ಬೆಂಗಳೂರು: ಈರುಳ್ಳಿ ಬೆಲೆ ಆಗಾಗ ಜನರಿಗೆ ಕಣಗಣೀರು ತರಿಸುತ್ತಲೇ ಇರುತ್ತದೆ. ಈಗಂತು ಹಲವು ಜಿಲ್ಲೆಗಳಲ್ಲಿ ಬೆಳೆದಿದ್ದಂತ ಈರುಳ್ಳಿ ಬೆಳೆ ಅತಿಯಾದ ಮಳೆಯಿಂದ ನಾಶವಾಗಿದೆ. ಮಾರುಕಟ್ಟೆಗೆ ಬರಬೇಕಾದಷ್ಟು ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ ಬೆಲೆ ಗಗನಕ್ಕೇರಿದೆ. ಈಗ ಮತ್ತೊಂದು ಶಾಕಿಂಗ್ ವಿಚಾರ ಅಂದ್ರೆ ಈರುಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸ ಈರುಳ್ಳಿ ಮಾರುಕಟ್ಟೆಗೆ ತಲುಪುತ್ತಿಲ್ಲ. ಹಳೇ ಈರುಳ್ಳಿ ಬೆಲೆ ಕೇಳುವಂತೆ ಇಲ್ಲ. ಬೆಂಗಳೂರು ನಗರದಲ್ಲಿ ಕೆಜಿ ಈರುಳ್ಳಿ ಬೆಲೆ 100 ರೂಪಾಯಿ ತಲುಪುವ ಎಲ್ಲಾ ಸಾಧ್ಯತೆ ಕಾಣಿಸ್ತಾ ಇದೆ. ಸದ್ಯ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ. ಇದರ ದರ ವಾರದ ಹಿಂದಷ್ಟೇ ಜ್ವಿಂಟಾಲ್ ಗೆ 5000 ಇತ್ತು. ಈಗ ನೋಡಿದ್ರೆ ಕ್ವಿಂಟಾಲ್ ಈರುಳ್ಳಿ 7 ಸಾವಿರ ಆಸುಪಾಸಿನಲ್ಲಿದೆ. ಇಂದಿನ ದರ ನೋಡ್ತಾ ಇದ್ರೆ ಈಗ ಕೆಜಿ ಈರುಳ್ಳಿಗೆ 70-80 ರೂಪಾಯಿ ಇದೆ. ಸ್ವಲ್ಪ ದಿನದಲ್ಲಿಯೇ 100 ರೂಪಾಯಿ ಆಗುವ ಸಾಧ್ಯತೆ ದಟ್ಟವಾಗಿದೆ.
ಮಳೆಯಿಂದ ಈಗ ಬೆಳದಿರುವ ಈರುಳ್ಳಿ ಗುಣಮಟ್ಟ ಕಳೆದುಕೊಂಡಿವೆ. ಹೀಗಾಗಿ ಈ ಈರುಳ್ಳಿಗೆ ಬೆಲೆ ಇಲ್ಲದಂತೆ ಆಗಿದೆ. ಹಳೆ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಹೊಟೇಲ್ ಉದ್ಯಮದವರು ಮಹಾರಾಷ್ಟ್ರ ಈರುಳ್ಳಿಯನ್ನೇ ತೆಗೆದುಕೊಳ್ಳುತ್ತಿದ್ದಾರೆ. ಒಂದೇ ದಿನ ಯಶವಂತಪುರ ಎಪಿಎಂಸಿಗೆ ಮಹಾರಾಷ್ಟ್ರದಿಂದ 500 ಡ್ರಕ್ ಈರುಳ್ಳಿ ಪೂರೈಕೆಯಾಗಿದೆ. ಇನ್ನು ಹೊಸ ಈರುಳ್ಳಿ ಕೂಡ ಮಾರುಕಟ್ಟೆಗೆ 485 ಟ್ರಕ್ ಬಂದಿದೆ. ಹೀಗಾಗಿ ಇವುಗಳನ್ನು ಬೇಗ ಬಳಸಬೇಕಾಗಿದೆ. ಹೊಸ ಈರುಳ್ಳಿಗೆ ದರ ಕಡಿಮೆ ಇದೆ.