ಬಾಯಿಯ ಕ್ಯಾನ್ಸರ್ : ಲಕ್ಷಣಗಳು ಮತ್ತು ಕಾರಣಗಳು

2 Min Read

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಬಾಯಿಯು ದೇಹದ ಒಂದು ಪ್ರಮುಖವಾದ ಅಂಗವಾಗಿದ್ದು ಇದರ ಆರೋಗ್ಯಕರ ಸ್ಥಿತಿ ಮಾತ್ರವೇ ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಬಲ್ಲದು.

ಇಂತಹ ಬಾಯಿಯ ಆರೋಗ್ಯವು ಒಂದೊಮ್ಮೆ ಬೇರೆ ರೀತಿಯಲ್ಲಿ ಹಾನಿಗೊಂಡರೆ ಅಥವಾ ಕ್ಯಾನ್ಸರ್ ಪೀಡಿತವಾದಾಗ ನಮ್ಮ ಇಡೀ ದೈಹಿಕ ಆರೋಗ್ಯವು ನಶಿಸುತ್ತದೆ. ಆ ಕಾರಣಕ್ಕೆ ನಮ್ಮ ಬಾಯಿಯ ಆರೋಗ್ಯವು ಎಂದಿಗೂ ಕೆಡದಂತೆ ನೋಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ.

ಬಾಯಿಯ ಕ್ಯಾನ್ಸರ್ ಅಥವಾ ಅರ್ಬುದ ರೋಗವು ಯಾರಲ್ಲೂ ಯಾವಾಗ ಬೇಕಾದರೂ ಆಗಬಹುದು. ಆದರೆ ವ್ಯಕ್ತಿಯ ಶೀಘ್ರ ಗಮನ ಹಾಗೂ ಜಾಗ್ರತೆ ಮಾತ್ರವೇ ಆತನನ್ನು ಕ್ಯಾನ್ಸರ್ನ ದವಡೆಯಿಂದ ಪಾರು ಮಾಡ ಬಲ್ಲದು. ಅನಾದರ, ನಿರ್ಲಕ್ಷತನದಿಂದ ಕ್ಯಾನ್ಸರ್ ಬಹುಬೇಗನೆ ಹೆಚ್ಚಾಗುತ್ತದೆ.

ವ್ಯಕ್ತಿಯ ಗಮನಕ್ಕೆ ಕ್ಯಾನ್ಸರ್ ಲಕ್ಷಣಗಳು ಅಥವಾ ಬಾಯಲ್ಲಿ ಆಗುವ ಬದಲಾವಣೆಗಳ ಲಕ್ಷಣಗಳನ್ನು ಶೀಘ್ರ ಗುರುತಿಸಿದರೆ ಬರುವ ಬಹುದೊಡ್ಡ ಸಮಸ್ಯೆಗಳನ್ನು ಶುರುವಿನಲ್ಲಿಯೇ ನಿಯಂತ್ರಿಸಬಹುದು. ಬಾಯಿ ಕ್ಯಾನ್ಸರ್ ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಒಂದು ಕ್ಯಾನ್ಸರ್ ರೋಗವಾಗಿದೆ.

ಬಾಯಿಯ ಕ್ಯಾನ್ಸರ್ ರೋಗದ ಲಕ್ಷಣ:
ಬಾಯಿಯ ಒಳಭಾಗ, ತುಟಿ ನಾಲಿಗೆ, ವಸಡು, ಹಲ್ಲಿನ ಮೇಲ್ಭಾಗ,ನಾಲಿಗೆಯ ಕೆಳಭಾಗ.. ದಲ್ಲಿ ಕಂಡು ಬರುವ ವಾಸಿಯಾಗದ ಹುಣ್ಣುಗಳು, ಗಾಯ, ಗಡಸುಗೊಂಡ ಜಾಗ,ಬಾಯಿ ಬಿಗಿತವಾದ ಭಾಗ.. ಇತ್ಯಾದಿ.
* ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ ಮೆದು ಹುಣ್ಣುಗಳು, ವಾಸಿಯಾಗದ ಹುಣ್ಣು.( ಅಲ್ಸರ್ /ಬಾಯಿ ಪೋಟು ).
* ಬಾಯಿಯ ಒಳಭಾಗದಲ್ಲಿ ತೀವ್ರ ಉರಿ ಬರುವುದು, ಗಂಟುಗಳು ಉಬ್ಬು ಆಗಿರುವುದು, ಚರ್ಮ ದಪ್ಪವಾಗಿರುವುದು, ಊದಿಕೊಂಡಿರುವುದು.
* ತುಟಿ ಹಾಗು ವಸಡಿನ ಸವೆತ.
* ಚುಚ್ಚುವ ಹಲ್ಲಿನಿಂದ ಆಗಿರುವ ವಾಸಿಯಾಗದ ಗಾಯ.
* ನಾಲಿಗೆ ಆಡಿಸಲು ಸಾಧ್ಯವಾಗದಿರುವುದು, ಬಾಯಿ ತೆಗೆಯಲು ಆಗದಿರುವುದು.
* ಧ್ವನಿಯಲ್ಲಿ ಬದಲಾವಣೆ, ನುಂಗಲು ಕಷ್ಟವಾಗುವುದು.
ಮೇಲೆ ತಿಳಿಸಿದ ಲಕ್ಷಣಗಳು ಎರಡರಿಂದ ಮೂರು ವಾರಗಳ ನಂತರವು ಮುಂದುವರೆದಲ್ಲಿ ಅದನ್ನು ನಾವು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.

ಕಾರಣಗಳು:
* ಬಾಯಿಯಲ್ಲಿ ಆಗುವ ಹುಣ್ಣು, ಚುಚ್ಚುವ ಹಲ್ಲು, ತೀವ್ರ ಗುಟ್ಕಾ,ಎಲೆ ಅಡಿಕೆ, ತಂಬಾಕು ಸೇವನೆ.
* ಧೂಮಪಾನ ಮದ್ಯಪಾನ.
* ದೈಹಿಕ ಅನಾರೋಗ್ಯಕರ ಸ್ಥಿತಿ.
* ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳ ಆಹಾರ ಪದಾರ್ಥಗಳ ಬಳಕೆ.
* ಮಸಾಲೆ ಪದಾರ್ಥಗಳ ತೀವ್ರ ಸೇವನೆ.
ಯಾವ ವ್ಯಕ್ತಿಯು ಧೂಮಪಾನ,ಮದ್ಯಪಾನ,
ತಂಬಾಕು ಸೇವನೆ, ಗುಟ್ಕಾ ಬಳಕೆ ..ಮಾಡುತ್ತಾರೋ ಅವರಲ್ಲಿ ಶೇಕಡ 90ರಷ್ಟು ಬಾಯಿಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಏನು ಮಾಡಬೇಕು:
* ಮೇಲೆ ತಿಳಿಸಿದ ಲಕ್ಷಣಗಳು ಕಂಡು ಬಂದರೆ ದಂತ ವೈದ್ಯರನ್ನು ಭೇಟಿ ಮಾಡಿ ಬಾಯಿಯ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯಕರ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕು.
* ಗುಟ್ಕಾ,ತಂಬಾಕು, ಎಲೆ ಅಡಿಕೆ ,ಮದ್ಯಪಾನ, ಧೂಮಪಾನ.. ತ್ಯಜಿಸಬೇಕು.
* ಆಗಾಗ ವೈದ್ಯರನ್ನು ಕಂಡು ಬಾಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಿರಬೇಕು.
* ಸಮಸ್ಯೆ ಹೆಚ್ಚಾಗದಂತೆ ಗಮನಿಸಿಕೊಳ್ಳಬೇಕು ಗಾಯಗಳು ವಾಸಿಯಾಗದಿದ್ದರೆ ತಕ್ಷಣವೇ ವೈದ್ಯರನ್ನು ಕಂಡು ಅದಕ್ಕೆ ಪರಿಹಾರ ಪಡೆಯಬೇಕು.
* ಸಮಸ್ಯೆ ಹೆಚ್ಚಾಗದಂತೆ ಶುರುವಿನಲ್ಲಿಯೇ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಬೇಕು.

Share This Article