ಬೆಂಗಳೂರಿನಿಂದ ಶಿವಮೊಗ್ಗವನ್ನು ಇನ್ಮುಂದೆ ಅರ್ಧ ಗಂಟೆಯಲ್ಲಿಯೇ ತಲುಪಬಹುದು. ಆಶ್ಚರ್ಯ ಆಗ್ತಾ ಇರ್ಬೇಕು ಅಲ್ವಾ. ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಇದೆಲ್ಲ ಈಗಿನ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ದೇಶದಲ್ಲಿ ಶೀಘ್ರದಲ್ಲೇ ಹೈಪರ್‌ಲೂಪ್ ಕಾರ್ಯಾಚರಣೆ ಶುರು ಮಾಡಲಿದ್ದು, ಭಾರತದ ಸಾರಿಗೆ ವ್ಯವಸ್ಥೆ ಪ್ರಮುಖ ಕ್ರಾಂತಿಗೆ ಸಾಕ್ಷಿಯಾಗಲಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಆದಷ್ಟು ಬೇಗ ಭಾರತದಲ್ಲಿ ಹೈಪರ್‌ಲೂಪ್‌ನ ಕನಸು ನನಸಾಗಲಿದೆ ಎಂದು ಹೇಳಲಾಗ್ತಿದೆ.

ಹೈಪರ್‌ಲೂಪ್ ವ್ಯವಸ್ಥೆ ಬಂದರೆ ಕೇವಲ 30 ನಿಮಿಷಗಳಲ್ಲಿ 350 ಕಿಮೀ ಅಂತರವನ್ನು ಕ್ರಮಿಸಬಹುದಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅರ್ಧ ಗಂಟೆಯಲ್ಲಿ ಹೋಗಬಹುದು. ಈ ಹೈಪರ್‌ಲೂಪ್ ಟೆಸ್ಟ್ ಟ್ರ್ಯಾಕ್ ಅನ್ನು ಐಐಟಿ ಈಗಾಗಲೇ ಮದ್ರಾಸ್ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ರೈಲ್ವೇ ಸಚಿವಾಲಯ ಹಣಕಾಸು ನೆರವನ್ನು ನೀಡಿದೆ. ಇದು ಐದನೇ ಮಾದರಿಯ ಸಾರಿಗೆ ವಿಧಾನವಾಗಿದೆ. ವಾಹನ, ಹಡಗು, ರೈಲು, ವಿಮಾನದ ಬಳಿಕ ಈ ಹೈಪರ್‌ಲೂಪ್ ಸಾರಿಗೆ ವಿಧಾನ ಬಂದಿದೆ. ದೀರ್ಘ ಅಂತರವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕ್ರಮಿಸುವ ಹೈ-ಸ್ಪೀಡ್ ಸಾರಿಗೆ ವ್ಯವಸ್ಥೆ ಈ ಹೈಪರ್‌ಲೂಪ್ ಆಗಿದೆ.

ಇದು ವ್ಯಾಕ್ಯೂಮ್ ಟ್ಯೂಬ್‌ಗಳಲ್ಲಿ ವಿಶೇಷ ಕ್ಯಾಪ್ಸುಲ್‌ಗಳ ಮೂಲಕ ಅತಿ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನು ಗಮನಿಸಿದರೆ, ವ್ಯಾಕ್ಯುಮ್ ಟ್ಯೂಬ್‌ನಲ್ಲಿ ವಿದ್ಯುತ್ಕಾಂತೀಯವಾಗಿ ತೇಲುವ ಪಾಡ್ ಇರುತ್ತದೆ. ಇದರಿಂದ ಘರ್ಷಣೆ ಮತ್ತು ಗಾಳಿಯ ಸೆಳೆತ ನಿವಾರಣೆಯಾಗಿ ಪಾಡ್ ಮ್ಯಾಕ್ 1.0 ವರೆಗಿನ ವೇಗವನ್ನು ತಲುಪುತ್ತದೆ. 1 ಮ್ಯಾಕ್ ಅಂದ್ರೇ ಗಂಟೆಗೆ 1234 ಕಿಮೀ ಎಂದು ಅರ್ಥ. ಇನ್ನು ಈ ಹೈಪರ್ ಲೂಪ್ ಗೆ ಯಾವುದೇ ವಾತಾವರಣ ಇದ್ದರೂ ವ್ಯತ್ಯಾಸವಾಗುವುದಿಲ್ಲ. ಈ ವ್ಯವಸ್ಥೆಯಲ್ಲಿ ಪರಸ್ಪರ ಡಿಕ್ಕಿ ಅನ್ನೋದು ಇಲ್ಲ. ಜೊತೆಗೆ ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಹೈಪರ್‌ಲೂಪ್ ಪಾಡ್‌ಗಳು ಚಲಿಸುತ್ತವೆ. ಕಡಿಮೆ ವಿದ್ಯುತ್ ಬಳಸಿಕೊಂಡು, ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತದೆ. ಇದರಿಂದ 24 ಗಂಟೆಗಳ ಕಾಲ ಹೈಪರ್‌ಲೂಪ್ ಆಪರೇಷನ್ ನಡೆಸಬಹುದು. ಭಾರತದಲ್ಲಿ ಹೈಪರ್‌ಲೂಪ್ ರೈಲುಗಳ ಪರಿಚಯವಾದರೆ ದೇಶದ ರೈಲ್ವೇ ಹಾಗೂ ರಸ್ತೆ ಪ್ರಯಾಣ ವ್ಯವಸ್ಥೆಯಲ್ಲಿ ಭಾರೀ ಪರಿವರ್ತನೆಯಾಗಲಿದೆ. ಹಾಗೇ ದೂರದ ಜಿಲ್ಲೆಗಳಿಗೆ ಹೋಗುವವರಿಗೆ ಬಾರೀ ಅನುಕೂಲವಾಗಲಿದೆ.

