Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಮಾಳಪ್ಪನಹಟ್ಟಿ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಮಾಳಪ್ಪನಹಟ್ಟಿ ಗ್ರಾಮವು ಚೋಳಗಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ಎರಡು ಕಿಲೋಮೀಟರ್ ದೂರ ಪಶ್ಚಿಮಕ್ಕೆ ,
ಚಿತ್ರದುರ್ಗ-ಬಿ.ದುರ್ಗ ಮುಖ್ಯ ರಸ್ತೆ ರಾ. ಹೆ 48 ರಲ್ಲಿ ಚಿತ್ರದುರ್ಗದ ಹೊರವಲಯದಲ್ಲಿದೆ.

ಮಾಳಪ್ಪನಹಟ್ಟಿ ಗ್ರಾಮವು ಕೇವಲ ಹದಿನೈದು-ಇಪ್ಪತ್ತು ವರ್ಷಗಳಿಂದೀಚೆಗೆ ಬೆಳವಣಿಗೆ ಕಂಡು ಚಿತ್ರದುರ್ಗ ನಗರದ ಒಳಗೆ ಸೇರಿದೆ.
ಅಲ್ಲಿಯವರೆಗೆ ಇದೊಂದು ಪೂರ್ತಿ ಹೊರವಲಯದ ಗ್ರಾಮವಾಗಿತ್ತು.
ಈಗ ಇಲ್ಲಿ ಆಧುನಿಕ ಬಡಾವಣೆ,ಲೇ ಔಟ್ ಗಳು, ಮನೆಗಳು…ತಲೆ ಎತ್ತಿವೆ.
ನಗರ ಸಂಸ್ಕೃತಿಯು ಕಾಲಿಟ್ಟ ಬಳಿಕ ಗ್ರಾಮ್ಯ ಸಂಸ್ಕೃತಿಯು ನಿಧಾನವಾಗಿ ಕಳೆದು ಹೋಗುತ್ತಿದೆ. ಗ್ರಾಮವು ಸಂಪೂರ್ಣ ಆಧುನಿಕತೆಯತ್ತ ತೆರೆದುಕೊಂಡಿದೆ.

ಮಾಳ ಎಂದರೆ ಮೈದಾನವೆಂಬ ಅರ್ಥವಿದೆ. ಮಾಳಪ್ಪ ಎಂದರೆ ಮೈದಾನವನ್ನು ಕಾಯುವವನು ಎಂದು ಅರ್ಥವಿದೆ .
ಮಾಳಪ್ಪನಹಟ್ಟಿ ಎಂದರೆ ಇಲ್ಲಿನ ಮೈದಾನವನ್ನು ಕಾಯುವವನ ಗ್ರಾಮವೆಂಬ ಅರ್ಥವಿದೆ. ಹಿಂದೆ ಈ ಗ್ರಾಮವನ್ನು ತಲುಪಲು ಚಿತ್ರದುರ್ಗದ ದಕ್ಷಿಣ ದಿಕ್ಕಿನ ಹೊಳಲ್ಕೆರೆ ರಸ್ತೆಯ ಕಿರುಬನಕಲ್ಲು ಕಣಿವೆಯನ್ನು ಹಾದು ಸುತ್ತಿ ಬಳಸಿ ತಲುಪಬೇಕಾಗಿತ್ತು . ಆದರೆ ತೊಂಬತ್ತರ ದಶಕದಲ್ಲಿ ಚಿತ್ರದುರ್ಗ ನಗರದಿಂದ ನೇರವಾಗಿ ಚೇಳುಗುಡ್ಡದ ಕೆಳಭಾಗದಲ್ಲಿ ರಸ್ತೆ ಮಾಡಲಾದ ನಂತರ ಗ್ರಾಮವು ನಗರಕ್ಕೆ ನೇರ ಸಂಪರ್ಕ ಪಡೆದುಕೊಂಡಿತು.

ಈಗಿರುವ ಗ್ರಾಮದ ಹಳೆ ಜನವಸತಿ ಜಾಗವು ದಕ್ಷಿಣಕ್ಕೆ ಕಿರುಬನಕಲ್ಲು ಹತ್ತಿರದ ಚೌಡೇಶ್ವರಿ ಗುಡಿಯ ಹತ್ತಿರದಲ್ಲಿತ್ತು .
ಅಲ್ಲಿಂದ ಗ್ರಾಮವು ಈಗಿನ ಜಾಗಕ್ಕೆ ಸ್ಥಳಾಂತರವಾಗಿದೆ.
ಇದು 120-150 ವರ್ಷಗಳಷ್ಟು ಹಳೆಯದಾಗಿದೆ.ಜಾಲಿಕಟ್ಟೆ,ಕವಾಡಿಗರಹಟ್ಟಿ,..ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು:
1.ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಈ ಮಂದಿರವನ್ನು ಇತ್ತೀಚಿನ ವರ್ಷಗಳಲ್ಲಿ
ನಿರ್ಮಿಸಲಾಗಿದೆ. ದಕ್ಷಿಣಾಭಿಮುಖವಾಗಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ. ಗರ್ಭಗೃಹ ಮಾತ್ರ ಇರುವ ದೇವಾಲಯವಿದು. ಗರ್ಭಗೃಹದಲ್ಲಿ ಎರಡೂವರೆ ಅಡಿ ಎತ್ತರದ ಆಂಜನೇಯ ಸ್ವಾಮಿ ಶಿಲ್ಪವಿದೆ .

2.ಮಾರಿಕಾಂಬಾ ದೇವಾಲಯ:
ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಿಕಾಂಬಾ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಮಾರಿಕಾಂಬಾ ದೇವಿಯ ಶಿಲ್ಪವಿದೆ.
ಹಳೆಯ ಗುಡಿಯನ್ನು ತೆಗೆದು ಇದೀಗ ನೂತನವಾಗಿ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಮಳೆ ಬಾರದೆ,ಬರಗಾಲ ಆವರಿಸಿದರೆ ಗ್ರಾಮಸ್ಥರೆಲ್ಲರೂ ಸೇರಿ ಮಳೆಮಲ್ಲಪ್ಪನನ್ನು ಪೂಜಿಸಿ ಗ್ರಾಮದ ಪೂರ್ವಕ್ಕೆ ಇರುವ ಚೇಳುಗುಡ್ಡದ ಮೇಲಿರುವ ಆಪಿನದೊಣೆ ಎಂಬ ಜಾಗದಲ್ಲಿ ದೇವರನ್ನು ಪೂಜಿಸಿ ಪರೇವು ನಡೆಸಲಾಗುತ್ತದೆ.

3.ಮೈಲಾರಲಿಂಗೇಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಮೈಲಾರಲಿಂಗೇಶ್ವರ ದೇವಾಲಯವು 1982 ರಲ್ಲಿ ನಿರ್ಮಾಣ ಮಾಡಲಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ ಗರ್ಭಗೃಹ ಹಾಗೂ ಸಭಾಮಂಟಪಗಳಿದ್ದು, ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ.ಗರ್ಭಗೃಹದಲ್ಲಿ ಮೈಲಾರಲಿಂಗೇಶ್ವರ ದೇವರನ್ನು ಪೂಜಿಸಲಾಗುತ್ತದೆ. ದೇವಾಲಯದ ಎದುರು ಮೈಲಾರಲಿಂಗೇಶ್ವರನ ಶೀಬಾರವಿದ್ದು ಇದಕ್ಕೆ ಭಕ್ತರು ಭಂಡಾರ ಹಚ್ಚಿ ಪೂಜಿಸುತ್ತಾರೆ .
ಪ್ರತಿ ಭಾನುವಾರ ಇಲ್ಲಿ ಭಕ್ತರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ದೋಣಿ ಪೂಜೆ ಹಿರಿಯ ಗೊರವಪ್ಪಗಳಿಂದ ನಡೆಸಲಾಗುತ್ತದೆ. ಇದರ ಬಳಿಯಲ್ಲಿಯೇ ಸಮುದಾಯ ಭವನವಿದ್ದು ಗ್ರಾಮದಲ್ಲಿನ ಮದುವೆ ಮುಂತಾದ ಶುಭ ಸಮಾರಂಭಗಳು ಜರುಗುತ್ತವೆ.

4.ಚೌಡೇಶ್ವರಿ ದೇವಾಲಯ:
ಗ್ರಾಮದ ಹಳೆ ಗ್ರಾಮ ನಿವೇಶನ (ಬೇಚಾರಕ್ ಗ್ರಾಮ) ಹೊಳಲ್ಕೆರೆ ರಸ್ತೆಯ ಬಲಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು,
ಪೂರ್ವಾಭಿಮುಖವಾಗಿದೆ.

5.ಕಣಿವೆ ಮಾರಮ್ಮ ದೇವಾಲಯ:
ಹೊಳಲ್ಕೆರೆ ರಸ್ತೆ ಕಿರುಬನಕಲ್ಲು ಬೈಪಾಸ್ ರಸ್ತೆಯಲ್ಲಿ ಇರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು, ಪೂರ್ವಾಭಿಮುಖವಾಗಿದೆ. ಗರ್ಭಗೃಹದಲ್ಲಿ ಮಾರಮ್ಮ ದೇವಯ ಶಿಲ್ಪವಿದ್ದು ಪೂಜಿಸಲಾಗುತ್ತದೆ. ಪ್ರತಿವರ್ಷ ಇಲ್ಲಿ ಮಾರಮ್ಮನ ಜಾತ್ರೆಯ ಸಮಯದಲ್ಲಿ ಪರೇವು ನಡೆಸಲಾಗುತ್ತದೆ.

ಇದರ ಜೊತೆಗೆ ಕುಕ್ಕುವಾಡೇಶ್ವರಿ ಗುಡಿ, ಅಸಗೋಡು ಮಾರಮ್ಮ ದೇವಾಲಯಗಳಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...