ಚಿತ್ರದುರ್ಗ, (ಸೆ.16) : ಇತ್ತೀಚೆಗೆ ಕೆಲವು ವ್ಯಕ್ತಿಗಳು ಎಸ್.ಜೆ.ಎಂ. ನೌಕರರು ಬರೆದಿದ್ದಾರೆ ಎನ್ನಲಾದ 6 ಪುಟಗಳ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಪತ್ರವನ್ನು ನಾವುಗಳು ಬರೆದಿಲ್ಲ ಎಂದು ಎಸ್.ಜೆ.ಎಂ.ವಿದ್ಯಾಪೀಠದ ನೌಕರರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ರೀತಿಯ ಪತ್ರವನ್ನು ಬರೆಯುವ ಅನಿವಾರ್ಯತೆಯಾಗಲಿ, ದುರುದ್ದೇಶವಾಗಲಿ ನಮಗೆ ಇಲ್ಲ. ಸಂಸ್ಥೆಯಲ್ಲಿ ದಾಸೋಹ ಮಾಡುತ್ತಿರುವ ನಾವುಗಳು ಶ್ರೀಮಠದ ಬಗ್ಗೆ, ನಮ್ಮ ವಿದ್ಯಾಪೀಠದ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವನ್ನು ಇಟ್ಟುಕೊಂಡಿದ್ದೇವೆ. ನಮ್ಮಂತಹ ಸಾವಿರಾರು ನೌಕರರು ಹಾಗೂ ಅವರನ್ನು ನಂಬಿದ ಕುಟುಂಬ ವರ್ಗದವರು ಶ್ರೀಮಠದ ಆಶ್ರಯದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಮಗೆ ಎಂತಹ ಸಂಕಷ್ಟ ಎದುರಾದರೂ ಶ್ರೀಮಠದ ಹಾಗೂ ವಿದ್ಯಾಪೀಠದ ಜೊತೆ ಇರುತ್ತೇವೆ. ಮಾತ್ರವಲ್ಲ, ಲಕ್ಷಾಂತರ ಭಕ್ತರು ಜೊತೆಗಿದ್ದಾರೆ ಎಂದಿದ್ದಾರೆ.
ಮುರುಘಾ ಪರಂಪರೆಗೆ ಕಳಂಕ ತರುವ ಉದ್ದೇಶದಿಂದ ಈ ರೀತಿ ಮಾಡಿರುತ್ತಾರೆ. ಆಡಳಿತಾತ್ಮಕ ವಿಚಾರಗಳನ್ನು ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಕಾರ್ಯಗತಗೊಳಿಸುತ್ತಾರೆ ಹಾಗು ಮುಕ್ತವಾಗಿ ನಮ್ಮೊಡನೆ ಚರ್ಚಿಸುತ್ತಾರೆ. ಶ್ರೀಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ವಿಚಾರದಲ್ಲಿ ಭಕ್ತಿಯಿಂದ ಗೌರವದಿಂದ ಅವರೊಡನೆ ಯಾವತ್ತೂ ನಾವುಗಳು ಇರುತ್ತೇವೆ. ಇಡೀ ನಮ್ಮ ಕುಟುಂಬ ಸಹಸ್ರಾರು ಭಕ್ತರು ವಿದ್ಯಾಪೀಠದ ಜತೆ ನಿಲ್ಲುತ್ತೇವೆ.
ಇಂತಹ ಅನಾಮಧೇಯ ಪತ್ರಗಳಿಗೆ ನೌಕರರು ಹಾಗೂ ಭಕ್ತರು, ಮಾಧ್ಯಮದವರು ದಯವಿಟ್ಟು ಬೆಲೆ ಕೊಡಬಾರದು ಎಂಬ ಅಂಶವನ್ನು ಈ ಮೂಲಕ ತಿಳಿಸುತ್ತೇವೆ ಎಂದು ಬಸವೇಶ್ವರ ಆಸ್ಪತ್ರೆಯ ಅಧೀಕ್ಷಕರಾದ ಡಾ|| ಪಾಲಾಕ್ಷಪ್ಪ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಆರ್. ಗೌರಮ್ಮ, ಎಸ್.ಜೆ.ಎಂ. ಫಾರ್ಮಸಿ ಕಾಲೇಜು ಪ್ರಾಂಶುಪಾಲರಾದ ಡಾ|| ನಾಗರಾಜ್, ಎಸ್.ಜೆ.ಎಂ. ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್‍ನ ಪ್ರಾಂಶುಪಾಲರಾದ ಡಾ|| ಸವಿತಾರೆಡ್ಡಿ, ಜೆ.ಎಂ.ಐ.ಟಿ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ|| ಭರತ್, ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಎಸ್. ದಿನೇಶ್, ಎಸ್.ಜೆ.ಎಂ. ಐಟಿಐ ಕಾಲೇಜಿನ ಪ್ರಾಚಾರ್ಯ ಬೋರೇಶ್ ಅವರುಗಳು ಇಂದು ಕರೆದಿದ್ದ ಜಂಟಿ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.