ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, (ಆ.18) : ಶೇ. 80 ರಷ್ಟು ನೀರನ್ನು ಭೂಮಿಯಿಂದ ಹೊರ ತೆಗೆದಿದ್ದೇವೆ. ಇನ್ನು ಶೇ.20 ರಷ್ಟು ನೀರು ಮಾತ್ರ ಭೂಮಿಯಲ್ಲಿದೆ ಎಂದು ಅಂತರ್ಜಲ ಹಾಗೂ ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮೆದೇಹಳ್ಳಿ ರಸ್ತೆಯಲ್ಲಿರುವ ವೈ.ಆರ್.ಆದಿಶೇಷ ರೋಟರಿ ಬಾಲಭವನದಲ್ಲಿ ಶುಕ್ರವಾರ ನಡೆದ ಕೆರೆ ಸಮಿತಿ ಪದಾಧಿಕಾರಿಗಳ ಪ್ರೇರಣಾ ಸಭೆ ಉದ್ಘಾಟಿಸಿ ಮಾತನಾಡಿದರು.
ರೈತರ ಜೀವಾಳ ಕೆರೆಗಳ ಹೂಳು ತೆಗೆಸುವ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರ ಮಾರ್ಗದರ್ಶನದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡಿಕೊಂಡು ಬರುತ್ತಿರುವುದು ಅತ್ಯಂತ ಪವಿತ್ರವಾದುದು.
ಇದರಿಂದ ಮಳೆ ನೀರು ಸಂಗ್ರಹವಾಗುವುದಲ್ಲದೆ ಸುತ್ತಮುತ್ತಲಿನ ಹೊಲಗಳಿಗೆ ಫಲವಾತ್ತಾದ ಮಣ್ಣು ಕೂಡ ಸಿಕ್ಕಂತಾಗುತ್ತದೆ. ಆರು ನೂರಕ್ಕೂ ಹೆಚ್ಚು ಕೆರೆಗಳ ಹೂಳು ತೆಗೆಸಿ ಮುಂದಿನ ಪೀಳಿಗೆಗೆ ಜಲ ಸಂಗ್ರಹಿಸುವ ಕೆಲಸ ಮಾಡುತ್ತಿರುವ ಶ್ರೀಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜೊತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ರೈತರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೆರೆ/ಶುದ್ದಗಂಗಾ ವಿಭಾಗ ಕೇಂದ್ರ ಕಚೇರಿಯ ನಿರ್ದೇಶಕ ಶಿವಾನಂದ ಆಚಾರ್ಯ ಮಾತನಾಡಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರ ಮಾರ್ಗದರ್ಶನದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆರೆಗಳ ಹೊಳೆತ್ತುವುದು ಸೇರಿದಂತೆ ಹತ್ತು ಹಲವಾರು ಜನಪರ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ನೀರು ಸಂರಕ್ಷಣೆಗೆ ಮಹತ್ವ ಕೊಟ್ಟಿದೆ. ಮಳೆ ಬಾರದ ಜಿಲ್ಲೆಗಳು ನಮ್ಮ ರಾಜ್ಯದಲ್ಲಿ ಸಾಕಷ್ಟಿವೆ. ಬೋರ್‍ವೆಲ್‍ಗಳನ್ನು ಹೆಚ್ಚು ಕೊರೆಸುವ ಕಡೆ ರೈತರು ಗಮನ ಕೊಟ್ಟಾಗಿನಿಂದಲೂ ಕೆರೆಗಳು ಒಣಗುತ್ತಿವೆ. ರಾಜ್ಯದಲ್ಲಿ ಸುಮಾರು 36 ಸಾವಿರ ಕೆರೆಗಳಿದ್ದು, ಅನೇಕ ಕಡೆ ಒತ್ತುವರಿಯಾಗುತ್ತಿದೆ ಎಂದರು.
ಐದಾರು ವರ್ಷಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕೆರೆಗಳ ಹೂಳು ತೆಗೆಸುವುದಕ್ಕಾಗಿ 42.10 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಕೆರೆಗಳ ಅತಿಕ್ರಮಣ ನಿಂತಿಲ್ಲ. ರೈತರ ಜೀವಾಳ ಕೆರೆಗಳನ್ನು ಉಳಿಸುವತ್ತ ಕೆರೆ ಸಮಿತಿ ಪದಾಧಿಕಾರಿಗಳು ಗಮನ ಕೊಡಬೇಕೆಂದು ಶಿವಾನಂದ ಆಚಾರ್ಯ ಮನವಿ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ಬಿ. ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ವೇದಿಕೆಯಲ್ಲಿದ್ದರು.