ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 02 : ಧರ್ಮ ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತಿರುವ ಬಿಜೆಪಿ ಆರ್.ಎಸ್.ಎಸ್. ಕೈಗೆ ಅಧಿಕಾರ ಕೊಡಬಾರದು. ಅದಕ್ಕಾಗಿ 24 ದಿನಗಳ ಕಾಲ ರಾಜ್ಯದ ಮೂಲೆ ಮೂಲೆಗೆ ನಮ್ಮ ಜಾಥ ಸಂಚರಿಸಲಿದೆ ಎಂದು ಸಿ.ಪಿ.ಐ. ರಾಜ್ಯ ಕಾರ್ಯದರ್ಶಿ ಸಾ.ತಿ.ಸುಂದರೇಶ್ ಹೇಳಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಹೊರಟಿರುವ ಜಾಥ ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ನೂರು ವರ್ಷಗಳ ಹಿಂದೆ ಸಿಪಿಐ ಉದಯವಾದಾಗ ದೇಶ ಸಂಕಷ್ಟದಲ್ಲಿತ್ತು. ಆಗ ನಮ್ಮ ನಾಯಕರುಗಳು ಬ್ರಿಟೀಷರ ವಿರುದ್ದ ಹೋರಾಡಿ ಅನೇಕರು ಜೈಲು ಸೇರಿ ಪ್ರಾಣ ತ್ಯಾಗ ಮಾಡಿದ ಇತಿಹಾಸವಿದೆ. ಈಗ ಮತ್ತೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಿದೆ. ದೇಶದ ಸಂಪತ್ತನ್ನು ಉದ್ಯಮಿ, ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಜಾಥ ಉದ್ದೇಶ ಎಂದರು.
ಗಾಂಧಿಜಿಯನ್ನು ಕೊಂದ ಆರ್.ಎಸ್.ಎಸ್.ನವರು. ಬ್ರಿಟೀಷರ ಪರವಾಗಿದ್ದರು. ನಾಡಿನ ಬಹುತ್ವ, ಹಿಂದೂ-ಮುಸಲ್ಮಾನರ ಐಕ್ಯತೆಯನ್ನು ಉಳಿಸಬೇಕಿದೆ. ರೈತರು
ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕು. ಸೌಜನ್ಯಾಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಸಮಾನತೆ ನಮ್ಮ ಕನಸು. ಪ್ರತಿ ದಲಿತ ಕಾಲೋನಿಗಳು ಸ್ಲಂಗಳಾಗುತ್ತಿವೆ. ಸೂರಿಗಾಗಿ ಸಮರ ನಮ್ಮ ಹೋರಾಟ. ಮನೆಗಳನ್ನು ನೀಡುವ ಬದಲು ಬಡವರಿಗೆ ನಿವೇಶನಗಳನ್ನು ಕೊಡಿ. ಆಶ್ರಯ ಯೋಜನೆ ಜಾರಿಗೆ ತಂದವರು ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪನವರು. ಕೇಂದ್ರದಲ್ಲಿರುವ ಜನ ವಿರೋಧಿ ಸರ್ಕಾರ ತೊಲಗಿಸಿ ಬಡವರಿಗೆ ಸೂರು ಒದಗಿಸುವುದು ನಮ್ಮ ಆಶಯ ಎಂದು ತಿಳಿಸಿದರು.
ಸಿಪಿಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಕಮ್ಯುನಿಸ್ಟ್, ಕಾಂಗ್ರೆಸ್, ಮುಸ್ಲಿಂ ಲೀಗ್ ಬಿಟ್ಟರೆ ಬೇರೆ ಯಾರು ಬ್ರಿಟೀಷರ ವಿರುದ್ದ ಹೋರಾಡಲಿಲ್ಲ. ಕೋಮುಗಲಭೆ, ಸಂಘರ್ಷ ಇವುಗಳೆ ಬಿಜೆಪಿ.ಯ ನೀತಿಗಳು, 1925 ರಲ್ಲಿ ಕಾರ್ಮಿಕರ ಪರವಾಗಿ ಕಾನೂನು ಜಾರಿಗೆ ಬರುವಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಬಹುದೊಡ್ಡ ಕೊಡುಗೆಯಿದೆ. ಆರ್.ಎಸ್.ಎಸ್. ಕೂಡ ನೂರು ವರ್ಷಗಳನ್ನು ಪೂರೈಸಿದೆ ಎಂದು ಸಂಭ್ರಮಾಚರಣೆಯನ್ನು ಆಚರಿಸಿತು. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಇವರ ಹೋರಾಟ ಶೂನ್ಯ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದ ಉದ್ದೇಶ ಒಂದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅನೇಕ ಹಿರಿಯರು ತ್ಯಾಗ ಬಲಿದಾನಗಳನ್ನು ಸಮರ್ಪಿಸಿದ್ದಾರೆ. ಊಟ, ವಸತಿ, ಬಟ್ಟೆಗಾಗಿ ಹೋರಾಡಿದವರಲ್ಲಿ ಕಮ್ಯುನಿಸ್ಟ್ ಮುಂಚೂಣಿಯಲ್ಲಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಧಕ್ಕೆ ಬಂದಿರುವುದರಿಂದ ಉಳಿಸಿಕೊಳ್ಳಲು ಮತ್ತೆ ಹೋರಾಟ ಮಾಡಬೇಕಿದೆ. ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತಂದಿರುವುದರಿಂದ ಬಡವರಿಗೆ ಅನುಕೂಲವಾಗಿ ಎಂದರು.
ಸಿಪಿಐ. ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಹೆಚ್.ಎಂ.ಸಂತೋಷ್ ಮಾತನಾಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ ದುಡಿಯುವ ವರ್ಗದವರ ಪರವಾಗಿದ್ದ ಕಮ್ಯುನಿಸ್ಟ್ ಪಕ್ಷಕ್ಕೆ ನೂರು ವರ್ಷಗಳಾಗಿದೆಯೆಂದರೆ ಸಾಮಾನ್ಯ ಮಾತಲ್ಲ. ಶೋಷಿತ ಸಮುದಾಯವನ್ನು ಕಾಪಾಡುವುದಕ್ಕಾಗಿ ರಾಜ್ಯಾದ್ಯಂತ ಜಾಥ ಹೊರಟಿದೆ. ಸೌಹಾರ್ಧತೆ, ಸಮ ಸಮಾಜ ನಿರ್ಮಾಣವಾಗಬೇಕು. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಅದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ತಿಳಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡುತ್ತ ಸಿಪಿಐ. ಮೊದಲಿನಿಂದಲೂ ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ದವಾಗಿ ಹೋರಾಟ ಮಾಡಿಕೊಂಡು ಬಂದ ಪರಿಣಾಮವಾಗಿ ಇಂದಿಗೂ ದುಡಿಯುವ ವರ್ಗದವರ ಮನದಲ್ಲಿ ಉಳಿದುಕೊಂಡಿದೆ. ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತರ ಬೇಡಿಕೆಗಳಿಗೆ ಚಳುವಳಿಗಳನ್ನು ನಡೆಸಿಕೊಂಡು ಬರುತ್ತಿರುವುದರಿಂದ ನ್ಯಾಯ ಸಿಕ್ಕಿದೆ. ಕೃಷ್ಣನ್, ಪಂಪಾಪತಿ, ವಾಸನ್ ಇನ್ನು ಅನೇಕ ನಾಯಕರಗಳು ಕಮ್ಯುನಿಸ್ಟ್ ಪಕ್ಷಕ್ಕೆ ತಮ್ಮದೆ ಆದ ಗಟ್ಟಿತನ ತುಂಬಿದ್ದಾರೆಂದು ನೆನಪಿಸಿಕೊಂಡರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ಕಮ್ಯುನಿಸ್ಟ್ ಪಕ್ಷದ ಉಮಾಪತಿ, ಕುಮಾರಸ್ವಾಮಿ, ಹನುಮಂತಪ್ಪ, ಜನಾರ್ಧನ್, ವೇದಮ್ಮ, ಭಾಗ್ಯಮ್ಮ, ಅಮಿನಾಭಿ, ಪ್ರಸನ್ನಕುಮಾರ್, ಈ.ಸತ್ಯಕೀರ್ತಿ, ಜಿಲ್ಲಾ ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
