ರೈಲು ನಿಲ್ದಾಣದ ಮೂಲಕ ಅದಿರು ಸಾಗಟ ಸ್ಥಗಿತ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

2 Min Read

ಚಿತ್ರದುರ್ಗ. ಆಗಸ್ಟ್.08: ಚಳ್ಳಕೆರೆ ರೈಲ್ವೆ ನಿಲ್ದಾಣದ ಮೂಲಕ ಅದಿರು ಸಾಗಟ ಮಾಡುವುದನ್ನು ಸ್ಥಗಿತಗೊಳಿಸಲು ಮನವಿ ಮಾಡಿ ರೈಲ್ವೆ ಇಲಾಖೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚಳ್ಳಕೆರೆ ನಗರದ ರೈಲ್ವೆ ಯಾರ್ಡ್ ಬಳಿ ಅದಿರು ಸಾಗಟದ ಧೂಳಿನಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ನಡೆಸಿ ಅವರು ಮಾತನಾಡಿದರು.

ರೈಲ್ವೆ ನಿಲ್ದಾಣದಲ್ಲಿ ಅದಿರನ್ನು ಲೋಡ್ ಮತ್ತು ಅನ್‍ಲೋಡ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಸಂಖ್ಯೆ ಹಾಗೂ ಸಾಮಥ್ರ್ಯದ ಲಾರಿಗಳ ಓಟಾಟದಿಂದ ಅಪಾಯದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರು ಕೇಳಿ ಬಂದವೆ. ಈ ಹಿನ್ನಲೆಯಲ್ಲಿ ಪರಿಸರ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ. ವಾರದಲ್ಲಿ ಅಧಿಕಾರಿಗಳು ವರದಿ ನೀಡಲಿದ್ದಾರೆ. ಇದನ್ನು ಆಧರಿಸಿ ರೈಲ್ವೆ ಇಲಾಖೆಗೆ ಪತ್ರದ ಮುಖೇನ ಅದಿರು ಸಾಗಟ ಸ್ಥಗಿತಗೊಳಿಸಲು ಮನವಿ ಮಾಡಲಾಗುವುದು. ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ ನೀಡಿದರು.

ತಾತ್ಕಾಲಿಕವಾಗಿ ಅದಿರು ಸಾಗಟ ಸ್ಥಗಿತ:
ಅದಿರು ಸಾಗಟದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ, ಚಳ್ಳಕೆರೆ ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಉಪ ಸಮಿತಿ ರಚನೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು. ಈ ಉಪ ಸಮಿತಿ ನಿಯಮಾನುಸಾರ ಅದಿರು ಸಾಗಣಿಕೆ ಮಾಡಲಾಗುತ್ತಿದೆಯೇ ಎಂಬುದರ ಪರಿಶೀಲಿಸುವುದರ ಜೊತೆಗೆ, ಪರ್ಯಾಯ ಮಾರ್ಗಗಳ ಕುರಿತು ಸಲಹೆ ಸೂಚನೆಗಳನ್ನು ಒಂದು ವಾರದಲ್ಲಿ ನೀಡಲಿದೆ. ಈ ಸಮಯದಲ್ಲಿ ತಾತ್ಕಾಲಿಕವಾಗಿ ಅದಿರು ಸಾಗಟ ಸ್ಥಗಿತ ಮಾಡುವಂತೆ ಪ್ರಕಾಶ್ ಸ್ಪಾಂಜ್ ಕಂಪನಿಗೆ ಸಭೆಯಲ್ಲಿ ತಿಳಿಸಲಾಯಿತು. ಸೋಮವಾರ ಖುದ್ದು ಸ್ಥಳಕ್ಕೆ ಭೇಟಿ ನೀಡುತ್ತೇನೆ, ಕೂಡಲೇ ಧರಣಿ ನಿಲ್ಲಿಸುವಂತೆ ಮುಖಂಡರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ಪರಿಸರಾಧಿಕಾರಿ ಆಸಿಫ್ ಖಾನ್, ನಗರಾಭಿವೃದ್ಧಿ ಯೋಜನೆ ನಿರ್ದೇಶಕಿ ರೇಷ್ಮಾ ಹಾನಗಲ್, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ಪ್ರಕಾಶ್ ಸ್ಪಾಂಜ್ ಕಂಪನಿ ಪ್ರತಿನಿಧಿಗಳು, ರೈಲ್ವೆ ಇಲಾಖೆ ಅಧಿಕಾರಿಗಳು, ಮುಖಂಡರಾದ ಕೆ.ಟಿ.ಕುಮಾರಸ್ವಾಮಿ, ಸೋಮಶೇಖರ್, ಶ್ರೀನಾಥ್, ಮುರುಳಿ, ಜಯಪಾಲಯ್ಯ ಸೇರಿದಂತೆ ಮತ್ತಿರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *