ಬಳ್ಳಾರಿ,ಏ.22. : ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುವುದೇ ಕಷ್ಟಸಾಧ್ಯವಿರುವಾಗ ಅಂತಹ ಪ್ರದೇಶದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ವಿಪರ್ಯಾಸವೇ ಸರಿ. ಇದಕ್ಕೆ ನಿದರ್ಶನವಾಗಿ ಬಳ್ಳಾರಿ ತಾಲ್ಲೂಕಿನ ಹೊನ್ನಳ್ಳಿ ತಾಂಡ ಪುಟ್ಟ ಗ್ರಾಮದ ಪ್ರತಿಭಾನ್ವಿತ ರೈತ ಮಹಿಳೆ ಗಂಗೂಬಾಯಿ ಗಂಡ ತಿರುಪತಿನಾಯ್ಕ.
ಇವರು ಬಳ್ಳಾರಿ ಸಮೀಪದ ಹೊನ್ನಳ್ಳಿ ತಾಂಡ ಗ್ರಾಮದಲ್ಲಿ ಸರಿಸುಮಾರು 4.5 ಎಕರೆಯ ಭೂಮಿ ಹೊಂದಿದ್ದು, ಇವರಿಗೆ ತಮ್ಮ ಮನೆಯ ಸುತ್ತ ಮುತ್ತ ಏನಾದರೂ ಉತ್ಪಾದಕ ಕೆಲಸ ಮಾಡಬೇಕೆಂಬ ಛಲ ಹೊಂದಿದ್ದರು. ತಮ್ಮ ಬರಡಾಗಿರುವ ಜಮೀನಿನಲ್ಲಿ ತೋಟಗಾರಿಕೆ ಹಾಗೂ ಕೃಷಿಯನ್ನು ಅಳವಡಿಸಿಕೊಂಡು ಭೂಮಿಯನ್ನು ಸಾವಯವ ಕೃಷಿ ಭೂಮಿಯಾಗಿ ಬದಲಾಯಿಸಬೇಕೆಂದು ಅರಿತ ಇವರು ತಮ್ಮ ಜಮೀನು ಸುತ್ತಲೂ ತಂತಿ ಬೇಲಿ ಹಾಕಿ ಭದ್ರಪಡಿಸಿಕೊಂಡರು.
ತಮ್ಮ ಜಮೀನಿನಲ್ಲಿ ವಿವಿಧ ಹಣ್ಣಿನ ಬೆಳೆಗಳಾದ 600 ನಿಂಬೆ, 700 ಪೇರಲ, 1600 ಡ್ರ್ಯಾಗನ್ ಹಾಗೂ 2 ಎಕರೆಯಲ್ಲಿ ಕರಿಬೇವು ಗಿಡ ಮತ್ತು ಆತ್ಮ ಯೋಜನೆಯ ಪ್ರಾತ್ಯಕ್ಷಿಕೆಯಡಿ 10 ಬಿದಿರು ಸಸಿಗಳನ್ನು ಪಡೆದು ಹೊಲದ ಸುತ್ತಲೂ ನೆಟ್ಟಿದ್ದಾರೆ. ಇದಲ್ಲದೆ, ಪಶು ಸಂಗೋಪನೆಯು ಕೈಗೊಂಡಿದ್ದು, 02 ಹಸು, 01 ಎತ್ತು ಹಾಗೂ 01 ಎಮ್ಮೆ ಇದೆ. ಕೋಳಿ ಸಾಕಾಣಿಕೆಯಲ್ಲೂ (30 ಕೋಳಿ) ಮೇಲುಗೈ ಹೊಂದಿದ್ದಾರೆ. 100 ಕುರಿ, 25 ಮೇಕೆ, ಆಡುಗಳನ್ನು ಸಹ ಹೊಂದಿದ್ದಾರೆ.
ಇವರು ತಮ್ಮ ಹೊಲದಲ್ಲಿ ನೀರಿನ ಕೊರತೆ ಬಾರದಂತೆ ಕೃಷಿ ಹೊಂಡ (21*21*3.5ಮೀ) ನಿರ್ಮಿಸಿದ್ದು, ಹೊಲದಲ್ಲಿ ತಮ್ಮ ಗಿಡಗಳು ಸಾವಯವವಾಗಿ ಬೆಳೆಯಲು ಎರೆಹುಳು ಘಟಕವನ್ನು ನಿರ್ಮಿಸಿ ಎರೆಹುಳು ಗೊಬ್ಬರವನ್ನು ತಯಾರಿಸುತ್ತಾರೆ.
ಗೋಕೃಪಾಮೃತ, ದಶಪಾಣಿಯನ್ನು ಸ್ವತಃ ತಯಾರಿಸಿ ತಮ್ಮ ಹೊಲದಲ್ಲಿರುವ ಗಿಡಗಳಿಗೆ ಹನಿ ನೀರಾವರಿ ಪದ್ದತಿ ಉಪಯೋಗಿಸಿಕೊಂಡು ಸಾವಯವವಾಗಿ ಬೆಳೆಯುತ್ತಿದ್ದಾರೆ ಗಂಗೂಬಾಯಿ ಅವರು ಹಾಗೂ ತಮ್ಮ ಊರಿನ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.
