ಒಳ ಮೀಸಲಾತಿಗೆ ವಿರೋಧಿಸಿದರೆ ಡಾ.ಬಿ.ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದಂತೆ : ಜೆ.ಯಾದವರೆಡ್ಡಿ

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಮೀಸಲಾತಿಯನ್ನು ಒಪ್ಪಿಕೊಳ್ಳುವವರು ಒಳ ಮೀಸಲಾತಿಗೆ ವಿರೋಧಿಸಿದರೆ ಸಂವಿಧಾನಶಿಲ್ಪಿ ಡಾ.ಬಿ.ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದಂತಾಗುತ್ತದೆಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು.

ಮಾದಿಗ ಮಹಾಸಭಾ, ಲಂಕೇಶ್ ವಿಚಾರ ವೇದಿಕೆ, ಬೀಕೆ-ಕೇಬಿ ಬಳಗ ಇವರುಗಳು ಸಂಯುಕ್ತಾಶ್ರಯದಲ್ಲಿ ನಿವೃತ್ತ ಜಸ್ಟಿಸ್ ನಾಗಮೋಹನ್‍ದಾಸ್ ಆಯೋಗ ಸಾಧ್ಯತೆ-ಸವಾಲುಗಳು ಕುರಿತು ಕ್ರೀಡಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಸಂವಾದದಲ್ಲಿ ಅತಿ ಹಿಂದುಳಿದ ಸಮುದಾಯಗಳು ಒಳ ಮೀಸಲು ಹೋರಾಟವನ್ನು ಗ್ರಹಿಸಬೇಕಾದ ಒಳಗೊಳ್ಳಬೇಕಾದ ಕ್ರಮಗಳು ಎನ್ನುವ ವಿಷಯ ಕುರಿತು ಮಾತನಾಡಿದರು.

 

ಮಿಲ್ಲರ್ ಆಯೋಗ, ಎಲ್.ಜಿ.ಹಾವನೂರ್ ಆಯೋಗದ ವರದಿಯನ್ನು ಕೆಲವರು ವಿರೋಧಿಸಿದ್ದುಂಟು. ಡಿ.ವಿ.ಗುಂಡಪ್ಪನವರಿಂದ ಹಿಡಿದು ಅನೇಕ ಸಾಹಿತಿಗಳು ಮೀಸಲಾತಿ ವಿರುದ್ದವಾಗಿ ಮಾತನಾಡಿದ್ದರು. ಶೇ.73 ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಮಹರಾಜರು ನೀಡಿದ್ದರು. ಸದಾಶಿವ ಆಯೋಗ, ಕಾಂತರಾಜ್ ಆಯೋಗದ ವಿರುದ್ದವು ಅಪಸ್ವರಗಳು ಕೇಳಿ ಬರುತ್ತಿವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿಯನ್ನು ಇಷ್ಟೊತ್ತಿಗಾಗಲೆ ಜಾರಿಗೊಳಿಸಬೇಕಿತ್ತು. ನಾಗಮೋಹನ್‍ದಾಸ್ ವರದಿಯ ಅವಶ್ಯಕತೆಯಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎನ್ನುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದರೂ ದತ್ತಾಂಶದ ನೆಪ ಹೇಳುತ್ತಿರುವುದು ರಾಜಕೀಯ ನಾಟಕ ಎಂದು ಆಪಾದಿಸಿದರು.

 

ರಾಜಕೀಯ ಒತ್ತಡಕ್ಕೆ ಮಣಿದಿರುವ ಸಿದ್ದರಾಮಯ್ಯನವರು ಸದಾಶಿವ ಆಯೋಗದ ವರದಿಯ ಆಧಾರದ ಮೇಲೆಯೆ ಒಳ ಮೀಸಲಾತಿಯನ್ನು ಜಾರಿ ಮಾಡಬಹುದು. 1901 ರಿಂದ ಇಲ್ಲಿಯವರೆಗೂ ನೀಡಿರುವ ಎಲ್ಲಾ ಆಯೋಗದ ವರದಿಗಳು ಸುಪ್ರೀಂಕೋರ್ಟ್‍ಗಿಂತ ದೊಡ್ಡವಲ್ಲ. ಒಳ ಮೀಸಲಾತಿ ಬಗ್ಗೆ ಎಸ್ಸಿ.ಗಳೆ ಅತ್ಯುಗ್ರವಾಗಿ ಮಾತನಾಡುತ್ತಿರುವುದು ನೋವಿನ ಸಂಗತಿ. ಯಾರು ಯಾರ ಮೀಸಲಾತಿಯನ್ನು ಕಸಿಯುವುದಿಲ್ಲ. ಆಯಾ ಜಾತಿಗನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಮುಂದೆ ಸ್ವಾಸ್ಥ್ಯ ಸಮಾಜವಿರುವುದಿಲ್ಲ. ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

 

ಸಾಮಾಜಿಕ ರಾಜಕೀಯ ವಿಶ್ಲೇಷಕ ಕೋಡಿಹಳ್ಳಿ ಸಂತೋಷ್ ಒಳ ಮೀಸಲಾತಿಯಡಿ ಪರಿಶಿಷ್ಟರು ಹಿಂದುಳಿದವರ ಉಪ ವರ್ಗಿಕರಣ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳ ಇತಿಹಾಸದ ಅವಲೋಕನ ಎಂಬ ವಿಚಾರ ಕುರಿತು ಮಾತನಾಡುತ್ತ ಸುಪ್ರೀಂಕೋರ್ಟ್ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿ ಮೂರು ತಿಂಗಳು ಕಳೆದಿದ್ದರು ರಾಜ್ಯ ಸರ್ಕಾರ ದತ್ತಾಂಶ ಮುಂದಿಟ್ಟುಕೊಂಡು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಮಾದಿಗ ಸಮುದಾಯ ಒಂಟಿಯಲ್ಲ. ಸಂಘಟನೆ ಮಾಡಿಕೊಂಡು ಹೋರಾಡುತ್ತೇವೆ. ಒಳ ಮೀಸಲಾತಿ ಅನುಷ್ಠಾನಗೊಳಿಸಲು ಇಷ್ಟವಿಲ್ಲದಿದ್ದರೆ ಮತ್ತೆ ಕೋರ್ಟಿಗೆ ಹೋಗುತ್ತೇವೆನ್ನುವುದಾದರೆ ಹೋಗಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ಒಳ ಮೀಸಲು ಹೋರಾಟ ಪ್ರಗತಿಪರರು ಹಾಗೂ ಚಿಂತನಶೀಲ ಸಮುದಾಯಗಳ ಒಗ್ಗೊಳ್ಳುವಿಕೆ ವಿಷಯ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಲೇಖಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಇಡಿ ದೇಶದಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ಪ್ರತಿಭಟನೆ ಚಳುವಳಿಗಳು ನಡೆಯುತ್ತಲಿವೆ. ಕೊಟ್ಟ ಮೀಸಲಾತಿಯನ್ನು ಹಂಚಿ ತಿನ್ನಲು ಒಳ ಮೀಸಲಾತಿ ನೀಡುವುದಕ್ಕೆ ಅರ್ಧ ಶತಮಾನವಾಗಿದೆ. ಇದಕ್ಕಾಗಿ ಹೋರಾಟ ನಡೆಸಿದ ಅನೇಕರು ನಮ್ಮನ್ನೆಲ್ಲಾ ಅಗಲಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಜಾಣೆ ನಡೆ ಪ್ರದರ್ಶಿಸುತ್ತಿದೆ. 75 ವರ್ಷಗಳ ಕಾಲ ಮೀಸಲಾತಿ ಉಂಡವರು ಒಳ ಮೀಸಲಾತಿ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು?

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಚಿಂತನೆಯನ್ನಿಟ್ಟುಕೊಂಡು ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ ಚಿಂತನೆಗಳನ್ನು ಹೊತ್ತವರು ಅವರ ಆಶಯಗಳನ್ನು ಏಕೆ ಮರೆತಿದ್ದಾರೆನ್ನುವುದೆ ಯಕ್ಷ ಪ್ರಶ್ನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆ.1 ರ ಸುಪ್ರೀಂಕೋರ್ಟ್‍ನ ಒಳ ಮೀಸಲಾತಿ ತೀರ್ಪು ತೆರೆದಿಟ್ಟಿರುವ ಸಾಮುದಾಯಿಕ ಆಯಾಮಗಳು ಆಯೋಗದ ಹೊಣೆಗಾರಿಕೆ ಬದ್ದತೆ ಹೇಗಿರಬೇಕು ಎನ್ನುವ ವಿಚಾರ ಕುರಿತು ಸಾಮಾಜಿಕ-ರಾಜಕೀಯ ಚಿಂತಕ ಬೆಂಗಳೂರಿನ ಶಿವಸುಂದರ್ ಸಂವಾದದಲ್ಲಿ ಮಾತನಾಡಿದರು.

ಹಿರಿಯ ಪತ್ರಕರ್ತ ಎಂ.ಎನ್.ಅಹೋಬಲಪತಿ, ಹಿರಿಯ ಹೋರಾಟಗಾರ ಬಿ.ಪಿ.ಪ್ರಕಾಶ್‍ಮೂರ್ತಿ, ಹುಲ್ಲೂರು ಕುಮಾರ್, ಲಂಕೇಶ್ ವಿಚಾರ ವೇದಿಕೆಯ ಸಂಚಾಲಕ ಜಡೆಕುಂಟೆ ಮಂಜುನಾಥ್, ಕೊಟ್ಟಶಂಕರ್, ಪ್ರೊ.ಮಲ್ಲಿಕಾರ್ಜುನ್ ಆರ್.ಹಲಸಂಗಿ, ಬಿ.ಎಂ.ನಿರಂಜನ್, ಎಂ.ಆರ್.ಶಿವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಇವರುಗಳು ಒಳ ಮೀಸಲಾತಿ ಕುರಿತು ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *