲ್ಲಿ ಕಾಣಬಹುದು.
ಗರ್ಭಗೃಹದಲ್ಲಿ ಲಿಂಗ ಸ್ವರೂಪಿ ಉದ್ಭವ ಮೂರ್ತಿಯನ್ನು ರಂಗನಾಥಸ್ವಾಮಿಯ ಹೆಸರಿನಲ್ಲಿ ಪೂಜಿಸಲಾಗುತ್ತಿದೆ.
ಇದು ಹರಿಹರನ ರೂಪವೆಂದು ಹೇಳುತ್ತಾರೆ. ಮೂರ್ತಿಯ ಮೇಲುಭಾಗದಲ್ಲಿ ಬೇಟೆರಾಯಸ್ವಾಮಿ ವಿಗ್ರಹವಿದೆ.
ದೇವಾಲಯದ ಅಂತರಾಳದಲ್ಲಿ ಉತ್ಸವ ಮೂರ್ತಿಯನ್ನು ಕಾಣಬಹುದು.
ನವರಂಗವು ನಾಲ್ಕು ಕಂಭಗಳನ್ನು ಹೊಂದಿದ್ದು, ಫಲಕ ಹಾಗೂ ಬೋದಿಗೆಗಳನ್ನು ಹೊಂದಿವೆ. ದೇವಾಲಯದ ತೆರೆದ ಮುಖಮಂಟಪದಲ್ಲಿ ಕಂಬಗಳಿಗೆ ಜೋಡಣೆಯಾಗಿರುವ ಬೋದಿಗೆಗಳನ್ನು ಪುಷ್ಪಾಲಂಕರಣೆಗಳಿಂದ ಸುಂದರಗೊಳಿಸಲಾಗಿದೆ. ಈ ದೇವಾಲಯ ಪ್ರತಿ ಹುಣ್ಣಿಮೆಯ ದಿನ ಭಕ್ತರಿಂದ ತುಂಬಿ ತುಳುಕುತ್ತದೆ.
ಐತಿಹ್ಯ :
ಪೌರಾಣಿಕ ಹಿನ್ನೆಲೆಯಂತೆ ಈ ಸ್ಥಳವು ಹಿಂದೆ ಉಲ್ಕಾಮುಖನೆಂಬ ರಾಕ್ಷಸನ ಆವಾಸಸ್ಥಾನವಾಗಿದ್ದು ದೈವಭಕ್ತರಿಗೆ ಸದಾ ಪೀಡಕನಾಗಿದ್ದುದರಿಂದ ಶಿಷ್ಟರಕ್ಷಕನಾದ ದೇವರು ಹರಿಹರ ರೂಪದಲ್ಲಿ ಅವತರಿಸಿ ರಾಕ್ಷಸನನ್ನು ಸಂಹರಿಸಿದನೆಂಬುದು ಪ್ರತೀತಿ.
2. ಲಕ್ಷ್ಮೀ ದೇವಸ್ಥಾನ :
ರಂಗನಾಥಸ್ವಾಮಿ ದೇವಾಲಯದ ಪಶ್ಚಿಮದಿಕ್ಕಿನಲ್ಲಿ ಈ ದೇವಿಯ ದೇವಾಲಯವಿದೆ. ಇದು ವಿಜಯನಗರದ ಕಾಲದ ನಿರ್ಮಾಣವಾಗಿದೆ. ಮುಂದೆ ಈ ದೇವಾಲಯವನ್ನು ಕೆಳದಿ ಅರಸರು ಹಾಗೂ ಸಂತೆಬೆನ್ನೂರು ಪಾಳೆಗಾರರು ಕಾಲಕಾಲಕ್ಕೆ ಜೀರ್ಣೋದ್ಧಾರಗೊಳಿಸಿದ್ದಾರೆ.
ಈ ಗ್ರಾಮದ ಜನರು ಈ ದೇವಿಯ ಅಪ್ಪಣೆ ಪಡೆಯದೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹೂವಿನ ರೂಪದಲ್ಲಿ ದೇವಿಯು ಅಪ್ಪಣೆ ಕೊಡುತ್ತಾಳೆ ಎಂಬುದು ಇಲ್ಲಿನವರ ನಂಬಿಕೆಯಾಗಿದೆ. ಇಲ್ಲಿನ ನವರಂಗದ ಮಂಟಪವನ್ನು ಗಿರಿಯಮ್ಮ ಎನ್ನುವ ಮಹಿಳೆ ಕಟ್ಟಿಸಿದ್ದಾರೆ ಎಂದು ಇಲ್ಲಿನ ಶಾಸನ ತಿಳಿಸುತ್ತದೆ.
ಇದರ ಜೊತೆಗೆ ಇಲ್ಲಿ ಒಳಕಲ್ಲು ಹನುಮಪ್ಪನ ಗುಡಿ,ಕರಿಯಮ್ಮ,ಚೌಡಮ್ಮ, ಭೈರವ,ಬ್ರಹ್ಮದೇವರ ಚಿಕ್ಕ ಗುಡಿಗಳಿವೆ. ದೇವಾಲಯದ ಹೊರ ಪ್ರಾಂಗಣದಲ್ಲಿ ಭೂತಪ್ಪ ದೇವಸ್ಥಾನವಿದೆ. ದೇವಾಲಯದ ಹೊರ ಮೈದಾನದಲ್ಲಿ ಸಮುದಾಯ ಭವನ, ಭೋಜನಾಲಯವಿದ್ದು, ಬಂದ ಭಕ್ತರಿಗೆ ಭೋಜನದ ವ್ಯವಸ್ಥೆ ಇರುತ್ತದೆ. ಶುಭಸಮಾರಂಭಗಳು ಸದಾಕಾಲ ನಡೆಯುತ್ತಿರುತ್ತದೆ.
ಕರ್ನಲ್ ಮೆಕೆಂಜಿ ಕೈಫಿಯತ್ತು ಮಾಹಿತಿ:
ಈ ಕ್ಷೇತ್ರದ ಬಗ್ಗೆ ಈ ಕೈಫಿಯತ್ತಿನಲ್ಲಿ ಕೂಡ ಕೆಲವು ಐತಿಹ್ಯಗಳು ದಾಖಲಾಗಿವೆ. ವಿಜಯನಗರದ ಅರಸ ಹರಿಹರ ಮಹಾದೇವನು ಈ ಪ್ರಾಂತ್ಯಕ್ಕೆ ಭೇಟಿ ನೀಡಿದಾಗ ಆತನ ಸೇನೆಗೆ ಉಡ ಕಾಣಿಸುತ್ತದೆ. ಅದನ್ನು ಹಿಡಿಯುವ ಪ್ರಯತ್ನದಲ್ಲಿದ್ದಾಗ ಅದು ಸಿಗದೇ ಮಣ್ಣಿನ ಪೊದೆಯೊಳಗೆ ಹುದುಗಿಕೊಂಡಿತು.ಅದನ್ನು ಅಗೆದು ನೋಡಿದಾಗ ಅದು ಲಿಂಗರೂಪದಲ್ಲಿ ಉದ್ಭವವಾಗಿರುವ ರಂಗನಾಥನ ರೂಪತಾಳಿ ದೈವತ್ವದ ರೂಪ ಪಡೆಯಿತಂತೆ. ಅಂದಿನಿಂದ ಈ ಕ್ಷೇತ್ರಕ್ಕೆ ಉಡುಗಿರಿ ಹಾಗೂ ದೇವರಿಗೆ ಉಡುಗಿರಿ ರಂಗನಾಥನೆಂದು ಕರೆಯಲಾಗುತ್ತದೆ.
ಈ ಉಡುಗಿರಿ ಬೆಟ್ಟದಲ್ಲಿ ಹಿಂದೆ ಹೆಚ್ಚಾಗಿ ಉಡಗಳು ಕಾಣಿಸುತ್ತಿದ್ದವು. ಆದರೆ ಇಂದು ಇದರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿ ಉಡವನ್ನು ದೈವ ಸ್ವರೂಪಿ ಎಂದು ಪೂಜಿಸಲಾಗುತ್ತದೆ.
ಈ ಊರಿನ ಪ್ರತಿ ಮನೆಯಲ್ಲೂ ರಂಗನಾಥ ಲಕ್ಷ್ಮೀದೇವಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ.
ಜಾತ್ರೆ :
ಚೈತ್ರಮಾಸದ ಚಿತ್ತಾನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.ಮರುದಿನ ಬೆಟ್ಟದಿಂದ ದೊಡ್ಡ ತೇರನ್ನು ಇಳಿಸಿ ಎಂಬ ನಿಂಬಾಪುರದ ರಸ್ತೆಯವರೆಗೂ ಎಳೆದು ನಂತರ ಬೆಟ್ಟದ ಮೇಲೆ ಕರೆದೊಯ್ಯಲಾಗುತ್ತದೆ. ಈ ಜಾತ್ರೆಗೆ ಸುತ್ತಮುತ್ತಲಿನ ನಲವತ್ತು-ಐವತ್ತು ಗ್ರಾಮಗಳ ಜನರು ಸೇರುತ್ತಾರೆ. ದಾವಣಗೆರೆ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಇದು ಒಂದಾಗಿದೆ.
ರಥೋತ್ಸವದ ಪ್ರಯುಕ್ತ ಕನಕಾಭಿಷೇಕ, ನವಗ್ರಹ ಪೂಜೆ, ಕಳಶಾರಾಧನೆ, ಧ್ವಜಾರೋಹಣ,ಹೋಮ, ಕಲ್ಯಾಣೋತ್ಸವ…. ನಡೆಯುತ್ತದೆ.
3.ಮೈಲಾರಲಿಂಗೇಶ್ವರ ದೇವಸ್ಥಾನ: ರಂಗನಾಥಸ್ವಾಮಿಯ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳ ಬಲಬದಿಯಲ್ಲಿ ಈ ದೇವಾಲಯವಿದೆ. ಗರ್ಭಗೃಹ ಅಂತರಾಳ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಶಿಲ್ಪವಿದೆ ಅಂತರಾಳದಲ್ಲಿ ಗಂಗಾಮಾಳಮ್ಮ ಹಾಗೂ ಹೊನ್ನಮ್ಮ ದೇವಿಯ ಶಿಲ್ಪಗಳಿವೆ. ಮೈಲಾರಲಿಂಗನ ಎದುರಾಗಿ ನಂದಿ ಇದೆ.




