ದಾವಣಗೆರೆ: ಚನ್ನಗಿರಿಯ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳು ಮಲ್ಲಿಕಾರ್ಜುನ ಅವರನ್ನು ಬಿಜೆಪಿ ಪಕ್ಷ ಉಚ್ಛಾಟನೆ ಮಾಡಿತ್ತು. ಇದೀಗ ಬಿಜೆಪಿಗೆ ರಾಜ್ಯಾಧ್ಯಕ್ಷರಾಗಿ ಜವಬ್ದಾರಿ ವಹಿಸಿಕೊಂಡ ಮೇಲೆ ಬಿ.ವೈ. ವಿಜಯೇಂದ್ರ ಅವರು ಒಂದೊಂದಾಗಿಯೇ ಪಕ್ಷ ಬಲಪಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ಜಿಲ್ಲೆಯಲ್ಲಿ ಉಚ್ಛಾಟನೆಯ ಪ್ರಹಸನಕ್ಕೆ ಬ್ರೇಕ್ ಹಾಕಿದ್ದಾರೆ.
ಈ ಮೂಲಕ ಉಚ್ಛಾಟನೆಗೊಂಡಿದ್ದ ಮಾಡಾಳು ಮಲ್ಲಿಕಾರ್ಜುನ ಅವರು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆಯಾಗಿದ್ದ ಜಗಳೂರಿನ ಮಾಜಿ ಶಾಸಕ ಗುರುಸಿದ್ಧನಗೌಡ ಹಾಗೂ ಮಾಡಾಳು ಮಲ್ಲಿಕಾರ್ಜುನ ಅವರು ನಿನ್ನೆ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ.
ಇದರ ಜೊತೆಗೆ ಪಕ್ಷದಲ್ಲಿ ಇರುವ ಮುನಿಸನ್ನು ಕಳೆಯುವುದಕ್ಕೆ ಬಿವೈ ವಿಜಯೇಂದ್ರ ಅವರು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಸಂಸದ ಜಿ ಎಂ ಸಿದ್ದೇಶ್ವರ ಹಾಗೂ ಎಂ ಪಿ ರೇಣುಕಾಚಾರ್ಯ ನಡುವೆ ಇರುವ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯುವ ಕೆಲಸ ಮಾಡಲಿದ್ದಾರೆ. ಈ ಉದ್ದೇಶದಿಂದ ಇಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ದಾವಣಗೆರೆಗೆ ಭೇಟಿ ನೀಡಲಿದ್ದಾರೆ.
ಜೊತೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ರಾಜಶೇಖರ್ ಅವರ ಪದಗ್ರಹ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಇಂದು ಸಂಜೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ರೇಣುಕಾಚಾರ್ಯ ಹಾಗೂ ಸಿದ್ದೇಶ್ವರ ಅವರ ಮುನಿಸನ್ನು ಶಮನ ಮಾಡಲಿದ್ದು, ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ತಲೆ ಭಾಗುವಂತೆ ಸೂಚನೆ ನೀಡಲಿದ್ದಾರೆ.