ಓ.ಆರ್.ಎಸ್, ಝಿಂಕ್ ಅತಿಸಾರ ಭೇದಿಗೆ ಪರಿಣಾಮಕಾರಿ ಚಿಕಿತ್ಸೆ : ಡಾ.ಕೆ.ನಂದಿನಿದೇವಿ ಚಾಲನೆ

2 Min Read

ಚಿತ್ರದುರ್ಗ,(ಆಗಸ್ಟ್.01) :  ಓ.ಆರ್.ಎಸ್ ಮತ್ತು ಝಿಂಕ್ ಅತಿಸಾರಭೇದಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.

ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ತೀವ್ರ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಮತ್ತು ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತಿಸಾರಭೇದಿಯಿಂದ ಯಾವುದೇ ಮಗುವಿನ ಸಾವು ಸಂಭವಿಸಬಾರದು. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಎಲ್ಲಾ ಸಮನ್ವಯ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಬೇರೆ ರಾಜ್ಯಗಳ ಮಾನದಂಡಗಳನ್ನು ಹೋಲಿಸಿದಾಗ ನಮ್ಮ ಜಿಲ್ಲೆಯಲ್ಲಿ ಅತಿಸಾರಭೇದಿಯಿಂದ ಮಗುವಿನ ಸಾವಿನ ಪ್ರಮಾಣ ಬಹಳ ಕಡಿಮೆಯಿದೆ. ಇಂದಿನಿಂದ ಆಗಸ್ಟ್ 14 ರವರೆಗೂ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸುರಕ್ಷತಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಗುಂಪು ಸಭೆ, ತಾಯಂದಿರ ಸಭೆಗಳನ್ನು ಹಮ್ಮಿಕೊಂಡು ಓ.ಆರ್.ಎಸ್.ದ್ರಾವಣ ತಯಾರಿಸುವ ವಿಧಾನ, ಝಿಂಕ್ ಮಾತ್ರೆ ವಿತರಣೆ, ಕೈಗಳ ಸ್ವಚ್ಛತೆ, ತಾಯಿ ಹಾಲಿನ ಮಹತ್ವದ ಬಗ್ಗೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ನಡೆಸುವರು ಎಂದರು.

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಈ ಕಾರ್ಯಕ್ರಮಗಳ ಅನುμÁ್ಠನಕ್ಕೆ ಅಗತ್ಯ ಐ.ಇ.ಸಿ. ಪರಿಕರಗಳನ್ನು ವಿತರಿಸಲಾಗಿದೆ. ಗ್ರಾಮ ಆರೋಗ್ಯ ಪೌಷ್ಠಿಕ ದಿನಗಳಲ್ಲಿ ತೀವ್ರ ಅತಿಸಾರಭೇದಿ ನಿಯಂತ್ರಣ, ವಿಶ್ವ ಸ್ತನ್ಯಪಾನ ಸಪ್ತಾಹದ ಬಗ್ಗೆ ಸಭೆಗಳಲ್ಲಿ ಮಾಹಿತಿ ಶಿಕ್ಷಣ ನೀಡಲು ಕ್ರಮ ಕೈಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮಕ್ಕಳಿಗೆ ಓ.ಆರ್.ಎಸ್ ಪಾನಕ ಕುಡಿಸಿ, ಎದೆಹಾಲಿನ ಮಹತ್ವವನ್ನು ಸಾರುವ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಕೆಂಪಹನುಮಯ್ಯ, ಸಹಾಯಕ ಶಿಕ್ಷಣಾಧಿಕಾರಿ ಇನಾಯತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾ ಪಂಚಾಯಿತಿಯ ಸಾಮಾಜಿಕ ವರ್ತನೆ ಬದಲಾವಣೆ ಸಂಯೋಜನಕ ಸುನಿಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕಾತ್ಯಾಯಣಮ್ಮ, ಶ್ರೀಧರ್, ಗಂಗಾಧರ್, ಆಶಾ ಅಂಗನವಾಡಿ ಕಾರ್ಯಕರ್ತೆಯರು, ತಾಯಿ ಮಕ್ಕಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *