ಬೆಂಗಳೂರು: ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಗೆಲ್ಲೋದು ಸದ್ಯ ಎಲ್ಲಾ ಪಕ್ಷಗಳಿಗೂ ಮುಖ್ಯವಾಗಿದೆ. ಹೀಗಾಗಿಯೇ ಮೂರು ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಭರವಸೆಗಳನ್ನ ನೀಡ್ತೀವೆ, ವಿರೋಧ ಪಕ್ಷದವರ ಮೇಲೆ ವಾಗ್ದಾಳಿ ನಡೆಸುತ್ತಿವೆ. ಹಲವು ರೀತಿಯ ಹೇಳಿಕೆಗಳನ್ನು ನೀಡ್ತಿದ್ದಾರೆ. ಚುನಾವಣೆಗಾಗಿ ವಿ ಸೋಮಣ್ಣ ನೀಡಿದ ಆ ಒಂದು ಹೇಳಿಕೆ ಮುಜುಗರಕ್ಕೊಳಗಾಗಿದೆ.
ಎರಡು ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ನಾಳೆ ಮತದಾನ ನಡೆಯಲಿದೆ. ಯಾರಿಗೆ ವಿಜಯ ಲಭಿಸಲಿದೆ.. ಯಾರ ಕಡೆ ಮತದಾರನ ಒಲವು ಇದೆ ಅನ್ನೋದು ಆ ಬಳಿಕ ತಿಳಿಯಲಿದೆ. ಈ ಬೆನ್ನಲ್ಲೆ ವಿ ಸೋಮಣ್ಣ ಕಡೆ ಗಳಿಗೆಯಲ್ಲಿ ಹೇಳಿಕೆಯೊಂದನ್ನ ನೀಡಿದ್ದಾರೆ. ಆ ಹೇಳಿಕೆ ವಿರೋಧ ಪಕ್ಷದವರಿಗೆ ಆಹಾರವಾಗಿದ್ದಲ್ಲದೆ, ಸ್ವಪಕ್ಷದವರಿಗೂ ಮುಜುಗರಕ್ಕೀಡು ಮಾಡಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡೋ ಭರದಲ್ಲಿ ಸಚಿವ ವಿ ಸೋಮಣ್ಣನವರು, ನಾಳೆಯಿಂದ ನಮ್ಮ ಆಟ ಶುರುವಾಗಲಿದೆ ಎಂದಿದ್ದಾರೆ. ಈ ಹೇಳಿಕೆಗೆ ಕುಮಾರಸ್ವಾಮಿ ಕಾಲೆಳೆದಿದ್ದು, ಏನು ನಾಳೆಯಿಂದ ಹಣ ಹಂಚಿಕೆಯ ಆಟವಾ ಎಂದಿದ್ದಾರೆ.
ಅತ್ತ ಸ್ವ ಪಕ್ಷದವರು ಸೋಮಣ್ಣ ನವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಅಭಿವೃದ್ಧಿ ಹೆಸರಲ್ಲಿ ಮತ ಕೇಳಿ ಅಂದ್ರೆ ಏನಿದು ಆಟದ ವಿಚಾರ. ಕಡೆ ಕ್ಷಣದಲ್ಲಿ ಇದೆಂಥಾ ಹೇಳಿಕೆ ನೀಡಿದ್ದೀರಿ. ಕಾಂಗ್ರೆಸ್ ನಾಯಕರಿಗೂ ನಿಮಗೂ ಏನು ವ್ಯತ್ಯಾಸವಿದೆ ಎಂದು ಬೇಸರಪಟ್ಟುಕೊಂಡಿದ್ದಾರೆ ಎನ್ನಲಾಗಿದೆ.