ಚಿತ್ರದುರ್ಗ: ರಾಜ್ಯದ ನಾನಾ ಭಾಗದಲ್ಲಿ ಮಳೆ ಬಿದ್ದಂತೆ ಚಿತ್ರದುರ್ಗದಲ್ಲೂ ಮಳೆಯಾಗಿದ್ದರೆ ಇಷ್ಟೊತ್ತಿಗೆ ವಾಣಿ ವಿಲಾಸ ಜಲಾಶಯ ಕೋಡಿ ಬೀಳುತ್ತಿತ್ತು. ಆದರೆ ಕೋಟೆನಾಡಲ್ಲಿ ಅಷ್ಟೊಂದು ಮಳೆಯಾಗಲಿಲ್ಲ. ಆದರೂ ವಾಣಿ ವಿಲಾಸ ಜಲಾಶಯಕ್ಕೆ ನೀರು ಬಂದಿದೆ. ಇನ್ನೇನು ಕೋಡಿ ಬೀಳುತ್ತೆ ಎನ್ನುವಾಗಲೇ ಒಳಹರಿವು ನಿಂತಿತ್ತು. ಇದೀಗ 2025ರ ಜನವರಿ ತನಕ ಭದ್ರಾ ಜಲಾಶಯದಿಂದ ವಾಣಿ ವಿಲಾಸಕ್ಕೆ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹಂಚಿಕೆಯಾದ 12.50 ಟಿಎಂಸಿ ನೀರಿನ ಪೈಕಿ, ತರೀಕೆರೆ ನೀರಾವರಿ ಯೋಜನೆಗೆ 1.47 ಟಿಎಂಸಿ ಹಾಗೂ ವಾಣಿ ವಿಲಾಸ ಸಾಗರಕ್ಕೆ ಎರಡು ಟಿಎಂಸಿಯಂತೆ 3.4 ಟಿಎಂಸಿಯಂತೆ ನೀರನ್ನು ಎತ್ತಲು ಅನುಮತಿ ನೀಡಲಾಗಿತ್ತು. ಇದೀಗ ಮುಂದುವರೆದು ತರೀಕೆರೆ ಏತ ನೀರಾವರಿ ಯೋಜನೆಗೆ ಸೌಪಭ್ಯ ಕಲ್ಪಿಸಲು ಹಾಗೂ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಸಂಗ್ರಹಿಸುವ ಸಲುವಾಗಿ ಇನ್ನುಳಿದ 9.03 ಟಿಎಂಸಿ ನೀರಿನ ಮಿತಿಯಲ್ಲಿ ಪ್ರತಿದಿನ 700 ಕ್ಯೂಸೆಕ್ ನೀರನ್ನು ಜನವರಿ 2025ರವರೆಗೂ ಮಾತ್ರ ಹರಿಸಲು ಅನುಮತಿ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾವಾಣಿ ತಿಳಿಸಿದ್ದಾರೆ.
ಈಗಾಗಲೇ ವಾಣಿ ವಿಲಾಸ ಜಲಾಶಯದಲ್ಲಿ ಪ್ರಸ್ತುತ 128.40 ಅಡಿಗೆ ತಲುಪಿದ್ದು, ಡ್ಯಾಂ ಕೋಡಿ ಬೀಳಲು ಕೇವಲ 1.60 ಅಡಿ ನೀರು ಬರಬೇಕಿದೆ. ಇಷ್ಟು ನೀರು ಬಂದರೆ ವಾಣಿ ವಿಲಾಸ ಕೋಡಿ ಬೀಳಲಿದೆ. ಸದ್ಯ ಭದ್ರಾ ಜಾಲಶಯದಿಂದ ನಾಲೆಯ ಮೂಲಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 462 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದೆ.