ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 :
ಚಿತ್ರದುರ್ಗ ನಗರದ ಪೂರ್ವಭಾಗದಲ್ಲಿರುವ ಕೆಳಗೋಟೆ ಬಡಾವಣೆಯು ಚಿತ್ರದುರ್ಗ ತಾಲ್ಲೂಕಿನ ಕಸಬಾ ಹೋಬಳಿ ಕಂದಾಯ ವಿಭಾಗದಲ್ಲಿ ಪ್ರತ್ಯೇಕ ಕಂದಾಯ ಗ್ರಾಮವಾಗಿದ್ದರೂ, ನಗರ ವ್ಯಾಪ್ತಿಯ 30 ನೇ ವಾರ್ಡ್ ನಲ್ಲಿದೆ.
ಚಿತ್ರದುರ್ಗದ ಅತ್ಯಂತ ಹಳೆಯ ಪ್ರದೇಶವಾದ ಕೆಳಗೋಟೆಯು ನಗರದ ಒಂದು ಪ್ರಮುಖ ಬಡಾವಣೆಯಾಗಿದೆ. ಕೆಳಗೋಟೆ ಬಡಾವಣೆಯು ಚಿತ್ರದುರ್ಗದ ತುರುವನೂರು ರಸ್ತೆಯ ಪೂರ್ವಭಾಗದಲ್ಲಿದ್ದು,ಎಸ್ಪಿ ಕಚೇರಿಯ ಎದುರಿನ ಭಾಗದಿಂದ ಹಿಡಿದು ಸರ್ಕಾರಿ ಬಾರ್ ಲೈನ್ ಶಾಲೆಯ ಪೂರ್ವಭಾಗದ ಪ್ರದೇಶಗಳೆಲ್ಲವನ್ನು ಕೆಳಗೋಟೆ ಎನ್ನಲಾಗುತ್ತದೆ. ಎಸ್ಪಿ ಕಚೇರಿಯ ಮುಂದಿನ ರಸ್ತೆಯು ಮುಖ್ಯ ಭಾಗವಾಗಿದ್ದರೆ, ಮುನಿಸಿಪಾಲ್ ಕಾಲೋನಿ, ಆಕಾಶವಾಣಿ, ಸಿ.ಕೆ. ಪುರ ಬಡಾವಣೆ, ಸಂಗಮೇಶ್ವರ ಲೇಔಟ್ … ಇವೆಲ್ಲವೂ ಈ ಪ್ರದೇಶದ ಮುಂದುವರಿದ ಭಾಗಗಳಾಗಿವೆ.
ಕೆಳಗೋಟೆ ಪ್ರದೇಶ ನಗರ ವ್ಯಾಪ್ತಿಯಲ್ಲಿದ್ದರೂ 80-90 ರ ದಶಕದವರೆಗೂ ಇಲ್ಲಿ ಗ್ರಾಮ್ಯ ಸಂಸ್ಕೃತಿ ಕಾಣಬಹುದಾಗಿತ್ತು. ಸಾಂಪ್ರದಾಯಿಕ ನಾಡ ಹೆಂಚುಗಳ ಮನೆ, ಹುಣಸೇಮರದ ಸಾಲುಗಳೇ ಹೆಚ್ಚಾಗಿದ್ದವು. ಜನಸಂದಣಿ, ಜನಸಂಚಾರ ಅಷ್ಟಾಗಿರಲಿಲ್ಲ. ಇದೀಗ ನಗರೀಕರಣದ ಪ್ರಭಾವದಿಂದ ಈ ಬಡಾವಣೆಯಲ್ಲೀಗ ಇವೆಲ್ಲವೂ ಮರೆಯಾಗಿ ಆಧುನಿಕ ಮನೆಗಳು ತಲೆಯೆತ್ತಿವೆ.
ಹಿಂದಿನಿಂದಲೂ ಇದು ಚಿತ್ರದುರ್ಗ ನಗರದ ಹೊರವಲಯದಲ್ಲಿ ಇದ್ದಿತು. ಇದೀಗ ಈ ಬಡಾವಣೆಯ ನಗರದ ಮಧ್ಯಭಾಗದಲ್ಲಿ ಸೇರಿಹೋಗಿದೆ. 80-90 ರ ದಶಕದವರೆಗೂ ಕೆಳಗೋಟೆ ಎಂದರೆ ಚಿತ್ರದುರ್ಗ ನಗರಕ್ಕೆ ತುಂಬಾ ದೂರವಾದ ಬಡಾವಣೆ ಎಂಬಂತಿದ್ದ ಈ ಪ್ರದೇಶವೀಗ ನಗರದ ಒಂದು ಭಾಗವೇ ಆಗಿ ಹೋಗಿದೆ.
ಹೆಸರಿನ ಮೂಲ :
ಕೆಳಗೋಟೆ ಎಂದರೆ ಚಿತ್ರದುರ್ಗದ ಕೋಟೆಯ ಕೆಳಗಿನ ಭಾಗದ ಪ್ರದೇಶವೆಂಬ ಅರ್ಥವಿದೆ.ಇದೇ ಈ ಬಡಾವಣೆಯ ಹೆಸರಿಗೆ ಕಾರಣವಾಗಿದ್ದು,ಹಿಂದೆ ಇಲ್ಲಿ ಕೋಟೆಯ ಪ್ರದೇಶವಿದ್ದಿತು ಎಂದು ಹೇಳಲಾಗುತ್ತದೆ. ಆದರೆ ಇಂದು ಯಾವುದೇ ಕೋಟೆಯ ಕುರುಹುಗಳು ಉಳಿದಿರುವುದಿಲ್ಲ.
ಬಡಾವಣೆಯಲ್ಲಿರುವ ದೇವಾಲಯಗಳ ಪರಿಚಯ :
1.ಚನ್ನಕೇಶವಸ್ವಾಮಿ ದೇವಸ್ಥಾನ:
ಕೆಳಗೋಟೆ ಬಡಾವಣೆಯಲ್ಲಿನ ಆಕಾಶವಾಣಿ ಬಳಿ ಇರುವ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನವು ಕ್ರಿಸ್ತಶಕ ಸುಮಾರು 17 -18 ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ನಿರ್ಮಾಣವಾಗಿದೆ.
ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ಮಂದಿರ ಪೂರ್ವಾಭಿಮುಖವಾಗಿದ್ದು , ಮೂರು ಗರ್ಭಗೃಹಗಳಿರುವ
ತ್ರಿಕೂಟ ದೇವಾಲಯವಾಗಿದೆ.
ಮುಖ್ಯ ಗರ್ಭಗೃಹದಲ್ಲಿ 4 ಅಡಿ ಎತ್ತರದ ಶ್ರೀ ಚನ್ನಕೇಶವಸ್ವಾಮಿಯ ಶಿಲ್ಪವಿದೆ. ತನ್ನ ಎಡಗೈಯಲ್ಲಿ ಚಕ್ರ ,ಗದೆ ಮತ್ತು ಬಲಗೈಯಲ್ಲಿ ಶಂಖ, ಪದ್ಮಗಳನ್ನು ಹಿಡಿದಿದ್ದಾನೆ. ಅಕ್ಕಪಕ್ಕದಲ್ಲಿ ಶ್ರೀದೇವಿ ಮತ್ತು ಭೂದೇವಿಯರ ಶಿಲ್ಪಗಳಿವೆ. ಇವು ಕಪ್ಪು ಶಿಲೆಗಳಾಗಿವೆ.ಎಡಗಡೆಯ ಗರ್ಭಗೃಹದಲ್ಲಿ ಆಂಜನೇಯ, ಬಲಗಡೆಯ ಗರ್ಭಗೃಹದಲ್ಲಿ ಶಿವಲಿಂಗ ಮತ್ತು ನಂದಿಯ ಶಿಲ್ಪಗಳಿವೆ. ಮೂರು ಮುಖ್ಯ ಗರ್ಭಗೃಹದ ಮುಂದೆ ಅಂತರಾಳವಿದೆ . ಅಂತರಾಳದ ಮುಂದೆ ನವರಂಗ ಹಾಗೂ ತೆರೆದ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಬಹುಮುಖಗಳಲ್ಲಿ ಕಡೆಯಲಾದ ಕಂಬಗಳಿವೆ. ತೆರೆದ ಸಭಾಮಂಟಪದ ಕಂಬಗಳು ಚಿತ್ರ ಕಾಂಡ ಕಂಬಗಳಾಗಿವೆ .ಇವುಗಳಲ್ಲಿ ಶಿವಲಿಂಗ ,ಗಣೇಶ ಆಂಜನೇಯ, ಗರುಡ ಮುಂತಾದ ಉಬ್ಬು ಕೆತ್ತನೆಗಳಿವೆ .ತೆರೆದ ಮಂಟಪದಲ್ಲಿ ಎರಡು ಆನೆಗಳು ಹಾಗೂ ಎರಡು ಕುದುರೆಗಳನ್ನು ಇಡಲಾಗಿದೆ. ದೇವಾಲಯದ ಸುತ್ತಲೂ ಪ್ರಾಕಾರ ಗೋಡೆಯಿದೆ. ದೇಗುಲದ ಎದುರಿಗೆ ಗರುಡ, ಧ್ವಜ ಸ್ತಂಭ ಹಾಗೂ ಅಷ್ಟದಿಕ್ಪಾಲಕರ ಶಿಲ್ಪಗಳುಳ್ಳ ಬಲಿ ಪೀಠಗಳಿವೆ.
ಚನ್ನಕೇಶವಸ್ವಾಮಿ ಜಾತ್ರೆಯು ಪ್ರತಿ ವರ್ಷ ಕಾಳ ಹುಣ್ಣಿಮೆಯಲ್ಲಿ ನಡೆಯುತ್ತದೆ .ಈ ಜಾತ್ರೆಯಲ್ಲಿ ಉತ್ಸವ ಮೂರ್ತಿಗಳನ್ನು ಆರಾಧಿಸಲಾಗುತ್ತದೆ. ಜಾತ್ರೆಯಲ್ಲಿ ಮೊದಲ ದಿನ ಕಲ್ಯಾಣೋತ್ಸವ,ಎರಡನೇ ದಿನ ರಥೋತ್ಸವ ಜರುಗುತ್ತದೆ.
1778-79 ರ ಮದಕರಿನಾಯಕನ ಕಾಲದಲ್ಲಿ ಚಿತ್ರದುರ್ಗಕ್ಕೆ ದಾಳಿಮಾಡಲು ಹೈದರಾಲಿಯ ಸೇನೆಯು ಈ ಚೆನ್ನಕೇಶವ ದೇವಾಲಯದ ತೋಪಿನಲ್ಲಿ ಬೀಡುಬಿಟ್ಟಿತ್ತು.
( ಮಾಹಿತಿ :ಟಿ.ಗಿರಿಜಾ ಚಿತ್ರದುರ್ಗ ಜಿಲ್ಲಾ ದರ್ಶಿನಿ.)
ಚನ್ನಕೇಶವಸ್ವಾಮಿ ಹೊಂಡ :
ದೇವಾಲಯದ ಹಿಂದೆ ಚನ್ನಕೇಶವಸ್ವಾಮಿ ಹೊಂಡವಿದೆ. ಅದರ ಎದುರಿನಲ್ಲಿ ತೆರೆದ ಗಾಳಿ ಮಂಟಪವಿದೆ. ಇದು ಪಕ್ಕದ ಕೊಳದ ಜಲ ಕ್ರೀಡೆ ವೀಕ್ಷಿಸಲು ಅನುವಾಗುವಂತಿದೆ. ಬೃಹತ್ ಕಲ್ಲಿನ ಹೊಂಡವಾದ ಇದು ಇಂದಿಗೂ ಸುಸ್ಥಿತಿಯಲ್ಲಿದೆ. ಇದು ತುಂಬಿದಾಗ ಇಡೀ ಬಡಾವಣೆಯ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಇತ್ತೀಚಿಗೆ ಸ್ವಚ್ಛಗೊಳಿಸಲಾಗಿದೆ .ಇದಕ್ಕೆ ಹರಿವಿನ ಮೂಲ ಹತ್ತಾರು ದಿಕ್ಕುಗಳಿಂದ ಇದೆ.ಇದರಲ್ಲಿ ಮಳೆ ನೀರು ಶೇಖರಿಸಲಾಗುತ್ತದೆ. ಆಕಾಶವಾಣಿಯ ವಸತಿಗೃಹಗಳ ಮೇಲೆ ಬಿದ್ದ ಮಳೆ ನೀರು ಸಂಪೂರ್ಣವಾಗಿ ಹೊಂಡಕ್ಕೆ ತುಂಬುವ ವ್ಯವಸ್ಥೆಯನ್ನು ಇತ್ತೀಚಿಗೆ ಮಾಡಲಾಗಿದೆ. ಹತ್ತಿರದಲ್ಲಿ ಮಕ್ಕಳಿಗಾಗಿ ಆಟದ ಮೈದಾನ ಹಾಗೂ ಸುಂದರ ಉದ್ಯಾನವನವಿದ್ದು ಮನಸ್ಸಿಗೆ ಹಿತಕರ ವಾತಾವರಣ ನೀಡುವ ತಾಣವಾಗಿದೆ.
(ಮಾಹಿತಿ: ಎಸ್ ವೈ ಸೋಮಶೇಖರ್. ಹಂಪಿ ವಿವಿ)
ಹಿಂದೆ ಈ ದೇವಾಲಯದ ಸುತ್ತ ಮಾವಿನತೋಪು ಇದ್ದಿತಂತೆ.
ತೋಪಿನಲ್ಲಿ ವ್ಯವಸಾಯ ಮಾಡಲು ಹೊಳಲ್ಕೆರೆ ತಾಲ್ಲೂಕಿನ ಕೊಳಾಳ್ ಗ್ರಾಮದ ಗ್ರಾಮಸ್ಥರು ಇಲ್ಲಿ ಬಂದು ನೆಲೆಸಿದ್ದರಂತೆ. ಒಂದು ಸಣ್ಣ ಹಟ್ಟಿ ನಿರ್ಮಾಣವಾಗಿ ಈ ಪ್ರದೇಶಕ್ಕೆ ರಾಯರಹಟ್ಟಿ ಎಂದು ಹೆಸರಾಗಿದಿತ್ತು. ಇದಕ್ಕೂ ಮೊದಲು ಈ ದೇವಾಲಯದ ಆವರಣಕ್ಕೆ ನಿಂಗಣ್ಣನ ತೋಪು ಎಂದು ಹೆಸರಿತ್ತಂತೆ.
2. ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನ:
ಕೆಳಗೋಟೆ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನ ಕಳೆದ ದಶಕದಲ್ಲಿ ನಿರ್ಮಿಸಲಾದ ನೂತನ ಮಂದಿರವಾಗಿದೆ. ಸ್ಥಳೀಯ ಶೈಲಿ ಹಾಗೂ ದ್ರಾವಿಡ ಶೈಲಿಯ ಗೋಪುರ ಹೊಂದಿರುವ ಈ ದೇವಸ್ಥಾನಕ್ಕೆ ಅಪಾರ ಭಕ್ತರು ನಡೆದುಕೊಳ್ಳುತ್ತಾರೆ. ಯುಗಾದಿ, ದಸರಾ, ನವರಾತ್ರಿ,ದೀಪಾವಳಿ ಹಬ್ಬಗಳಲ್ಲಿ… ವಿಶೇಷ ಪೂಜೆ ಹಾಗೂ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯವು ವಿಶೇಷ ವಾಸ್ತು ಶೈಲಿಯಿಂದ ಗಮನಸೆಳೆಯುತ್ತದೆ.
3. ಪಂಚ ಮಂದಿರ ಕ್ಷೇತ್ರ( ಪ್ರಸನ್ನ ಗಣಪತಿ ದೇವಸ್ಥಾನ.):
ಕೆಳಗೋಟೆಯ ಮುಖ್ಯರಸ್ತೆಯಲ್ಲಿರುವ ಈ ಪಂಚ ಮಂದಿರ ಕ್ಷೇತ್ರದಲ್ಲಿ 5 ಮಂದಿರಗಳಿವೆ. ಪ್ರಸನ್ನ ಗಣಪತಿ,ಸುಬ್ರಹ್ಮಣ್ಯ, ಮಲ್ಲಿಕಾರ್ಜುನ ಸ್ವಾಮಿ, ಆಂಜನೇಯ ಸ್ವಾಮಿ ನವಗ್ರಹ ಮಂದಿರಗಳಿವೆ.
ಸ್ಥಳೀಯ ಶೈಲಿಯಲ್ಲಿ ಈ ದೇವಾಲಯಗಳನ್ನು ನಿರ್ಮಿಸಲಾಗಿದೆ. ಹತ್ತಿರದಲ್ಲಿಯೇ ಪುರಾತನ ನೀರಿನ ಹೊಂಡವಿದೆ.ಇದೇ ದೇವಸ್ಥಾನದ ಮುಂದುವರೆದ ರಸ್ತೆಯಲ್ಲಿ ಕುಕ್ಕುವಾಡೇಶ್ವರಿ ಮಂದಿರವಿದೆ.
4.ಅಂಬಾಭವಾನಿ ದೇವಸ್ಥಾನ:( ಗೋಸಾಯಿ ಮಠ ) ಬಡಾವಣೆಯ ಮತ್ತೊಂದು ಪ್ರಮುಖ ದೇವಾಲಯವಾದ ಅಂಬಾಭವಾನಿ ದೇವಸ್ಥಾನವು ಮಂದಿರಗಳ ಸಂಕೀರ್ಣವಾಗಿದೆ. ಇಲ್ಲಿ ಶ್ರೀರಾಮಚಂದ್ರ,ನವಗ್ರಹ, ಈಶ್ವರ,ಅಂಬಾಭವಾನಿ ದೇವಸ್ಥಾನಗಳಿವೆ. ಅಂಭಾಭವಾನಿ ದೇವಸ್ಥಾನದ ಗೋಪುರವು ಹಲವಾರು ಸುಂದರವಾದ ಗಾರೆಗಚ್ಚಿನ ಶಿಲ್ಪಗಳನ್ನು ಒಳಗೊಂಡಿದೆ. ದೇವಾಲಯದ ಅವರಣದಲ್ಲಿ ನಾಗ ಶಿಲ್ಪಗಳು ಅಶ್ವತ್ಥಕಟ್ಟೆ ಇದೆ. ರಾಮನವಮಿ, ಶಿವರಾತ್ರಿ,ನವರಾತ್ರಿ, ಮಂಗಳವಾರ -ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಮರಾಠ ಸಮುದಾಯದವರು ಈ ದೇವರಿಗೆ ವಿಶೇಷವಾಗಿ ನಡೆದುಕೊಳ್ಳುತ್ತಾರೆ. ಇದರ ಜೊತೆಗೆ ಈ ದೇವಸ್ಥಾನದ ಮುಂದಿನ ಮುಖ್ಯ ರಸ್ತೆಯ ಮುಂದುವರೆದ ಭಾಗದಲ್ಲಿ ಗೌರಸಂದ್ರ ಮಾರಮ್ಮ ದೇವಸ್ಥಾನ,ಬೇಡರಕಣ್ಣಪ್ಪ ಮುಂತಾದ ದೇವಸ್ಥಾನಗಳಿವೆ.
5.ವೆಂಕಟೇಶ್ವರ ದೇವಸ್ಥಾನ:
ತುರುವನೂರು ಮುಖ್ಯರಸ್ತೆಯ ಸೆಂಟ್ ಜೋಸೆಫ್ ಶಾಲೆಯ ಎದುರು ಭಾಗದಲ್ಲಿರುವ ವೆಂಕಟೇಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲಾಗುತ್ತದೆ.ಇಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದೇ ರಸ್ತೆಯ ಮುಂದುವರೆದ ಭಾಗದಲ್ಲಿ ತಿಪ್ಪೇರುದ್ರಸ್ವಾಮಿ ಮಠವಿದೆ.






























