ಶಿಸ್ತುಬದ್ಧ ಜೀವನಶೈಲಿಯಿಂದ ಮಾತ್ರ ಉತ್ತಮ ಆರೋಗ್ಯ : ಡಾ.ಆರ್. ರಂಗನಾಥ್

2 Min Read

ಚಿತ್ರದುರ್ಗ, (ಮಾ.19) : ಶಿಸ್ತುಬದ್ಧ ಜೀವನಶೈಲಿ ಮಾತ್ರವೇ ಉತ್ತಮ ಆರೋಗ್ಯವನ್ನು ನೀಡಬಲ್ಲದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್. ರಂಗನಾಥ್ ತಿಳಿಸಿದರು.

ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ,
ನಾರಾಯಣ ಹಾರ್ಟ್ ಸೆಂಟರ್, ದಾವಣಗೆರೆ ಹಾಗೂ ಕೀವ ಡಿಜಿಟಲ್ ವರ್ಲ್ಡ್ ಇವರ ಸಹಯೋಗದೊಂದಿಗೆ ನೂತನವಾಗಿ ಪ್ರಾರಂಭವಾಗಿರುವ ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ “ಉಚಿತ ಹೃದ್ರೋಗ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿನ ದಿನಮಾನಗಳಲ್ಲಿ ಯುವಜನತೆ ಕೂಡ ಹೃದ್ರೋಗಗಳಿಗೆ ಬಲಿಯಾಗುತ್ತಿರುವುದನ್ನು ಚಿತ್ರನಟ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದ ಉದಾಹರಣೆಯನ್ನು ನೀಡಿದರು. ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣುಮಕ್ಕಳಲ್ಲಿ ಹೃದಯಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಎಲ್ಲಾ ಅತಿಥಿಗಳೊಂದಿಗೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ ಚಂದ್ರಪ್ಪನವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಮೂಲಕ ಪ್ರಕೃತಿ ಆಯುರ್ವೇದ ಆಸ್ಪತ್ರೆ ವಿದ್ಯುಕ್ತವಾಗಿ ಕಾರ್ಯಾರಂಭವಾಯಿತು. ಈ ವೇಳೆ ಆಸ್ಪತ್ರೆಯ ಓ.ಪಿ.ಡಿ. ವಿಭಾಗವನ್ನು ಶ್ರೀಮತಿ ಚಂದ್ರಕಲಾ ಚಂದ್ರಪ್ಪನವರು ಉದ್ಘಾಟಿಸಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ತಮ್ಮ ಕಾಯಿಲೆಗಳ ಬಗ್ಗೆ ತಜ್ಞ ವೈದ್ಯ ತಂಡದೊಂದಿಗೆ ಸಮಾಲೋಚನೆ ನಡೆಸಿದರು.

ಯೋಗಶಿಕ್ಷಕ ಚಿನ್ಮಯಾನಂದ ಅವರು ಮಾತನಾಡಿ, ಯೋಗ ಕ್ರಿಯೆ ಮನುಷ್ಯನ ಆರೋಗ್ಯವನ್ನು ಸಬಲಗೊಳಿಸುವ ಬಗೆಗಳನ್ನು ಅನೇಕ ವಾಸ್ತವ ಘಟನೆಗಳನ್ನು ಉಲ್ಲೇಖಿಸಿದರು.

ಮನುಷ್ಯ ಜೀವನದಲ್ಲಿ ದುರಾಸೆ, ಮತ್ಸರ ಮುಂತಾದ ಕೆಟ್ಟಗುಣಗಳನ್ನು ಇಲ್ಲವಾಗಿಸಿಕೊಂಡರೆ ಮನುಷ್ಯ ಜೀವನ ಸ್ವರ್ಗಮಯವಾಗಿರುತ್ತದೆ ಎಂದು ಹೇಳಿ, ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಎರಡು ಸಹ ಮನುಷ್ಯನ ಜೀವನಕ್ಕೆ ಅತೀ ಅವಶ್ಯಕ ಎಂದು ನುಡಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ರಘುಚಂದನ್ ಎಂ.ಸಿ. ಮಾತನಾಡಿ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಹಾಗೂ ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಎಸ್.ಬಿ.ನವಾಜ್ ಅಹಮದ್‍ ಮಾತನಾಡಿ,  ಚಿತ್ರದುರ್ಗ ನಗರದಲ್ಲಿ ಪ್ರಾರಂಭವಾಗುತ್ತಿರುವ ಈ ಕಾಲೇಜನ್ನು ರಾಜ್ಯದಲ್ಲೇ ಮಾದರಿ ಕಾಲೇಜನ್ನಾಗಿ ರೂಪಿಸಲು ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸುತ್ತಾ, ಸಭೆಗೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಹಾಗೂ ಸಭಿಕರನ್ನು ವಂದಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಹೆಚ್.ಜೆ.ಬಸವರಾಜಪ್ಪ,
ಸುರೇಶ್.ಎ.ಎಂ., ಜಿಲ್ಲಾ ಆಯುಷ್ ಅಧಿಕಾರಿಗಳು, ಶ್ರೀಮತಿ ಗಾಯಿತ್ರಿ ಶಿವರಾಮ್, ವೇದಿಕೆಯಲ್ಲಿ ಗೌರವಾನ್ವಿತ ಅತಿಥಿಗಳಾಗಿ ಆಸೀನರಾಗಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಡಾ.ಬಿ.ಸಿ.ಅನಂತರಾಮ್‍ ಮಾಡಿದರು. ಸಮಾರಂಭಕ್ಕೆ ಆಗಮಿಸಿದ ಅತಿಥಿಗಳನ್ನು ಡಾ.ಜಿ.ಇ.ಭೈರಸಿದ್ಧಪ್ಪನವರು ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *