ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.19 : ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಸರಿಯಾಗಿ ಚಲಾಯಿಸಬೇಕೆಂದು ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಕರೆ ನೀಡಿದರು.
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗಂಡ ಸತ್ತರೆ ಹೆಂಡತಿ ಚಿತೆಗೆ ಹಾರುವ ಪದ್ದತಿಯಿತ್ತು. ಅದನ್ನು ರಾಜಾರಾಮ್ ಮೋಹನ್‍ರಾಯ್ ವಿರೋಧಿಸಿದರು. ವಿಧವಾ ಮಹಿಳೆ ಮರು ವಿವಾಹವಾಗುವ ಅವಕಾಶ ಕಾನೂನಿನಲ್ಲಿದೆ. ಆಸ್ತಿಯಲ್ಲೂ ಸಮಪಾಲು ಪಡೆಯಬಹುದು. ಮಹಿಳೆ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಅತ್ಯಾಚಾರ ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಕಾನೂನಿನಲ್ಲಿ ರಕ್ಷಣೆಯಿದೆ ಎನ್ನುವ ಜಾಗೃತಿ ಮಹಿಳೆಯರಲ್ಲಿ ಮೂಡಬೇಕಿದೆ.
ರಾಜಕೀಯದಲ್ಲಿ ಮೀಸಲಾತಿ ಸಿಕ್ಕಿದೆ. ಆದರೆ ಅಧಿಕಾರ ಚಲಾಯಿಸುವವರೆಲ್ಲಾ ಪುರುಷರೆ. ಚುನಾವಣಾ ಬಾಂಡ್‍ನಲ್ಲಿ ಸಾವಿರಾರು ಕೋಟಿ ರೂ.ಗಳ ಲೂಟಿಯಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಿರೆ ಬೆಳೆಯನ್ನು ರಕ್ಷಿಸುವವರ್ಯಾರು ಎನ್ನುವಂತಾಗಿದೆ ಜನಸಾಮಾನ್ಯರ ಪಾಡು ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಆಸೆ ಆಮಿಷಗಳಿಗೆ ಬಲಿಯಾಗಬೇಡಿ. ಅಮೂಲ್ಯವಾದ ಮತವನ್ನು ಚಲಾಯಿಸಿ ಯೋಗ್ಯರನ್ನು ಆಯ್ಕೆ ಮಾಡಿ. ಕೊಳಗೇರಿ ನಿವಾಸಿಗಳು ಬಡತನವನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದು ಎಂದರು.
ನ್ಯಾಯವಾದಿ ದಿಲ್‍ಶಾದ್ ಉನ್ನಿಸಾ ಮಾತನಾಡಿ ಹೆಣ್ಣು-ಗಂಡೆಂಬ ತಾರತಮ್ಯ ಹಿಂದಿನಿಂದಲೂ ಇದೆ. ಈಗಲು ಇದೆ. ಆದರೆ ಸಂವಿಧಾನದಲ್ಲಿ ಹೆಣ್ಣು-ಗಂಡೆಂಬ ಬೇಧವಿಲ್ಲ. ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸಲಾಗಿದೆ. ಪ್ರಯೋಜನ ಪಡೆದುಕೊಳ್ಳಬೇಕಷ್ಟೆ. ಹೆಣ್ಣು ಅಡುಗೆ ಮನೆಗಷ್ಟೆ ಸೀಮಿತವಾಗಬಾರದು. ಸಮಾನತೆ, ಸ್ವಾತಂತ್ರ್ಯ ಎನ್ನುವುದನ್ನು ಮತ್ತೊಬ್ಬರಿಂದ ಕೇಳಿ ಪಡೆಯುವುದಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮಹಿಳೆ ಸಮಾಜದಲ್ಲಿ ಮುನ್ನುಗ್ಗಿದಾಗ ಮಾತ್ರ ಮುಖ್ಯವಾಹಿನಿಗೆ ಬರಬಹುದು ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ, ಓ.ನರಸಿಂಹಮೂರ್ತಿ, ರಂಗಸ್ವಾಮಿ, ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ವೇದಿಕೆಯಲ್ಲಿದ್ದರು. ಮೈಲಾರಪ್ಪ, ಸಬೀನಾಜಾನ್, ಲೀಲಾವತಿ, ಗೀತಮ್ಮ, ಶಿವಲಿಂಗಮ್ಮ ಇನ್ನು ಅನೇಕರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.