ಮಾಹಿತಿ ಮತ್ತು ಫೋಟೋ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ.
ಬಳ್ಳಾರಿ,(ಅ.22): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದಿಂದ ನಗರದ ಎಸ್ಪಿ ವೃತ್ತದಲ್ಲಿರುವ ಬಸ್ ಡಿಪೋದಿಂದ ಬಳ್ಳಾರಿಯಿಂದ ಹುಲಿಗಿಯ ಕಡೆಗೆ ಹೊಸ ಬಸ್ ವ್ಯವಸ್ಥೆ ಮಾಡಲಾಗಿದ್ದು, ನೂತನ ಬಸ್ ಗೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ನಗರದ ಎಸ್.ಪಿ ವೃತ್ತದ ಬಳಿಯ ಆಂಜನೇಯ ಗುಡಿ ಹತ್ತಿರದ ಬಳಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಆನೆಗುಂದಿ, ದುರ್ಗಾದೇವಿ, ಪಂಪಾಸರೋವರ, ಲಕ್ಷ್ಮೀ ದೇವಿ ದೇವಸ್ಥಾನ, ಅಂಜನಾದ್ರಿ ಬೆಟ್ಟ ಮಾರ್ಗವಾಗಿ ಹುಲಿಗಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದರಿಂದ ಈ ಮಾರ್ಗದಲ್ಲಿ ನೂತನ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಇನ್ನುಮುಂದೆ ಬಸ್ ಗಾಗಿ ಕಾಯುವ ಪರಿಸ್ಥಿತಿ ಇಲ್ಲ. ಸಾರ್ವಜನಿಕರು ಇದರ ಸದುಯೋಗ ಪಡಿಸಿಕೊಳ್ಳಬೇಕು ಎಂದರು.
ಸಾರಿಗೆ ಇಲಾಖೆಯಲ್ಲಿ ಬಸ್ ಗಳ ಕೊರತೆ ಇದ್ದು, ಎಲ್ಲಾ ಘಟಕಗಳಿಗೆ 4 ಸಾವಿರ ಹೊಸ ಬಸ್ ಖರೀದಿ ಮಾಡಿ ಅದರಲ್ಲಿ1 ಸಾವಿರ ಹೊಸ ಬಸ್ ಗಳನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಸೋಮಶೇಖರ್ ರೆಡ್ಡಿ, ಮಾಜಿ ಸಂಸದೆ ಜೆ. ಶಾಂತಾ ಸೇರಿದಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತಿತರರಿದ್ದರು.