ಸುದ್ದಿಒನ್ ವೆಬ್ ಡೆಸ್ಕ್
ಚಿತ್ರದುರ್ಗ, (ಮಾ.05) : ತಾಲ್ಲೂಕಿನ ಭೀಮಸಮುದ್ರ ಕ್ಯಾಂಪ್ ಬಳಿ
ಬಂಗಾರದ ನಾಣ್ಯಗಳನ್ನು ತೋರಿಸಿ ಉದ್ಯಮಿಯೋರ್ವರಿಂದ 30 ಲಕ್ಷ ದರೋಡೆ ಮಾಡಿದ್ದ ಆರು ಮಂದಿಯ ಪೈಕಿ ಓರ್ವನನ್ನು ಬಂಧಿಸಿ ಆತನಿಂದ 19,50,000/- ರೂ.ಗಳ ನಗದನ್ನು ವಶಪಡಿಸಿಕೊಳ್ಳುವಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಅಬ್ಬಿಗೆರೆ ಗ್ರಾಮದ ಗಿರೀಶ್ ಬಂಧಿತ ಆರೋಪಿ. ಉಳಿದ ಆರೋಪಿತರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನೆ ನಡೆದಿದ್ದು ಹೇಗೆ ?
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಎಣ್ಣೆ ವ್ಯಾಪಾರಿ, ಶಾಂತಕುಮಾರ ಎಂಬುವವರಿಗೆ ಯಾರೋ ಒಬ್ಬ ವ್ಯಕ್ತಿಯು ಮೊಬೈಲ್ ಕರೆ ಮಾಡಿ ಮನೆಯ ಕಟ್ಟಲು ಬುನಾದಿ
ತೆಗೆಯುತ್ತಿದ್ದಾಗ ಎರಡು ಕೆ.ಜಿ.ಯಷ್ಟು ಬಂಗಾರದ ನಾಣ್ಯಗಳು ದೊರೆತಿದ್ದು, ಹಣದ ಅವಶ್ಯಕತೆ ಇರುವುದರಿಂದ ಬಂಗಾರದ ನಾಣ್ಯಗಳನ್ನು ಮಾರುತ್ತಿರುವುದಾಗಿ ನಂಬಿಸಿ ಶಾಂತಕುಮಾರ್ ರವರಿಗೆ ಮೊದಲು ಅಸಲಿ ಬಂಗಾರದ ನಾಣ್ಯವನ್ನು ನೀಡಿರುತ್ತಾನೆ.
ತದನಂತರ ದಿನಾಂಕ : 23.12.2022 ರಂದು ಶಾಂತಕುಮಾರ ಅವರು ವೆಂಕಟೇಶ ರವರೊಂದಿಗೆ 30 ಲಕ್ಷ ನಗದು ಹಣದೊಂದಿಗೆ ಕಾರಿನಲ್ಲಿ ಭೀಮಸಮುದ್ರ ಕ್ಯಾಂಫ್ ಹತ್ತಿರ ಕಚ್ಚಾ ರಸ್ತೆಯ ಬಳಿ ಹೋದಾಗ ಇಬ್ಬರು ವ್ಯಕ್ತಿಗಳು ಬಂದು ಶಾಂತಕುಮಾರ ಮತ್ತು ವೆಂಕಟೇಶ್ ರವರನ್ನು ಕೆರೆ ಪಕ್ಕದ ಮಣ್ಣಿನ ರಸ್ತೆಗೆ ಕರೆದುಕೊಂಡು ಹೋಗುತ್ತಾರೆ. ಅಷ್ಟೊತ್ತಿಗಾಗಲೇ ಅಲ್ಲಿಗೆ ಎರಡು ಬೈಕ್ ಗಳಲ್ಲಿ ಕಾಯುತ್ತಿದ್ದ 06 ಜನರು ಸುಮಾರು 02 ಕೆ.ಜಿ.ಯಷ್ಟು ಬಂಗಾರದ ನಾಣ್ಯಗಳನ್ನು ನೀಡುತ್ತಾರೆ.
ಶಾಂತಕುಮಾರ ರವರು ಆ ನಾಣ್ಯಗಳನ್ನು ಪರೀಕ್ಷಿಸಲು ಮುಂದಾದಾಗ
ಅವರ ಮೇಲೆ ಹಲ್ಲೆ ಮಾಡಿ 30 ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಾಂತಕುಮಾರ ಅವರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್.ಕೆ, ಐ.ಪಿ.ಎಸ್,
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿರವರ ಮಾರ್ಗದರ್ಶನದಲ್ಲಿ ಉಪ ವಿಭಾಗದ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ
ಪಿ.ಐ. ಬಾಲಚಂದ್ರನಾಯಕ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಮಂಜುನಾಥ್ ಮತ್ತು ಸಿಬ್ಬಂದಿಗಳಾದ ರಂಗನಾಥಕುಮಾರ್, ರಘುನಾಥ್, ಅವಿನಾಶ್, ತಿಪ್ಪೇಸ್ವಾಮಿ, ಹಿದಾಯತ್ ಲಉಲ್ಲಾ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ಓರ್ವ ಆರೋಪಿಯನ್ನು ಜನವರಿ 31 ರಂದು ಬಂಧಿಸಿ ಆತನಿಂದ 19,50,000/- ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿತನಿಂದ ವಶಪಡಿಸಿಕೊಂಡಿದ್ದ 19,50,000/- ರೂ ನಗದು ಹಣವನ್ನು ಶಾಂತಕುಮಾರ್ ರವರಿಗೆ ಇಂದು (ಮಾ.05) ನೀಡಲಾಗಿರುತ್ತದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ನಿರ್ವಹಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಶ್ಲಾಘಿಸಿರುತ್ತಾರೆ.