ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅಭಿವೃದ್ಧಿಯ ಬಗ್ಗೆ ಮಾತನಾಡಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ. ಮೊದಲಿಗೆ ಪ್ರಧಾನಿ ಭಾಷಣ ಆರಂಭಿಸಿದಾಗಲೇ ವಿಪಕ್ಷ ನಾಯಕರು ಅಡ್ಡಿ ಪಡಿಸುವ ಪ್ರಯತ್ನ ನಡೆಸಿದರು. ಮೋದಿ ವಿರುದ್ಧ ಘೋಷಣೆ ಕೂಗಿದರು. ಆದರೂ ಇದ್ಯಾವುದಕ್ಕೂ ಜಗ್ಗದೆ, ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ಮುಂದುವರೆಸಿದರು.
ಈ ವೇಳೆ, ಖರ್ಗೆ ಅವರು 60 ವರ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇವೆ. ಅದರ ಎಲ್ಲಾ ಕ್ರೆಡಿಟ್ ಪ್ರಧಾನಿ ಮೋದಿಯವರು ಪಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಆದರೆ ನಾನು 2014ರಲ್ಲಿ ನೋಡಿದಾಗ ಎಲ್ಲಾ ಕಡೆ ಗುಂಡಿಗಳೆ ಕಾಣುತ್ತಿದ್ದವು. ಸಣ್ಣ ಸಣ್ಣ ದೇಶಗಳು ಉತ್ತುಂಗಕ್ಕೆ ಏರುತ್ತಿದ್ದರೆ, ಭಾರತ ಮಾತ್ರ ಅಲ್ಲೆ ಉಳಿದುಕೊಂಡಿತ್ತು. ಸಮಸ್ಯೆಗಳು ಹಾಗೆ ಉಳಿದುಕೊಂಡಿತ್ತು. ಆದರೆ ನಾವು ಒಂದೊಂದೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಿದ್ದೇವೆ.
ಕಲಬುರಗಿಯಲ್ಲಿ ದಲಿತರನ್ನು ಸೋಲಿಸಿದ್ರು ಸೋಲಿಸಿದ್ರು ಅಂತಾರೆ ಆದರೆ ಅಲ್ಲಿನ ಜನ ಇನ್ನೊಬ್ಬ ದಲಿತನನ್ನೇ ಗೆಲ್ಲಿಸಿದ್ರು. ಆಧುನಿಕ ಭಾರತ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ನಿಂತಿದೆ. ಎಷ್ಟೊ ಜನರಿಗೆ ಬ್ಯಾಂಕ್ ಹೋಗುವುದಕ್ಕೆ ಆಗಿರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಜನ್ ಧನ್ ಖಾತೆ ತೆಗೆಸಿದ್ದೇವೆ. 48 ಕೋಟಿ ಬ್ಯಾಂಕ್ ಖಾತೆಯನ್ನು ಓಪನ್ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ 32 ಕೋಟಿ ಖಾತೆಗಳನ್ನು ಓಪನ್ ಮಾಡಿದ್ದೇವೆ. ಕರ್ನಾಟಕದಲ್ಲಿಯೇ 1ಕೋಟಿ 70 ಲಕ್ಷ ಜನ ಜನ್ಧನ್ ಖಾತೆಯನ್ನು ತೆರೆದಿದ್ದಾರೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.